Monday, April 23, 2012

ಉದ್ಯೋಗಂ ಪುರುಷ ಲಕ್ಷಣಂ

ಉದ್ಯೋಗಂ ಪುರುಷ ಲಕ್ಷಣಂ
    "ನಿರುದ್ಯೋಗಿಗಳ ತಲೆ ಪಿಶಾಚಿಗಳ ಕಾರ್ಖಾನೆ" ಯಂತೆ. ಅವರಿಗೆ ಮಾಡುವುದಕ್ಕೆ ಕೆಲಸವಿರುವುದಿಲ್ಲ. ಅದಕ್ಕೆ ಊರೆಲ್ಲ ಸುತ್ತಾಡುತ್ತಾ ಏನಾದರೂ ಸಲ್ಲದ ಕಾರ್ಯಗಳನ್ನು ಮಾಡುತ್ತಾ ಕಲ ಕಳೆಯುತ್ತಿರುತ್ತಾರೆ. ಒಂದೋ ಸ್ವಯಂ ತಿಳಿದು ಏನಾದರೂ ಕೆಲಸ ಮಾಡಬೇಕು. ಇಲ್ಲವಾದರೆ ಸರಕಾರಿ ನೌಕರಿಯೋ ಸಿಗದಿದ್ದರೆ ಬೇರೇನಾದರೂ ದಿನದ ಅನ್ನಕ್ಕೆ ಬೇಕಾದ ಕೆಲಸ ಮಾಡಿದರೆ ಯಾರಿಗೂ ಹೊರೆಯಾಗಲಾರರು. ನಿರುದ್ಯೋಗಿಗಳಾಗಿ ಅಲೆಯುವಾಗ ತಲೆಯಲ್ಲಿ ಏನೆಲ್ಲ ಬೇಡದ ಯೋಚನೆಗಳು ಅವರನ್ನು ತಪ್ಪು ದಾರಿಗೆ ಒಯ್ಯಬಹುದು. ಅದಕ್ಕೇ ಈ ಮೇಲಿನ ಮಾತು ಹುಟ್ಟಿಕೊಂಡಿದೆ. ಇಲ್ಲಿ ಪುರುಷ ಎಂದಾಗ ಗಂಡಸು ಎಂಬರ್ಥ ಮಾತ್ರವಲ್ಲ. ಜೊತೆಗೆ ಮಹಿಳೆಯೂ ಸೇರಿ ಒಟ್ಟಾಗಿ ಮನುಷ್ಯ ಎಂದರ್ಥ ಮಾಡಿಕೊಳ್ಳಬೇಕು. ಪುರುಷ ಎಂದರೆ ಮನುಷ್ಯ ಎಂಬರ್ಥವೂ ಇದೆ. ಹಾಗೆ ಗಂಡಸಾಗಲಿ, ಹೆಂಗಸಾಗಲಿ ಕೆಲಸವಿಲ್ಲದೆ ತಿರುಗಾಡಬಾರದು. ಹಾಗೆ ಅಡ್ಡಾಡುತ್ತಿರುವಾಗ ಹೊರಗಿನ ಆಗು ಹೋಗುಗಳನ್ನು ಗಮನಿಸಿ ನಮಗೂ ಬಯಕೆಗಳು ಹೆಚ್ಚಾಗುತ್ತವೆ. ಅದನ್ನು ಪಡೆಯಲಾಗದಿದ್ದರೆ ಹೇಗಾದರೂ ಅದನ್ನು ಪಡೆಯಬೇಕೆಂಬ ದುರಾಸೆ ಹುಟ್ಟಿಕೊಳ್ಳುತ್ತದೆ. ಮಾಡಬಾರದ ಕೃತ್ಯಗಳನ್ನು ಮಾಡಿಸುತ್ತದೆ. ಆಗ ನ್ಯಾಯಾನ್ಯಾಯಗಳ ಪರಿವೆಯಿರುವುದಿಲ್ಲ. ವಿವೇಚನೆ ಕಳಕೊಂಡರೆ ಮತ್ತೆ ಪಿಶಾಚಿಯೇ ಆಗಿಬಿಡುತ್ತಾನೆ(ಳೆ). ಅದರಿಂದಲೇ ಅವರ ತಲೆ ಪಿಶಾಚಿಗಳ ಕಾರ್ಖಾನೆಯಾಗುತ್ತದೆ ಎಂದು ಹಿರಿಯರು ಹೇಳಿದರು.
    ಜನಸಂಖ್ಯೆ ಹೆಚ್ಚಾದಂತೆ  ಬೆಳೆಸುವ ಆಹಾರ ಸಾಕಾಗುವುದಿಲ್ಲ. ಇದ್ದುದನ್ನು ಹಂಚಿ ತಿನ್ನುವ ಬುದ್ಧಿ ಎಲ್ಲರಲ್ಲಿಯೂ ಇರುವುದಿಲ್ಲ. ತನ್ನ, ತನ್ನ ಕುಟುಂಬದ ಆದಾಯವನ್ನು ಹೆಚ್ಚಿಸಿ ಸುಖವಾಗಿ ಬೇಕೆಂಬ ಆಸೆ ಎಲ್ಲರಲ್ಲಿಯೂ ಇರುವುದು ಸಹಜ. ಹಿಂದಿನ ಕಾಲದಲ್ಲಿದ್ದ ಜೊತೆ ಕುಟುಂಬ  ಈಗ ಹೋಗಿದೆ. "ಮಿತ ಸಂತಾನ"ವೆಂಬ ಧ್ಯೇಯ ವಾಕ್ಯವಿದ್ದರೂ ಜನಸಂಖ್ಯೆ ಹೆಚ್ಚುತ್ತಾ ಸಾಗಿದೆ. ಹಳ್ಳಿಯಲ್ಲಿ ಕೆಲಸ ಮಾಡಲು ವಿದ್ಯಾವಂತ ತರುಣರಿಗೆ ಇಷ್ಟವಿಲ್ಲ. ಧಾರಾಳ ಆದಾಯವಿರುವವರು ಐಷಾರಾಮಿ ಜೀವನದ ದಾಸರಾಗುತ್ತಾರೆ. ಖರ್ಚು ಹೆಚ್ಚಾಗಿ, ಬೆಳೆದ ಬೆಳೆಗೆ ಸಿಗುವ ಬೆಲೆ ಸಾಕಾಗುವುದಿಲ್ಲ. ಈಗ ಅಡಿಕೆಗೆ ಬೆಲೆ ಹೆಚ್ಚಾದರೂ ಪೇಟೆಯ ಜನಜೀವನಕ್ಕೆ ಮಾರುಹೋಗಿ ನಮ್ಮ ಅಗತ್ಯಗಳು ಹೆಚ್ಚಾಗಿ ಬರುವ ಆದಾಯ, ಜೀವನ ವೆಚ್ಚಕ್ಕೆ ಸಾಕಾಗುವುದಿಲ್ಲ. ಕೂಲಿಯವರೂ ಇಂತಹ ವ್ಯಾಮೋಹಕ್ಕೆ  ಬಲಿಯಾಗಿ ಕೂಲಿ ಹೆಚ್ಚು ಸಿಗಬೇಕೆನ್ನುತ್ತಾರೆ.  ಕೂಲಿ ಜನರ ಮೂಲಕವೇ  ಕೃಷಿ ಮಾಡಿಸುವ ಶ್ರೀಮಂತರು ಬೆಳೆದ ಬೆಳೆಗೆ ಸಿಕ್ಕಿದ ಆದಾಯದ ಅರ್ಧಾಂಶಕ್ಕಿಂತ ಹೆಚ್ಚು ಕೂಲಿ ಕೊಡಬೇಕು. ಆಗ ಬೆಳೆಯ ಬೆಲೆ ಇನ್ನೂ ಹೆಚ್ಚಾಗಬೇಕೆಂಬ ಅನಿಸಿಕೆ. ಅಂತೂ ಮನುಷ್ಯನಿಗೆ ತೃಪ್ತಿಯೆಂಬುದಿಲ್ಲ. ಸಮಸ್ಯೆಯ ಪರಿಹಾರಕ್ಕಾಗಿ ಯೋಚನೆ ಮಾಡುವುದೇ ಉದ್ಯೋಗ ಆಗಿಬಿಟ್ಟಿದೆ. ಆಗ  ನೆನಪಾಗುವ ಗಾದೆ "ಕಾಲಿಗೆಳೆದರೆ ತಲೆಗಿಲ್ಲ, ತಲೆಯ ಕಡೆಗೆಳೆದರೆ ಕಾಲಿಗಿಲ್ಲ". ಜೀವನ  ಸಮಸ್ಯೆ  ಬಿಗಡಾಯಿಸುತ್ತದೆ.
    ಸರಕಾರಿ ನೌಕರರಾದರೂ ಅವರ ಮನೆ ಬಾಡಿಗೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಕೊಂಡುಕೊಳ್ಲ್ಳುವ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಸಿಕ್ಕಿದ ಸಂಬಳ ಸಾಕಾಗುವುದಿಲ್ಲ. ಆಗ ಹೆಚ್ಚಿನ ಸಂಪಾದನೆಗೆ ಅಡ್ಡ ಹಾದಿಹಿಡಿಯುತ್ತಾರೆ. ಬೆಳೆಗೆ ಸರಿಯಾದ ಬೆಲೆ ಕೃಷಿಕನಿಗೆ ಸಿಗುವಾಗ, ಪೇಟೆ ಪಟ್ಟಣಗಳಲ್ಲಿ ವಾಸ ಮಾಡುವವರು ಕೊಳ್ಳುವ ವಸ್ತುವಿಗೆ ಬೆಲೆ ಹೆಚ್ಚಾಗುತ್ತದೆ .ಮತ್ತೆ ಕೊಂಡುಕೊಳ್ಳುವ ಇತರ ಜೀವನಾವಶ್ಯಕ ವಸ್ತುಗಳಿಗೂ ಬೆಲೆ ಹೆಚ್ಚು ಕೊಡಬೇಕು. ಅವರೂ ಲಾಭ ಹೆಚ್ಚು ಸಿಗಬೇಕೆಂಬ ಆಸೆಯಿಂದ  ಬೆಲೆ ಹೆಚ್ಚು ಮಾಡುತ್ತಾರೆ. ಒಂದಕ್ಕೊಂದು ಹೊಂದಾಣಿಕೆಯಾಗುವುದಿಲ್ಲ. ಹಿಂದೊಂದು ಕಾಲದಲ್ಲಿ ವಿನಿಮಯ ಪದ್ಧತಿಯಿತ್ತಂತೆ. ಕೃಷಿಕ ಬೆಳೆದ ಬೆಳೆಯನ್ನು ಇತರ ಉದ್ಯೋಗಿಗಳಿಗೆ ಕೊಡುವುದು. ಇತರ ಗ್ರಾಹಕರೂ ತಮಗೆ ಬೇಕಾದುದನ್ನು ತೆಕ್ಕೊಂಡು ತನ್ನಲ್ಲಿದ್ದುದನ್ನು ಇತರರಿಗೆ ಕೊಟ್ಟು ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದು. ಎಲ್ಲರೂ ಅವರವರ ಉದ್ಯೋಗದಲ್ಲಿ ಲೀನರಾಗುತ್ತಿದ್ದರು. ಹೀಗೆ ನಡೆಯುತ್ತಿದ್ದ ಸಾಮಾಜಿಕ ವ್ಯವಸ್ಥೆಯೇ ಬದಲಾಗಿ ಹೋಯಿತು. ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆಯಿಲ್ಲ. ಈ ಮೇಲಾಟದಿಂದ ಬಡವನಾದವನು ಹೆಚ್ಚು ಸೋಲುತ್ತಾನೆ. ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ನೌಕರರೂ, ಕೃಷಿಕ ವರ್ಗವೂ ಮೇಲಾಟದಿಂದ ಸತ್ಯಾಗ್ರಹ ನಡೆಸುವುದು ನಿತ್ಯದ ಮಾತಾಯಿತು. ಪ್ರತಿದಿನವೂ ಒಂದೊಂದು ಹೊಸಬಗೆಯ ಸತ್ಯಾಗ್ರಹ! ಗಾಂಧೀಜಿಯವರು ಕಂಡಿದ್ದ ಈ "ಸತ್ಯಾಗ್ರಹ"ದ ಅರ್ಥವೇ ಬದಲಾಗಿ ಬಿಟ್ಟಂತಿದೆ. ಈ ಚಳುವಳಿಗಳಿಂದ  ಸೋತು ಹೋಗುವುದು ದೀನ ದಲಿತರೇ ಆಗಿರುತ್ತಾರೆ. ಈಗಿನ ನಿಯಮಗಳಂತೆ ಪ್ರತಿಯೊಂದು ವಿಷಯಕ್ಕೂ ಕಚೇರಿಗಳನ್ನು ಹುಡುಕಾಡಿಕೊಂಡು ಅಲೆಯುವುದೂ ನಿತ್ಯದ ಮಾತಾಗುತ್ತದೆ. ಹಾಗೆ ಹೋದವರು ಮತ್ತೆ ಮನೆಗೆ ಬರುವುದಕ್ಕೆ ಈ ಚಳುವಳಿಗಳು ಅಡ್ಡಿಯಾಗುತ್ತವೆ.  ಆಫೀಸುಗಳಿಗೆ ಒಮ್ಮೆ ಹೋಗಿ ಕೆಲಸ ವಾಗದಿದ್ದರೆ ಅಲೆದಾಡುವುದೇ ದೈನಂದಿನ ಉದ್ಯೋಗವಾಗುತ್ತದೆ.
    ಹಿಂದಿನ ಒಂದು ಕತೆಯ ನೆನಪಾಗುತ್ತದೆ. ನಿರುದ್ಯೋಗಿಯೊಬ್ಬ ಅಲ್ಲಲ್ಲಿ ಅಲೆದಾಡುವುದನ್ನು ವೇಷ ಮರೆಸಿ ಸುತ್ತಾಡಿದ ರಾಜ ತಿಳಿದ. ಅವನನ್ನು ಕರೆಸಿ ಯಾಕೆ ಸುಮ್ಮಗೆ ಅಲೆದಾಡುತ್ತಿದ್ದೀಯ? ಎಂದು ಕೇಳಿದ್ದಕ್ಕೆ ಆತ, "ಕೂಲಿಯೋ ಅಥವಾ ಇನ್ನಿತರ ಕೆಲಸ ಮಾಡಲು ಇಷ್ಟವಿಲ್ಲ. ಅದಕ್ಕೆ ನಿಮ್ಮ ಕೈಕೆಳಗೆ ಒಂದು ಕೆಲಸ ಪಡೆಯಲು ಅವರನ್ನು, ಇವರನ್ನು ಕಾಣಲು ಹೋಗುತ್ತಿದ್ದೇನೆ" ಎ೦ದ. "ನನ್ನನ್ನು ಕೇಳದೆ ಅಲ್ಲೆಲ್ಲ ತಿರುಗಾಡಿದರೆ ನಿನಗೆ ಕೆಲಸ ಸಿಕ್ಕೀತೇ? ಏನಾದರೂ ಕೆಲಸ ಮಾಡುತ್ತೀಯಾ? ಹಾಗಾದರೆ  ನಾಳೆಯಿಂದ ನೀನು ಸಮುದ್ರ ದಂಡೆಗೆ ಹೋಗಿ ಇಡೀ ದಿನದಲ್ಲಿ ದಂಡೆಗೆ ಅಪ್ಪಳೀಸುವ ತೆರೆಗಳ ಲೆಕ್ಕ ತೆಗೆದು ಸಂಜೆ ನನಗೊಪ್ಪಿಸು, ದಿನಕ್ಕೆ ಒಂದು ರೂಪಾಯಿ ಸಂಬಳ," ಎಂದನಂತೆ ರಾಜ. ಸರಿ, ಮರುದಿನ  ಆತ ಕಡಲ ದಂಡೆಗೆ ಹೋದ. ಮೀನು ಹಿಡಿಯಲು  ದೋಣಿಗಳು ಬರುವುದು ಹೋಗುವುದು ನಡೆದಿತ್ತು. ಅವನು ಅವರನ್ನು ಕರೆದು ಯಾರೂ ನನ್ನನ್ನು ಕೇಳದೆ ಇವತ್ತು ದೋಣಿ  ಇಳಿಸಬಾರದು. ತೆರೆಗಳ ಲೆಕ್ಕ ತೆಗೆಯಲು ರಾಜನ ಅಪ್ಪಣೆಯಾಗಿದೆ. ನಿಮ್ಮ ದೋಣಿಗಳಿಂದ ಲೆಕ್ಕ ತಪ್ಪಿ ಹೋಗಬಹುದು" ಎಂದು ಬಿಟ್ಟನಂತೆ. ಅಂಬಿಗರು  ಕಂಗಾಲು. ಏನಾದರೂ ಮಾಡಿ ದೋಣಿ ಕಡಲಿಗಿಳಿಯದಿದ್ದರೆ ಜೀವನ ಹೇಗೆ? ಎಂದು ಗಾಬರಿಯಾದರು. ಕಡೆಗೆ ಎಲ್ಲರೂ ಒಟ್ಟಾಗಿ ಅವನನ್ನು ಕಂಡು ಒಂದು ದೋಣಿಗೆ ಇಷ್ಟೆಂದು ಲೆಕ್ಕ ಮಾಡಿ ಸಂಜೆಗೆ ಹಣ ಒಪ್ಪಿಸುತ್ತೇವೆಂದು ಮಾತು ಕೊಟ್ಟು ದೋಣಿಗಳನ್ನು ಬಿಟ್ಟರು. ಒಂದೇ ದಿನದಲ್ಲಿ ಅವನಿಗೆ ಸಾಕಷ್ಟು ಸಂಪಾದನೆ. ರಾಜನಿಗೆ ಇದು ತಿಳಿದು ಅವನನ್ನು ಕರೆದ. ಹೊಸತೊಂದು ಮಾರ್ಗದ ನಕ್ಷೆ ಮಾಡಲು ಹೇಳಿದ. ಕೆಲಸಕ್ಕೆ ಹೊರಟವನು ದಾರಿಯನ್ನು ಗುರುತಿಸಲು ಅಳತೆಗೆ ತೊಡಗಿದ.ಇವನು ಚೈನು ತೆಗೆದುಕೊಂಡು ಅಳತೆಗೆ ಬರುವುದು ಜನಕ್ಕೆ ಗೊತ್ತಾಯಿತು. ದಾರಿಯಲ್ಲಿ ನಮ್ಮ ಮನೆ ಹೋಗಬಾರದು, ನನ್ನ ಗದ್ದೆ ಹೋಗಬಾರದೆಂದು ಅವನನ್ನು ಕಂಡು ಹೇಳಿದರು. ಅದಕ್ಕೆ ಇಷ್ಟಿಷ್ಟು ಕೊಡಿ ಎಂದ. ರಾಜನ ಸಂಬಳದೊಂದಿಗೆ ಆದಿನದ ಆದಾಯ ತುಂಬಾಸಿಕ್ಕಿತು. ಒಟ್ಟಿನಲ್ಲಿ ಇವನಿಂದ ರಾಜನಿಗೆ ಸರಕಾರಿ ಕೆಲಸದಲ್ಲಿ ಸಿಗುವ ಅಡ್ಡ ಸಂಪಾದನೆಯ ಕುರಿತು ಗೊತ್ತಾಯಿತು. ತನ್ನ ಆಢಳಿತೆಯ ದೋಷ ಗೊತ್ತಾಗಿ ಸರಿಪಡಿಸಬೇಕೆಂದುಕೊಂಡ.
    ಸರಕಾರಿ ಕೆಲಸವಾಗಲಿ, ಇತರ ಯಾವುದೇ ಕೆಲಸವಾಗಲೀ ಸಿಗುವ ಸಂಬಳ ಸಾಲದೆ ಅಡ್ಡ ಸಂಪಾದನೆ ಮಾಡಿ ಸುಖ ಜೀವನದ ರುಚಿ ಕಂಡವರು ಇನ್ನೂ ಹೊಸ ಹೊಸ ದಾರಿಗಳನ್ನು ಹುಡುಕುತ್ತಾರೆ. ಸರಕಾರವೇ ಆಯಾ ಪಕ್ಷ ಪಂಗಡಗಳ ಆದಾಯ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ, ರಾಷ್ಟ್ರದ, ರಾಜ್ಯದ ಹಿತವನ್ನು ಕಡೆಗಣಿಸಿದರೆ ಆಣ್ಣಾ ಹಜಾರೆಯಂಥವರ ಬಿರುಸಿನ ಹೋರಾಟ ಪ್ರಯೋಜನವಾಗುವುದೇ? ದೇಶದಲ್ಲಿ ಸಾವಿರಾರು ಹಜಾರೆಗಳು ಹೋರಾಟ ನಡೆಸಿದರೂ ಸರಕಾರವೇ ಅಡ್ಡ ದಾರಿಯಿಂದ ಸರಕಾರ ಉಳಿಸಲು ಪ್ರಯತ್ನಿಸುತ್ತಿರುವಾಗ ಸಮುದ್ರದಲ್ಲಿ ಹಿಂಗು ಕರಗಿಸಿದಂತಲ್ಲವೇ? ಜನರೇ ಒಗ್ಗಟ್ಟಾಗಿ ಸಾಮೂಹಿಕ ಪ್ರಯತ್ನ ಮುಂದುವರಿಸಿದರೆ ಸಾರ್ಥಕವಾದೀತೋ ಏನೋ? ರಾಷ್ಟ್ರವ್ಯಾಪೀ ಆಂದೋಲನ ನಡೆದರೆ, ಚುನಾವಣೆಯಲ್ಲಿ ನಿಜವಾದ ಜನಪರ ಸದಸ್ಯರನ್ನೇ ಆರಿಸಿ ಕಳಿಸಿದರೆ ಆದೀತೋ ಏನೋ? ಅಧಿಕಾರಿಗಳ, ಧುರೀಣರ ಸಾಮೂಹೊಕಪ್ರಯತ್ನ ಫಲಕೊಡಬಹುದು. ಸ್ವಾತಂತ್ರ್ಯಾನಂತರ ಬಂದ ಎಲ್ಲ ಸರಕಾರಗಳೂ ಜನಹಿತಕ್ಕಾಗಿ ದುಡಿಯಲಿಲ್ಲ. ಇದರಿಂದಾಗಿ ರಾಷ್ಟ್ರಾಭಿವೃದ್ಧಿ  ಕನಸಿನ ಮಾತಾಯಿತು. ಕೆಲವರಿಗೆ ಕಳ್ಳತನ, ಮೋಸ, ದರೋಡೆಗಳೇ ಉದ್ಯೋಗವಾಗಿದೆ. ಒಂದು ವಿಭಾಗ ನಕ್ಸೆಲಗಳಾದರೆ ಇನ್ನೊಂದು ಗುಂಪು ಉಗ್ರಗಾಮಿಗಳಂತೆ ಸಮಾಜಕ್ಕೆ ಮಾರಕವಾಗಿವೆ.
    ಜನ ನಾಯಕರು ಮಾತ್ರವಲ್ಲ, ದೇಶದ ಪ್ರತಿಯೊಬ್ಬನೂ ನಿಸ್ವಾರ್ಥಿಗಳಾಗಿ ದೇಶಹಿತಕ್ಕಾಗಿ ದುಡಿದರೆ  ಅಸಾಧ್ಯವಾದುದು ಯಾವುದು? ಪತ್ರಿಕೆಗಳ ಟಿವಿ.ಗಳ ಜಾಹೀರಾತು ನೋಡಿ ನಮ್ಮ ಬೇಕು ಬಯಕೆಗಳನ್ನು ಹೆಚ್ಚು ಮಾಡಬಾರದು. ಉದ್ಯೋಗಕ್ಕಾಗಿ ಹೊರಗೆ ಅಲೆದಾಡದೆ ಸ್ವಂತ ಉದ್ಯೋಗಗಳನ್ನು
ತಾವೇ ಸೃಷ್ಟಿಸಿಕೊಳ್ಳಬೇಕು. ಹಿಂದಿನವರು  "ಉತ್ತಮಂ ಕುಶಲ ವಿದ್ಯಾನಾಂ, ಮಧ್ಯಮಂ ಕೃಷಿ ವಾಣಿಜಂ" ಎಂದು ಹೇಳಿದ್ದಾರೆ. ಇನ್ನೊಬ್ಬರ (ಸರಕಾರದ್ದೇ ಇರಬಹುದು) ಕೈಕೆಳಗೆ ಕೆಲಸ ಮಾಡುವುದು ಹಿಂದಿನವರ ಅಭಿಪ್ರಾಯದಲ್ಲಿ  ಅಧಮತನವಂತೆ! ಹಿಂದಿನ ಕಾಲದ ಕಲಿಕೆಯಲ್ಲಿ  ಬರೇ ಓದು, ಬರಹ, ಲೆಕ್ಕ ಮಾತ್ರವಿತ್ತು. ಇಂದಿನ ಕಲಿಕೆ ಉದ್ಯೋಗಾಧಿಷ್ಟಿತವಾಗಿದೆ. ಕೃಷಿ ವಾಣಿಜ್ಯವೂ ಕೆಲಸವೇ! ಏನಾದರೂ  ಬುದ್ಧಿವಂತಿಕೆಯಿಂದ  ಸ್ವಂತ ಕೆಲಸ ಮಾಡುವುದೇ ಉತ್ತಮವಂತೆ. ಅಂತೂ ಯಾವುದಾದರೂ ಉದ್ಯೋಗದಲ್ಲಿ  ತೊಡಗಿರಬೇಕಾದುದು ಮಾನವನ ಕರ್ತವ್ಯ.  "ಕಾಯಕವೇ ಕೈಲಾಸ" ಎಂದು ಸಾಮೂಹಿಕ ಪ್ರಯತ್ನ ನಡೆಸಿದರೆ ಮಹಾತ್ಮರ ಕನಸು ನೆನಸಾಗುವುದು ಕಷ್ಟದ ಮಾತಲ್ಲ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ದುಡಿಮೆಯ ಮಹತ್ವ ತಿಳಿಸಬೇಕು. ಅವರವರ ಅನ್ನವನ್ನು ಇತರರಿಗೆ ದ್ರೋಹವಾಗದಂತ ಹೇಗೆ ಪಡೆಯಬಹುದು?   ಜನತಂತ್ರದಲ್ಲಿ ನಿಸ್ವಾರ್ಥ ಸೇವೆ ಹೇಗೆ ಮಾಡಬೇಕು? ಎಂದೆಲ್ಲ ತಿಳಿಯಹೇಳಿದರೆ  ಮುಂದಿನ ಜನಾಂಗದ ನವ ನಿರ್ಮಾಣವಾಗುವುದು ಸಾಧ್ಯವಾಗಬಹುದೆಂದು ಕಾಣುತ್ತದೆ. ಶಿಕ್ಷಣ ಪದ್ಧತಿ  ಸುಧಾರಿಸಿದರೆ  ಮುಂದಿನ ಜನಾಂಗದ ಸುಧಾರಣೆಯಾಗುತ್ತದೆ. ಈಗ ಬರೇ ಉದ್ಯೋಗಕ್ಕಾಗಿ ವಿದ್ಯೆ ಎಂದಾಗಿದೆ.  ಹಿಂದಿನ ಪದ್ಧತಿ "ಮಾಡಿ ಕಲಿ, ನೋಡಿ ಕಲಿ" ಎಂಬುದಾಗಿತ್ತು. ಈಗ ಕೆಟ್ಟುದನ್ನೇ "ನೋಡಿ ಕಲಿ"ಯುತ್ತಾರೆ. ವ್ಯವಸ್ಥೆಯನ್ನೇ ಬದಲಾಯಿಸಬೇಕು. ಹಳೆಯದರೊಂದಿಗೆ  ನಮಗೆ ಹೊಸತೂ ಬೇಕು. ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು ಆಗುತ್ತದೆ. ಹಿರಿಯರ ದ್ಯೇಯವಾಕ್ಯ, "ಉದ್ಯೋಗಂ ಪುರುಷ ಲಕ್ಷಣಂ" ಪಾಲನೆಯಾದರೆ ದೇಶ ಸುಭಿಕ್ಷ! ನಾವು ಮಾತ್ರವಲ್ಲ, ನಮ್ಮಂತೆ ಎಲ್ಲರೂ  ಉದ್ಯೋಗಿಗಳಾದರೆ ಇಂದು ದೇಶಕ್ಕೆ ಅಂಟಿದ ಪಿಡುಗು ನಿವಾರಣೆಯಾಗಬಹುದು. "ಲೋಕಾಸ್ಸಮಸ್ತಾಃ ಸುಖಿನೋ ಭವಂತು." 
            

No comments:

Post a Comment