Monday, April 23, 2012

ಪಂಗುಂ ಲಂಘಯತೇ ಗಿರಿಂ

ಪಂಗುಂ ಲಂಘಯತೇ ಗಿರಿಂ

    ಮಾಧವನ ಕೃಪೆಯಿದ್ದರೆ, "ಮೂಕಂ ಕರೋತಿ ವಾಚಾಲಂ, ಪಂಗುಂ ಲಂಘಯತೇ ಗಿರಿಂ" ಎಂದು ವ್ಯಾಸ ಮಹರ್ಷಿಗಳು ಹೇಳಿದ್ದಾರಲ್ಲವೇ? ಅಂದರೆ  ಆ ಪರಮಾತ್ಮನ ಕೃಪೆಯಿದ್ದರೆ ಹೆಳವನೂ ಪರ್ವತವನ್ನು ಲಂಘಿಸಬಹುದು ಎಂದಾಯಿತು. ಹೆಳವನು ಎದ್ದು ಓಡಾಡುವುದು ಸಾಧ್ಯವೇ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮತ್ತೆ  ಮೂಕನು ವಾಚಾಲನಾಗುವುದು ಹೇಗೆ? ಸಾಮಾನ್ಯವಾಗಿ ನೋಡುವುದಿದ್ದರೆ ಎರಡೂ ಅಸಾಧ್ಯದ ಮಾತು. ಆದರೆ ಪರಮಾತ್ಮನ ಕರುಣೆಯಿದ್ದರೆ ಎಂದೇ ಅವರು ಹೇಳಿದ್ದಾರೆ. ಪುರಾಣಗಳಲ್ಲಿ ಓದಿದ ಹಾಗೆ ಆತ ಕರುಣಾಸಾಗರನಂತೆ! ಭಕ್ತರ ಹೃದಯದಲ್ಲೇ ಅವನ ವಾಸವಂತೆ. ನಮ್ಮ ಹೃದಯ ನಿವಾಸಿಯಾದ ಆತನನ್ನು ಮನಸಾರೆ ನಂಬಿದರೆ, ಪೂಜಿಸಿದರೆ, ಪ್ರಸನ್ನನಾಗುವನಂತೆ. ಹಾಗಾದರೆ ಆತನನ್ನು ಒಲಿಸಿ ಯಾಕೆ ಮೆಚ್ಚಿಸುವುದಿಲ್ಲ. ಸೋಹಂ ಭಾವದಿಂದ  ಪೂಜಿಸಿ, ನವ ವಿಧ ಭಕುತಿಗಳಿಂದ  ಪೂಜಿಸಿ ಒಲಿಸಿದವರಿದ್ದಾರೆ. ಭಕ್ತರ ಭಕ್ತಿಗೆ ಮೆಚ್ಚಿ ಅವರ ಕರೆಗೆ ಓಗೊಟ್ಟು ಓಡಿ ಬಂದಿದ್ದಾನಂತೆ. ಅವರ ಕೇಳಿಕೆಯನ್ನು ಮನ್ನಿಸಿದ ಉದಾಹರಣೆಗಳೆಷ್ಟೋ ನಮ್ಮ ಪುರಾಣಗಳಿಂದ ತಿಳಿಯಬಹುದು. ಬಾಲಕ ಧ್ರುವನ ಭಕ್ತಿಗೆ ಮೆಚ್ಚಿ ವರ ಕರುಣಿಸಿದ್ದು, ಗಜ ರಾಜನ ಕರೆಗೆ ಓ ಗೊಟ್ಟದ್ದು, ದ್ರೌಪದಿಗೆ ಅಕ್ಶಯ ವಸ್ತ್ರ ಪ್ರದಾನ ಮಾಡಿದ್ದು ಹೀಗೆ ಎಷ್ಟೆಷ್ಟೋ ಉದಾಹರಣೆಗಳಿವೆ. ಪುರಾಣವನ್ನೇ ನಂಬದವರು ಈ ಮಾತನ್ನೂ ಒಪ್ಪಲಾರರು. ಮಡೆಸ್ನಾನವಾದರೂ, ಅಲ್ಲಿ ಭಕ್ತಿಯೇ ಮುಖ್ಯವಷ್ಟೆ! ಅಂಧ ಶ್ರದ್ಧೆಯೆಂದು, ಮೂಢ ನಂಬಿಕೆಯೆಂದು ಹೇಗಾಗುವುದೋ ತಿಳಿಯುವುದಿಲ್ಲ. ಇಂದಿನ ಧುರೀಣರ ದೃಷ್ಟಿಯಲ್ಲಿ, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಂದಾಳುಗಳು ಏನು ಮಾಡಿದರೂ ಅಪರಾಧವಲ್ಲ. ಅದನ್ನು ಪ್ರತಿಭಟಿಸುವುದಕ್ಕೆ ಯಾವ ಸ್ವಾಮಿಗಳೂ ಮುಂದಾಗುವುದಿಲ್ಲ. ಏನೋ ಹಿಂದಿನವರು ಹೇಳಿದ ಮಾತು ನೆನಪಾಗುವುದು. "ದೇವರ ಭಯವೇ ಜ್ಞಾನದ ಆರಂಭ." ಹಿಂದೆ ಶಾಲೆಗಳಲ್ಲಿಯೂ ಬಾಲ ಪಾಠಗಳನ್ನು ಕಲಿಸುತ್ತಿದ್ದರು. ಎಲ್ಲ ಆತನ ಸೃಷ್ಟಿ! ಅವನ ನಿಯಮದಂತೆ ಎಲ್ಲ ನಡೆಯಬೇಕು. ಗುರು ಹಿರಿಯರನ್ನು ಗೌರವಿಸಬೇಕು. ನಾವು ಕಲಿಯುವ ವಿದ್ಯೆಗೂ ಅಧಿದೇವತೆಯೊಬ್ಬಳಿದ್ದಾಳೆ. ಎಂಬೆಲ್ಲ ಕಲ್ಪನೆಗಳು ಅಂದಿನವರಾಗಿದ್ದುವು.
    ಅಂದಿನ ಜನ ಇಂದಿಲ್ಲ. ಕಾಲ ಬದಲಾಗಿದೆ. ಪ್ರಕೃತಿ ನಿಯಮಗಳೇ ಬದಲಾಗಿದೆಯಂತೆ! ಚಳಿ ಪ್ರದೇಶಗಳಲ್ಲಿ ಈ ವರ್ಷ ಕಡಿಮೆ ಹಿಮ ಬಿದ್ದಿತ್ತಂತೆ. ಈಗಾಗಲೇ ಸೆಕೆಗಾಲವು ಆರಂಭವಾಗಿದೆಯಂತೆ. ಎಲ್ಲ ನಾವೇ ಮಾಡಿಕೊಂಡದ್ದು. ಬಿಡುಗಡೆಯಾಗುವ ಉಷ್ಣ ವಾತಾವರಣವನ್ನೇ ಬದಲಾಯಿಸಿದೆ. ಹಿಂದಿನವರು ನಂಬುವ ಮಡೆಸ್ನಾನ  ಅಸಹ್ಯವಾಗಿದೆ. ಎಲ್ಲೆಲ್ಲೂ ಅಸಹ್ಯ ತುಂಬಿ ಪರಿಸರ ಮಲಿನವಾಗುವುದು, ಅದರಿಂದಾಗಿ ವಿವಿಧ ರೋಗ ರುಜೆಗಳು ಹೆಚ್ಚಾಗುವುದು ಅವರಿಗೆ ಕಾಣುವುದಿಲ್ಲ. ಸಾಮಾಜಿಕ ಶಿಸ್ತು ತಳಮಟ್ಟದಿಂದಲೇ ಕುಸಿಯುತ್ತಿರುವುದು ಯಾಕೆ? ಅದರ ನಿವಾರಣೆ ಹೇಗೆ? ಎಂಬುದರ ವಿಮರ್ಶೆಯೋ ಪರಿಹಾರೋಪಾಯದ ಬಗ್ಗೆ ಕಾಳಜಿಯೋ ಇದ್ದಂತೆ ಕಾಣುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ನಾವಿದ್ದ ವಠಾರ ಸ್ವಚ್ಛತೆಯ ಬಗ್ಗೆ, ಶುಚಿತ್ವದ ಬಗ್ಗೆ ಎಷ್ಟು ಮನಸ್ಸು ಮಾಡಿದ್ದರೆಂದು ತಿಳಿದೇ ಇದೆ. ಸ್ವತಃ ಅವರೇ  ಮುಂದಾಗಿ ಬೀದಿ ಗುಡಿಸುವುದಕ್ಕೂ ಹೋಗಿದ್ದರಂತೆ.  ಈಗ ಅವರ ಆದರ್ಶ ಬರೇ ಪಲಾಯನ ವಾದವಾಗಿದೆ. ಸ್ವಚ್ಛತೆಯ ಪಾಠ ಹೇಳುವವರು ಇದ್ದಾರೆ. ಒಮ್ಮೆ ತಾವೇ ಸ್ವತಃ ಬೀದಿಯ ಸ್ವಚ್ಛತೆಯನ್ನು ಮಾಡುವ ಮಂತ್ರಿಗಳೋ ರಾಜಕೀಯ ನಾಯಕರೋ ಇದ್ದಾರೇ? ಒಮ್ಮೆ ಹೊರ ದೇಶಗಳನ್ನು ಸುತ್ತಿ ಬಂದರೆ ಗೊತ್ತಾಗಬಹುದು. ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಕಡ್ಡಿಗಳನ್ನು ಬಿಸಾಡುವುದು ಸಾಮಾಜಿಕ ಅಪರಾಧವೆಂದು ಜನರೇ ತಿಳಿದುಕೊಂಡಿದ್ದಾರೆ.  ಸಣ್ಣ ಮಕ್ಕಳಿಗೆ ಮನೆಯ ಹಿರಿಯರು, ಶಾಲೆಗಳಲ್ಲಿ ಅಧ್ಯಾಪಕರು ಕಲಿಸುವ ಮೊದಲ ಪಾಠವೇ ಸ್ವಚ್ಛತೆ. ಹೊರಗೆ ಅಂಗಡಿಗಳಲ್ಲಿ, ಹೈವೇಗಳ  ಪಕ್ಕಗಳಲ್ಲಿ, ಪಾರ್ಕಗಳಲ್ಲಿ, ಸಾರ್ವಜನಿಕ ಶೌಚಾಲಯಗಳಿವೆ. ವಿಶಾಲವಾದ ಪಾರ್ಕ್ ಗಳಲ್ಲಿ, ದೂರ ಪ್ರಯಾಣಿಕರು ಕುಳಿತು ಕೊಂಡು ಊಟ ಮಾಡಲುತಂದ ಪಾತ್ರೆಗಳನ್ನು ತೊಳೆಯಲು ಬೇಕಷ್ಟು ನೀರಿನ ವ್ಯವಸ್ಥೆಯಿದೆ. ಹಣ ಕೊಡುವುದು ಬೇಡ. ಖರ್ಚಿಲ್ಲದೆ ಈ ವ್ಯವಸ್ಥೆಯಿರುವಾಗ ಅನುಸರಿಸದೆ ಇದ್ದರೆ ಸಮಾಜ ದ್ರೋಹವೆಂದು ಯೋಚಿಸಿ ತಿಳಿದು ಶಿಸ್ತನ್ನು ಪಾಲಿಸುತ್ತಾರೆ. ಅಂಗಡಿಗಳಲ್ಲಾದರೂ ಬಿಲ್ ಕೊಡುವಾಗ ಸಾಲಾಗಿ ನಿಂತು ತಾಳ್ಮೆಯಿಂದ ಸಹಕರಿಸುತ್ತಾರೆ. ನಮ್ಮಲ್ಲಿಯೋ ಶೌಚಾಲಯಗಳು ಹಾಗಿಲ್ಲ. ನಿರ್ವಹಣೆಯೂ ಸರಿಯಿಲ್ಲ. ಕೇಳುವ ಅಧಿಕಾರಿಗಳಾಗಲೀ ಸರಕಾರವಾಗಲೀ ಇಲ್ಲ. ಅಧಿಕಾರಿಯ ಭಾವನಂಟನೇ ಒಪ್ಪಿಕೊಂಡವನಿರಬಹುದು. ಯಾರು ಕೇಳುವವರು? ದೇಶದ ಹಿತ, ಸಮಾಜದ ಹಿತ ಯಾರಿಗೂ ಬೇಕಿಲ್ಲ.
    ಎಲ್ಲರೂ ಸಾರ್ವಜನಿಕ ಸ್ಥಳಲ್ಲಿಯೋ, ಸಭೆಗಳಲ್ಲಿಯೋ ಭಾಷಣ ಬಿಗಿಯುವುದು, ಉಪದೇಶ ಕೊಡುವುದು ಮಾತ್ರ. ಅವರಿಗೆ ಬೇಕಾದರೆ ಯಾರದೋ ಶಿಫಾರಸ್ಸಿನಿಂದ ಬೇಕಾದ ಕೆಲಸ ಕುಳಿತಲ್ಲಿಗೆ ಮಾಡಿಸಿಕೊಳ್ಳುತ್ತಾರೆ. ಅಧಿಕಾರಿಗಳೂ ತಮ್ಮಿಂದ ತಪ್ಪಾದರೆ ಕೆಳಮಟ್ಟದ ಅಧಿಕಾರಿಗಳ ಮೇಲೆ  ಜರಿದು ಬೀಳುತ್ತಾರೆ. ಮುಂದಾಳುಗಳ  ಶಿಫಾರಸ್ಸು ತಂದವರ ಕೆಲಸ ಬೇಗ ಮಾಡಿ ಕೊಡುತ್ತಾರೆ. ಬಡವನೋ, ಶಿಫಾರಸ್ಸು ಇಲ್ಲದವನೋ ದಿನಗಟ್ಟಲೆ ಕಾದು ಕುಳಿತರೂ ಕೆಲಸವಾಗುವುದಿಲ್ಲ. ತಳಮಟ್ಟದಿಂದಲೇ ಲಂಚಕ್ಕೆ ಕೈಯೊಡ್ಡಿ ಕೆಲಸ ಮಾಡಿಕೊಡುವವರೂ ಇದ್ದಾರೆ. ಮಾಡಿ ಕೊಡದಿದ್ದರೆ, ಮರುದಿನ ಅವನು ಸ್ಥಾನಾಂತರವೋ, ಅಥವಾ ಇನ್ನಾವುದೋ, ಶಿಕ್ಷೆ ಮೇಲಧಿಕಾರಿಗಳ ಶಿಕ್ಷೆಗೆ ಗುರಿಯಾಗಬೇಕು. ಇಲ್ಲವಾದರೆ ರಾಜಕೀಯ ನಾಯಕರಿಂದಲಂತೂ   ವಿರೋಧ ಖಂಡಿತ. ಆಗ ನ್ಯಾಯಕ್ಕೆ ಜಾಗವಿಲ್ಲ. ಕಾನೂನನ್ನು ಹೇಳಿ ಸಾಮಾಜಿಕ ನ್ಯಾಯ ಒದಗಿಸಬೇಕಾದ ವಕೀಲರುಗಳೇ ಗಲಾಟೆ ಮಾಡುವುದು, ತಮ್ಮ ಬೇಳೆ ಬೇಯಿಸಿಕೊಳ್ಳಲು ತಪ್ಪು ದಾರಿ ಹಿಡಿದರೆ, ನ್ಯಾಯಕ್ಕೆ ಬೆಲೆ ಹೇಗೆ ಬರಬೇಕು? ಸರಕಾರಿ ಕಚೇರಿಗಳಿದ್ದಲ್ಲಿ, ಸಾರ್ವಜನಿಕ ಸ್ಥಳಗಳಗಳಲ್ಲಿ  ಶೌಚಾಲಯವಿದ್ದರೂ ಸ್ವಚ್ಛತೆಯಿಲ್ಲ. ಹಣ ವಸೂಲಿ ಮಾಡಿ ಶುಚಿಗೊಳಿಸುವ ವ್ಯವಸ್ಥೆಯಾದರೂ ಸರಿಯಿಲ್ಲ. ಪರಿಸರ ಮಾಲಿನ್ಯ ನಿವಾರಣೋಪಾಯಗಳನ್ನು  ಕುರಿತು ಸಾರ್ವಜನಿಕರಿಗೆ ಉಪದೇಶಿಸುವ ಸರಕಾರ ಪತ್ರಿಕೆಗಳಲ್ಲಿ ಟಿ.ವೀ ಗಳಲ್ಲಿ ಜಾಹೀರಾತು ಕೊಟ್ಟರೆ ತಮ್ಮ ಕೆಲಸವಾಯಿತು ಎಂದು ಸುಮ್ಮಗಾಗುವುದು. ಅಭಿವೃದ್ಧಿ ಮಾಡಿದ್ದೇವೆಂದು ಹೇಳುವವರೂ, ಶುಚಿತ್ವ ಎಷ್ಟರ ಮಟ್ಟಿಗೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲ ಪರೋಪದೇಶ ಪಾಂಡಿತ್ಯ. ಬೇರೆಯವರಿಗೆ ಉಪದೇಶ ಕೊಡುವುದು ಮಾತ್ರ!
    ಶಿಸ್ತು ಎಂಬುದು ಮನೆಯಿಂದಲೇ ಆರಂಭವಾಗಬೇಕು. "ತಾಯ ತೊಡೆಯೆ ಮೊದಲ ಸಾಲೆ, ತಾಯಿ ತಾನೆ ಮೊದಲ ಗುರುವು"  ಎಂಬ ಮಾತೋಂದಿತ್ತು. ಈಗಲೋ  ಅಬಲೆಯರನ್ನೂ ಸಬಲೆಯರನ್ನಾಗಿ ಮಾಡುವುದೆಂದು ಹೇಳಹೊರಟಿದ್ದಾರೆ. ಭಾಷಣಗಳಲ್ಲಿ ಮಾತ್ರ ಈ ಮಾತು ಕೇಳಿ ಬರುವುದು ಹೊರತು ರಾಜಕೀಯವಾಗಿ ನೋಡಿದರೆ ಚುನಾವಣೆಗೆ ಮಹಿಳೆಯರು ಬೇಡ. ಇಲ್ಲಿ ಮಹಿಳಾ ವಿರೋಧವಲ್ಲ. ಮನೆಯಲ್ಲಿ ಮಕ್ಕಳ ಲಾಲನೆ ಪಾಲನೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ದೊಡ್ಡ ಜವಾಬ್ದಾರಿ ಇಬ್ಬರದೂ ಅಲ್ಲವೇ? ಮಹಿಳೆಯರು ಉದ್ಯೋಗಸ್ಥೆಯರಾದರೂ, ತಮ್ಮೆಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಡುವ ಪರಿಪಾಟವಿದ್ದವರಾಗಬೇಕು. ಉನ್ನತ ಉದ್ಯೋಗ ಸಿಕ್ಕಿದ ಮೇಲೆ ನಾವಿನ್ನು ಸ್ವತಂತ್ರರು, ದುಡಿಸಿಕೊಳ್ಳುವುದೇ ನಮ್ಮ ಕರ್ತವ್ಯವೆಂದು ಆರಾಮವಾಗಿರುವುದುಸರಿಯಲ್ಲ. ತಾವೂ ದುಡಿಯುತ್ತಾ ಇತರರನ್ನೂ ಕರ್ತವ್ಯ ಪರಾಯಣರಾಗುವಂತೆ ನೋಡಿಕೊಳ್ಳಬೇಕು. ಜೊತೆಗೆ ತಮ್ಮ ಮಕ್ಕಳಿಗೂ ಶಿಸ್ತಿನ ಪಾಠ ಕಲಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಯಶಸ್ವಿಯಾಗಬೇಕು. ಅವರ ಶಿಸ್ತು ಸಮಯ ಪ್ರಜ್ಞೆ ಮಕ್ಕಳಿಗೆ ಆದರ್ಶವಾಗಿರಬೇಕು.  ಶಿಸ್ತು,  ಶುಚಿತ್ವ, ನಿಯಮ ಪರಿಪಾಲನೆಗಳೆಲ್ಲ ಮಕ್ಕಳ  ಭವಿಷ್ಯಕ್ಕೆ ಮಾದರಿಯಾಗಿರಬೇಕು. ಹೆಣ್ಣು ಮಕ್ಕಳಂತೂ ತಾಯಿಯ ಪ್ರತಿಯೊಂದು ನಡತೆಗಳನ್ನು ಅನುಸರಿಸುತ್ತಾರೆ. ತಂದೆಯಾದರೂ  ಈ ಸದ್ಗುಣಗಳಿಗೆ ಪೂರಕವಾಗಿ ಆಕೆಗೆ ಸಹಕರಿಸಿದರೆ ಇಬ್ಬರ ಉತ್ತಮ ದಾರಿಯಲ್ಲೇ ಮಕ್ಕಳು ಹೆಜ್ಜೆಯಿಡುತ್ತಾರೆ. ಅವರೇ ಬೇಕಾಬಿಟ್ಟಿಯಾಗಿ ಸೋಮಾರಿಗಳಾಗಿದ್ದರೆ, ಆ ಚಾಳಿ ಮನೆಮಂದಿಗೆಲ್ಲ ಎಂದರೆ ಮಕ್ಕಳಿಗೂ ಬರಲೇಬೇಕು. ಹೊರಗಿನ ಸಾಮಾಜಿಕ ಸಂಪರ್ಕಗಳೂ  ಮಕ್ಕಳಿಗೆ ಮಾದರಿಯಾಗಿದ್ದರೆ ಉತ್ತಮ ಪ್ರಜೆಗಳನ್ನು ಸಮಾಜಕ್ಕೆ ಆ ಮೂಲಕ ದೇಶಕ್ಕೆ ಒದಗಿಸಿದಂತಾಗುವುದು. ಅಪ್ಪನೇ ದುಶ್ಚಟಗಳ ದಾಸನಾಗಿದ್ದರೆ ಮಕ್ಕಳು ಕೆಟ್ಟ ದಾರಿ ತುಳಿಯಲು ಅನುಕೂಲವಾಗುತ್ತದೆ. ಹೊರಗೆ ಸಮಾಜದಲ್ಲಿಯೂ "ಉತ್ತಮರ ಸಂಗವದು ಹೆಜ್ಜೇನು ಮೆದ್ದಂತೆ, ದುರ್ಜನರ ಸಹವಾಸ ಕಿಬ್ಬದಿಯ ಕೀಲು ಮುರಿದಂತೆ" ಎಂದು ಸರ್ವಜ್ಞ ಹೇಳಿರುವನಲ್ಲವೇ? ಹೀಗೆ ದುರ್ಜನರಾಗುವುದು ಸಹವಾಸದಿಂದಲೇ ಅಲ್ಲವೇ? ಶಾಲೆಗೆ ಸೇರಿಸಿದರೆ ಮಾತ್ರ ಸಾಲದು, ಅಲ್ಲಿ ಹೇಗೆ ನಡೆದುಕೊಳ್ಳುತ್ತಾನೆ(ಳೆ) ಎಂಬುದನ್ನು ತಿಳಿದುಕೊಂಡು ಸರಿದಾರಿಗೆ ತರುವ ಹೊಣೆಗಾರಿಕೆ ಹೆತ್ತವರದ್ದು.
    ಶಾಲೆಗಳಲ್ಲಿಯೂ, ಮಕ್ಕಳು ಕಲಿತುಕೊಳ್ಳುವುದು ಹೇಗೆ? "ಮಾಡಿ ಕಲಿ, ನೋಡಿ ಕಲಿ" ಎಂದಿದೆ. ಅನುಕರಣೆಯೇ ಮನುಷ್ಯನ ಪ್ರವೃತ್ತಿ. ಇನ್ನಿತರರು ಹೇಗೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸುತ್ತಾರೆ. ತಪ್ಪನ್ನು ಅಧ್ಯಾಪಕರು ಗಮನಿಸುತ್ತಾರೋ ಇಲ್ಲವೋ ಎಂಬುದನ್ನು ನೋಡಿಕೊಳ್ಳುತ್ತಾರೆ.  ಕೆಟ್ಟ ದಾರಿ ಹಿಡಿದರೂ ನಡೆಯುತ್ತದೆಯೆಂದಾದರೆ ತಪ್ಪು ದಾರಿಯಿಂದಲೇ  ಮಕ್ಕಳು ನಡೆದುಕೊಳ್ಳುತ್ತಾರೆ. ತೊಟದ ಮಾಲಿ, ಗಿಡಗಳಿಗೆ  ಗೊಬ್ಬರ ಹಾಕಿ ನೀರೆರೆದು ಸಾಕಿ ಸಲಹುವಂತೆ, ಬಂದ ಕಳೆಗಳನ್ನು ಕಿತ್ತು ತೆಗೆಯುವಂತೆ ಮಕ್ಕಳು ದೇವರ ಸಮಾನರೆಂದು ತಿಳಿದು ತಾನು ಮಾಡುವುದು ದೇವರ ಪೂಜೆಯೆಂದು ತಿಳಿಯಬೇಕು. ಮುಂದಿನ ಪೀಳಿಗೆಯನ್ನು ಸೃಷ್ಟಿಸುವ ಮಹತ್ಕಾರ್ಯ ಅಧ್ಯಾಪಕರಿಂದಾಗಬೇಕು. ಶಿಕ್ಷಣ ರೀತಿ ಬದಲಾಗಬೇಕು. ತನ್ನ ವಿದ್ಯಾರ್ಥಿಗೆ ಅಧ್ಯಾಪಕರು ಹೊಡೆದರು, ಅವರನ್ನು ಸುಮ್ಮಗೆ ಬಿಡಬಾರದು ಎ೦ದು ಕಲಿಸುವವರನ್ನೇ ದೂರುವುದು, ಅವರ ವಿರುದ್ಧ ಕೇಸ್ ಹಾಕುವುದು ಅಥವಾ ಉಳಿದ ಮಕ್ಕಳಿಂದ ಚಳುವಳಿ ಮಾಡಿಸುವುದು ಕಾಣುತ್ತದೆ. ಇದರಿಂದ ಸಮಾಜದ ಶಿಸ್ತನ್ನು ಹಾಳುಮಾಡಿದಂತೆ ಎಂದು ಯೋಚಿಸಬೇಕು. ಇದೇ ನಾವು ಮಾಡುವ ದೇಶ ಸೇವೆಯೆಂದು ತಮ್ಮ ಹೊಣೆಗಾರಿಕೆ ತಿಳಿದು  ಜವಾಬ್ದಾರಿಯಿಂದ ದುಡಿಯಬೇಕು. ಮಕ್ಕಳಿಗೆ ಇಂತಹ ಧ್ಯೇಯವಾಕ್ಯಗಳನ್ನು ತಿಳಿಸಿಹೇಳಬೇಕು. "ದೇಶಸೇವೆಯೇ ಈಶ ಸೇವೆ" ಮುಂದಿನ ಭವ್ಯ ಸಮಾಜವೆಂಬ ಕಟ್ಟಡದ ಒಂದೊಂದು ಇಟ್ಟಿಗೆಗಳ ನಿರ್ಮಾಣ ಸರಿಯಿದ್ದರೆ ಕಟ್ಟಡ ಕುಸಿದು ಹೋದೀತೆಂಬ ಭಯವಿಲ್ಲ. ಈಗಿನಂತೆ ಕೆಲವು ರಾಜ್ಯಗಳಲ್ಲಿ ಒಮ್ಮೆ ಒಂದು ಪಕ್ಷ ಆಳಿದರೆ ಅಧ್ಯಾಪಕರ ಒಂದು ಪಂಗಡ ಆಳುವ ಸರಕಾರದೊಂದಿಗೆ ರಾಜಕೀಯದ ರಾಜಕಾರಣದೊಂದಿಗೆ ಶಾಲೆಗೆ ಬರುವುದನ್ನೇ ಮರೆತುಬಿಡುತ್ತಾರೆ. ಮಕ್ಕಳು ಟ್ಯುಟೋರಿಯಲ್ ಕಾಲೇಜಿಗೋ ಹೋಗಿ ಕಲಿಯುತ್ತಾರೆ. ಪರೀಕ್ಷೆಗಳಲ್ಲಿ ಉತ್ತಮ ಅಂಕೆ ಗಳಿಸಿ ಪಾಸ್ ಆಗುತ್ತಾರೆ. ಇಲ್ಲಿಯೂ ಲಂಚ ಕೆಲಸ ಮಾಡುತ್ತದೆ. ಹಣ ಕೊಟ್ಟವರು ಕಲಿಯದೆಯೂ ಸರ್ಟಿಫಿಕೇಟ್ ಪಡೆಯುತ್ತಾರೆ. ಉಳಿದ ಸಮಯದಲ್ಲಿ ರಾಜಕೀಯದಲ್ಲಿ ಭಾಗವಹಿಸಲು  ಒಂದು ವಿಭಾಗದ ಅಧ್ಯಾಪಕರು ಪ್ರೋತ್ಸಾಹಿಸುತ್ತಾರೆ. ಎಷ್ಟಾದರೂ ಈಗಿನ ವಿದ್ಯಾಭ್ಯಾಸ ಉದ್ಯೋಗದ ಗುರಿಹೊಂದಿದ್ದು ಪಾಸ್ ಆದರೆ ಮುಗಿಯಿತು. ಮತ್ತೆ ಒಂದು ಉದ್ಯೋಗ.  ಹಣ ಮಾಡಲು ವಿವಿಧ ಯೋಚನೆಗಳು. ಅವರವರ ಸ್ವಾರ್ಥದ ಕುರಿತು ಚಿಂತನೆ ಮಾತ್ರ. ಸಮಾಜ ಹಿತವೋ, ದೇಶದ ಹಿತವೋ ಬೇಡ. ಇದಕ್ಕೆಲ್ಲ ಕಾರಣ ನೇತಾರರು. ಅವರೇ ಇತರರನ್ನೂ ಕರೆದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಚುನಾವಣೆ ಬಂತೆಂದರೆ ಚಿಕ್ಕ ಮಕ್ಕಳನ್ನೂ ಕರೆಯುತ್ತಾರೆ. ನಾಳೆ ಅವರಿಗೂ ಅಭ್ಯಾಸವಾಗಬೇಡವೆ? ಜನರಿಗೆ ನಾಳೆಯ ಚಿಂತೆಯಿಲ್ಲ. ಒಮ್ಮೆ ಅಧಿಕಾರದ ರುಚಿ ಸಿಕ್ಕಿದರೆ ಸಾಕಷ್ಟು, ಜನರ ಹಣ ಎಂದರೆ ಸರಕಾರದ ಹಣವನ್ನು ಪಾರ್ಟಿ ಫಂಡಿಗೆ ಸಂಗ್ರಹಿಸಿ ಉಳಿದುದನ್ನು ಅಭಿವಿದ್ಧಿಯಾಗಿದೆಯೆಂದು ಹೇಳಲು ಕೆಲವು ತೇಪೆ ಕೆಲಸಗಳನ್ನು ಮಾಡಿಸುತ್ತಾರೆ. ಅದಕ್ಕೇ ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ದೇಶ ಪ್ರಗತಿ ಸಾಧಿಸದೆ ನಿಂತ ನೀರಾಗಿದೆ. ಸಮಾಜದಲ್ಲಿ ತಮ್ಮ ಹೆಸರು ಮೇಲೆ ಬರಬೇಕೆಂಬ ಮೇಲಾಟದಿಂದ ದೇಶದ ಹಿತ, ಅಭಿವೃದ್ಧಿಯೆಲ್ಲ ಬರಿಯ ಬೂಟಾಟಿಕೆಯಾಗಿ ಬಿಟ್ಟಿದೆ. ಇಸ್ರೇಲಿನಂತಹ ಚಿಕ್ಕ ದೇಶವು ಅಮೇರಿಕದಂತಹ ದೇಶಗಳಿಗೆ ಸಡ್ಡು ಹೊಡೆದು ನಿಲ್ಲಲು ಸಾಧ್ಯವಾದದ್ದು ಹೇಗೆ ಎಂಬುದನ್ನು ಗಮನಿಸಬೇಕು.
    ಭ್ರಷ್ಟಾಚಾರ ಸ್ವಾತಂತ್ರ್ಯ ಪೂರ್ವದಲ್ಲೇ ಇತ್ತೆಂದು ಚರಿತ್ರೆಯಿಂದ ಗೊತ್ತಾಗುವುದು. ರಾಜ್ಯಗಳಲ್ಲಿ ಅಧಿಕಾರದ ಆಸೆಯಿಂದ ಬ್ರಿಟಿಷರೊಡನೆ ಸೇರಿಕೊಂಡದ್ದರಿಂದಲೇ ದೇಶ ಸ್ವಾತಂತ್ರ್ಯ ಒಮ್ಮೆಗೆ ಕಳೆದುಕೊಂಡಿತು. ಪ್ರಜಾ ಪ್ರಭುತ್ವವಾದರೂ ಅಧಿಕಾರದ ವ್ಯಾಮೋಹ ಸಂಪದಭಿವೃದ್ಧಿಯ ದುರಾಸೆಗಳೆಲ್ಲ ಸಂಗ್ರಹಿಸಿದ ಹಣವನ್ನು ಕದ್ದು ಮುಚ್ಚಿ ವಿದೇಶಿ ಬೇಂಕುಗಳಲ್ಲಿ ಭದ್ರವಾಗಿಟ್ಟಿತು. ಈಗ ಅದನ್ನು ಮತ್ತೆ ತರಲು ಅಣ್ಣಾ ಹಜಾರೆಯಂಥವರು ಕೇಳಿಕೊಂಡಾಗ ಈಗ ಅಧಿಕಾರದಲ್ಲಿರುವವರೇ ಅದಕ್ಕೆ ವಿರೋಧ ಹೇಳಲಲು ಕಾರಣವೇನು ಎಂಬುದನ್ನು ಚಿಂತಿಸಬೇಕು. ಸಮಾಜ ವಂಚನೆಯ ಹಣವನ್ನು ಕೂಡಿಟ್ಟವರೂ ಅವರೇ. ಈಗ ಭ್ರಷ್ಟಾಚಾರ ನಿರೋಧ ಕಾಯಿದೆಗೆ ವಿರೋಧ ಹೇಳುವವರೂ ಅವರೇ ಇರುವಾಗ ಅಧಿಕಾರ ಲಾಲಸೆಯೇ ದೇಶಕ್ಕೆ ಮಾರಕವಾಗಿದೆಯೆಂಬುದು ಖಂಡಿತ. ತಪ್ಪು ಒಬ್ಬರಿಂದಲೋ ಇಬ್ಬರಿಂದಲೋ ಆದುದಲ್ಲ. ಎಲ್ಲರಿಂದಳೂ ಆಗಿದೆ. ಆದರೆ ಆ ತಪ್ಪುಗಳನ್ನು ಇನ್ನು ತಿದ್ದಿಕೊಳ್ಳುವಾ. ಹಳಿತಪ್ಪಿದ  ಗಾಡಿಯನ್ನು ಮೊದಲು ಹಳಿಯನ್ನು ಸರಿಗೊಳಿಸಿ ಮತ್ತೆ ಸರಿಯಾದ ಹಳಿಯಲ್ಲಿ ಮುಂದೆ ನಡೆಸುವ ಎಂಬ ಮನಸ್ಸು ಎಲ್ಲರದಾದರೆ ಅಸಾಧ್ಯವಾದು ಯಾವುದೂ ಇಲ್ಲ. ಒಂದಾಗಿ ಶ್ರಮಿಸಿದರೆ ಸಫಲ ನುಂಗಬಹುದು. ಎಲ್ಲಕ್ಕೂ ಮುಖ್ಯವಾಗಿ  ಎಲ್ಲರ ಮನಸ್ಸು ಒಂದಾಗಬೇಕು.
ಅಂದು ಸ್ವಾತಂತ್ರ್ಯಕ್ಕಾಗಿ ಹೋರಡಲು ಹಿಂದಿನವರು ಹೇಗೆ ಶ್ರಮಿಸಿದರೋ ಹಾಗೆ ನಿಸ್ವಾರ್ಥ ಬುದ್ಧಿಯಿಂದ ಹೋರಾಡಿದರೆ ಜಯ ಸಿಗಬಹುದು. ಆ ದೇವರ ದಯೆಯೊಂದಿದ್ದರೆ ಈಗ ಹೆಳವರಂತಿರುವ ನಾವುಗಳೆಲ್ಲ ಒಗ್ಗಟ್ಟಾಗಿ ದುಡಿದು ಪರ್ವತವನ್ನು ಹಾರಬೇಕಿಲ್ಲ ನಮಗೆ. ನಮ್ಮ ದೇಶ ಪ್ರಪಂಚದಲ್ಲಿ ಚೀನಾಕ್ಕೋ ಅಮೇರಿಕಾಕ್ಕೋ ಸಡ್ಡು ಹೊಡೆದು ತಲೆಯೆತ್ತಿ ನಿಲ್ಲುವಂತಾದರೆ ಮುಂದಿನ ಜನಾಂಗ ನಮ್ಮನ್ನು ಸ್ಮರಿಸಬಲ್ಲುದಲ್ಲವೇ?
   

No comments:

Post a Comment