Friday, April 20, 2012

ಮಾತು ಕತೆ

ಮಾತು ಕತೆ

. ನಮ್ಮ ಮನಸ್ಸಿನಲ್ಲಿ ಹೊಳೆದ ಭಾವನೆಗಳನ್ನು ಇನ್ನೊಬ್ಬರಿಗೆ ತಿಳಿಸಬೇಕಾದರೆ  ಒಂದು ಮಾಧ್ಯಮ ಬೇಕಲ್ಲವೇ?   ಸಾಮಾನ್ಯವಾಗಿ  ಮಾತಿನ ಮೂಲಕ,ಇಲ್ಲವೇ  ಬರಹದ ಮೂಲಕ,ಆಂಗಿಕ ಅಭಿನಯದ ಮೂಲಕ  ತಿಳಿಸುತ್ತೇವೆ. ಮಾತು ಬಾರದವರು ಅಭಿನಯದ ಮೂಲಕವೇ ತಿಳಿಸಬೇಕಷ್ಟೆ. ಆಂಗಿಕ ಅಭಿನಯದ ಮೂಲಕ ತಿಳಿಸಬೇಕಾಗಿ ಬರುವುದು ಬಾಯಿ ಬಾರದವರಿಗೆ ಮಾತ್ರ. ಕೆಲವೊಮ್ಮೆ ಹತ್ತಿರದಲ್ಲಿರುವ ಬೇರೆಯಯವರಿಗೆ ತಿಳಿಯದಂತೆ ಸನ್ನೆಯ ಮೂಲಕ ತಿಳಿಸುವುದೂ ಇದೆ. ಒಟ್ಟಾರೆ ನಮ್ಮ ಅಭಿಪ್ರಾಯ ಪ್ರದರ್ಶನಕ್ಕೆ ಮಾತು ಬೇಕು.  ಕೆಲವೊಮ್ಮೆ ಅಭಿಪ್ರಾಯ ಚುಟುಕಾಗಿ ಹೇಳಿ ಮುಗಿಸಿದರೆ ಸಾಕಾಗುವುದಿಲ್ಲ. ಆಗ ನಮ್ಮ ಮಾತು ಬಹಳ ಉದ್ದವಾಗಿರಬೇಕಾಗುತ್ತದೆ.ಆಗ ಒಬ್ಬರಿಗೊಬ್ಬರು ಮಾಡುವ ಸಂಭಾಷಣೆಯನ್ನೇ ಇಲ್ಲಿ ಮಾತುಕತೆಯೆಂದು ಹೇಳಲಾಗಿದೆ. ಬಹಳ ದೀರ್ಘವಾಗಿ ನಡೆಯುವ ಚರ್ಚೆಯನ್ನು ಇಲ್ಲಿ ಮಾತುಕತೆ ಅಥವಾ ಸಂಭಾಷಣೆಯೆಂದು ಹೇಳುತ್ತಾರೆ.ಅಂತೂ ಈ ಸಂಭಾಷಣೆಗೆ ಪರಸ್ಪರ ಸಂಧಿಸಿ ಮುಖತಃ  ಮಾತನಾಡಬೇಕಾಗುತ್ತದೆ. ಈಗ ದೂರವಾಣಿಯ ಮೂಲಕವೂ ಈ ಸಂಭಾಷಣೆ ನಡೆಯುವುದಿದೆ. ಹೀಗೆ ನಡೆಯುವ ಮಾತುಕತೆಯೂ ಅಧಿಕೃತ ಮಾತುಕತೆಯೆಂದೇ ಪರಿಗಣಿಸುತ್ತಾರೆ. ದೂರದಲ್ಲಿದ್ದವರು ಭೇಟಿಯಾಗುವುದಕ್ಕೆ ಕಷ್ಟವಾದುದರಿಂದ ಅಥವಾ ಸಮಯದ ಉಳಿತಾಯಕ್ಕಾಗಿಯೂ  ದೂರವಾಣಿ  ಸಹಾಯಕವಾಗಿದೆ. ದೂರವಾಣಿ ಸಂಭಾಷಣೆಯಿಂದ  ಸಮಯದ ಉಳಿತಾಯವಾಗುವುದರೊಂದಿಗೆ ಆಗಬೇಕಾದ ಕೆಲಸ ಬೇಗ ಆಗಿ ಮುಗಿಯುತ್ತದೆ.
ಮಾತುಕತೆ ಇಬ್ಬರೊಳ್ಗೇನೇ ನಡೆಯಬಹುದು ಅಥವಾ ಎರಡು ಗುಂಪುಗಳೊಂದಿಗೆ  ನಡೆಯಬಹುದು. ಬೇರೆ ಬೇರೆ ದೇಶಗಳೊಳಗೂ ನಡೆಯಬಹುದು.
        ನಡೆಯುವ ಮಾತುಕತೆಯು ಫಲಪ್ರದವಾದಬೇಕಾದರೆ,ಎರಡು ಪಂಗಡ ಅಥವಾ  ಗುಂಪುಗಳಿಗೂ ಉದ್ದೇಶ ಸಾಧನೆಯ ಮನಸ್ಸಿರಬೇಕು.ಇಲ್ಲಿ ಒತ್ತಾಯಕ್ಕೆಡೆಯಿಲ್ಲ. ಎರಡು ಕಡೆಯ ವಾದ ವಿವಾದಗಳನ್ನು ಕೇಳಿ ನ್ಯಾಯಾಧೀಶರು  ನ್ಯಾಯಸ್ಥಾನದಲ್ಲಿ ತೀರ್ಪು ಕೊಡುತ್ತಾರೆ.  ಆದರೆ ಇಂತಹ ಮಾತುಕತೆ ಸೌಹಾರ್ದದಿಂದ ನಡೆಯಬೇಕಾದರೆ ಮೂರನೆಯವನೊಬ್ಬ ಇರಬೇಕು. ಅವನು ಯಾವುದೇ ಪಕ್ಷ ,ಪಂಗಡಗಳಿಗೆ ಸೇರಿದವನಾಗಬಾರದು.ಅದಕ್ಕೆ ಇಂತಹ ಸಂದರ್ಭದಲ್ಲಿಯೂ, ಆ ಮೂರನೆಯ ವ್ಯಕ್ತಿ ಇಬ್ಬರ ಅಥವಾ ಎರಡು ಪಂಗಡಗಳ.ಸಮ್ಮತಿಯನ್ನು ಲಿಖಿತವಾಗಿ ತೆಗೆದುಕೊಳ್ಳುತ್ತಾರೆ. ಅವನು ಇಬ್ಬರಿಗೂ ಸಮ್ಮತವಾಗುವ ಅಭಿಪ್ರಾಯವುಳ್ಳವನಾದರೆ ತೀರ್ಮಾನ  ಈರ್ವರಿಗೂ ಒಪ್ಪಿಗೆಯಾಗುತ್ತದೆ. ಹಿಂದಿನ ಕಾಲದಲ್ಲಿ  ಜನರಿಗೆ ಕೋರ್ಟು ಕಚೇರಿಗಳ  ಅಗತ್ಯವಿದ್ದಿರಲಿಲ್ಲ. ದಾರಿ ಗೊತ್ತಿರಲೂ ಇಲ್ಲ. ಎಲ್ಲ ಮಾತುಕತೆಗಳೂ ಊರಿನಲ್ಲೇ ಇತ್ಯರ್ಥವಾಗುತ್ತಿದ್ದುವು. ರಾಜರ ಆಳ್ವಿಕೆಯ ಕಾಲದಲ್ಲಿ  ಊರಿನ ಕೊತ್ವಾಲನೋ, ಗೌಡನೋ ಮಾತುಕತೆಯಿಂದ ಎಲ್ಲ ಜಗಳಗಳನ್ನೂ  ಎರಡು ಪಂಗಡಗಳಿಗೂ   ಇಷ್ಟವಾಗುವ ರೀತಿಯಲ್ಲಿ  ಅಲ್ಲಲ್ಲೇ ಮುಗಿಸಿ ಬಿಡುತ್ತಿದ್ದರು. ಇಂತಹ ಮಾತುಕತೆಗಳು ಕೆಲವೊಮ್ಮೆ ಒಂದು ಪಕ್ಷಕ್ಕೆ ವಿರೋಧವಾದುದೂ ಇದೆ. ಸೋತವನು ಬಡವನೋ, ಅವನ ಸಹಾಯಕ್ಕೆ ಯಾರು ಸಿಗದೆಯೋ ತನ್ನ ಜೀವ ಕಳೆದುಕೊಂಡದ್ದೂ ಇದೆ. ಈಗಲೂ ಕೋರ್ಟ್ ಕಚೇರಿಗಳ  ಮುಖಾಂತರವೂ ನ್ಯಾಯ ಸಿಗದೆ ಆದ ಅನ್ಯಾಯದಿಂದ ಪ್ರಾಣ ಕಳಕೊಳ್ಳುವವರೂ ಇದ್ದಾರೆ.  ಮಾತು ಕತೆಯಲ್ಲಿ ಬಗೆಹರಿಯದಿರಬೇಕಾದರೆ ಒಂದು ಕಡೆಯವರು ಸಾಕಷ್ಟು  ಬಲವಂತರಾಗಿ ಉಳಿದವರನ್ನು  ಸೋಲಿಸುವ ಚಾಳಿಯವರಿರಬಹುದು.  ಸೋತವರು ತನ್ನ ಹಣೆಬರಹವೆಂಉ ಸುಮ್ಮನಾಗಿ ಬಿಟ್ಟರೆ, ಮೋಸದಿಂದ ಗೆದ್ದವನು ಸಂತೋಷದಿಂದ ಬೀಗುತ್ತಾನೆ.  ಎಲ್ಲವನ್ನೂ ಕಾಲದ ಮಹಿಮೆಯೆಂದು ಹೇಳುವುದೋ ಅಥವಾ "ಸತ್ಯವಂತರಿಗಿದು ಕಾಲವಲ್ಲ" ಎಂದು ದಾಸರ ಪದವನ್ನು ನೆನೆಸಿ ಸುಮ್ಮನಾಗುವುದೋ ಸೋತವನ ನಿರ್ಧಾರಕ್ಕೆ ಬಿಟ್ಟುದು.ನೆರೆಹೊರೆಯ ಹೆಂಗುಸರು,ಕೆಲವೊಮ್ಮೆ  ಒಂದೊಂದು ಮನೆಗಳಲ್ಲಿ ಒಟ್ಟಾಗಿ ಮಾತುಕತೆಗೆ ಇಳಿಯುವುದೂ ಇದೆ.  ಆ ಮಾತುಕತೆಯಲ್ಲಿ ಆಚೀಚೆಯ ಮನೆಗಳ ಕ್ಷೇಮ ಸಮಾಚಾರ ಪರಸ್ಪರ ವಿಚಾರಿಸಿಕೊಂಡಾದ ಮೇಲೆ ಇತರೇತರ ಸುದ್ದಿ ಸಮಾಚಾರಗಳನ್ನೂ ವಿನಿಮಯ ಮಾಡಿಕೊಳ್ಳುವುದಿದೆ.ಅಲ್ಲಿ ಸೇರಿದವರ ಸುದ್ದಿಗಳಾದ ಮೇಲೆ ಹೊರಗಿನವರ ಸುದ್ದಿಗಳು ಬಿಡುಗಡೆಯಾಗುತ್ತವೆ. ಅವರ ಇವರ, ಗಂಡುಸರ ಹೆಂಗುಸರ ಗುಣ ನಡತೆಯ ಬಗ್ಗೆ ಪ್ರಸ್ತಾಪವಾಗುತ್ತದೆ .  ಆಚೆ ಮನೆಯ ಹುಡುಗಿ ಕಾಲೇಜಿನಿಂದ ಬರುವಾಗ  ತುಂಬಾ ತಡವಾಗುತ್ತದೆ.ಜೊತೆಯಲ್ಲಿ ಯಾರೂ ಇರುವುದಿಲ್ಲ. ಅವಳ ಗುಣ ಚೆನ್ನಾಗಿಲ್ಲ. ಯಾರದೋ ಜೊತೆ ತಿರುಗಾಡುತ್ತಿರುವಳಂತೆ. ಕಾಲೇಜ್ ಬಿಟ್ಟು ಸೀದಾ ಮನೆಗೆ ಬರುವುದು ಬಿಟ್ಟು, ಬೇರೆ ಹುಡುಗರೊಂದಿಗೆ ನಗುತ್ತಾ ಮಾತನಾಡುವುದೇನು? ನಮ್ಮನ್ನು ಕಂಡರೆ ಅವಳ ಧಿಮಾಕೇನು? ಎಂದೆಲ್ಲ ಕತೆ ಕಟ್ಟಿ  ಒಬ್ಬರಿಗೊಬ್ಬರು ಮಾತನಾಡಿದರೆ,  ನಿಜವಲ್ಲದ ಸುದ್ದಿಗಳೂ ಮರುದಿನ ಪ್ರಚಾರವಾದಂತೆ!ಹಾಗೆ ಮಾತುಕತೆಗೆ ತೊಡಗಿದರೆ ಹೊತ್ತಾದುದೇ ಗೊತ್ತಾಗುವುದಿಲ್ಲ.ಪಾಪ ಅವರ ಕಿವಿಗೆ ಒಂದು ಸುದ್ದಿ ತಿಳಿದರೆ ಅವರು ಇನ್ನೊಬ್ಬರಲ್ಲಿ ಅದನ್ನು ಬಿತ್ತರಿಸುವಾಗ ಅದಕ್ಕೆ ಉಪ್ಪು ಕಾರ ಹಚ್ಚಿ ಸುದ್ದಿ ದೊಡ್ಡದಾಗುತ್ತದೆ.ಇದು ಹೆಂಗಸರ ಸಮಾಚಾರವಾದರೆ ಹೀಗೆಯೇ ನಿರುದ್ಯೋಗಿ ಗಂಡಸರೂ ಮಾಡಲು ಕೆಲಸವಿಲ್ಲದೆ ಅಲ್ಲಿ ಇಲ್ಲಿ ತಿರುಗಾಡುವಾಗ  ಒಬ್ಬರಿಗೊಬ್ಬರು ಭೇಟಿಯಾದರೆ ಏನಾದರೂ ಮಾತಾಡಬೇಕಲ್ಲ.  ಅದು ಇದು ಮಾತಾಡಿ ಕಡೆಗೆ ಊರವರ ಸುದ್ದಿ ಬರುತ್ತದೆ. ಎಲ್ಲ ಇಂತಹ ಮಾತುಕತೆಯ ವ್ಯವಹಾರ ಕಾಲಹರಣಕ್ಕಾಗಿದ್ದರೆ ಪರವಾಗಿಲ್ಲ.  ಬೇರೆಯವರ ಕುರಿತು ಸುಳ್ಳು ಸುದ್ದಿ ಹರಡುವುದೂ ನಡೆಯುತ್ತದೆ. ಇದು ಸಮಾಜ ಮಾರಕವಲ್ಲವೇ?


        ಒಂದು ಕಾಲವಿತ್ತಂತೆ. ಆ ಕಾಲದಲ್ಲಿ  ಎಲ್ಲರೂ ಸತ್ಯವಾದಿಗಳೇ ಆಗಿದ್ದರಂತೆ. ಒಬ್ಬ ಮತ್ತೊಬ್ಬನಿಗೆ ತನ್ನ ಭೂಮಿಯನ್ನು ಮಾರಿದ್ದನಂತೆ. ಭೂಮಿ ಕೊಂಡವನು  ಗದ್ದೆಯನ್ನು ಉಳುವಾಗ ಆ ಗದ್ದೆಯಲ್ಲಿ ಒಂದು ಚಿನ್ನದ ನಾಣ್ಯ ತುಂಬಿದ ಕೊಡ ಸಿಕ್ಕಿತಂತೆ. ಆತನು ಕೂಡಲೇ ಇದು ತಾನು ಕೊಂಡ ಭೂಮಿಯಲ್ಲಿ ಸಿಕ್ಕಿದ್ದು. ತನಗೆ ಭೂಮಿ ಕೊಟ್ಟವನಿಗೇ ಇದು ಸೇರಬೇಕೆಂದು ಆ ಕೊಡವನ್ನು ಕೊಂಡು ಹೋಗೆ ಆತನಿಗೇ ಒಪ್ಪಿಸಿದರೂ ಭೂಮಿ ಮಾರಿದವನು "ಇಲ್ಲ ಅದು ತನಗೆ ಬೇಡ,ಅದು ನಿನಗೆ ಸೇರಿದ್ದು, ನಿನ್ನ ಭಾಗ್ಯದಿಂದಲ್ಲವೇ ನೀನು ಉಳುವಾಗ ನಿನಗೆ ಸಿಕ್ಕಿತು"ಎಂದು ಎಷ್ಟು ಹೇಳಿದರೂ ಸಮಾಧಾನವಾಗದೆ ಇಬ್ಬರೂ ಅದನ್ನು ಸ್ವೀಕರಿಸಲು ಒಪ್ಪಲಿಲ್ಲವಂತೆ.ಅವರೊಳಗೆ ನ್ಯಾಯ ತೀರ್ಮಾನವಾಗದೆ,ಕಡೆಗೆ ರಾಜನಲ್ಲಿಗೇ ದೂರು ಹೋಯಿತು. ರಾಜನೂ ಇಬ್ಬರಲ್ಲಿ ಯಾರೂ ಅದನ್ನು ಸ್ವೀಕರಿಸಲು ಒಪ್ಪದಿದ್ದಾಗ ಊರಿನ ದೇವಸ್ಥಾನಕ್ಕೆ ಕೊಡವನ್ನು ಒಪ್ಪಿಸಲು ಹೇಳಿಬಿಟ್ಟನಂತೆ. ರಾಜನಾದರೂ ತನ್ನ ಖಜಾನೆಗೆ ಆ ಕೊಡವನ್ನು ತುಂಬಿಸಲಿಲ್ಲ. ಅವನಿಗೆ ಜನ ಕೊಟ್ಟ ತೆರಿಗೆಯೇ ಸಾಕು. ಒಟ್ಟಿನಲ್ಲಿ  ಹಾಗೆ ನ್ಯಾಯ ತೀರ್ಮಾನವಾಯಿತು. ಈಗಲಾದರೋ ಕೊಂಡವನು ಸಿಕ್ಕಿದ ಕೊಡವನ್ನು ತಾನೇ ಉಪಯೋಗಿಸುತ್ತಿದ್ದನು. ಇಲ್ಲಿ ಅವರೊಳಗೆ ಮಾತುಕತೆ ಫಲಕೊಡದೆ ನ್ಯಾಯಸ್ಥಾನಕ್ಕೆ ಹೋದರೂ ರಾಜನಾದರೋ ಕೊಟ್ಟ ತೀರ್ಪು ಸರ್ವಸಮ್ಮತವಾಗಿತ್ತು. ಅನ್ಯಾಯದ ಹಣ ಆ ಕಾಲದಲ್ಲಿ ಯಾರಿಗೂ ಬೇಡವಾಗಿತ್ತು.ಇಂತಹ ಕತೆಗಳು ಅಂದಿನ ಕಾಲಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗಲೂ
ಪ್ರಾಮಾಣಿಕರು ಇದ್ದಾರೆ ಎಂಬುದಕ್ಕೆ ಕೆಲವು ಉದಾಹರಣೆಗಳು ಪತ್ರಿಕೆಯಲ್ಲಿ ಬರುತ್ತಿರುತ್ತವೆ. ಮೊನ್ನೆ ಚಿಂದಿ ಹೆಕ್ಕುವ ಹುಡುಗಿಯೊಬ್ಬಳು ಯಾರೋ ಬಿಸಾಕಿದ ಆಭರಣಗಳ ಕಟ್ಟನ್ನೇ ಅದರ ನಿಜವಾದ ವಾರಸುದಾರರಿಗೆ ಕೊಟ್ಟಿರುವಳಂತೆ.
        ಸಭೆಯಲ್ಲಿ ಭಾಷಣ ಮಾಡುತ್ತಿರುವಾಗ  ಮಧ್ಯೆ ಕುಳಿತು ಮಾತುಕತೆಯಲ್ಲಿ ಮುಳುಗುವುದು ಕೆಲವರ ಅಭ್ಯಾಸ.ಏನೋ ಅಪರೂಪಕ್ಕೆ ಭೇಟಿಯಾದವರನ್ನು ಮಾತನಾಡಿಸದಿರುವುದು ಹೇಗೆ ಎಂದು ಅವರೊಡನೆ ಮಾತುಕತೆಯಲ್ಲಿ ಮುಳುಗಿ ಬಿಟ್ಟರೆ  ಸಭೆಯ ಶಿಸ್ತು ಏನಾಗಬೇಕು? ಬೇರೆಯವರೊಡನೆ ಮಾತಾಡುತ್ತಿರುವಾಗ ಮಧ್ಯೆ ಬಾಯಿ ಹಾಕುವುದು ಕೆಲವರ ಅಭ್ಯಾಸ! ತನ್ನ ಅಭಿಪ್ರಾಯ ಕೇಳದಿದ್ದರೂ ಅವರ ಮಾತಿನ ಎಡೆಯಲ್ಲಿ ಸೇರಿಕೊಂಡು ತನ್ನ ವಾಕ್ಪ್ರೌಢಿಮೆಯನ್ನು ಹೊರಹಾಕಲು ಇದ್ದೇ ಸಮಯವೆಂದು  ಮೂಗು ತೂರಿಸುವವರೂ ಇದ್ದಾರೆ. ಇವೆಲ್ಲ ಅಸಭ್ಯ ವರ್ತನೆಗಳಲ್ಲವೇ?ಇಬ್ಬರ ಸಂಭಾಷಣೆ ನಡೆಯುತ್ತಿರುವಾಗ ನಾವು ದೂರ ನಿಂತುಕೊಂಡು  ಆ ಕಡೆಗೆ ಗಮನ ಕೊಡದಿರುವುದು
ಸಭ್ಯತೆಯ ಲಕ್ಷಣವೆಂಬುದು ಖಂಡಿತ. ಇಬ್ಬರು ಏನಾದತ್ರೂ ಗುಟ್ಟಾಗಿ ಮಾತುಕತೆಯಲ್ಲಿದ್ದರೆ ಮರೆಯಲ್ಲಿ ಅಡಗಿ ಕುಳಿತು ಕಿವಿಕೊಡುವುದೂ ಇನ್ನು ಕೆಲವರ ಅಭ್ಯಾಸ.  ವಿರಾಮ ಕಾಲದಲ್ಲಿ ಕೆಲವರು ಅಲ್ಲಿ ಇಲ್ಲಿ ಸೇರಿ ಕುಳಿತು ಮಾತಿನಲ್ಲಿಯೇ ಕಾಲಹರಣ ಮಾಡುವುದಿತ್ತಂತೆ. ಮನೆಯ ಚಾವಡಿಯೋ. ಮನೆಯ ಹೊರಗಿನ ಕಟ್ಟೆಯೋ ಪಟ್ಟಾಂಗ ಹೊಡೆಯಲು ಜಾಗವಂತೆ ಅವರಿಗೆ. ಪ್ರಾಯಸ್ಥರಾದರೆ ಅಡ್ಡಿಯಿಲ್ಲ. ಯುವಕರು  ಹೀಗೆ ಸೇರಿ  ಏನಾದರೂ ಧ್ಯೇಯೋದ್ದೇಶಗಳನ್ನು ಮುಂದಿಟ್ಟುಕೊಂಡು ಮಾತುಕತೆಯಾಡಿದರೆ ಅಡ್ಡಿಯಿಲ್ಲ. ಶಿವರಾತ್ರೆಯ ಜಾಗರಣೆಯಂದು ನಾವು ಏನೆಲ್ಲ ಮಾಡುವುದು? ಯಾವ ಮಾರ್ಗಕ್ಕೆ  ಎಲ್ಲಿ ಕಲ್ಲಿಡುವುದು ಎಂಬಂತಹ ಗೂಢಾಲೋಚನೆಗಳನ್ನು ಮಾಡುವ ಮಾತುಕತೆ ಸಮಾಜದ ಹಿತ ದೃಷ್ಟಿಯಿಂದ ದೋಷವಲ್ಲವೇ? ಕೆಲವರಿಗೆ  ಚರ್ಚಾಸಭೆಯಲ್ಲಿ ಮಧ್ಯೆ ಪ್ರವೇಶಿಸಿ ಅಧಿಕ ಪ್ರಸಂಗ ಮಾಡುವ ಚಟವಿದೆ. ಅಂಥವರನ್ನು ಮತ್ತೆ ಕಂಡಾಗ ಇವನೊಬ್ಬ ಅಧಿಕಪ್ರಸಂಗಿ ಎಂದು ಅವನ ಮಾತಿಗೆ ಬೆಲೆ ಕೊಡುವುದಿಲ್ಲ.
        ಮಾತು ಕತೆ ನಡೆಯುವಾಗಲೂ  ನಾವು ಕಾಲಹರಣಕ್ಕಾಗಿ ಮಾತಾಡುವುದಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಆಡುವ ಮಾತುಗಳು ತೂಕದ್ದಾಗಿರಬೇಕು . ಬಾಯಿಯಿಂದ ಒಮ್ಮೆ ನಾವಾಡಿದ ಮಾತುಗಳನ್ನು ಹಿಂದೆ ತೆಗೆಯುವುದು ನಮಗೆ ಅವಮಾನವಲ್ಲವೇ? ನಾವಾಡಿದ ಮಾತುಗಳು ಇನ್ನೊಬ್ಬರ ಮನಸ್ಸನ್ನು ನೋಯಿಸುವಂತಹುದಾದರೆ  ಮಾತುಕತೆಯಿಂದ ಕೊನೆಗೆ ಜಗಳವೇ  ಬರಬಹುದು. ವ್ಯರ್ಥಾಲಾಪವೂ ಸರಿಯಲ್ಲ. ಹೆಚ್ಚು ತಿಳಿದವರ ಮುಂದೆ ತಾನೂ ತಿಳಿದವನು ಎಂದು ತೋರಿಸುವುದಕ್ಕೆ ಹೆಚ್ಚು ಮಾತಾಡುವುದು ಒಳ್ಳೆಯದಲ್ಲ. ಮೂರ್ಖರ ಮುಂದೆಯೂ ಮಾತಾಡುವಾಗ ಜಾಗೃತರಾಗಿರಬೇಕು. ಕೆಲವರು ನಾವಾಡುವ ಮಾತುಗಳನ್ನು ಕೇಳಿಸಿಕೊಂಡು, ತಮಗೆ ಹಿತವಾಗದಿದ್ದರೆ ಸುಮ್ಮಗಿದ್ದ್ರುತ್ತಾರೆ.ಮತ್ತೆ ಹೊಸ ಕ್ಯಾತೆ ತೆಗೆಯುತ್ತಾರೆ. "ಮಾತು ಬಲ್ಲವನಿಗೆ ಜಗಳವಿಲ್ಲ" ಎನ್ನುತ್ತಾರೆ. ನಮ್ಮೆದುರು ಕುಳಿತವರಿಗೆ ಹಿತವಾಗಿ ,ನಾಲ್ಕು ಜನ ನಮ್ಮ ಮಾತನ್ನು  ಕೇಳಿ ಒಪ್ಪುವಂತಿರಬೇಕು.ನಮಗೆ ಹೆಚ್ಚು ಮಾತಾಡಲು ಬಾರದಿದ್ದರೆ ಮಾತಾಡದಿರಬೇಕು. "ಮೌನಂ ಪಂಡಿತ ಲಕ್ಷಣಂ " ಎನ್ನುತ್ತಾರೆ. ಮಾತಾಡದಿದ್ದರೆ ಅವರೇ ನಮ್ಮನ್ನು ಮಾತಾಡಿಸುತ್ತಾರೆ. ನಮ್ಮಲ್ಲೇ ನ್ಯಾಯ ಕೇಳುತ್ತಾರೆ. "ಮಾತು ಕುಲಗೆಡಿಸಿತು" ಎಂಬ ಗಾದೆಯ ಮಾತು ಕೇಳಿಲ್ಲವೆ?ನಾವಾಡಿದ ಮಾತು ಹೆಚ್ಚು ಕಡಿಮೆಯಾದರೆ ನಮ್ಮ ವಂಶಕ್ಕೇ ಅಪಕೀರ್ತಿಯನ್ನು ತರಬಹುದು. ಮುತ್ತು ಬಿದ್ದರೆ ಹೆಕ್ಕ ಬಹುದಂತೆ,ಆದರೆ ನಮ್ಮ ಬಾಯಿಯಿಂದ ಬಿದ್ದ ಮಾತನ್ನು ಮತ್ತೆ ಹೆಕ್ಕಲಾಗುವುದಿಲ್ಲ.ಅಂತಾರಾಷ್ಟ್ರೀಯ ಮಾತು ಕತೆಗಳೂ
ಫಲಪ್ರದವಾಗಿವುದಿಲ್ಲ. ಪಾಕಿಸ್ಥಾನ- ಮತ್ತು ನಮ್ಮ ದೇಶಗಳೊಳಗೆ  ಕಾಶ್ಮೀರಕ್ಕಾಗಿ ನಡೆದ ಮಾತುಕತೆಗಳು ಇನ್ನೂ ಫಲಪ್ರದವಾಗದಿರಲು ಅವರ ಕುತರ್ಕವೇ ಕಾರಣವಲ್ಲವೇ?ಇನ್ನೊಂದು ನೆರೆರಾಜ್ಯ ಚೀನ ಕೂಡಾ ಹೊಸ ಕ್ಯಾತೆ ತೆಗೆದು ನಮ್ಮ ಭೂಭಾಗಗಳನ್ನು ನುಂಗಲು ನೋಡುತ್ತಿದೆ. ಬಾಂಗ್ಲಾದೇಶಕ್ಕೆ  ಅಂದು ನಾವು ಮಾಡಿದ ಉಪಕಾರ ಮರೆತು ಹೋಗಿದೆ. ನಿರಾಶ್ರಿತರು ನಮ್ಮ ದೇಶದಲ್ಲಿ ತುಂಬಿ ಹೋಗಿದ್ದಾರೆ . ಇವೆಲ್ಲವೂ ಇನ್ನೂ ಮಾತು ಕತೆಯಲ್ಲೇ ಇವೆ. ತೋರಿಕೆಗೆ ಮಾತ್ರ ತಾವು ಸತ್ಯಾತ್ಮರು, ಶುದ್ಧರು ಎಂಬುದನ್ನು  ಪ್ರದರ್ಶಿಸುತ್ತಾರೆ. ಎಲ್ಲ ಸಂಧಾನದಲ್ಲೇ ಮುಗಿಸುವ  ಎಂದು ಬಹಿರಂಗವಾಗಿ ಹೇಳಿದರೂ ಭಾರತವನ್ನು ಬಗ್ಗು ಬಡಿಯಲು ಚೀನ ಮೊದಲಾದ ದೇಶಗಳ ಸಹಾಯವನ್ನು ಗುಟ್ಟಾಗಿ ಪಡೆಯುತ್ತಿರುತ್ತಾರೆ. ಸಂಧಾನದ ಮಾತುಕತೆಯೆಂಬುದು  ತನ್ನ ಸಾಚಾತನವನ್ನು ತೋರಿಸಲು ಮಾತ್ರ!
            ಪುರಾಣ ಕಾಲದಲ್ಲಿಯೂ ಸಂಧಾನದ ಮಾತುಕತೆಗಳು ಔಪಚಾರಿಕವಾಗಿ ನಡೆದಿತ್ತೆಂಬುದು ತಿಳಿದು ಬರುತ್ತದೆ. ಧರ್ಮರಾಯನ  ಒತ್ತಾಯದಿಂದ ಶ್ರೀಕೃಷ್ಣ  ಹಸ್ತಿನಾವತಿಗೆ ಹೋಗುತ್ತಾನೆ. ದ್ರೌಪದಿ ತನಗೆ ಕೌರವನ ಮೇಲಿರುವ ಸೇಡನ್ನು ತೀರಿಸಕೊಳ್ಳಬೇಕೆಂದು ಹೇಳಿದಾಗ ಆಕೆಯನ್ನು ಸಂತೈಸುತ್ತಾ ಹೇಳಿದ ಮಾತು  ಸಂಧಾನದ ಮಟ್ಟಿಗೆ ತನ್ನ ಅವಜ್ಞೆಯನ್ನು  ಹೇಳಿ ತೋರಿಸಿದ್ದ. ಆ ಮೇಲೆಯೇ ಆಕೆ ಸುಮ್ಮಗಾಗಿದ್ದಳು. ಕೌರವನ  ಅರಮನೆಗೆ ಹೋಗಬೇಕಾದವ ಹೋಗಿದ್ದು ವಿದುರನ ಮನೆಗೆ.  ಹದಿಮೂರು ವರ್ಷಗಳಿಂದ ಅತ್ತೆಯನ್ನು ಮಾತಾಡಿಸಿಲ್ಲವೆಂಬ ನೆಪ ಹೇಳಿ ವಿದುರನ ಮನೆಗೆ ಹೋದವ ಕೌರವನನ್ನು ಕೆರಳಿಸಲೇ ಅಲ್ಲವೇ ಹಾಗೆ ಮಾಡಿದ್ದು . ಇಬ್ಬರೊಳಗೆ ಸಂಧಾನದ ಮಾತುಕತೆಯಾಡುವವ ಕೌರವನಿಗೆ ಖುಶಿಯಾಗಲೆಂದು ಅರಮನೆಯಲ್ಲಿ  ಆತನ ಸ್ವಾಗತಕ್ಕೆ ಸಾಕಷ್ಟು ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದರೂ ಅಲ್ಲಿಗೆ ಹೋಗಲಿಲ್ಲ. ಅವನು ನೆನೆಸಿದಂತೆ ಆಯಿತು. ಕೌರವ ವಿದುರನನ್ನು ಬಾದರಾಯಣ ಸಂಬಂಧದಿಂದ ಚಿಕ್ಕಪ್ಪನಾಗಬೇಕಿದ್ದರೂ ದಾಸೀ ಪುತ್ರನೆಂದು ಹೀಯಾಳಿಸಿ ಬಿಟ್ಟ  .ವಿದುರ ಸಿಂಹಾಸನದ ರಕ್ಷಣೆಗಾಗಿ ತೆಗೆದಿರಿಸಿದ್ದ ಬಿಲ್ಲನ್ನು ಮುರಿದೇ ಬಿಟ್ಟ. ಕರ್ಣನನ್ನು ಭೇಟಿಯಾಗಿ ಆತನ ನಿಜವನ್ನು ತಿಳಿಸಿ "ಭೇದದಲಿ ಹೊಕ್ಕಿರಿದು"ಬಿಟ್ಟ. ಎಲ್ಲ ಆತನ ಮಾತುಕತೆಯ ಪರಿಣಾಮ! ಮಹಾಭಾರತ ಯುದ್ಧಕ್ಕೆ ನಾಂದಿಯಾಯಿತು. ಶ್ರೀರಾಮ ಸಂಧಾನದ ಮಾತುಕತೆಗೆ ಅಂಗದನನ್ನು ಕಳಿಸಿದ್ದು, ಎಲ್ಲ ರಾಜನೀತಿಯ ಚಾಣಾಕ್ಷತೆ! ಹೊರಗಿನ ನೋಟಕ್ಕೆ ಕೌರವ ಒಪ್ಪಲಿಲ್ಲವೆಂದಾದರೂ ಕೃಷ್ಣನಿಗೆ ಬೇಕಾದ್ದು ಯುದ್ಧ.  ಕೌರವ, ಕೃಷ್ಣನ ಮೋಹಜಾಲಕ್ಕೆ ಸಿಲುಕಿ ಯುದ್ಧ ಮಾಡಬೇಕಾಯಿತು. ದುಷ್ಟರಿಗೆ ಶಿಕ್ಷೆಯಾಯಿತು.ಧರ್ಮಕ್ಕೆ ಜಯವಾಯಿತು
        ಮಾತು ಕತೆಯಿಂದಲೇ  ಎಲ್ಲ ಜಗಳಗಳನ್ನು ಪರಿಹರಿಸಬೇಕೆಂಬುದು ನಮ್ಮ ಉದ್ದೇಶವೆಂದು ರಾಷ್ಟ್ರ ನಾಯಕರು ಹೇಳುತ್ತಾರೆ. ದೇಶದೊಳಗೇ ಒಳಜಗಳಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಗಡಿ ವಿವಾದ ಒಂದೆಡೆಯಾದರೆ ಕಾವೇರಿ ನೀರಿನ ಕಲಹದಂತಹ  ಆಂತರಿಕ ಜಗಳಗಳು ಎಂದಿಗೆ ಮುಗಿಯುವುದೋ ನಾ ಬೇರೆ ಕಾಣೆ! ಅಧಿಕಾರದ ಗದ್ದುಗೆಯೇರಲು ಪಕ್ಷಗಳೊಳಗೇನೇ ಜಗಳ ಮುಂದುವರಿಯುತ್ತಿದ್ದು ಜನರಿಂದ ಆರಿಸಿ ಹೋದ ಜನಪ್ರತಿನಿಧಿಗಳು ಜೊತೆಗೆ ತಮ್ಮ ಸಂಬಳ ವರ್ಷಕ್ಕೊಮ್ಮೆ ಹೆಚ್ಚಿಸಲು ಒಕ್ಕೊರಳಿನಿಂದ ಕೂಗೆಬ್ಬಿಸುತ್ತಿವೆ.  ಭ್ರಷ್ಟಾಚಾರ ನಿರ್ಮೂಲನವೆಂದು  ಜನ ಒಟ್ಟಾಗಿ ಕೂಗೆಬ್ಬಿಸಿದರೂ ಕಿವಿಗೊಡದ ಸರಕಾರ ಏನೋ ಬಾಯಿತಪ್ಪಿ ಜನಪ್ರತಿನಿಧಿಗಳ ಬಗ್ಗೆ ಏನಾದರೂ ಹೇಳಿದರೆ ಅಂಥವರನ್ನು ಶಾಸಕ ಭವನಕ್ಕೆ ಕರೆಸಿ ಛೀಮಾರಿ ಹಾಕಿಸಲು ಅವರ ಒಕ್ಕೊರಳು ದನಿಗೂಡಿಸುತ್ತದೆ.  ಬಡವರ, ದಲಿತರ ಕೂಗು ಅವರಿಗೆ ಮುಖ್ಯವಲ್ಲ. ಕೃಷಿಕರ ಹಿತ ಸಂರಕ್ಷಣೆಯೆಂದು ಕೂಗೆಬ್ಬಿಸುತ್ತ, ಹಿಂದುಳಿದವರ ಕಲ್ಯಾಣ ನಿಧಿ ಎಂದೆಲ್ಲ ಹೇಳುತ್ತಾ ಬಜೆಟ್ ನಲ್ಲಿ ನಿಗದಿಯಾದ ಹಣ ಹೇಗೆ ವಿನಿಯೋಗವಾಗಿದೆಯೆಂಬುದು ಮಂತ್ರಿಗಳಿಗೋ, ಅಧಿಕಾರಿಗಳಿಗೋ ಗೊತ್ತಿಲ್ಲವೋ ಜಾಣ ಕಿವುಡರಾಗುವುದೋ ಗೊತ್ತಿಲ್ಲ.  ಒಟ್ಟಿನಲ್ಲಿ ಗೊಂದಲಗಳ ಸರಮಾಲೆ!ಮಾತುಕತೆಯಿಂದ ಬಗೆಹರಿಯಬೇಕಾದ ಗೊದಲಗಳು ಹೆಚ್ಚಾದರೆ ಮಾತ್ರ ಜನ ನಾಯಕರಿಗೆ ಮುಂದಿನ ಚುನಾವಣಾ ಕಾಲದಲ್ಲಿ ಭಾಷಣ ಬಿಗಿಯುವುದಕ್ಕೊಂದು ವಿಷಯವಾಗಬಹುದು. ಅಯೋಧ್ಯೆಯಲ್ಲಿ ರಾಮ ಮಂದಿರ ಮಾಡಿತ್ತೇವೆಂದವರು,ಇನ್ನೂ ಅದೇ ಯೋಚನೆಯಲ್ಲೇ ಇದ್ದಾರಷ್ಟೆ. ಹಾಗೆಲ್ಲ ಉದ್ದೇಶಿಸಿದ ಕಾರ್ಯಗಳನ್ನು ಮಾಡಿ ಮುಗಿಸಿದರೆ ಬರುವ ಚುನಾವಣೆಗೆ ಹೊಸ ವಿಷಯ ಹುಡುಕಬೇಕಾಗುತ್ತದೆ. ಕರ್ನಾಟಕದಲ್ಲಿ, ನೈಸ್ ವಿವಾದ ಇನ್ನೂ ಭೂತಾಕಾರವಾಗಿದ್ದು ಒಮ್ಮೊಮ್ಮೆ ಶಾಸಕರಿಗೆ  ಸಭೆಯಲ್ಲಿ ಬಾಯಿಬಿಡಲು ವಿಷಯವಾಗುವುದು. ಅಂತೂ ಎಲ್ಲೆಲ್ಲೂ ಕೋಲಾಹಲ. ರಾತ್ರೆಯಿಡೀ ಸಭೆ ನಡೆದರೂ ಚರ್ಚೆ ಮುಗಿಯುವುದಿಲ್ಲ. ಮುಗಿದರೆ ಹೊಸ ವಿಷಯ ಹುಡುಕಬೇಡವೇ? ಇಲ್ಲಿ ಬರಗಾಲ ಎದುರಿಸುತ್ತಿರುವಾಗ ತಮಿಳ್ನಾಡಿಗೆ ನೀರು ಬಿಡಬೇಕೆಂಬುದು ಯಾವ ನ್ಯಾಯ? ಈಗ ಅಲ್ಲಿರುವುದು ಜಯಲಲಿತ ಸರಕಾರ. ಅದು ನಮ್ಮ ಯು.ಪಿ.ಎ ಅಲ್ಲ. ಅದಕ್ಕೇ ಕೇಂದ್ರ ಮೌನವಾಗಿದೆ. ವಿವಾದ ಬಗೆಹರಿಸಿಕೊಂಡುನೆಮ್ಮದಿಯಿಂದಿರಬೇಕೆಂಬುದು ಜನ ನಾಯಕರಿಗೆ ಅನ್ನಿಸುವುದಿಲ್ಲವೋ ಏನೋ. ದಿನದಿಂದ ದಿನಕ್ಕೆ ಸಮಸ್ಯೆಗಳ ಸರ ಮಾಲೆ ಹೆಚ್ಚಾಗುತ್ತಾ ಹೋಗುತ್ತಿದೆ.
        ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬುದು ಮಾತಿನ ಮೋಡಿಯಾದರೂ ಈಗಿನ ಮಕ್ಕಳಿಗೂ ವಿದ್ಯಾರ್ಥಿ ದೆಸೆಯಲ್ಲಿ ನೀತಿ ಪಾಠಗಳು ಪಠ್ಯದಲ್ಲಿರುವುದಿಲ್ಲ.  ಕಲಿಸುವ ಅಧ್ಯಾಪಕರು ಏನಾದರೂ ಶಾಲೆಗಳಲ್ಲಿ ನೀತಿಯನ್ನು ಹೇಳಹೊರಟರೆ,ಮರುದಿನ ಆ ಅಧ್ಯಾಪಕರಿಗೆ ಮಕ್ಕಳಿಂದ ಘೆರಾವೋ ನಡೆಯಬಹುದು. ಅಥವಾ ಅವರ ವಿರುದ್ಧವಾಗಿ  ಏನಾದರೂ ಕಾನೂನು ಕ್ರಮ ಜರುಗಿಸಬಹುದು. ವ್ಯಕ್ತಿತ್ವವನ್ನು ರೂಪಿಸುವುದೇ ಮನುಷ್ಯನ ಗುಣ ನಡತೆ.! ಧನ ಸಂಪತ್ತು ಹೋದರೆ  ಮತ್ತೆ ಗಳಿಸಬಹುದು. ಆರೋಗ್ಯ ಹಾಳಾದರೆ ಔಷಧೋಪಚಾರಗಳಿಂದ ಪಡೆಯಬಹುದು.ಆದರೆ  ಗುಣ ನಡತೆ ಕೆಟ್ಟು ಹೋದರೆ ಮತ್ತೆ ಗಳಿಸಲಾಗದು. ಆತನ ವ್ಯಕ್ತಿತ್ವವೇ ಹಾಳಾಯಿತು. "ಹುಟ್ಟು ಗುಣ ಸುಟ್ಟರೂ ಹೋಗದು" ಎನ್ನುತ್ತಾರೆ. ಹೆತ್ತವರು ಮತ್ತು  ಕಲಿಸುವ ಅಧ್ಯಾಪಕರೇ ಮುಂದಿನ ಜನಾಂಗದ ಶಿಲ್ಪಿಗಳು. ಮಕ್ಕಳ ಆಟ ಪಾಠಗಳ ಕಡೆಗೆ ಗಮನ ಹರಿಸುಷ್ಟು ವ್ಯವಧಾನವೂ ಇಂದಿನ ರಕ್ಷಕರಿಗೋ ,ಶಿಕ್ಷಕರಿಗೋ ಇಲ್ಲವಾಗಿದೆ. ಮಕ್ಕಳು ಅವರಷ್ಟಕ್ಕೆ ಶಾಲೆಗೆ ಹೋಗುತ್ತಾರೆ ,ಸಂಜೆ ಬರುತ್ತಾರೆ, ಶಾಲೆಯಲ್ಲಿ ಏನು ಮಾಡಿದರು?. ಅಧ್ಯಾಪಕರು ಏನು ಕಲಿಸಿದರು? ಎಂಬುದು ಅವರಿಗೆ ಬೇಡ.ಇಂಗ್ಲಿಷ್ ಮೀಡಿಯಮ್ ಬೇಕು. ಎಷ್ಟು ಡೊನೇಶನ್ ಕೊಟ್ಟರೂ ಸರಿ ಮಕ್ಕಳಿಗೆ ಕಲಿಸಬೇಕು .ಮುಂದೆ ಉದ್ಯೋಗ ಸಿಗಬೇಕು ಎಂದೇ ಯೋಚಿಸುತ್ತಾರೆ.  ಹೊರತು ಅವರ ರೀತಿ ನೀತಿಗಳನ್ನು ತಿದ್ದುವ ಯೋಚನೆಯಿಲ್ಲ. ರಾಜ ಕಾರಣಿಗಳೋ,ಅವರಿಗೆ ಯಾವುದಕ್ಕೂ ಪುರುಸೊತ್ತೇ ಇಲ್ಲ. ತನ್ನ ಅಧಿಕಾರ ಸ್ಥಾನ ಮಾನಗಳನ್ನು ಹೆಚ್ಚಿಸುವ ಯೋಚನೆ ಮಾತ್ರ. ಅವರದೇ ಲೋಕದಲ್ಲಿ ಮಾತುಕತೆ ನಡೆಸುತ್ತಿರುತ್ತಾರೆ. ರಾತ್ರಿ ಕನ್ನ ಹಾಕಿ ಕದ್ದು ತಂದ ವಸ್ತುಗಳನ್ನು ಕಾಡಿನ ದಾರಿಯಲ್ಲಿ ಬರುವಾಗ ಅದನ್ನು ಹಂಚಿಕೊಳ್ಳುವ ವಿಷಯದಲ್ಲಿ ಅವರೊಳಗೆ ಜಗಳ ಸುರುವಾಗಿ ಮಾತುಕತೆ, ಚರ್ಚೆ ಮುಂದುವರಿದು "ತಾನು ಜಾಗ ತೋರಿಸಿದವ ತನಗೆ ಹೆಚ್ಚು ಸಿಗಬೇಕು" ಎಂದು ಒಬ್ಬಹೇಳಿದ. ಮತ್ತೊಬ್ಬ "ಜೀವದ ಹಂಗುತೊರೆದು ಒಳಗೆ ನುಗ್ಗಿ ಕದ್ದು ತಂದದ್ದು ತಾನು ತನಗೆ ಹೆಚ್ಚು ಸಿಗಬೇಕು" ಎಂದು  ಚರ್ಚೆ ಮಾಡಿದ. ಮಾತುಕತೆ ಮುಂದುವರಿಯುತ್ತಿದ್ದಂತೆ ಬೆಳಗಾದುದು ಗೊತ್ತಾಗಲಿಲ್ಲ. ಆ  ದಾರಿಯಾಗಿ ಬಂದವರಿಗೆ ಕಳ್ಳರ ದರ್ಶನವಾಗಿ ಪೋಲೀಸರಿಗೆ ತಿಳಿಸಿದರಂತೆ. ಏನೋ ಮೂರುದಿನದ ಬಾಳ್ವೆ. ಎಲ್ಲವೂ ನಶ್ವರ. ಸಿಕ್ಕಿದುದನ್ನು ಹಂಚಿ ತಿನ್ನುವ ಸ್ವಭಾವ ಹಿಂದಿನವರಲ್ಲಿತ್ತಂತೆ. ನಾಗರಿಕತೆ ಮುಂದುವರಿದು.ವಿಜ್ಞಾನ ಬೆಳೆದು ಕುದುರೆ ಕತ್ತೆಯಾಗದಿದ್ದರೆ ಅದು ಒಂದು ಪವಾಡವೇ ಸರಿ.

No comments:

Post a Comment