Monday, April 16, 2012

ಚಿಗುರೊಡೆದ ಕನಸು

ಚಿಗುರೊಡೆದ ಕನಸು
 ಬಾಳಿಕೆ  ಸುಬ್ಬಣ್ಣ ಭಟ್, ನಿವೃತ್ತ  ಪ್ರಾಧ್ಯಾಪಕ, ಮ೦ಗಳೂರು.
 
                                                     ಸುಗ್ಗಿ ಬಂದರೆ ಹಿಗ್ಗದವರಾರು! ಜನ ಹಿಗ್ಗುವ ಕಾಲವನ್ನೇ ಸುಗ್ಗಿಯ ಕಾಲವೆಂದರೆ ತಪ್ಪೇ? ಪಶ್ಚಿಮದೇಶಗಳಲ್ಲಿ, ಮುಖ್ಯವಾಗಿ ಅಮೇರಿಕ ಕೆನಡಾ ಭೂಭಾಗಗಳಲ್ಲಿ ಮರಗಳು ಚಳಿಗಾಲಕ್ಕೆ ಎಲೆಗಳೆಲ್ಲ ಉದುರಿ  ಬತ್ತಲೆಯಾಗುತ್ತಿವೆ. ನಳನಳಿಸಿ ಲವಲವಿಕೆಯಿಂದ ಶೋಭಿಸುತ್ತಿದ್ದ ಮರಗಳು ಒಣಗಿದ ಕಟ್ಟಿಗೆಯಂತಾದುದನ್ನು ನೋಡುವಾಗ ಕರುಳು ಕಿವುಚಿದಂತಾಗುತ್ತದೆ. ಕಾಡಿನಿಂದ ತುಂಬಿದ ಪ್ರದೇಶಗಳಲ್ಲಿ ಸಂಚರಿಸುವ ಮೃಗ ಪಕ್ಷಿಗಳೂ ಈ ಚಳಿಗಾಲದ ದಿನಗಳಲ್ಲಿ ಕಾಣಸಿಗುವುದಿಲ್ಲ. ಸ್ವಲ್ಪ ಚಳಿ ಕಡಿಮೆಯಾಗಿ ಬಿಸಿಲು ಕಾಣಿಸಿಕೊಂಡರೆ ಕೆಲವು ಪ್ರಾಣಿಗಳು ಅಡ್ಡಾಡಿಕೊಂಡು ಬರುವುದುಂಟು. ಹಾಗೆ ಬಂದರೂ ಅವಕ್ಕೆ ತಿನ್ನಲು ಏನೂ ಸಿಗುವುದಿಲ್ಲ.ಆದರೂ ಹಸುರು ಮೇಯಲು ಬರುವ ಜಿಂಕೆಗಳು,ಮತ್ತೆ ತರಕಾರಿ ವಗೈರೆ ಇದ್ದರೆ ತಿನ್ನಲು ಬರುವ ನರಿ ಹಾಗೂ ಮೊಲ ಮೊದಲಾದ ಪ್ರಾಣಿಗಳು ಅಪರೂಪಕ್ಕೆ ಬಂದೇ ಬರುತ್ತವೆ.ತಿನ್ನಲು  ಚಳಿಗಾಲದಲ್ಲಿ ಏನೂ ಸಿಗದಿದ್ದರೂ, ಬಂದು ಆಚೀಚೆ ಓಡಾಡುವುದು ಸಾಮಾನ್ಯ.ಅಂತೂ ಹಚ್ಚ ಹಸುರಾಗಿ ಕಂಗೊಳಿಸುತ್ತಿರುವ ಕಾಡಿನ ಪ್ರಕೃತಿ ಸೌಂದರ್ಯ ಚಳಿಗಾಲದಲ್ಲಿ ಮರೆಯಾಗುತ್ತದೆ. ಈ ಚಳಿಗಾಲದಲ್ಲಿ, ಸಹಜ ಸೌಂದರ್ಯವನ್ನು ಕಳೆದುಕೊಂಡಿರುವ ನಿಬಿಡ ಅರಣ್ಯಗಳ ಶೋಚನೀಯಾವಸ್ಥೆ ನೋಡುವವರಿಗೂ ಬೇಸರ ತರುತ್ತದೆ. ಪ್ರಾಪಂಚಿಕ ಸುಖವು ಇಷ್ಟೇ ಇರುವುದು. ಎಲ್ಲವೂ ನಶ್ವರ! ಕಾಡಿನ ಸೌಂದರ್ಯವಿರುವುದೇ ಹಸುರಿನಲ್ಲಿ ಅಲ್ಲವೇ? ಹಸುರು ಕಳೆದುಕೊಂಡರೆ ಇನ್ನೇನಿದೆ? ಎಂದು ಬೇಸರದಿಂದಿರುವ ಕಾಡಿನ ವನ್ಯ ಸೌಂದರ್ಯ ಮತ್ತೆ ಮರುಕಳಿಸುವುದು ವಸಂತಕಾಲ ಬಂದಾಗ ಮಾತ್ರ! ದೇಶ ಬಿಟ್ಟು ಹೋದ ಪಕ್ಷಿಸಂಕುಲವೂ ಚಿಗುರೊಡೆದು ನಳನಳಿಸುವ ಕಾಡಿನ ಹಸುರು ಕಂಡೊಡನೆ ಮತ್ತೆ ಹಿಂದೆ ಬರುತ್ತವೆ.
    ಈ ವರ್ಷ ಇಲ್ಲಿ ಮರಗಳು ಚಿಗುರೊಡೆದು ವಸಂತ ಕಾಲಿರಿಸುವುದು ಮಾರ್ಚ್ ಹನ್ನೊಂದಕ್ಕೆಂದು ಈ ವಾರವಿಡೀ ಶಾಲೆಗಳಿಗೆ ರಜೆ. ಒಂದು ವಾರ ಕಾಲ "ಸ್ಪ್ರಿಂಗ್ ಬ್ರೇಕ್" ಎಂದು  ರಜೆ  ಕೊಟ್ಟಿದ್ದರು. ಇಂದಿನಿಂದ ಅಮೇರಿಕ ಕೆನಡಾಗಳಲ್ಲಿ ಗಡಿಯಾರದ ಮುಳ್ಳುಗಳನ್ನು ತಿರುಗಿಸಿ  ಒಂದು ಗಂಟೆ  ಮುಂದಕ್ಕೆ ಹಾಕುತ್ತಾರೆ. ಅದಕ್ಕೆ ಸರಿಯಾಗಿ ಈ ಭಾನುವಾರ  ಹವೆ ಚೆನ್ನಾಗಿತ್ತು. ಸೋಮವಾರವಂತೂ ೧೫ ಡಿಗ್ರಿ ಉಷ್ಣಾಂಶವಿತ್ತು.  ಹೊರಗೆ ಬಿಸಿಲೂ ಇತ್ತು. ಗಾಳಿಯೂ ಇರಲಿಲ್ಲ. ಮೋಡವೂ ಇರದ ಕಾರಣ ವಾತಾವರಣ ಪ್ರಶಾಂತವಾಗಿತ್ತು. ಜನರಿಗೆ ಮೋದ ತರುವಂತಹುದಾಗಿತ್ತು. ಈ ವರೆಗೆ  ಚಳಿಗಾಲವಾಗಿದ್ದುದರಿಂದ ಜನಕ್ಕೆ ಹೊರಗೆ ಸುತ್ತಾಡುವುದು  ಸಾಧ್ಯವಿರಲಿಲ್ಲ. ಹೀಟರ್ ಹಾಕಿದ ಕಾರಿನೊಳಗೇ  ಕುಳಿತು  ಸಂಚರಿಸಬೇಕಾಗಿತ್ತಲ್ಲವೇ!  ಈ ದಿನದ ವಾತಾವರಣ ಜನರಿಗೆ ಮುದ ತಂದಿತ್ತು. ಹೊರಗೆ ಅಡ್ಡಾಡಿ ಬರಬೇಕೆಂದಿದ್ದವರು ಮಧ್ಯಾಹ್ನವಾಗುವುದನ್ನೇ ಕಾಯುತ್ತಿದ್ದರು.  ಹೊರಗೆ ತಿರುಗಾಡತೊಡಗಿದ್ದು ಸೆರೆಮನೆಯಿಂದ ಹೊರಗೆ ಬಂದಂತಾಗಿರಬೇಕು ಅವರಿಗೆ. ಆ ವರೆಗೆ ಒಳಗೆ ಕುಳಿತು ಆಯಾಸವಾಗಿ, ಶಾಲೆ ಬಿಟ್ಟೊಡನೆ  ವಿದ್ಯಾರ್ಥಿಗಳು ಹೊರಗೆ ಓಡಿ  ಬರುವಂತಹ  ಸ್ಥಿತಿಯಿತ್ತು. ಇಂದು ಜನ ಹುಚ್ಚೆದ್ದು ಕುಣಿಯಲಿಲ್ಲ ಮಾತ್ರ! ಮಕ್ಕಳೆಲ್ಲ ಮೂಲೆಯಲ್ಲಿದ್ದ ಸೈಕಲ್ ಗಳನ್ನು ಶುಚಿಗೊಳಿಸಿ ಮಾರ್ಗಕ್ಕಿಳಿಸಿದ್ದರು. ಬರೇ ಸ್ವೆಟ್ಟರ್ ಹಾಕಿಕೊಂಡಿದ್ದವರಿಗೂ ಸೆಕೆ ತಡೆಯಲಾರದೆ,  ಅದನ್ನು ಕಳಚಿ ಸೊಂಟಕ್ಕೆ ಸುತ್ತಿದರು. ಜನ ಕಾಲು ಹಾದಿಗಳಲ್ಲಿ ಓಡಾಡಿಕೊಂಡಿದ್ದರು. ಓಡಾಡುವ ಜನರ ಮುಖದಲ್ಲಿ ನವ ಜೀವನದ ಹೊಸ ಕಳೆ ಎದ್ದು ಕಾಣುತ್ತಿತ್ತು. ಈ ವರ್ಷ ಹಿಮಪಾತ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹಳ ಕಡಿಮೆಯಂತೆ!  ಸಾಮಾನ್ಯವಾಗಿ ೮ರಿಂದ ೧೦ ಇಂಚಿನ ವರೆಗೆ ಹಿಮ ಬೀಳುತ್ತಿದ್ದುದು ಈ ವರ್ಷ ಬರೇ ಒಂದೆರಡು ಇಂಚಿನಷ್ಟು ಮಾತ್ರ!  ಅಂದರೆ ಜನರಿಗೆ ಉಸಿರುಕಟ್ಟಿಸುವ ವಾತಾವರಣ ಒದಗಲಿಲ್ಲ!
    ಜನ ಓಡಾಡುವ ಪ್ರದೇಶಗಳೆಲ್ಲ  ಪ್ರಶಾಂತವಾಗಿತ್ತು. ಹೊರಗೆ ಬಂದ ಜನ, ಜೊತೆಗೆ ಸಾಕು ನಾಯಿಗಳನ್ನೂ ತರುವುದು ವಾಡಿಕೆ.  ಕೆಲವರು ಒಂದು ನಾಯಿಯನ್ನು ಜೊತೆಗೆ ತಂದರೆ ಕೆಲವರೂ ಎರಡು ನಾಯಿಗಳನ್ನು ತಂದಿದ್ದರು. ಆದರೆ ನಾಯಿಗಳನ್ನು ತರುವವರು ಜೊತೆಗೆ  ಪೇಪರ್ ಕೂಡಾ ತರಬೇಕು.  ದಾರಿಯಲ್ಲಿ ಎಲ್ಲಿಯೂ ಹೇಸಿಕೆ  ಮಾಡುವಂತಿಲ್ಲ. ಒಂದೊಮ್ಮೆ ಮಾಡಿದರೂ  ಸ್ವಚ್ಛಗೊಳಿಸುವ ಕೆಲಸ  ಅವುಗಳ ಒಡೆಯರದ್ದು. ನಾನು ನೋಡುತ್ತಿದ್ದಂತೆ ಒಂದು ನಾಯಿ ಹಾಗೆ ಮಾಡಿದ್ದನ್ನು ಕಂಡು ಅಲ್ಲಿದ್ದವರು, ಅದರ ಒಡೆಯರನ್ನು ಕೂಗಿ ಕರೆದು ತೋರಿಸಿದ್ದರಿಂದ ಅವರಿಗೆ ಅನಿವಾರ್ಯವಾಯಿತು. ಸ್ವಚ್ಛತೆಯ ಬಗ್ಗೆ ತುಂಬಾ ಕಾಳಜಿ ಜನರಿಗೆ. ಓರ್ವ ಹೆಂಗಸು ತನ್ನ ನಾಯಿಗೆಂದು ತಂದ ತಿಂಡಿಯನ್ನು ಕೊಡುತ್ತಿದ್ದಳು.ಬೇರೆ ತಂದಿದ್ದ ನೆಲಗಡಲೆಯನ್ನು ಮರದ ಬುಡದಲ್ಲಿದ್ದ ಅಳಿಲಿನ ಕಡೆಗೆ ಬಿಸಾಕಿದಳು. ವಾತಾವರಣ ಚೆನ್ನಾಗಿದ್ದುದಕ್ಕೆ ಅಳಿಲುಗಳಿಗೂ ಅತ್ತಿತ್ತ ಓಡಾಡುವ ಸಂಭ್ರಮ! ಏನೋ ತಿನ್ನುವ ವಸ್ತುವೆಂಬ ಆಸೆಯಿಂದ ಮರದಲ್ಲಿದ್ದ ಬೇರೆ ಅಳಿಲುಗಳೂ ಬಂದುವು ಆದರೆ ಅವಳ ನಾಯಿ ಅಲ್ಲೆ ಹತ್ತಿರ ಇದ್ದುದರಿಂದ ಅಳಿಲುಗಳ ಆಸೆ ಈಡೇರಲಿಲ್ಲ. ಚಳಿಗಾಲದಲ್ಲಿ ಹಿಮ ಬಿದ್ದಾಗ ಮುಚ್ಚಿ ಹೋಗುವ ಲಾನ್ ಹುಲ್ಲು ಕೂಡಾ ಈಗ ಮತ್ತೆ ಚಿಗುರತೊಡಗಿತ್ತು. ಭೂಮಾತೆಗೆ ಹಸುರು ಹೊದೆಸುವ ಈ ಹುಲ್ಲು ಮನೆಗಳ ಮುಂದೆ, ಪಾರ್ಕ್ ಗಳಲ್ಲಿ ಮತ್ತೆ ತಮ್ಮ ಕನಸು ಚಿಗುರೊಡೆದುದನ್ನು ಕೂಗಿ ಹೇಳುತ್ತಿದ್ದವು. ಚಳಿಗಾಲದಲ್ಲಿಯೂ ಹಸುರು ಕಳಕೊಳ್ಳದ ಸೂಜಿ ಮೊನೆಯ  ಕೆಲವು ಗಿಡ ಮರಗಳು  ಇನ್ನೂ ಹಚ್ಚ ಹಸುರಾಗಿ ಕಂಗೊಳಿಸುತ್ತಿದ್ದವು.
    ಈ ವರೆಗೆ ಬಣಗುಟ್ಟುತ್ತ ಬತ್ತಲೆ ನಿಂತ ಮರಗಳು ಕೂಡಾ "ಏನೋ ಒಂದು ಬದಲಾವಣೆಯನ್ನು ತೋರಿಸುತ್ತೇವೆ" ಎಂದು ಕರೆದು ಹೇಳುತ್ತಿದ್ದಂತೆ ಭಾಸವಾಗುತ್ತಿತ್ತು. ಈ ವರೆಗೆ ಅವು ಕಟ್ಟಿಕೊಂಡಿದ್ದ ಕನಸು ನೆನಸಾಗುವ, ಆಸೆ ಕೈಗೂಡುವ ದಿನಗಳು ಬಂದವು ಎಂಬ ಸಂತೋಷದಲ್ಲಿದ್ದಂತೆ ಕಾಣುತ್ತಿದ್ದುವು. ಮರಮಟ್ಟುಗಳು ಕಳೆದುಕೊಂಡ ಗತ ವೈಭವವನ್ನು ಇನ್ನೊಮ್ಮೆ ನಿಮಗೆ ತೋರಿಸಿ ಕೊಡುತ್ತೇವೆಂದು ಕೂಗಿ ಹೇಳುತ್ತಿದ್ದಂತೆ, ಏನೋ ಒಂದು ಉತ್ಸಾಹದಲ್ಲಿದ್ದಂತೆ," ಬದಲಾವಣೆಯ ಗಾಳಿ ಬೀಸಿದೆ, "ಮತ್ತೊಮ್ಮೆ ವನ ಸೌಂದರ್ಯವನ್ನು ಸವಿಯುವ ಅವಕಾಶ ನಿಮ್ಮದು, ಐದಾರು ತಿಂಗಳ ಕಾಲ, ಒಮ್ಮೆ ಕಳೆದುಕೊಂಡ ಸೌಂದರ್ಯ ಮರುಕಳಿಸಲಿದೆ"  ಎಂದು ಘೋಷಿಸುವಂತಿತ್ತು ಅವುಗಳ ನೋಟ! ಮತ್ತು "ನಮ್ಮ ಕನಸು ಚಿಗುರೊಡೆಯುವ ಸಮಯ ಬಂದಿದೆ, ನೋಡಿ ಸಂತೋಷ ಪಡಿ" ಎಂದೋ ಹೇಳುತ್ತಿದ್ದಂತಯೋ, ಅಥವಾ ಸ್ವಾಗತದ  ನಿರೀಕ್ಷೆಯಲ್ಲಿದ್ದಂತೆ ಗೋಚರಿಸುತ್ತಿದ್ದುವು. ಅಂತೂ ಒಂದು ಹೊಸತನ ದೃಷ್ಟಿಗೋಚರವಾಗುತ್ತಿತ್ತು. ಪಾಪ! ತಾಳಿದವರು ಬಾಳಬೇಡವೇ? ಇದು ಪ್ರಕೃತಿ ವೈಚಿತ್ರ್ಯವಲ್ಲವೇ?
    ನಾವಿದ್ದ ಫ್ಲೇಟ್ ನ ಹತ್ತಿರವೇ ಒಂದು "ಏಪ್ಲ್ ವುಡ್ ಫೋರೆಸ್ಟ್" ಎಂಬ ಪಾರ್ಕ್ ಇದೆ. ಜುಲಾಯಿಯಲ್ಲಿ ಬಂದಾಗ ದಿನನಿತ್ಯ ಸುತ್ತಾಡ ಹೋಗುತ್ತಿದ್ದೆವು. ಈ ಪಾರ್ಕ್ ನ ನಾವೂ ಒಮ್ಮೆ ಸುತ್ತಾಡಿ ಬರುವ ಎಂದು  ಆ ಪಾರ್ಕಿನ ಸಮೀಪಕ್ಕೆ ಹೊರಗೆ ಹೋಗಿದ್ದೆವು.  ಹೆಸರು ಮಾತ್ರ ಏಪ್ಲ್ ಎಂದಿದ್ದರೂ ಅಷ್ಟು ವಿಶಾಲ ಪಾರ್ಕಿನ ಒಳಗೆ ಬರೇ ಒಂದು ಸೇಬಿನ ಮರವಿತ್ತು. ಕಳೆದ ಜುಲೈಯಲ್ಲಿ ಬಂದಿದ್ದಾಗ ಆ ಮರದ ತುಂಬ ಕಾಯಿಗಳು ಇದ್ದುವು. ಪಾರ್ಕ್ ನ ಮಧ್ಯೆ ಒಂದು ಆಟದ ಪ್ರದೇಶವಿದೆ.ಸಣ್ಣ ಮಕ್ಕಳನ್ನು ಕರಕೊಂಡು ತುಂಬ ಜನ ಬರುತ್ತಿದ್ದರೂ ಒಬ್ಬರೂ ಆ ಮರದ ಹತ್ತಿರಕ್ಕೇ ಸುಳಿದವರಿಲ್ಲ. ಹಾಗೆ ಇದ್ದ ಕಾಯಿಗಳನ್ನು ಕೊಯ್ಯುವವರೂ ಇಲ್ಲ  ನಾವು ಹೋಗಿದ್ದಾಗ ದಿನನಿತ್ಯ ಮೊದಲಿಗೆ ಹೀಚುಕಾಯಿ ಮತ್ತೆ ಕೆಲವು ದಿನಗಳಲ್ಲಿ ಹಣ್ಣು ಕೂಡಾ ಕೊಯಿದು ತಿಂದಿದ್ದೆವು. ಈಗ ಆ ಮರ ಮಾತ್ರ ಇದೆ ಆದರೆ ಇಂದು ಆಗ ಮಧ್ಯಾಹ್ನವಗಿದ್ದರೂ ಎಳೆಬಿಸಿಲಿನಂತಿದ್ದ ವಾತಾವರಣದಲ್ಲಿ ಬಿಸಿಲಿಗೆ ಮೈಯೊಡ್ಡಿ ಅಲ್ಲಲ್ಲಿ ಕುಳಿತವರು ಕೆಲವರು ಸಂತೋಷದಿಂದ ಆಚೀಚೆ ಓಡಾಡಿತ್ತಿದ್ದವರು ಹಲವರು ಹೀಗೆ ಪಾರ್ಕ್ ತುಂಬಿತ್ತು ಜನರಿಂದ. ನಾವೂ ಒಂದೆರಡು ಗಂಟೆ ಅಲ್ಲಿ ಸುತ್ತಾಡಿ ಮತ್ತೆ  ಮನೆಗೆ ಹಿಂತಿರುಗಿದಾಗ ಏನನ್ನೋ ಸಾಧಿಸಿ ಬಂದ ಹೆಮ್ಮೆ ಮೈಮೂಡಿತ್ತು. ನನ್ನ ಮೊಮ್ಮಗಳಿಗಂತೂ ಖುಶಿಯೋ ಖುಶಿ. ಅವಳ ಸ್ಕೂಟರ್ ತೆಗೆದುಕೊಂಡು ಓಡಾಡಿದ್ದು ಅವಳಿಗೆ ಖುಶಿ ತಂದಿತ್ತು. ಅಲ್ಲಲ್ಲಿ ಓಡಾಡುತ್ತಿದ್ದ ಮಕ್ಕಳಲ್ಲಿ  ಹೆಚ್ಚಿನ ಉತ್ಸಾಹವಿದ್ದುದು ಗೋಚರವಾಗುತ್ತಿತ್ತು. ಆ ದಿನ ಜನರ ಮನಸ್ಸಿನಲ್ಲಿ ಚಿಗುರೊಡೆದ ಕನಸುಗಳೂ ನೆನೆಸಾಗುವ ರಾತ್ರೆಯಾಗಿತ್ತೆಂದರೆ  ಅತಿಶಯೋಕ್ತಿಯಾಗಲಾರದು. ಚಳಿಗಾಲದ ಬಂದೀಖಾನೆಯಿಂದ ಬಿಡುಗಡೆ ಹೊಂದುವ ದಿನಗಳು ಬಂದುವೆಂಬ ಸಂತೋಷದಿಂದ ಆ ದಿನ ರಾತ್ರೆ ನಮಗೂ ನೆಮ್ಮದಿಯ ನಿದ್ರೆ ತಂದಿತ್ತು.

No comments:

Post a Comment