Friday, April 20, 2012

ತಲೆ ಬರಹ

ತಲೆ ಬರಹ
   
    ತಲೆ ಬರಹವೆಂದರೆ ಹಣೆಬರಹವಲ್ಲ. ಅದನ್ನು ಯಾರಿಂದಲೂ ತಿದ್ದಲು ಸಾಧ್ಯವೇ? ಆದರೆ ಗುರುವು ಪ್ರಯತ್ನಿಸಿದರೆ ವಿಧಿ ಲಿಖಿತವನ್ನು ಸರಿ ಮಾಡಬಹುದಂತೆ! ಹಣೆಯಲ್ಲಿ ಬರೆದ ಬರಹವನ್ನು ಬರೆದವನಿಗೂ ಎಂದರೆ ಬ್ರಹ್ಮನಿಗೂ ಸಾಧ್ಯವಾಗದಂತೆ. ಹಣೆ ಬರಹ ಬರೆಯುವ ವಿಧಿಗೂ ವಿಧಿಸುವವನು ಒಬ್ಬನಿದ್ದಾನಂತೆ. ಅವನು ಮನಸ್ಸು ಮಾಡಿದರೆ ಹಣೆ ಬರಹ ತಿದ್ದುವುದು ಸಾಧ್ಯವಂತೆ. ಗುರುವಾದರೆ ನಮಗೆ ಜ್ಞಾನ ಚಕ್ಷುಸ್ಸನ್ನು ನೀಡುವವನು. ಆತ ಮನಸ್ಸು   ಮಾಡಿದರೂ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುವುದು ಸಾಧ್ಯ! ಇಲ್ಲಿ ತಲೆ ಬರಹವೆಂದರೆ  ನಾವು ಬರೆಯುವ ವಿಷಯಕ್ಕೊಂದು ಶಿರೋನಾಮೆ ಮಾತ್ರ.  ತಲೆಗೊಂದು ಬೇರೆ ಬರಹವಿಲ್ಲ. ಮೇಲೆ ಹೇಳುವ ತಲೆ ಬರಹ ಯಾವುದು ಎಂದು ಕೇಳುವಿರಾ? ತಲೆಗೂ ಈ ಬರಹಕ್ಕೂ ಸಂಬಂಧವೇನು? ಎಂದೆಲ್ಲ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿಲ್ಲ. ಮೊನ್ನೆ ನನ್ನ ಮೊಮ್ಮಗನೊಬ್ಬ "ನಾವು ಹೊರಗೆ ವಾಕ್ ಹೋಗುವನೋ ಅಜ್ಜ" ಎಂದು ಕೇಳಿದ. ಸರಿ!  ಅವನು ಕರೆದಾಗ ಹೋಗದಿದ್ದರೆ ತುಂಬಾ ಬೇಸರ ಮಾಡಿಕೊಳ್ಳುತ್ತಾನೆ. ಚಳಿಗಾಲದಲ್ಲಿ ಹೊರಗೆ ಹೋಗಬೇಕಾದರೆ ಸ್ವೆಟ್ಟರ್, ಜರ್ಕಿನ್ ತೊಟ್ಟುಕೊಳ್ಳಬೇಕು. ವೇಷ ಭೂಷಣಗಳೊಂದಿಗೆ ಹೊರಟೂ ಆಯಿತು. ನಾನು ಆಗ ಅಮೇರಿಕಾದಲ್ಲಿರುವ ಮಗನ ಮನೆಯಲ್ಲಿದ್ದೆ. ದಾರಿ ನಡೆಯುವಾಗ ಏನಾದರೂ ಮಾತಾಡಿಕೊಂಡು ಹೋಗುವುದು ನನ್ನ ಅಭ್ಯಾಸ. "ನೀನು ಇಂದು ಶಾಲೆಯಲ್ಲಿ ಏನೆಲ್ಲ ಮಾಡಿದೆ?" ಎಂದು ಮೊಮ್ಮಗನನ್ನು ಮಾತಿಗೆ ಕರೆದೆ. "ಇವತ್ತು ಒಂದು ಪ್ರವಾಸದ ಕುರಿತು ಒಂದು ಪ್ರಬಂಧ ಬರೆಸಿದ್ದರು. ನಾನು ಚೆನ್ನಾಗಿ ಬರೆದೆನೆಂದು ಅಧ್ಯಾಪಕರು ನನ್ನನ್ನು ಹೊಗಳಿದರು" ಎಂದು ಹೇಳಿದ. "ಪ್ರವಾಸದ ಅನುಭವಗಳು" ಎಂಬುದು ತಲೆ ಬರಹ ಎಂದ. ನಾವು ಬರೆಯುವ ಲೇಖನಕ್ಕೊಂದು ತಲೆ ಬರಹವಿರಬೇಕು. ಬರಹ ಆರಂಭಿಸಬೇಕಿದ್ದರೆ ಮೊದಲು ಯಾವ ವಿಷಯದ ಕುರಿತು ಬರೆಯುತ್ತೇವೆ ಎಂದು ನಿರ್ಣೈಸಿಕೊಳ್ಳಬೇಕು. ಅದಕ್ಕೊಂದು ತಲೆಬರಹ ಕೊಡಬೇಕು. ಮತ್ತೆ ಆ ತಲೆ ಬರಹಕ್ಕನುಸರಿಸಿ ವಿಷಯ ವಿಸ್ತಾರಮಾಡಬೇಕು.ಮುಂದೆ ಬರೆಯ ಬರಹಗಳು ತಲೆ ಬರಹಕ್ಕೆ  ಸಂಬಂಧಿಸಿದುವೇ ಆಗಿರಬೇಕೆಂಬುದು ಖಂಡಿತ.
    ಕೆಲವರು ಬರೆಯುವ ವಿಷಯ ಒತ್ತಟ್ಟಿಗಿದ್ದರೆ ತಲೆಬರಹಕ್ಕೂ ಬರೆದ ವಿಷಯಕ್ಕೂ ಏನೇನೂ ಸಂಬಂಧವಿಲ್ಲದಂತಿರುತ್ತದೆ. ಈ ಎರಡು ಪದಗಳ ಒಟ್ಟು ಅರ್ಥ "ಶಿರೋನಾಮೆ" ಎಂದಾಗುವುದಲ್ಲವೇ? ಅಂದರೆ ಎರಡು ಪದಗಳ ಒಟ್ಟು ಅರ್ಥಕ್ಕೆ ಪ್ರಾಧಾನ್ಯತೆ! ಒಂದು ಕತೆಗೋ, ನಾಟಕಕ್ಕೋ ಅಥವಾ ಇನ್ನಾವುದೋ ಬರಹಗಳಿಗೂ ಒಂದು ತಲೆ ಬರಹ ಬೇಕೆಂದಲ್ಲವೇ? ಬರೆಯುವವನ ತಲೆಗೆ ಹೊಕ್ಕ ವಿಷಯಕ್ಕೆ ಮೊದಲೊಂದು ತಲೆಬರಹ ಕೊಟ್ಟ ಮೇಲೆ. ಆರಂಭದಲ್ಲಿ ತಲೆಬರಹದ ಕುರಿತಾಗಿ ವಿಷಯ ಪ್ರವೇಶ. ಎಂದರೆ ಬರೆಯುವ ವಿಷಯಾಧಾರಿತ ಪೀಠಿಕೆ. ಪೀಠಿಕೆಯೇ ಹೆಚ್ಚು  ವಿಸ್ತಾರವಾಗಿದ್ದರೆ ಒಳ್ಳೆಯದಲ್ಲ. ತಲೆಬರಹದ ಬಗ್ಗೆ ಸ್ವಲ್ಪ ವಿವರಣೆ ಇದ್ದರೆ ಸಾಕು. ಆರಿಸಿದ ವಿಷಯದ ಪ್ರಸ್ಥಾವನೆಯಾದರೆ ಸಾಕು. ಮತ್ತೆ ಲೇಖನದ ಕುರಿತಾಗಿ ಬರೆಯುವುದು. ವಿಷಯ ವಿಸ್ತಾರ. ವಿಸ್ತಾರ ಎಷ್ಟು ಸಮಂಜಸವೋ ಅಷ್ಟು ಮಾತ್ರ ಇದ್ದರೆ ಒಳ್ಳೆಯದು. ಎಲ್ಲವೂ ಶಿರೋನಾಮೆಯನ್ನು ಸಮರ್ಥಿಸುವಂಥದಾಗಿದ್ದರೆ, ಜನರಿಗೆ ನಾವು ಪ್ರಸ್ತಾಪಿಸುವ ವಿಷಯ ಬೇಸರ ತರಬಾರದು ಚರ್ವಿತ ಚರ್ವಣ ಓದುಗರಿಗೆ ಬೇಸರವಾದೀತಲ್ಲವೇ? ಊಟದಲ್ಲಿ ಷಡ್ರಸಗಳು ಬೇಕು. ಆದರೆ ನಾಲಗೆಗೂ ಹಿಡಿಸಬೇಕು. ಎಲ್ಲವೂ ಸಿಹಿಯಾದರೂ ಊಟ ರುಚಿಯಾಗಲಾರದಷ್ಟೆ! ನಡು ನಡುವೆ ಖಾರ ಉಪ್ಪು ಹುಳಿ ಹೀಗೆ ದರೆ ಮಾತ್ರೆ ಅಸುಗ್ರಾಸವಾಗುವುದು. ವಾಕ್ಯ ರಚನೆಯೂ ಓದುಗರಿಗೆ ಇಷ್ಟವಾಗಬೇಕು. ನುಡಿಗಟ್ಟುಗಳು, ಶಬ್ದಾಲಂಕಾರಗಳು ಅಲ್ಲಲ್ಲಿ ಇದ್ದರೆ ರಚನೆಗೆ ಮೆರುಗು ಕೊಡುತ್ತದೆ. ಹೋಲಿಕೆಗಳು ಒಂದಕ್ಕೊಂದು ಪೂರಕವಾಗಿದ್ದು ಹೇಳುವ ವಿಷಯಗಳು ಓದುಗರಿಗೆ ಹೆಚ್ಚಿನ ಜ್ಞಾನವನ್ನೊದಗಿಸುವಂಥದ್ದಾದರೆ ಅದರಿಂದ ಓದುಗರಿಗೆ ಪ್ರಯೋಜನವಾಗಬಹುದು. ಸಾಕಷ್ಟು ತಯಾರು ಮಾಡಿಯೇ ಬೇರೆ ಬೇರೆ ಗ್ರಂಥಗಳ ಸಹಾಯದಿಂದ ವಿಷಯ ಸಂಗ್ರಹಿಸಿ ವಿಷಯ ಪ್ರಸ್ತಾಪಿಸಿದರೆ ಓದುಗರಿಗೆ ಪ್ರಯೋಜನ. ಜನ ಇನ್ನೂ ಸ್ವಲ್ಪ ವಿಷಯ ಬರೆಯುತ್ತಿದ್ದರೆ ಒಳ್ಳೆಯದಿತ್ತು ಎಂದು ನಮ್ಮ ರಚನೆಯನ್ನು ಮೆಚ್ಚುವಂಥದ್ದಿರಬೇಕು.    ಕೊನೆಗೊಂದು  ಮುಕ್ತಾಯ ಹಾಡಿ ಬಿಟ್ಟರೆ ನಾವು ಕೊಡುವ ತಲೆ ಬರಹಕ್ಕೊಂದು ಕಳೆ ಬರುತ್ತದೆ. ವಿಷಯ ಪ್ರವೇಶ ಮತ್ತು ಉಪಸಂಹಾರ ತಲೆ ಬರಹದ ಕವಚಗಳಂತಿರುವುದಲ್ಲವೇ? ಕೆಲವರು ಭಾಷಣದ ಕುರಿತು ಹೇಳುವುದುಂಟು. ಅವನ ಮಾತಿಗೊಂದು ಆದಿಯೋ ಅವಸಾನವೋ ಇಲ್ಲವಾಗಿದೆ. ಎಲ್ಲಿಂದಲೋ ಹೊರಟು ಎಲ್ಲೆಲ್ಲಿಗೋ ಹೋಗುತ್ತಾನೆ. ಕೊನೆ ಮೊದಲಿಲ್ಲದ ಮಾತನ್ನು ಕೇಳುವುದಕ್ಕೂ ಕಷ್ಟವಲ್ಲವೇ?  ಭಾಷಣವನ್ನು ಹೇಗೆ ಮುಗಿಸುವುದೆಂದು ತಡಕಾಡುತ್ತಾರೆ ಕೆಲವರು. ಭಾಷಣ ಕುರಿತಾಗಿ ಏನೂ ತಿಳಿಯದವರು ಬರೆದು ತರುವುದಿದೆ. ಆದರೆ ಓದಿ ಹೇಳಲೂ ಸಾಧ್ಯವಿಲ್ಲದೆ ಪೇಚಾಡುವುದೂ ಇದೆ. ಕೆಲವರಿಗೆ ವಿಷಯಗಳು ಹೊಳೆದರೂ, "ಹೇಗೆ ಜನರ ಮುಂದಿಡುವುದು" ಎಂಬ ಸಮಸ್ಯೆ ಕಾಡುತ್ತದೆ. ಯೋಗ್ಯ ಶಬ್ದಗಳಿಗಾಗಿ ಪೇಚಾಡುತ್ತಾರೆ. ಅಂದರೆ ವಿಷಯ ಪ್ರಸ್ತಾವನೆ  ಹೇಗೆ ಎಂಬುದು ಸಮಸ್ಯೆ. ಒಳ್ಳೆಯ ವಿಷಯ ಸಿಕ್ಕಿದರೆ ಪ್ರಸ್ತಾವನೆ ಸುಲಭ. ವಿಷಯದ ಸ್ಪಷ್ಟ ಚಿತ್ರಣ ಅವನ ಮನಸ್ಸಿನಲ್ಲಿದ್ದರೆ ಅದನ್ನು ಬರಹದ ಮೂಲಕ ಜನರ ಮುಂದಿಡುವುದು ಸಮಸ್ಯೆಯಾಗಲಾರದು! ವಿಷಯ ವಿಸ್ತರಿಸಿಕೊಂಡು ಹೋಗುವಾಗ ಸಮಸ್ಯೆಗಳೇನು ಎಂದೆಲ್ಲ ಹೇಳುವುದು ವಾಡಿಕೆ. ಸಮಸ್ಯೆಗೆ ಒಂದು ಪರಿಹಾರವಿರಲೇಬೇಕು. ಸಮಸ್ಯೆ ನಿರೂಪಿಸಿದವರಿಗೆ ಅದನ್ನು ಹೋಗಲಾಡಿಸುವುದು ಹೇಗೆ ಎಂಬುದೂ ಗೊತ್ತಿರುತ್ತದೆ. ಗೊತ್ತಿರಲೇಬೇಕು ಸರಕಾರಕ್ಕಾದರೂ ನಮ್ಮ ತೊಂದರೆಗಳ,ಸಮಸ್ಯೆಗಳ ಬಗ್ಗೆ ಬರೆದು ಅವುಗಳನ್ನು ಹೀಗೆ ನಿವಾರಿಸಿಕೊಡಬೇಕೆಂದು ಸ್ಪಷ್ಟವಾಗಿ ನಿವೇದಿಸಿಕೊಂಡರೆ ಅವರೂ ಸ್ಪಂದಿಸುವುದಕ್ಕೆ ಅನುಕೂಲ. ನಾವು ಮುಖತಃ ಭೇಟಿಯಾಗಿ ಮೇಲಧಿಕಾರಿಗಳೊಂದಿಗೆ  ನಮ್ಮ ಅನಿಸಿಕೆಗಳನ್ನು ಹೇಳಿಕೊಂಡರೆ  ಅಧಿಕಾರಿಗಳು  ನಮಗೆ ಸಹಾಯಮಾಡಬಹುದೋ ಏನೋ! ಅವರು ಕೇಳಲಿ, ಕೇಳದಿರಲಿ ಸರಿಯಾದ ಕ್ರಮದಲ್ಲಿ ಹೇಳಿ ಅವರಿಂದ ಕೆಲಸ ಮಾಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಹಾಗೆ ಬರೆಯುವಬರಹಕ್ಕೊಂದು ಮುಕ್ತಾಯ ಹೇಳಿ  ಮುಗಿಸುವುದು ಅಗತ್ಯ. ವಿಷಯದ ಪ್ರಸ್ತಾವನೆ, ವಿಷಯ ವಿಸ್ತಾರ ಮುಗಿದ ಮೇಲೆ ಅದಕ್ಕೊಂದು ಮುಕ್ತಾಯ ಹಾಡಬೇಕು. ಒಂದು ಆರಂಭಕ್ಕೆ ಕೊನೆಯೆಂಬುದು  ಬೇಕು. ಮುಕ್ತಾಯದಲ್ಲಿಮೊದಲುಪ್ರಸ್ತಾಪಿಸಿದ ವಿಷಯಗಳಲ್ಲಿ ಕೆಲವು ಸಮಸ್ಯೆಗಳಿರ ಬಹುದು,ತೊಂದರೆಗಳನ್ನು ಹೇಳಿರಬಹುದು. ಇವ್ಕ್ಕೆಲ್ಲ ಪರಿಹಾರವೇನು? ಹೇಗೆ ಎಂಬುದನ್ನು ಮುಕ್ತಾಯದಲ್ಲಿ ಹೇಳಬೇಕು.  ಮುಕ್ತಾಯ     ಒಂದು ಕಾರ್ಯಕ್ರಮ ಮುಗಿದ      ಮೇಲೆ  ಮಂಗಳ  ಹಾಡಿದಂತೆ.
    ತಲೆಯಿದ್ದವನಿಗೆ ತಲೆನೋವಂತೆ! ನೋವೆಲ್ಲಿಯದು ಎಂಬ ಸ್ಪಷ್ಟ ಯೋಚನೆ ಅವನಿಗೇ ಸಿಗದಿದ್ದರೆ (ಯೋಚನೆ ತಲೆಗೇ ಹೊಳೆಯುವುದಲ್ಲವೇ!). ವೈದ್ಯರನ್ನು ಕಂಡು ಔಷಧೋಪಚಾರದ ಬಗ್ಗೆ ಪ್ರಸ್ತಾಪಿಸುವುದು ಹೇಗೆ?  ಇಲ್ಲಿಯೂ ತಲೆ ಉಪಯೋಗವಾಗಬೇಕು. ವೈದ್ಯರದೂ ತಲೆ ರೋಗಶಮನಕ್ಕೆ ಅನುಕೂಲವಾಗಿದ್ದರೆ ರೋಗ ವಾಸಿ. ಹಾಗೇ ಬರಹಕ್ಕೊಂದು ಸರಿಯಾದ ತಲೆಬರಹವಿದ್ದರೆ ವಿಷಯವಿಸ್ತಾರ ಅದನ್ನನುಸರಿಸಿ ಮುಂದುವರಿಯುತ್ತದೆ. ಆದರೂ ತಲೆಬರಹಕ್ಕೂ ಬರಹಕ್ಕೂ ಸಂಬಂಧವಿಲ್ಲದಿದ್ದರೆ ಆ ಲೇಖನ ತಲೆ ಬುಡವಿಲ್ಲದ್ದು - ಅರ್ಥಾತ್ ತುದಿ ಮೊದಲಿಲ್ಲದ್ದು. ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ಪಾಠ ನಡೆಯುತ್ತಿದ್ದಂತೆ ಏನೋ ಮಾಡಿನ ಕಡೆಗೆ ನೋಡುತ್ತಿದ್ದನಂತೆ. ಪಾಠದ ಕಡೆಗೆ ಅವನ ಗಮನವಿಲ್ಲ. ಒಂದು ಕೇರೆ ಹಾವು ಮಾಡಿನಲ್ಲಿ ಹರಿದಾಡುವುದನ್ನು ಅವನ ಕಣ್ಣುಗಳು ಸೆರೆಹಿಡಿದಿದ್ದವು. ಅವನ ಗಮನ ಬೇರೆ ಕಡೆಗಿದೆಯೆಂಬುದನ್ನು ಮನಗಂಡ ಅಧ್ಯಾಪಕರು ಆ ವಿದ್ಯಾರ್ಥಿಯನ್ನು ಕರೆದು ಅವನನ್ನು ಕುರಿತು ಅವರು ವಿವರಿಸುತ್ತಿದ್ದ ವಿಷಯದಲ್ಲಿ ಪ್ರಶ್ನೆ ಕೇಳಿದರಂತೆ. ಆಗ ಆ ವಿದ್ಯಾರ್ಥಿಯು "ಬಾಲ ಮಾತ್ರ ಬಾಕಿಯಿದೆ" ಎಂದನಂತೆ.ಅಂದರೆ ಅವನು ನೋಡುತ್ತಿದ್ದ ಕೇರೆ ಹಾವು, ಆಚೆಗೆ ಹೋಯಿತು, ಆದರೆ ಬಾಲ ಮಾತ್ರ ಇನ್ನೂ ಕಾಣಿಸುತ್ತದೆ. ಎಂದಾಗಿತ್ತು ಅವನ ಉತ್ತರ. ಅವನ ತಲೆಯೊಳಗೆ ಹೊಕ್ಕ ಕೇರೆ ಹಾವು ಪಾಠದ ಕಡೆಗಿನ ಅವನ ಗಮನವನ್ನು ತನ್ನ ಕಡೆಗೆ ಸೆಳೆದಿತ್ತು. ಹೀಗಾದರೆ ಇಂಥವರ ತಲೆ ಬರಹವೇ ( ಹಣೆ ಬರಹ) ದೇವರಿಗೇ ಬಿಟ್ಟದ್ದಲ್ಲವೇ?
    ಸಾಮಾನ್ಯವಾಗಿ ವಿಷಯ ವಿಸ್ತಾರ, ನಾವು ಬರೆಯುವ ಬರಹವನ್ನು ಹೊಂದಿಕೊಂಡಿದೆ. ಚುಟುಕಾಗಿ ಬರಹ ಮುಗಿಸಬೇಕಿದ್ದರೆ ಕಿರಿದರಲ್ಲಿ ಹಿರಿದರ್ಥವನ್ನು ಕೊಡುವ ಲಘು ಬರಹಗಳಾಗುತ್ತವೆ. ದೊಡ್ಡ ಪ್ರಬಂಧಗಳಾದರೆ ವಿಷಯ ವಿಸ್ತಾರ ಹೆಚ್ಚಿರಬೇಕಾಗುತ್ತದೆ. ಕೆಳಗಿನ ತರಗತಿಯ ಅಧ್ಯಾಪಕ ಮೇಲಿನ ತರಗತಿಗಳಿಗೆ ಹೋದರೆ ಅವನ ಭಾಷೆ ಸ್ವಲ್ಪ ಹೆಚ್ಚು ಪ್ರೌಢಿಮೆಯಿಂದ ಕೂಡಿರಬೇಕು. ಮಧ್ಯ ಮಧ್ಯೆ ಕೆಲವು ತಮಾಷೆಯ ಮಾತುಗಳನ್ನು, ಕೆಲವು ಗಾದೆಯ ಮಾತುಗಳನ್ನು ಸೇರಿಸುವುದು ಒಳ್ಳೆಯದು.   ಹಿರಿಯ ಲೇಖಕರ ಕೆಲವು ನಿದರ್ಶನ ಮಾತುಗಳನ್ನು ಉದ್ಧರಿಸುವ ಮೂಲಕ ಪ್ರಸ್ತಾವಿಸಿದರೆ ಚೆನ್ನ. ಪಾಠದ ಮಧ್ಯೆ ಮಕ್ಕಳಿಗೆ ಬೇಸರ ಹೋಗಿಸಲು, ಗಮನ ಸೆಳೆಯಲು ಹಾಸ್ಯದ ಚಟಾಕಿಗಳನ್ನು ಹಾರಿಸುವಂತೆ ನಡು ನಡುವೆ ಉದಾಹರಣೆಯ ಮೂಲಕ, ಚಮತ್ಕಾರದ ಮೂಲಕ ಸೇರಿಸಿದರೆ ಮುದ್ದಣ ಹೇಳಿದಂತೆ "ಕರಿಮಣಿ ಸರದಲ್ಲಿ ಚೆಂಬವಳ"ವನ್ನು ಸೇರಿಸಿದಂತಾಗಬಹುದು. ಚಿತ್ರಕಾರನ ಚಿತ್ರ ನೋಡುವವರನ್ನು ಆಕರ್ಷಿಸಬೇಡವೇ?  ಬರೆಯುವ ಬರಹ ಕತೆಯಾದರೂ ಇರಬಹುದು, ಪ್ರಬಂಧವಾದರೂ ಇರಬಹುದು. ತಲೆಬರಹ ನೋಡಿದೊಡನೆ ಗೊತ್ತಾಗಬೇಕು. ಅದರಲ್ಲಿ ಅಡಕವಾಗಿರಬಹುದಾದ ವಿಷಯವೇನೆಂದು. ತಲೆಬರಹಕ್ಕೂ ವಿಷಯಕ್ಕೂ ಸಂಬಂಧವಿಲ್ಲದಿದ್ದರೆ ಆ ಬರಹಕ್ಕೆ ಬೆಲೆಯಿಲ್ಲ. ತಲೆ ಬರಹ ಮತ್ತೆ ಒಂದೆರಡು ವಾಕ್ಯಗಳನ್ನು ಓದಿದವರು ಇಷ್ಟವಾದರೆ ಮುಂದೆ ಓದುತ್ತಾರೆ. ವಾಕ್ಯ ರಚನೆ ವಿಷಯ  ಪ್ರಸ್ತಾವನೆ ಮತ್ತು ವಿಷಯ ವಿಸ್ತಾರ,ಒಮ್ಮೆ ಓದಿದವನಿಗೆ ಮತ್ತೊಮ್ಮೆ ಮಗುದೊಮ್ಮೆ ಓದಬೇಕೆಂದು  ತೋರುವಂತಿರಬೇಕು. ಹೀಗೆ ತಲೆಬರಹಕ್ಕೂ ವಿವರಿಸುವ ವಿಷಯಕ್ಕೂ ಹೊಂದಾಣಿಕೆಯಾದರೆ ಲೇಖನ ಓದುವವರಿಗೆ ಓದಲು ಆಸಕ್ತಿ ಹುಟ್ಟಿಸುವುದಲ್ಲವೇ? . ಈ ಎಲ್ಲ ಮಾತುಗಳನ್ನು ಗಮನಿಸಿಕೊಂಡು ಬರೆದರೆ ಆ ಲೇಖನ ಸಾರ್ಥಕವಾದೀತು. ಹಿಂದೆ ಹರಿಹರನೆಂಬ ಕವಿ ಹೇಳಿದ್ದನಲ್ಲ!  ಉಳಿದರೂ ಅಳಿದರೂ ಮುಂದಿನವರಿಗೆ ದಾರಿ ತೋರುವುದಾಗಿರಬೇಕು.   ಕೆಲವರು "ಅವನ ಮಾತಿಗೆ ತಲೆ ಬುಡ ಇಲ್ಲ"" ಎಂದು ಹೇಳುತ್ತಾರೆ. ಎಲ್ಲಿಂದ ಆರಂಭವಾಗಿದೆ? ಎಲ್ಲಿ ಮುಕ್ತಾಯವಾಗಿದೆಯೆಂಬುದು ಮಾತಿನಿಂದ ತಿಳಿಯದಿದ್ದರೆ ಹೇಳಿದ ಮಾತಿಗೆ ಸಾರ್ಥಕತೆಯಿದೆಯೇ?     ಬರಹದ ಉದ್ದೇಶ ಸಾರ್ಥಕವಾಗಬೇಕಾದರೆ  ತಲೆ ಬರಹವೋ ಬರೆದ ಬರಹವೋ ಮಾತ್ರ ಮುಖ್ಯವಲ್ಲ. ಬರಹದಲ್ಲಿ ನಾವು ಹೇಳುವ ವಿಷಯಗಳು ಓದುಗರಿಗೆ ಮನದಟ್ಟಾಗಬೇಕು. ನಾವು ಒದಗಿಸುವ ನೀತಿ ವಾಕ್ಯಗಳು ಓದುಗರಿಗೆ ಜ್ಞಾನ ದೀವಿಗೆಯಯಿಂದ ದಾರಿತೋರಿಸುವಂತಹುದಾಗಿರಬೇಕು. ರಸಭರಿತವಾದ ಮಾತುಗಳಿಂದ ಓದುಗರನ್ನು ತನ್ನೆಡೆಗೆ ಸೆಳೆದುಕೊಂಡು ಓದಿದ್ದರಿಂದ  ಅವರನ್ನು ತಪ್ಪು ದಾರಿಯಿಂದ ಸರಿದಾರಿಗೆ ತರುವಂತಹುದಾಗಿರಬೇಕು. ಮಕ್ಕಳನ್ನು ಮುದ್ದಿನ ಮಾತುಗಳಿಂದ ಅವರ ಗಮನ ತಮ್ಮೆಡೆಗೆ ಸೆಳೆದುಕೊಂಡು ಅವರಿಗೆಊಟಮಾಡಿಸಿದಹಾಗೆನಮ್ಮಬರಹದವಾಕ್ಯಗಳುವಿಜೃಂಭಿಸಿದರೆ ನಮ್ಮ    ಶ್ರಮ    ಸಾರ್ಥಕ!

No comments:

Post a Comment