Friday, April 20, 2012

ಕಾಲಕ್ಷೇಪ

ಕಾಲ ಕ್ಷೇಪ
   
                                                                                                                                                               ಬಾಳಿಕೆ ಸುಬ್ಬಣ್ಣ  ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು

    ಕಾಲ ಎಂದರೆ ಸಮಯ, ನಮ್ಮನ್ನು ಕಾಯುವುದಿಲ್ಲ. ಸೂರ್ಯ ಉದಯಿಸುತ್ತಾನೆ, ಮುಳುಗುತ್ತಾನೆ, ಅಲ್ಲಿಗೆ ಒಂದು ದಿನ ಮುಗಿದೇ ಹೋಯಿತು. ದಿನ ಮುಗಿಯುಯುವುದು ನಮ್ಮಿಂದಲ್ಲ. ಕಾಲ ಅದರಷ್ಟಕ್ಕೇ ಮುಂದೆ ಹೋಗುತ್ತದೆ. ಕೆಲವರಿಗೆ ಹೇಗಪ್ಪಾ ಸಮಯ ಹೋಗುವುದು? ಎಂಬ ಚಿಂತೆ ಹುಟ್ಟಿಕೊಳ್ಳುತ್ತದೆ. ಹಾಗೆ ಚಿಂತೆಯಲ್ಲೇ ಕಾಲ ಕಳೆಯುವವರೂ ಇದ್ದಾರೆ. ಎಲ್ಲ ಅವರ ವೈಯಯಕ್ತಿಕ ಚಿಂತೆಯಷ್ಟೆ ಹೊರತು ಕಾಲ ಯಾರನ್ನೂ ಕಾಯುವುದಿಲ್ಲ. "ಕಾಲ ಕಾಲ" ಎ೦ಬ ಪದ ಬಳಕೆಯಲ್ಲಿದೆ. ಅದರಲ್ಲಿ, ಕಾಲ ಎಂದರೆ ಮೃತ್ಯು.  ಆ ಕಾಲನಿಗೆ ಕಾಲನಾದವನು ಮೃತ್ಯುಂಜಯನಾದ ಶಿವನಾಗುತ್ತಾನೆ. ಅವನ ಸುದ್ದಿ ಇಲ್ಲಿ ಬೇಡ. ಸಮಯವನ್ನು ಕಳೆಯುವುದು ಹೇಗೆ ಎಂಬರ್ಥದಲ್ಲಿ ಕಾಲಕ್ಷೇಪ ಹೇಗೆ ಮಾಡಬಹುದು ಎಂಬುದನ್ನು ಮತ್ತು  ಸಮಯದ ಸದುಪಯೋಗ ಹೇಗೆ ಎಂಬುದನ್ನು ವಿಮರ್ಶಿಸಲಾಗಿದೆ.
    ಆದರೆ ಕೆಲವರ ಸಮಸ್ಯೆ ಅದಲ್ಲ. ಅವರಿಗೆ ಸಮಯವೇ ಸಾಕಾಗುವುದಿಲ್ಲ. ಬೆಳಗ್ಗೆ ಏಳುವಾಗಲೇ ತಡ! ಮತ್ತೆ ಮಾಡಬೇಕಾದ ಕೆಲಸಗಳು ಎಷ್ಟೋ ಇವೆ. ಅದನ್ನು ಯಾವಾಗ ಮಾಡಿ ಮುಗಿಸುವುದು ಎಂಬುದು  ಅವರ ಗೋಳು. ಆ ಗದ್ದಲದಲ್ಲಿಯೇ ಸಮಯ ಮುಂದೆ ಹೋಗುವುದು ಅವರಿಗೆ ಗೊತ್ತಾಗುವುದಿಲ್ಲ. ಮತ್ತೂ ಯೋಚನೆಯಲ್ಲಿಯೇ ಕಾಲ ಕಳೆಯುತ್ತಾರೆ. ಕಡೆಗೆ ಯಾವುದನ್ನೂ ಪೂರ್ತಿ ಮಾಡಲಾಗದೆ ತಡವಾಯಿತೆಂದು ಆಫೀಸಿಗೋ ಶಾಲೆಗೋ ಹೋಗಿ ಬಿಡುತ್ತಾರೆ. ಅಧ್ಯಾಪಕರಿಂದ ಮೇಲಧಿಕಾರಿಗಳಿಂದ ಬೈಸಿಕೊಳ್ಳುತ್ತಾರೆ. ಅಂದರೆ ಅವರಿಗೆ ಸಮಯದ ಬೆಲೆ ಗೊತ್ತಿಲ್ಲ. ಹೇಗೆ ನೋಡಿದರೂ ದಿನದ ಇಪ್ಪತ್ತನಾಲ್ಕು ಘಂಟೆಗಳನ್ನು ಹೆಚ್ಚು ಯಾ ಕಡಿಮೆ ಮಾಡಿಕೊಳ್ಳಲು ಬರುವುದೇ? ಹಾಗೆ ಕೇಳಿದರೆ ಅಮೇರಿಕಾದವರು ಬರುತ್ತದೆ ಎಂದಾರು. ಚಳಿಗಾಲದಲ್ಲಿ ಅವರಿಗೆ ಹಗಲು ಕಡಿಮೆ. ಅದಕ್ಕೆ ಇಡೀ ರಾಷ್ಟ್ರದ ಸಮಯವನ್ನು ಒಂದು ಘಂಟೆ ಹಿಂದಕ್ಕೆ ತಿರುಗಿಸಿ ಕೊಳ್ಳುತ್ತಾರೆ. ಚಳಿಗಾಲದ ಸಮಯವನ್ನು ಸೆಕೆಗಾಲ ಬಂದಾಗ ಮತ್ತೆ ಒಂದು ಘಂಟೆ ಮುಂದೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ಏಳೂವರೆ ಘಂಟೆಗೆ ಎಲ್ಲರದೂ ಊಟ ಮುಗಿಯುತ್ತದೆ. ಎಲ್ಲವೂ ನಮ್ಮದೇ ಲೆಕ್ಕಾಚಾರ!
    ಕೆಲವರು ದಿನದ ಸಮಯವನ್ನು ನಿರ್ದಿಷ್ಟವಾದ ಕಾಲ ಪರಿಧಿಯಲ್ಲಿ ಮುಗಿಸಿಕೊಳ್ಳಲು ಕಾಲ ನಿಯಾಮಕ  ಪಟ್ಟಿಯನ್ನು ಮಾಡಿಕೊಳ್ಳುತ್ತಾರೆ. ಅದಕ್ಕನುಸರಿಸಿ ಸಮಯವನ್ನು ಉಪಯೋಗಿಸಿಕೊಂಡು ಏನೋ ಒಂದು ಗಾದೆಯಂತೆ "ಬಿಸಿಲು ಬಂದಾಗ ಹುಲ್ಲು ಒಣಗಿಸಿಕೊ" ಎಂದು ಸಮಯದ ಸದುಪಯೋಗ ಮಾಡಿಕೊಳ್ಳುತ್ತಾರೆ. "ಕಳೆದು ಹೋದ ಕಾಲ ಮತ್ತೆ ಬರಲಾರದು" ಎಂಬುದು ಅವರಿಗೆ ಗೊತ್ತಿದೆ. ಬಾಲ್ಯದಲ್ಲಿಯೇ ಹೀಗೆ ಸಮಯದ ಸದುಪಯೋಗ ಕಲಿತುಕೊಂಡರೆ ಮುಂದೆ ಅವರಿಗೆ ಜೀವನವನ್ನು ಶಿಸ್ತುಬದ್ಧವಾಗಿ ರೂಪಿಸಿಕೊಳ್ಳಲು ಸಹಾಯವಾಗುತ್ತದೆ. ಅಂಥವರು ಎಲ್ಲಿ ಹೋದರೂ ತಮ್ಮ ಶಿಸ್ತನ್ನು ಬಿಡುವುದಿಲ್ಲ. ಅದಕ್ಕಾಗಿಯೇ ಶಾಲೆಗಳಲ್ಲಿ ಬೇರೆ ಬೇರೆ ಪಾಠಗಳಿಗೆ ಕಾಲ ನಿಯಾಮಕ ಪಟ್ಟಿ ಇಟ್ಟುಕೊಳ್ಳುತ್ತಾರೆ. ಆಫೀಸಿನಲ್ಲಾದರೂ ಮನೆಯಲ್ಲಾದರೂ ಹೀಗೆ ಶಿಸ್ತುಬದ್ಧವಾಗಿ ನಡೆದರೆ ಕೆಲಸದ ಹೊರೆ ಹೆಚ್ಚಾಗುವುದಿಲ್ಲ. ಇನ್ನು ಕೆಲವರು ಎಳವೆಯಲ್ಲಿಯೇ ವ್ಯರ್ಥ ಕಾಲಹರಣ ಮಾಡುವ ಚಟಕ್ಕೆ ಬಿದ್ದರಂತೂ ಅವರಿಗೆ ಸಮಯವನ್ನು ಸರಿ ಹೊಂದಿಸಲು ಸಾಧ್ಯವಾಗುವುದಿಲ್ಲ. ಕಾಲ ನಮ್ಮನ್ನು ಕಾಯುವುದಿಲ್ಲವೆಂಬುದು ಗೊತ್ತಿರುವಾಗ ಬರಿದೆ ಕಾಲಯಾಪನೆ ಮಾಡಿ ಮತ್ತೆ ಸಮಯ ಸಾಕಾಗಲಿಲ್ಲ ಎಂದು ಹೇಳುವುದು ಮೂರ್ಖತನವಲ್ಲವೇ? ಪರೀಕ್ಷೆಗೆ ಬರೆಯುವಾಗಲೂ ನಿರ್ದಿಷ್ಟ  ಪ್ರಶ್ನೆಗಳಿಗೆ  ಸಮಯದ ಹಂಚೋಣ ಸರಿಗೊಳಿಸದಿದ್ದರೆ ಸಮಯ ಸಾಕಾಗಲಾರದು. ಇಲ್ಲಿ ಸಮಯ ಪ್ರಜ್ಞೆ ಮುಖ್ಯ! ಈಗ ಇಲ್ಲಿ ಕೊಡಬೇಕಾದ ಉತ್ತರ ಮತ್ತೆ  ಹೊಳೆದರೆ ಪ್ರಯೋಜನ ಸಿಗುವುದೇ?
    ಕಾಲ ಪ್ರಜ್ಞೆ ಎಲ್ಲ ಸಂದರ್ಭಗಳಲ್ಲೂ ಬೇಕಾಗುತ್ತದೆ. ಸಮಯದ ಪರಿವೆಯಿಲ್ಲದಿದ್ದರೆ ಅವನಿಂದ ಯಾವ ಕೆಲಸವನ್ನೂ ಮಾಡಲಾಗುವುದಿಲ್ಲ. ಆದರೆ ಇಲ್ಲಿ ಕಾಲಕ್ಷೇಪ ಎಂಬ ಶಿರೋನಾಮೆಯಿದ್ದರೂ ಕಾಲದ ಮಹತ್ವವನ್ನು ಹೇಳಿ ಮತ್ತೆ ಧಾರಾಳ ಸಮಯವಿದ್ದವರಿಗೆ ಕಾಲ ಹರಣ ಹೇಗೆ ಎಂಬುದನ್ನೂ ವಿಮರ್ಶಿಸಬೇಕು. ಜೀವನದುದ್ದಕ್ಕೂ ನಾವು ಪ್ರಕೃತಿಯಿಂದ ಕಲಿಯುವುದು ಬೇಕಾದಷ್ಟು ವಿಷಯಗಳಿರುತ್ತವೆ. ವಿಶ್ವವೇ ಒಂದು ಪಾಠಶಾಲೆ ಎಂದರೆ ತಪ್ಪಲ್ಲ.  ಉದ್ಯೋಗದಿಂದ ನಿವೃತ್ತಿ ಹೊಂದಿದಮೇಲೂ ನಾವು ಸಿಗುವ ಧಾರಾಳ ಬಿಡುಸಮಯವನ್ನು ಒಳ್ಳೊಳ್ಳೆಯ ಪುಸ್ತಕ ಓದಲು ಏನಾದರೂ ಬರೆಯಲು ಉಪಯೋಗಿಸಬಹುದು. ಆಧ್ಯಾತ್ಮಿಕ ಪುಸ್ತಕ ಓದುವುದು, ಯೋಗ ಸಾಧನೆ ಮಾಡುವುದು ಹೀಗೆಲ್ಲಾ ಕಾಲಹರಣ ಮಾಡಬಹುದು. ಇನ್ನು ಹರಿಕಥೆ, ಯಕ್ಷಗಾನ, ಸಂಗೀತ ಮೊದಲಾದ ಕಾಲಕ್ಷೇಪಗಳು ಮನೋರಂಜನೆಯನ್ನೂ ಒದಗಿಸುವುದರೊಂದಿಗೆ ಸಮಯದ ಸದುಪಯೋಗಕ್ಕೆ ಸಹಕಾರಿಯಗಿದೆ. ಮನಸ್ಸಿದ್ದರೆ ಮಾರ್ಗ ಎನ್ನುತ್ತಾರೆ. ನಮ್ಮ ಜ್ಞಾನಭಂಡಾರ ಹೆಚ್ಚಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ಕೊಡಬಹುದು. ಈ ರೀತಿ ಮುಂದಿನ ಜನಾಂಗವೂ ಸುಲಭವಾಗಿ ಕಾಲವನ್ನು ಹೆಚ್ಚಿನ ಪ್ರಯೋಜನದಾಯಕವಾಗಿ ಸಮಯದ ಬೆಲೆಯನ್ನರಿತು ಮುಂದುವರಿಯಬಹುದಲ್ಲವೇ?
    ಕಾಲಜ್ಞಾನ  ಎಂದಾಗ ಸಮಯದ ಕುರಿತು ತಿಳುವಳಿಕೆ, ಕಾಲಜ್ಞಾನಿ ಎಂದಾಗ ಸಮಯದ ಕುರಿತು ತಿಳಿದವನು ಎಂಬೆಲ್ಲ ಅರ್ಥ ಬರುತ್ತದೆ. ಇನ್ನು ತ್ರಿಕಾಲ ಜ್ಞಾನಿ ಎಂದರೆ ಭೂತ, ಭವಿಷ್ಯತ್ ಮತ್ತು ವರ್ತಮಾನ ಎಂಬ ಮೂರು ಕಾಲಗಳ ಕುರಿತು ತಿಳಿದವನು ಎಂಬರ್ಥ ಬರುತ್ತದೆ. ಹಿಂದೆ ಕಳೆದು ಹೋದ ಕಾಲದಲ್ಲಿ ಆದ ಸೋಲು, ಕಷ್ಟ, ಬೇನೆ, ಬೇಸರಿಕೆಗಳನ್ನು ನೆನಪಿಸುತ್ತಾ, ಈಗ ಒದಗಿರುವ ಕಷ್ಟ, ನಷ್ಟಗಳಿಗಾಗಿ ಹೆಚ್ಚು ಕರುಬುವುದು ಸಲ್ಲದು. ಕಷ್ಟನಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರಲಾರದಷ್ಟೆ! ಹಿಂದಿನ ದಿನಗಳನ್ನು ಹೇಗೆ ಕಳೆದೆವು? ಬಂದ ಬವಣೆಯನ್ನು ಹೇಗೆ ಇನ್ನೂ ಹೆಚ್ಚು ಸುಲಭವಾಗಿ ಎದುರಿಸುವುದು? ಎಂದೆಲ್ಲ ಚಿಂತಿಸಿ, ಮುಂದಿನ ದಿನಗಳ ಯೋಚನೆಯನ್ನೂ ಮನಸ್ಸಿನಲ್ಲಿಟ್ಟುಕೊಂಡು  ಮುಂದೆ ಹೋಗಬೇಕು. ಎಲ್ಲವೂ ಆ ಪರಮಾತ್ಮನ ಆಟಗಳು ಎಂದು ಯೋಚಿಸಿಕೊಂಡು ನಿಶ್ಚಿಂತೆಯಿಂದ ದಿನ ಕಳೆದರೆ ಜೀವನ ಹೆಚ್ಚು ದುರ್ಭರವಾಗಲಾರದಲ್ಲವೇ?
         "ಕಳೆದ ಕಾಲವ ನೆನೆದು ಕಳವಳಿಸಿ ಫಲವಿಲ್ಲ, ಬಿದ್ದ ಹಣ್ಣೆಂದಿಗು ಮತ್ತೆ ಮರಕಿಲ್ಲ" ಎನ್ನುವುದು ಬಲ್ಲವರ ಮಾತು. "ಇಂದು ಮಾಡಬೇಕಾದ ಕೆಲಸ ಇಂದೇ ಮಾಡಬೇಕು. ನಾಳೆಗೆಂದರೆ ಅದು ಹಾಳು" ಅಲ್ಲವೇ?   ಇಂದೇ ಮಾಡಬೇಕಾದ ಯಾವುದೇ ಕೆಲಸಗಳನ್ನು "ನಾಳೆ ಮಾಡಿದರಾಯಿತು" ಎಂದು ಮುಂದಕ್ಕೆ ಹಾಕಿದರೆ ಕೆಲಸ ಬಾಕಿಯಾಗುತ್ತದೆ. ಬಾಕಿಯಾದರೆ ಮತ್ತೆ ಮರುದಿನಕ್ಕೆ ಎರಡರಷ್ಟು ಕೆಲಸ ಬೀಳುತ್ತದೆ. ಒಂದು ದಿನದ ಕೆಲಸವನ್ನೇ ಮಾಡಲಾಗದವನು ಎರಡು ಮೂರು ದಿನಗಳ ಕೆಲಸ ಒಮ್ಮೆಗೇ ಮಾಡಬಹುದೇ? ಆ ಕೆಲಸ ಬಾಕಿಯಾದರೆ ಅವನಿಂದ ಮತ್ತೆ ಮಾಡಿ ಮುಗಿಸುವುದಕ್ಕೆ ಆಗುವುದಿಲ್ಲ. ಆಫೀಸ್ ಕೆಲಸವಾದರೆ ಒಮ್ಮೆಗೇ ಇಮ್ಮಡಿ ಕೆಲಸ ಮಾಡುವುದು ಸಾಧ್ಯವೇ? ಹೀಗೆಯೇ ಸರಕಾರಿ ಕಡತಗಳು ಇದ್ದಲ್ಲೇ ಕೊಳೆಯುತ್ತಿರುತ್ತವೆ. ಸ್ವಂತ ಕೆಲಸವಾದರೂ ಅಷ್ಟೆ. ಕೆಲಸದ ಹೊರೆ ಹೆಚ್ಚಾದಾಗ ಕೋಪ ಹೆಚ್ಚಿ, ರಕ್ತದೊತ್ತಡ  ಮೊದಲಾದ ರೋಗಗಳಿಗೆ ತುತ್ತಾಗುತ್ತಾರೆ. ಸಮಯ ಪಾಲನೆಯಿಂದ ಗಡಿಬಿಡಿ ಇಲ್ಲ. ಮಾನಸಿಕ ನೆಮ್ಮದಿಯಿದ್ದರೆ ರೋಗ ಮುಕ್ತರಾಗಿರಬಹುದು. ಅಲ್ಲದೆ ಡಾಕ್ಟರುಗಳ ಭೇಟಿಯ ಸಮಯ ಉಳಿದು, ಮಾಡಬೇಕಾದ ಕೆಲಸಕ್ಕೆ ಸಾಕಷ್ಟು ಸಮಯಾವಕಾಶ ಸಿಕ್ಕಿ ಜೀವನ ಸುಖಕರವಾಗಿರುತ್ತದೆ.
    "ಕಾಲಾಯ ತಸ್ಮೈ ನಮಃ". ಜನಜೀವನದಲ್ಲಿ ಸಾಮಾಜಿಕ ಬದಲಾವಣೆಗಳು ಕಾಲ ಕಾಲಕ್ಕೆ ನಡೆಯುತ್ತಿರುತ್ತವೆ. ಆದಿ ಮಾನವರ ಜೀವನಕ್ರಮವೂ ಇಂದಿನ ಜೀವನ ಕ್ರಮಗಳೂ ಅಜ ಗಜಾಂತರವಾಗಿವೆ. ಅಂದು ಜನ ಕಾಲ್ನಡಿಗೆಯಿಂದ ಇನ್ನೊಂದೂರಿಗೆ ಹೋಗುತ್ತಿದ್ದರೆ ಇಂದು ವಾಯುಯಾನದಿಂದ ದೇಶ ಸಂಚಾರ ಮಾಡಲು ವಿಜ್ಞಾನ ಸಹಾಯಕವಾಗಿದೆ. ಒಂದು ಕಟ್ಟಡ, ದೇವಸ್ಥಾನ ನಿರ್ಮಾಣಕ್ಕೆ ವರ್ಷಗಟ್ಟಲೆ ಬೇಕಾಗಿದ್ದಲ್ಲಿ ವರ್ಷದೊಳಗೆ ಮಾಡಿ ಮುಗಿಸಲು ಸಾಧ್ಯವಾಗುತ್ತದೆ. ಜನರ  ಬುದ್ಧಿ ಸಾಮರ್ಥ್ಯ ಹೆಚ್ಚಾಗಿದೆ. ಅಂತೂ ಬೇಕು ಬಯಕೆಗಳು ಹೆಚ್ಚಾದಂತೆ ಕೆಲಸ ಕಾರ್ಯಗಳೂ ಹೆಚ್ಚಾಗಬೇಕಲ್ಲವೇ? ವಿಜ್ಞಾನ ಮುಂದುವರಿದರೂ ಜನರ ಅಜ್ಞಾನವೂ ಕಡಿಮೆಯಾಗಿಲ್ಲ. ಔದಾಸೀನ್ಯದ ಜೊತೆಗೆ ಬೇರೆ ಬೇರೆ ಹೊಸ ಹೊಸ ರೋಗ ರುಜೆಗಳು ಮಾನವನನ್ನು ಮನೋವೇಗದ ಕಡೆಗೆ ಮುಂದುವರಿಯಲು  ಬಿಡುತ್ತಿಲ್ಲ. ಆದರೂ ಯೋಗ, ಧ್ಯಾನಗಳಂತಹ ಮನೋನಿಗ್ರಹ  ಶಕ್ತಿಗಳ ಮೂಲಕ ಮುಂದುವರಿದರೆ  ಕಾಲದ ವೇಗಕ್ಕೆ ಹೊಂದಿಕೊಳ್ಳಲು ಜನರ ಇಚ್ಛಾಶಕ್ತಿ ಪೂರಕವಾದೀತೇ?

No comments:

Post a Comment