Saturday, April 21, 2012

ಬಾಲ್ಯದ ನೆನಪುಗಳು

ಜೀವನದಲ್ಲಿ ಬಾಲ್ಯದ ಸವಿನೆನಪುಗಳು ನಮ್ಮನ್ನು ಅಂದಿನ ದಿನಗಳತ್ತ ಕೊಂಡೊಯ್ಯುತ್ತವೆ. ಚಡ್ಡಿ ದೋಸ್ತ್ ಗಳೊಂದಿಗೆ ಓಡಾಡಿದ್ದು,  ಜಗಳವಾಡಿದ್ದನ್ನೆಲ್ಲಾ ನೆನಸುವಾಗ "ಮತ್ತೊಮ್ಮೆ ಆ ದಿನಗಳು ಬರಲಿ" ಎಂಬ ಯೋಚನೆ ಬರುವುದು ಸಹಜ. ಗೆಳೆಯರೊಡನಿದ್ದ ನಿರ್ವ್ಯಾಜ ಪ್ರೇಮ, ಅಧ್ಯಾಪಕರನ್ನು ಕಂಡರೆ ಭಯ ಭಕ್ತಿ, ಹಿರಿಯರೊಡನೆ ನಡೆದುಕೊಳ್ಳುತ್ತಿದ್ದ ರೀತಿಗಳನ್ನೆಲ್ಲ ನೆನಸಿದರೆ ಕಳೆದು ಹೋದ ಕನಸೆಂದು ತೋರುತ್ತದೆ. ಅಂದು ಗುರುಗಳು ಹೇಳಿಕೊಡುತ್ತಿದ್ದ  ಮೊದಲ ಪಾಠ "ದೇವರ ಭಯವೇ ಜ್ಞಾನದ ಆರಂಭ" ಎಂಬ ಧ್ಯೇಯ ವಾಕ್ಯ. ಅಂದು ಇಂತಹ ಆದರ್ಶ ವಾಕ್ಯಗಳನ್ನು ಕಲಿತವರು ಮತ್ತೆ ಎಷ್ಟೋ ಅನ್ಯಾಯಗಳನ್ನು ಮಾಡಿದವರಿದ್ದಾರೆ. ಉನ್ನತ ಅಧಿಕಾರಿಗಳಾಗಿ ಭ್ರಷ್ಟಾಚಾರದ ಸವಿಯನ್ನುಂಡವರೂ ಇದ್ದಾರೆ. ಅದೆಲ್ಲಾ ಮತ್ತಿನ ಬೆಳವಣಿಗೆ. ಬೆಳೆದು ದೊಡ್ಡವರಾದ ಮೇಲೆ ಪರಿಸ್ಥಿತಿ, ಪರಿಸರ ಹೊಸ ಪಾಠಗಳನ್ನು ಕಲಿಸಿದರೂ ಅಂಥವರ ಮನಸ್ಸಿನಲ್ಲಿಯೂ ಗುರು ಹಿರಿಯರನ್ನು ಕಂಡಾಗ ಬೂಟಾಟಿಕೆಗಾದಾರೂ ಭಕ್ತಿ ಗೌರವ ತೋರಿಸುವವರಿದ್ದಾರೆ. ಹತ್ತಿರ ಶಾಲೆ ಸಿಗುವುದೇ ಅಪರೂಪ. ಇದ್ದರೂ ನಾಲ್ಕು ಐದನೇ ತರಗತಿಯ ನಂತರ ದೂರದ ಊರುಗಳಿಗೆ ಹೋಗಬೇಕಿತ್ತು. ಆ ಕಷ್ಟವನ್ನು ನೆನೆಸಿದರೆ "ಹೇಗೆ ಆದಿನಗಳು ಕಳೆದು ಹೋದುವು" ಎಂದು  ಅದು ಒಂದು ಕನಸಿನಂತೆ ತೋರುವುದು.  ಮತ್ತೊಮ್ಮೆ ಆ ದಿನಗಳು ನಮ್ಮ ಜೀವನದಲ್ಲಿ ಬರುವುದು ಸಾಧ್ಯವೇ?
    ಒಂದು, ಎರಡನೆಯ ತರಗತಿಗೆ ಒಬ್ಬರೇ ಅಧ್ಯಾಪರಿದ್ದರು ಆಗ. ನಾನು ಕಲಿಯುವಾಗಲೇ ಆ ಅಧ್ಯಾಪಕರು ಸ್ವಲ್ಪ ಮುದುಕರೇ ಆಗಿದ್ದರು. ಮತ್ತೆ ಐದಾರು ವರ್ಷಗಳಲ್ಲಿ ನಿವೃತ್ತರಾಗಿದ್ದರು. ಲೆಕ್ಕ ಹೇಳಿಸುವುದು, ಪದ್ಯ ಹೇಳಿಸುವುದು, ಅಕ್ಷರ ಮಾಲೆ ಬರೆಸುವುದು ಓದಿಸುವುದು ಹೀಗೆಲ್ಲಾ  ಚೆನ್ನಾಗಿ ಕೆಲಸ ಮಾಡಿಸುತ್ತಿದ್ದರು. ಇದ್ದುದೇ ಒಂದು ತರಗತಿಯಲ್ಲಿ ಹದಿನೈದು ಇಪ್ಪತ್ತು ಮಕ್ಕಳು. ಎರಡನೆಯ ತರಗತಿಯಲ್ಲಿ ಅವರು ಹೇಳಿಕೊಡುತ್ತಿದ್ದ ನಮ್ಮ ನೆಚ್ಚಿನ ಪದ್ಯ ಹೀಗಿತ್ತು - "ತೋಳು ಕೈಯ ತೋಳು, ತೋಳನಾಡಿ ಬರುವಾಗ, ಕಾಳಬೆಕ್ಕು ಕೂಗಿತು, ಹಾಳು ನಾಯಿ ಕಚ್ಚಿತು..." ಹಾಡಿಗಿಂತಲೂ ಅದನ್ನು ಹಾಡಿಸಿದ ಅವರ ನೆನಪು ಅಚ್ಚಳಿಯದೆ ಉಳಿದಿದೆ. ಹಚ್ಚ ಹಸುರಾಗಿದೆ. ನಮ್ಮನ್ನು ಹಾಡಿಸುವಾಗ ಅವರ ಅಭಿನಯ, ಮುಖದಲ್ಲಿ ಮಿನುಗುತ್ತಿದ್ದ ನಗು ಈಗಲ್ಲು ಕಣ್ಣಿಗೆ ಕಟ್ಟಿದಂತಿದೆ. ಈಗ ಅವರ ಮಕ್ಕಳು ನಮ್ಮೂರಲ್ಲಿಲ್ಲ. ಅವರ ಒಬ್ಬ ಮಗ ನನ್ನ ಕ್ಲಾಸಿನಲ್ಲಿಯೇ ಇದ್ದ. ನಾವು ಹತ್ತಿರವೇ ಕುಳಿತುಕೊಳ್ಳುತ್ತಿದ್ದೆವು. ಇನ್ನೊಬ್ಬರು ಮೂರನೆಯ ತರಗತಿಯ ಅಧ್ಯಾಪಕರು, ಬರುವುದೇ ತಡವಾಗಿ ಮುಖ್ಯೋಪಾಧ್ಯಾಯರು ಮೇನೇಜರರೂ ಒಬ್ಬರೇ. ನಾಲ್ಕು ಐದನೆ ಕ್ಲಾಸ್ ಅವರಿಗೆ. ಅವರು ಬೆಳಿಗ್ಗೆ ಬರುವುದು ಅಪರೂಪ. ಮಳೆಗಾಲದಲ್ಲಿ ಶಾಲಾ ಕಾಂಪೌಂಡಿನೊಳಗೆ ನಮ್ಮಿಂದ ಬೇರೆ ಬೇರೆ ತರಕಾರಿ ಬೆಳೆಸುತ್ತಿದ್ದರು. ಬೆಳೆದ ತರಕಾರಿ ಮುಖ್ಯೋಪಾಧ್ಯಾಯರ ಮನೆಗೇ ಸಾಗುತ್ತಿತ್ತು.  ಶಾಲೆ ತುಂಬ ಹತ್ತಿರವೇ ಇದ್ದುದರಿಂದ ಮಧ್ಯಾಹ್ನದ ಊಟಕ್ಕೆ  ಮನೆಗೇ ಹೋಗಿ ಬರುವುದು. ಪ್ರತಿ ಸೋಮವಾರ ಸಂಜೆ ಮಾಡುತ್ತಿದ್ದ ಭಜನೆ ಈಗಲೂ ನೆನಪಾಗುತ್ತದೆ. ಇಡೀ ರಾಮಾಯಣವೇ ಅಡಕವಾಗಿರುವ "ಶುದ್ದ ಬ್ರಹ್ಮ ಪರಾತ್ಪರ ರಾಮ" ಹಾಡು ನನ್ನ ಕಿವಿಗಳಲ್ಲಿ ಈಗಲೂ ಗುಣು ಗುಣಿಸುತ್ತಿರುತ್ತದೆ. ಪ್ರತಿ ಶುಕ್ರವಾರ ಒಂದು ದಿನ ಸಭಾ ಕಾರ್ಯಕ್ರಮ. ಇಡೀ ಶಾಲೆಯ ನಲುವತ್ತರಷ್ಟು ವಿದ್ಯಾರ್ಥಿಗಳು ಸೇರಿ ಚರ್ಚಾಸಭೆ ನಡೆಯುತ್ತಿತ್ತು. "ಗೊರಬೆ ಮೇಲೋ - ಕೊಡೆ ಮೇಲೋ", "ಹಳ್ಳಿ ವಾಸ ಮೇಲೋ ಪಟ್ಟಣ ವಾಸ ಮೇಲೋ" ಇದೆಲ್ಲ ಚರ್ಚಾ ವಿಷಯಗಳಾಗಿದ್ದುವು.
    ಆ ಕಾಲದಲ್ಲಿ ಶಾಲೆಗಳು ಹತ್ತಿರದಲ್ಲಿರಲಿಲ್ಲ. ಆದರೆ ಒಂದು ಶಾಲೆಯ ವಿದ್ಯಾರ್ಥಿಗಳ ಹೆಸರು  ಹತ್ತಿರದ ಶಾಲೆಯ ಹಾಜರು ಪಟ್ಟಿಯಲ್ಲಿಯೂ ಇರುವುದೂ ಇತ್ತು. ಆಸು ಪಾಸಿನ ವಿದ್ಯಾರ್ಥಿಗಳ ಹೆಸರನ್ನು ಸೇರಿಸಿಕೊಂಡು ಸಂಖ್ಯಾಬಲ ತೋರಿಸುತ್ತಿದ್ದರಂತೆ. ವರ್ಷಕ್ಕೊಮ್ಮೆ ಮೇಲಧಿಕಾರಿಗಳು ಶಾಲೆಯ ಇನ್ಸ್ಪೆಕ್ಶನ್ ಗೆ ಬರುವಾಗ ಹತ್ತಿರದಲ್ಲಿದ್ದ ಯಾವುದೋ ಮಕ್ಕಳನ್ನು ಕರೆತಂದು ತೋರಿಸುವುದೂ ಇತ್ತಂತೆ! ಅಧ್ಯಾಪಕರೂ ಅಷ್ಟೆ. ಒಂದು ಶಾಲೆಯಲ್ಲಿ ದುಡಿಯುವುದು, ಇನ್ನೊಂದು ಶಾಲೆಯಲ್ಲಿಯೂ ಅವರ ಹೆಸರು ನಮೂದಿಸುವುದು ಗ್ರೇಂಟ್ ಪಡೆಯುವುದೂ ಇತ್ತೆಂದು ಹೇಳುತ್ತಿದ್ದರು.   ಶಾಲೆಗೆ ಸಿಗುತ್ತಿದ್ದ ಗ್ರೇಂಟ್ ವಿದ್ಯಾರ್ಥಿಗಳ ಸಂಖ್ಯಾಬಲ ಹೊಂದಿಕೊಂಡು ಅಲ್ಲವೇ? ಆದರೆ ಹೇಗೋ ಏನೋ? ಅವರ ಅಂದಿನ ಪ್ರಯತ್ನದ ಫಲವೇ ಇಂದಿನ ಮಕ್ಕಳಿಗೆ ಹೆಚ್ಚಿನ ಪ್ರಯೋಜನವಾದುದು ಸತ್ಯ. ಸಾಂಸ್ಕೃತಿಕ ಹಬ್ಬಗಳು, ಮುಖ್ಯವಾಗಿ ದಸರಾದ ಕೊನೆಯ ದಿನ, "ವಿಜಯ ದಶಮಿ" ತುಂಬ ವಿಜೃಂಭಣೆಯಿಂದ ಆಚರಿಸಲಾಗುತ್ತಿತ್ತು. ಪ್ರತಿಯೊಬ್ಬ ವಿದ್ಯಾರ್ಥಿಗಳೂ ತೆಂಗಿನ ಕಾಯಿ, ಮುಳ್ಳು ಸೌತೆ, ಅಥವಾ ಬೇರೇನಾದರೂ ಹಣ್ಣುಗಳು ಹೂವು ಕೊಂಡು ಹೋಗಬೇಕಿತ್ತು. ದಸರಾ ರಜೆಯಲ್ಲಿ ಬಂದ ಹಳೆವಿದ್ಯಾರ್ಥಿಗಳೂ ಆದಿನ ಶಾಲೆಗೆ ಬರುವುದಿತ್ತು. ಹಬ್ಬದ ಕುರಿತು ಕೆಲವರು ಭಾಷಣ ಮಾಡುತ್ತಿದ್ದರು. ಪೂಜೆಗೆ ಮೊದಲು ಕೆಲವರು ತೆಂಗಿನ ಕಾಯಿ ತುರಿದು ಅವಲಕ್ಕಿ ಬೆಲ್ಲ ಬೆರಸಿ ಪಂಚಕಜ್ಜಾಯ ಮಾಡುವುದು ಮತ್ತೆ ಭಜನೆಯಲ್ಲಿ ಎಲ್ಲರೂ ಭಾಗವಹಿಸುವುದು, ಸರಸ್ವತೀ ಪೂಜೆಯಾದ ಮೇಲೆ ಪ್ರಸಾದ ವಿತರಣೆಯಾಗಿ ಮನೆಗೆ ಹೋಗುವುದು  ಹೀಗೆ ನಡೆಯುತ್ತಿತ್ತು. ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ರಕ್ಷಕರನ್ನು ಬರಹೇಳಿ, ಹೆತ್ತವರ ಸಭೆಯೆಂದಿತ್ತು. ಆದಿನ ಮಧ್ಯಾಹ್ನ ನಂತರ ನಮಗೆ ರಜೆ. ನಮ್ಮೂರಿನ ಶಾಲೆ ಮದ್ರಾಸ್ ಸರಕಾರದ ಅಧೀನವಿದ್ದುದಾಗಿತ್ತು. ರಾಜಗೋಪಾಲಾಚಾರಿಯವರು ಮುಖ್ಯ ಮಂತ್ರಿಯಾಗಿದ್ದಾಗ ಒಂದು ಹೊಸ ಕಾನೂನು ತಂದಿದ್ದರು. ಆಗ ಒಂದು ಹೊತ್ತು ಮಾತ್ರ ಶಾಲೆಯಾಯಿತು. ಅಪರಾಹ್ನ ಒಂದು ಗಂಟೆಯಷ್ಟು ಹೆಚ್ಚು ಹೊತ್ತು ನಾವು ಶಾಲೆಯಲ್ಲಿದ್ದರೆ ಸಾಕಿತ್ತು. ಆದುದರಿಂದ ಊಟಕ್ಕೆ ಮನೆಗೆ ಹೋಗಲು ಕಷ್ಟವಾಗಿತ್ತು. ಆಗ  ಒಂದರ್ಧ ಗಂಟೆ ಮಾತ್ರ ವಿರಾಮ ಸಿಗುತ್ತಿತ್ತು.  ನನಗೆ ಈಗಲೂ ನೆನಪಿದೆ ಬೇರೇನೂ ತರಲು ಉದಾಸೀನವಾಗಿ ಒಂದು ತುಂಡು ಬೆಲ್ಲವೋ, ಅಥವಾ ಗುಡ್ಡದಲ್ಲಿ ಸಿಗುವ ನೆಲ್ಲಿಕಾಯಿಯೋ ತಿಂದು ನೀರು ಕುಡಿದು ಕ್ಲಾಸಿನಲ್ಲಿ ಕುಳಿತುದೂ ಇದೆ. ನಾನು ಕಲಿಕೆಯಲ್ಲಿ ಹೆಚ್ಚಿನ  ಪ್ರಗತಿ ತೋರಿಸಿದ್ದರಿಂದ ಐದು ಕ್ಲಾಸುಗಳನ್ನು ನಾಲ್ಕು ವರ್ಷಗಳಲ್ಲಿಯೇ  ಮುಗಿಸಿದ್ದೆ.
    ವಿದ್ಯಾರ್ಥಿಗಳಾದ ನಮ್ಮೊಳಗೆ ಸಣ್ಣ ಪುಟ್ಟ ಜಗಳಗಳು ಆಗಾಗ ನಡೆಯುತ್ತಿದ್ದವು. ನಮ್ಮ ಮನೆಯಿಂದ ನನ್ನ ದೊಡ್ಡಪ್ಪನ ಮಗ, ಅಣ್ಣನೂ ನಾನೂ ಒಂದೇ ತರಗತಿಯಲ್ಲಿದ್ದೆವು. ಒಟ್ಟಿಗೇ ಹೋಗಿ ಬರುವುದು. ನನ್ನ ಮೇಲೆ ಆಗಾಗ ಹೊಸ ಹೊಸ ದೂರುಗಳನ್ನು ಹಿರಿಯರಲ್ಲಿ ಹೇಳುವುದು ಅವನ ಅಭ್ಯಾಸ. ಹಿರಿಯರಿಂದ ಆಗ ಬೈಗುಳು ಸಿಗುತ್ತಿತ್ತು. ಆಗ ಅವನಿಗೆ ಸಂತೋಷವಾಗುತ್ತಿತ್ತು. ಪ್ರಾಯದಲ್ಲಿ ಎರಡು ವರ್ಷ ಅಣ್ಣ. ಮತ್ತೆ ಶಾಲೆಗೆ ನಾವು ಬೇಗ ತಲಪಿದರೆ  ಹೊರಗೆ ಬಯಲಲ್ಲಿಯೋ ಸ್ವಲ್ಪ ದೂರವೋ ಹೋಗಿ ಆಟವಾಡುವುದು. ಗಂಟೆಯಾದೊಡನೆ ಬರುವುದು. ಮುಖ್ಯೋಪಾಧ್ಯಾಯರು ಬರುವು ದೂರದಿಂದಲೇ ಕಾಣುತ್ತಿತ್ತು. ಅವರ ತಲೆ ಕಂಡೊಡನೆ ಶಾಲೆಯ ಬಾಗಿಲಲ್ಲಿ ನಿಂತುಕೊಂದು  ವಿಶಿಷ್ಟ ಧಾಟಿಯಿಂದ "ನಮಸ್ಕಾರ ಸರ್" ಎಂದು ಕೂಗುವುದು ಎಲ್ಲ ನೆನಪಾಗುತ್ತದೆ. ಒಳಗೆ ಹೋದೊಡನೆ, ಕಸ ಗುಡಿಸಿ, ಬೆಂಚುಗಳನ್ನೆಲ್ಲ ಸರಿಗೊಳಿಸಿ ಮತ್ತೆ ಅವರವರ ಜಾಗದಲ್ಲಿ ಕುಳಿತುಕೊಳ್ಳುವುದು ನಮ್ಮ ದೈನಂದಿನದ ಕೆಲಸ. ಬೆಂಚುಗಳಲ್ಲಿ ಕುಳಿತ ಮೇಲೆ ಮಗ್ಗಿ ಹೇಳುವಾಗ ಒಬ್ಬರಿಗೊಬ್ಬರು ಹೆಗಲಿಗೆ ಕೈ ಹಾಕಿಕೊಂಡು ರಾಗವಾಗಿ ಮಗ್ಗಿ ಹೇಳುವುದು, ಪದ್ಯ ಬಾಯಿ ಪಾಠ ಹೇಳುವುದು ಎಲ್ಲ ನಮ್ಮ ಸ್ಮೃತಿ ಪಟಲದಲ್ಲಿ ಆಗಾಗ ಮೂಡುತ್ತಿರುತ್ತದೆ. ಒಮ್ಮೊಮ್ಮೆ ನನ್ನ ಮಕ್ಕಳಲ್ಲಿಯೂ ಇದನ್ನು ಹೇಳಿ ಆನಂದ ಪಟ್ಟುದಿದೆ. ಹಾಗೆ ಕಳೆದ ದಿನದ ಹಾದಿ ಹಿಡಿದು ಹೋದ ನೆನಪಿನಿಂದ ಹಾಗೆ ಮನಸ್ಸಿನಲ್ಲಿಯೇ ಹಳೆಯ ನೆನಪುಗಳು.
    ಒಮ್ಮೆ ನಮ್ಮ ಕ್ಲಾಸಿನ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಜಗಳ ಮಾಡಿ ಮೈಗೆ ಗಾಯ ಮಾಡಿಕೊಂಡರು. ಮಧ್ಯಾಹ್ನದ ವಿರಾಮ ವೇಳೆ ಶಾಲೆಯಲ್ಲಿ ವಿದ್ಯಾರ್ಥಿಗಳು ಮಾತ್ರ ಇರುವುದು.ಹುಡುಗರು ಹತ್ತಿರದ ಮಾವಿನ ಮರದ ಕಡೆಗೆ ಹೋಗಿದ್ದರು. ಕಾಯಿಗಳು ಎತ್ತರದಲ್ಲಿದ್ದವು. ಕಲ್ಲು ಬಿಸಾಡಿ ಬೀಳಿಸಬೇಕಿತ್ತು. ಆ ದಿನ ಹಾಗೆ ಒಬ್ಬ ಕಲ್ಲು ಬಿಸಾಡಿದ್ದು ತಿಳಿಯದೆ ಅಲ್ಲಿಗೆ ಬಂದ ಮತ್ತೊಬ್ಬ ಹುಡುಗನ ಮೇಲೆ ಕಲ್ಲು ಬಿದ್ದು ಗಾಯವಾಗಿತ್ತು. ಹುಡುಗ ಅಳುತ್ತಾ ಮನೆಗೆ ಹೋಗಿ ಹಿರಿಯರಲ್ಲಿ ಹೇಳಿದ. ದೂರು ಕೇಳಿ  ಗಾಯ ಮಾಡಿಕೊಂಡ ಹುಡುಗನ ಅಪ್ಪ ಶಾಲೆಗೆ ಬಂದರು. ಅಧ್ಯಾಪಕರಲ್ಲಿ "ನೀವು ಇದನ್ನು ನೋಡಿಯೂ ಸುಮ್ಮನಿದ್ದಿರೇ? ನಾವು ಯಾರನ್ನು ನಂಬಿ ಶಾಲೆಗೆ ಮಕ್ಕಳನ್ನು ಕಳುಹಿಸಬೇಕು? ನಾಳೆ ಒಬ್ಬರಿಗೊಬ್ಬರು ಹೊಡೆದಾಡಿ ಏನಾದರೂ ಆಪತ್ತು ತಂದರೆ ಯಾರು ಹೊಣೆ?", ಎಂದೆಲ್ಲಾ ಕೂಗಾಡಿದರು. ಅಧ್ಯಾಪಕರಿಗೂ ಅವರಿಗೂ ಮಾತು ನಡೆಯುತ್ತಿದ್ದಂತೆ ಆ ಮಕ್ಕಳಿಬ್ಬರೂ ಹೊರಗೆ ಆಟವಾಡುತ್ತಿದ್ದರು. ಜಗಳ ಅಧ್ಯಾಪಕರಿಗೂ ಹಿರಿಯರಿಗೂ ಮುಂದುವರಿಯುತ್ತಿದ್ದಿತು. ಹೊರಗೆ ಮಕ್ಕಳು ಆಡುತ್ತಿದ್ದುದನ್ನು ನೋಡಿದ ಹಿರಿಯರು ಸುಮ್ಮನಾಗಿ ನಡೆದೇ ಬಿಟ್ಟರು. "ಬಾಲ್ಯದ ಆಟ ಆ ಹುಡುಗಾಟ ಇನ್ನೂ ಮರೆತಿಲ್ಲ" ಎಂದು ಹೇಳುತ್ತದೆ ನಮ್ಮ ಮನಸ್ಸು. ಮುಂದೆ ಕಲಿಯಲು ಒಂದು ವರ್ಷ ಹತ್ತು ಮೈಲು ದೂರದ ಪೆರ್ಲಕ್ಕೆ ಹೋಗಬೇಕಾಯಿತು. ಮತ್ತೆ ಪೈವಳಿಕೆ ಹೀಗೆ ಬೇರೆ ಬೇರೆ ಊರುಗಳಿಗೆ ಹೋಗಿ  ವಿದ್ಯಾಭ್ಯಾಸ ಮುಗಿಸಿದೆ. ಮತ್ತೆ ತರಬೇತಿ ಮುಗಿಸಿ ಅಧ್ಯಾಪಕನಾಗಿ ಸೇವ ಸಲ್ಲಿಸಿ ನಿವೃತ್ತನಾದೆ.
    ಈಗ ನಾವು ಕಲಿತುಕೊಂಡಿದ್ದ ಶಾಲಾ ಕಟ್ಟಡವೂ ಇಲ್ಲ. ಅಂದು ಕಲಿಸುತ್ತಿದ್ದ ಅಧ್ಯಾಪಕರೂ ಇಲ್ಲ. ಆದರೆ ಅದೇ ಶಾಲೆ ಪ್ರೌಢ ಶಾಲೆಯಾಗಿ ಐನೂರಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲಾ ಕಂಪೌಂಡಿನೊಳಗೆ ತುಂಬಾ ಕಟ್ಟಡಗಳಿವೆ. ಆದರೆ ಈಗ ಹೊಸತನದ ಗಾಳಿ ಸೋಂಕಿ ವಿದ್ಯಾಭ್ಯಾಸದ ರೀತಿಯೇ ಬದಲಾವಣೆಯಾಗಿದೆ. ಇಂದಿನ ವಿದ್ಯಾರ್ಥಿಗಳಲ್ಲಿ  ಅಂದಿನ ನಯ ವಿನಯ ಮತ್ತು ಹಿರಿಯರಲ್ಲಿ ಗೌರವ ಭಾವ ಕಡಿಮೆಯಾಗಿದ್ದು ಗೊತ್ತಾಗುತ್ತದೆ. ಅಧ್ಯಾಪಕನಾಗಿದ್ದ ಕಾಲದಲ್ಲಿ ನಾನು ಕಲಿಸಿದ್ದ ವಿದ್ಯಾರ್ಥಿಗಳು ಈಗಲೂ ಕಂಡೊಡನೆ ಗೌರವಿಸುವ ಕ್ರಮ ಇಂದು ಕಾಣುವುದಿಲ್ಲ. ಎಲ್ಲ ಕಾಲ ಬದಲಾವಣೆ, ಕಾರಣವಾಗಿರಬಹುದು. ಇನ್ನು ಮುಂದೆ ಹೇಗೋ? ಎಲ್ಲಕ್ಕೂ ಕಾಲವೇ ಉತ್ತರ ಹೇಳಬೇಕು. ಸಾಂಕೃತಿಕ ಹಬ್ಬಗಳಾದರೋ ಮಕ್ಕಳಿಗೆ  ಅದರ ಕುರಿತು ಪತ್ರಿಕೆಗಳಿಂದಲೋ ಟಿ ವೀ, ನೋಡಿಯೋ ಗೊತ್ತಾಗಬೇಕು. ಎಲ್ಲ ಜಾತ್ಯತೀತತೆಯ ಪ್ರಭಾವವಾಗಿರಬೇಕು! ಮಕ್ಕಳಿಗೂ ಹೊಡೆದು ಬಡಿದು ಮಾಡಿದರೆ  ಜನರೇ ತಕ್ಕ ಪಾಠ ಕಲಿಸುತ್ತಾರೆ. ಹಾಗೆ ಕಲಿಯುವ ಮಕ್ಕಳು ಕಲಿಯುತ್ತಾರೆ. ಹೆಚ್ಚು ಕಲಿಯದಿದ್ದರೂ ಇಂಥವರು ರಾಜಕೀಯ ಧುರೀಣರಿಗೂ ಬೇಕಾಗುತ್ತಾರೆ. ಅಂತೂ ಎಲ್ಲ ಅಯೋಮಯ!

No comments:

Post a Comment