Monday, April 23, 2012

ಊಟಕ್ಕಿಲ್ಲದ ಉಪ್ಪಿನಕಾಯಿ

ಊಟಕ್ಕಿಲ್ಲದ ಉಪ್ಪಿನ ಕಾಯಿ

    ಕೆಲವರಿಗೆ ಊಟಕ್ಕೆ ಉಪ್ಪಿನ ಕಾಯಿ ಬೇಕೇ ಬೇಕು. ಉಪ್ಪಿನ ಕಾಯಿ  ಊಟದ ಸಂದರ್ಭ ಬೇಕಾದ ಒಂದು ಅನಿವಾರ್ಯ ಪದಾರ್ಥ ಎಂಬುದೇನೋ ಸರಿ. ಆದರೆ ಉಪ್ಪಿನ ಕಾಯಿಯಿಲ್ಲದೆಯೂ  ಊಟ ಮಾಡಬಹುದು ಖಂಡಿತ. ಹಲವರು ಬೇರೆ ಅನೇಕ ಪದಾರ್ಥಗಳಿದ್ದರೂ ಉಪ್ಪಿನ ಕಾಯಿಯಿಲ್ಲವಾದರೆ ಮುಖ ಸಿಂಡರಿಸುತ್ತಾರೆ. ಅವರಿಗೆ ಊಟದ ಕೊನೆಗೆ ಮಜ್ಜಿಗೆ ಊಟ ಮಾಡಲು ಉಪ್ಪಿನಕಾಯಿ ಬೇಕೇ ಬೇಕು. ಕೆಲವರಿಗೆ ನಿತ್ಯ ಜೀವನದಲ್ಲಿ ಚಾ ಅಥವಾ ಕಾಫಿ ಅನಿವಾರ್ಯ. ಕಾಫಿಯಂತೆ ಉಪ್ಪಿನಕಾಯಿ ತಿನ್ನದಿದ್ದರೆ ತಲೆ ಸಿಡಿಯುವುದೋ ಅಥವಾ ಇನ್ನೇನೋ ತೊಂದರೆಯಾದೀತೆಂದಲ್ಲ. ಆದರೂ ಊಟದ  ಹೊತ್ತಿನಲ್ಲಿ ಮೊದಲು ನೆನಪಾಗುವ ಪದಾರ್ಥ ಈ ಉಪ್ಪಿನಕಾಯಿ. ಮಜ್ಜಿಗೂಟಕೆ ಲೇಸು ಎಂದು ಸರ್ವಜ್ಞ ಹೇಳಿದ್ದಾನಲ್ಲವೇ? ಅಂದರೆ ಅವನ ಕಾಲದಲ್ಲಿ ಮಜ್ಜಿಗೆ ಹೆಚ್ಚು ಪ್ರಾಮುಖ್ಯ ಪಡೆದಿತ್ತೇನೋ? ಆದರೆ ಉಪ್ಪಿನ ಕಾಯಿ ಜೊತೆಗೆ ಮಜ್ಜಿಗೆ ಊಟ ಮಾಡಿದರೆ ಊಟದ ಕಳೆಯೇ ಬೇರೆ. ಆತ ಹಾಲನ್ನ ಹೇಳಿಲ್ಲ. ಮೊಸರನ್ನ ಹೇಳಿಲ್ಲ. ಮಜ್ಜಿಗೆಗೇ ಪ್ರಾಶಸ್ತ್ಯ ಕೊಟ್ಟಿದ್ದು ಯಾಕಾಗಿರಬಹುದೆಂದು ಯೋಚಿಸಿಬೇಕಾದುದೇ. ಮಜ್ಜಿಗೆ ಜೀರ್ಣಕಾರಿ. ಹಾಗೇ ಕುಡಿದರೂ, ಅಥವಾ ಊಟಕ್ಕೆ ಉಪಯೋಗಿಸುವಾಗಲೂ ತೊಂದರೆಯಾಗದೆಂದು ವೈದ್ಯರೇ ಹೇಳುವರಲ್ಲವೇ? ನಿಂಬೆ ಉಪ್ಪಿನ ಕಾಯಿಯಂತೂ ಬರೇ ಗಂಜಿಯ ಜೊತೆಗೂ ಇಷ್ಟವಾಗುವುದು. ಹಿಂದಿನ ಕಾಲದಲ್ಲಿ ಚಾ, ಕಾಫಿ ಬರುವುದಕ್ಕೆ ಮೊದಲು ಕೂಲಿಯಾಳುಗಳೂ ಉಪ್ಪಿನ ಕಾಯಿ ತಿಂದು ನೀರು ಕುಡಿದು ಬಾಯಾರಿಕೆ ಹೋಗಲಾಡಿಸುತ್ತಿದ್ದರು. ಅಂತೂ ಉಪ್ಪಿನಕಾಯಿ ಎಲ್ಲರ ಮೆಚ್ಚಿಕೆಯ ಪದಾರ್ಥವಾಗಿದೆ.
    ಉಪ್ಪಿನ ಕಾಯಿ ಬಹುಜನರ ಇಷ್ಟದ ಪದಾರ್ಥವೆಂಬುದು ಖಂಡಿತ. ಈ ಉಪ್ಪಿನ ಕಾಯಿಯ ತಯಾರಿಯಲ್ಲಿ ಮಹಿಳೆಯರ ಕೈಚಳಕ ವಿಶಿಷ್ಟವಾದುದು. ಉಪ್ಪಿನ ಕಾಯಿಯಲ್ಲಿಯೂ ಮಾವಿನ ಕಾಯಿ, ನಿಂಬೆ ಹಣ್ಣು ಪ್ರಧಾನ ಭೂಮಿಕೆಯಲ್ಲಿವೆ. ಇವು ದುರ್ಲಭವಾದರೆ ನೆಲ್ಲಿ ಕಾಯಿ ಅಂಬಟೆ ಕಾಯಿ, ಮುಂಡಿಗಡ್ಡೆ ಮತ್ತೆ ಕೆಲವು ತರಕಾರಿಗಳನ್ನೂ ಉಪಯೋಗಿಸುವುದೂ ಇದೆ. ಅಂತೂ ಉಪ್ಪಿನ ಕಾಯಿಯೆಂದರೆ ನೆನಪಾಗುವುದು ಮಾವಿನ ಕಾಯಿಯನ್ನು. ಮಾವಿನ ಮಿಡಿ ಮೊದಲ ಸ್ಥಾನ ಪಡೆಯುತ್ತದೆ, ಸಾಧಾರಣ ಜನವರಿಯಿಂದ ಮಾರ್ಚ್  ವರೆಗೆ ಹೆಂಗುಸರಿಗೆ ಮಾವಿನ ಮಿಡಿ ಸರಿಯಾದ್ದು ಸಿಕ್ಕುವ ವರೆಗೆ ಟೆನ್ಶನ್! ಕಾಯಿಗಳ ಆಯ್ಕೆಯೇ ಪ್ರಧಾನ ಪಾತ್ರ ವಹಿಸುತ್ತದೆ. ಹೆಚ್ಚು ಬಾಳ್ವಿಕೆ ಬರುವುದು ಆಗಿರಬೇಕು. ಸಿಪ್ಪೆ ದಪ್ಪ ಇರಬೇಕು. ಒಳ್ಳೆಯ ಪರಿಮಳವಿರಬೇಕು. ಹೀಗೆ ಮಿಡಿಗಳನ್ನು ಆಯ್ದುಕೊಳ್ಳುವುದೇ ಮುಖ್ಯ. ಅಪ್ಪೆ ಮಿಡಿ ಉತ್ತರ ಕನ್ನಡದಲ್ಲಿ ಹೆಸರುವಾಸಿಯಾದ್ದು. ಅದರ ಸವಿ ತಿಳಿದು ದಕ್ಷಿಣ ಕನ್ನಡದವರೂ ಮಿಡಿಗಳನ್ನರಸಿಕೊಂಡು ಹೋಗುತ್ತಾರೆ. ಕಿಲೋ ಒಂದಕ್ಕೆ ನೂರು ರುಪಾಯಿ ಕೊಟ್ಟಾದರೂ ಅಪ್ಪೆ ಮಿಡಿ ಬೇಕು. ಮಾವಿನ ಕಾಯಿಗಳನ್ನು ಬೇಯಿಸಿಯೋ, ಹಸಿಯೋ ಅದರ ಹೊರಗಿನ ಮಾಂಸಲ ಭಾಗಗಳನ್ನು ಕೆತ್ತುತ್ತಾರೆ. ಉಪ್ಪು ಬೆರಸಿ, ಚೆನ್ನಾಗಿ ಒಣಗಿದ ಪಾತ್ರೆಗಳಲ್ಲಿ  ತುಂಬಿಸಿ ಇಡುತ್ತಾರೆ. ಏಳೆಂಟು ದಿನ ಕಳೆದರೆ, ಮತ್ತೆ ಮೆಣಸಿನ ಹುಡಿ, ಸಾಸಿವೆ  ಹುಡಿ, ಅರಸಿನಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ  ಬೆರಸುತ್ತಾರೆ. ಮತ್ತೆ ದೊಡ್ಡ ದೊಡ್ಡ ಭರಣಿಗಳಲ್ಲಿ ತುಂಬಿಸಿ ಇಡುತ್ತಾರೆ. ಉಪ್ಪಿನ ಕಾಯಿ ತಯಾರಿಯಲ್ಲಿಯೂ ಹೆಚ್ಚು ನುರಿತವರು ತಯಾರಿಸಿದರೆ ಅದರ ರುಚಿಯೇ ಬೇರೆ. ಮಿಡಿ ಉಪ್ಪಿನಕಾಯಿಯಂತೂ ಒಂದೆರಡು ವರ್ಷಗಳ ವರೆಗೆ ಉಳಿಯುವ ಪದಾರ್ಥ. ಬೇರೇನೂ ಪದಾರ್ಥವಿಲ್ಲದಿದ್ದ್ಸರೂ ಬರೇ ಉಪ್ಪಿನ ಕಾಯಿ, ಗಂಜಿ ಮಾತ್ರವಾದರೂ ಊಟ ಮುಗಿಯುವುದು. ಉಪ್ಪಿನ ಕಾಯಿ ತಯಾರಿಯ ಸಮಯ ಹೆಂಗುಸರು  ಬೇರೆ ವಿಷಯಗಳಲ್ಲಿ ತಲೆ ಹಾಕುವುದಿಲ್ಲ. ಕೆಲಸ ಮುಗಿಯುವ ವರೆಗೆ ಅವರಿಗೆ ಬೇರೆ ಕೆಲಸಕ್ಕೆ ಪುರುಸೊತ್ತೇ ಇರುವುದಿಲ್ಲ. ಈ ಮಾವಿನ ಮಿಡಿ ಕೊಯ್ಯುವವರಿಗೂ ಭಾರೀ ಡಿಮಾಂಡ್. ಮಾವಿನ ಮಿಡಿ ಸಿಗದಿದ್ದರೆ ಮತ್ತೆ ನಿಂಬೆ ಹಣ್ಣು, ಅಮಟೆ ಕಾಯಿ, ನೆಲ್ಲಿ ಕಾಯಿ ಏನೆಲ್ಲಾ ಹುಡುಕುತ್ತಾರೆ. ಅಂತೂ ಉಪ್ಪಿನಕಾಯಿ ಬೇಕೇ ಬೇಕು.
ಈ ಉಪ್ಪಿನ ಕಾಯಿಯ ತಯಾರಿಯನ್ನೇ ಉದ್ಯೋಗವಾಗಿ ಜೀವನ ಸಾಗಿಸುವವರು ಈಗ ಇದ್ದಾರೆ. ಪೇಟೆ ಪಟ್ಟಣಗಳಲ್ಲಿರುವವರಿಗೆ ಉಪ್ಪಿನಕಾಯಿ ಹಾಕಲು ಗೊತ್ತಿಲ್ಲ. ತಯಾರು ಮಾಡಲೂ ಪುರುಸೊತ್ತೂ ಇರುವುದಿಲ್ಲ.ವ್ಯವಧಾನವೂ ಇರುವುದಿಲ್ಲ. ಅದಕ್ಕೆ ಅಂಗಡಿಗಳಲ್ಲಿ ಸಿಗುವ ಉಪ್ಪಿನಕಾಯಿಗೇ ಶರಣು ಹೋಗುತ್ತಾರೆ. ದೊಡ್ಡ ದೊಡ್ಡ ಕುಳಗಳು ಉಪ್ಪಿನ ಕಾಯಿ  ವ್ಯವಸಾಯದಿಂದಲೇ ಜೀವ ಸಾಗಿಸುವುದಷ್ಟೇ ಅಲ್ಲ ಅನೇಕರಿಗೆ ಉದ್ಯೋಗವನ್ನೂ ಕೊಟ್ಟು ಅವರ ಜೀವನಕ್ಕೂ ನೆರವಾಗುತ್ತಾರೆ. ಈ ಉಪ್ಪಿನ ಕಾಯಿಯ ರುಚಿ ಹಿಡಿದವರು ವಿದೇಶಗಳಲ್ಲಿಯೂ ಇರುವುದರಿಂದ ಆ ದೇಶಗಳಿಗೂ ರಫ್ತಾಗುತ್ತದೆ. ಅಂತೂ ಉಪ್ಪಿನಕಾಯಿಯ ಸಹಾಯದಿಂದ ದೊಡ್ಡ ಕಂಪೆನಿಗಳೇ ಹುಟ್ಟಿ ಒಂದು ಲೆಕ್ಕದಳ್ಳಿ ಲೋಕವಿಖ್ಯಾತವಾಗಿದೆಯೆಂದರೆ ಅತಿಶಯೋಕ್ತಿಯಾಗುವುದೇ?
    ಊಟಕ್ಕೆ ಬೇಕೇ ಬೇಕಾದ ಉಪ್ಪಿನಕಾಯಿಯ ತಯಾರಿ, ಮಹತ್ವ ತಿಳಿದಾಯಿತು. ಉಪ್ಪಿನಕಾಯಿ ಇಲ್ಲದೇ ಊಟವಾಗದೇ? ಎಂಬುದು ಇನ್ನೊಂದು ಪ್ರಶ್ನೆ. ಉಪ್ಪಿನಕಾಯಿಯಿಲ್ಲದೆಯೂ ಊಟವಾಗಬಹುದು. ಯಾಕೆ ನಾನೂ ಊಟ ಮಾಡುತ್ತೇನೆ. ಅದಲ್ಲ ಇಲ್ಲಿ ಮುಖ್ಯ. ಉಪ್ಪಿನ ಕಾಯಿಯ ಉಪಯೋಗ ಊಟದಲ್ಲಿ ಮಾತ್ರ ಎಂಬುದಂತೂ ಸತ್ಯವಷ್ಟೆ! ಇಲ್ಲಿ ಯೋಚಿಸ ಬೇಕಾದ ಇನ್ನೊಂದು ವಿಷಯ ಹೀಗಿದೆ. ಬೇರೆ ಸಂದರ್ಭದಲ್ಲಿ ಉಪ್ಪಿನಕಾಯಿಯ ಉಪಯೋಗವಿಲ್ಲ. ಊಟಕ್ಕೆ ಬೇಕು ಉಪ್ಪಿನ ಕಾಯಿ ಖಂಡಿತ. ಉಪ್ಪಿನ ಕಾಯಿಯ ಅಗತ್ಯ ಬೀಳುವುದು ಊಟದಲ್ಲಿ ಮಾತ್ರ ಎಂಬುದೂ ನಿಜ. ಊಟಕ್ಕೆ ಅಗತ್ಯವಾದ ಉಪ್ಪಿನಕಾಯಿಯ ಹಾಗೆ ಕೆಲವರ ಸಹಾಯ ನಮಗೆ ಬೇಕಾಗಿ ಬರುವುದು ಅವರ ಅಗತ್ಯ ಬಿದ್ದಾಗ ಮಾತ್ರ.. ಕ್ರಿಕೆಟ್ ಆಟದ ಸಮಯದಲ್ಲಿ ಆಯ್ದ  ಬೌಲರ್ ಮತ್ತು ಒಳ್ಳೆಯ ಬೇಟ್ಸ್ ಮೆನ್ ಇದ್ದರೆ ಆಟದಲ್ಲಿ ಗೆಲುವು ಖಂಡಿತ. ಮೇಚ್ ನಡೆಯುವಾಗ ಬೇಕಾಗಿರುವ ಒಳ್ಳೆಯ ಆಟಗಾರರು ಮತ್ತೆ ಬಂದರೆ ಪ್ರಯೋಜನವಿದೆಯೇ? ನಾಟಕವಾಡಲು ಬೇಕಾದ ಉತ್ತಮ ನಟರು ನಾಟಕ ಕಳೆದ ಮೇಲೆ ಸಿಕ್ಕಿದರೆ ಉಪಯೋಗವಿದೆಯೇ? ನಾವು ಪರೀಕ್ಷೆಗೆ ಬರೆಯುವಾಗ ನೆನಪಿರಬೇಕಾದ ವಿಷಯ ಮತ್ತೆ ಹೊಳೆದು ಏನು ಲಾಭ? ಸಭೆ ನಡೆಯುತ್ತಿರುವಾಗ ಅಗತ್ಯ ಬೀಳುವ ಭಾಷಣಕಾರ ಮತ್ತೆ ಸಭೆ ಕಳೆದ ಮೇಲೆ ಬರುದರಿಂದ ಪ್ರಯೋಜನವಿಲ್ಲವಷ್ಟೆ! ನಾಟಕದಲ್ಲಿ ವಿದೂಷಕನ ಪಾತ್ರವೂ ಅಷ್ಟೆ. ಊಟದ ಮಧ್ಯೆ ನಂಜಿಕೊಂಡು ಚಪ್ಪರಿಸಲು ಉಪ್ಪಿನಕಾಯಿ ಬೇಕಾಗುವುದೋ ಹಾಗೆ ಅವನ ಹಾಸ್ಯ,ನಾಟಕ ನೋಡಿ ಬೇಸರ ಬಂದಾಗ ಮೆರುಗು ಕೊಡುತ್ತದೆ.
    ಉಪ್ಪಿನ ಕಾಯಿಯ ಮಹತ್ವದ ಬಗ್ಗೆ ಕೇಳಿ ದೇವತೆಗಳೂ ಬೆರಗಾಗಿದ್ದರಂತೆ. ಹಾಗೆ ನನ್ನ ಅಜ್ಜಿ ಒಂದು ಕತೆಯನ್ನೆ ಹೇಳಿದ್ದರು. ಒಬ್ಬ ಬ್ರಾಹ್ಮಣ ಹೆಚ್ಚು ಬಡವನೂ ಅಲ್ಲ, ಶ್ರೀಮಂತನೂ ಅಲ್ಲ. ಇದ್ದುದರಲ್ಲೇ ಸುಖವಾಗಿ ಜೀವಿಸಿಕೊಂಡಿದ್ದವನ ಮನೆಗೆ ಏನೋ ಅಚಾತುರ್ಯದಿಂದ ಬೆಂಕಿ ಬಿತ್ತಂತೆ. ಹಿಂದಿನ ದಿನ ತಾನೆ ಆ ಮನೆಯ ಹೆಂಗಸರು ದೊಡ್ಡ ಭರಣಿಯಲ್ಲಿ ಉಪ್ಪಿನಕಾಯಿ ಹಾಕಿದ್ದರಂತೆ. ಏನೋ ಬಹಳ ಖುಶಿಯಾಗಿ ಉಪ್ಪಿನ ಕಾಯಿ ಮಾಡಿದ ಮಾರನೆಯ ದಿನವೇ  ಹೀಗಾಯಿತು. ಮನಸ್ಸು ತಡೆಯದೆ ಬಹಳ ಇಷ್ಟದ ಉಪ್ಪಿನ ಕಾಯಿ ಭರಣಿಯನ್ನು ಬೇರೆಲ್ಲ ಬೆಲೆಬಾಳುವ ವಸ್ತುಗಳೊಂದಿಗೆ ಮನೆಯಿಂದ ಹೊರಗೆ ತಂದಿದ್ದರಂತೆ. ದಾನಿಗಳ ಸಹಾಯದಿಂದ ಆತ ಹೊಸ ಮನೆ ಕಟ್ಟಿ ಒಕ್ಕಲಾದ. ಹಳೆ ಮನೆಯಲ್ಲಿದ್ದ ತುಪ್ಪದ ಭರಣಿಯೂ ಅಗ್ನಿಗೆ ಆಹುತಿಯಾಗಿತ್ತು. ಇದರಿ೦ದ ಅಗ್ನಿ ದೇವನಿಗೂ ತೃಪ್ತಿಯಾಗಿರಬೇಕು ಎಂದು ಯೋಚಿಸಿದ್ದನು.ಆದರೆ ಬೇರೆಲ್ಲ ವಸ್ತುಗಳೊಂದಿಗೆ ಉಪ್ಪಿನ ಕಾಯಿಯನ್ನೂ ತಿನ್ನಬಯಸಿದ್ದ ಅಗ್ನಿ ದೇವನಿಗೆ ಉಪ್ಪಿನ ಕಾಯಿ ಸಿಕ್ಕಿರಲಿಲ್ಲ. ಅದಕ್ಕೆ ಅಗ್ನಿದೇವ  ಒಂದು ದಿನ ಒಬ್ಬ ಬ್ರಾಹ್ಮಣ ಅತಿಥಿಯಾಗಿ ಬಂದನಂತೆ, ಬಂದವನು  "ನಾನೊಂದು ಮನೆಗೆ ಹೋಗಿದ್ದೆ, ಸುಗ್ರಾಸ ಭೋಜನದಲ್ಲಿ ಉಪ್ಪಿನಕಾಯಿ ಸಿಕ್ಕಿರಲಿಲ್ಲ. ಆಸೆಯಿಂದ ಬಂದಿದ್ದೇನೆ. ದಯವಿಟ್ಟು ಬಡಿಸಿರಿ. ಇಲ್ಲವೆಂದುಹೇಳಬೇಡಿ. ತೃಪ್ತಿಯಿಂದ ಊಟ ಮಾಡಿ ಹೋಗುತ್ತೇನೆ" ಎಂದನಂತೆ. ಸರಿ ಉಪ್ಪಿನ ಕಾಯಿಯನ್ನೇ ಬಡಿಸಿದರು. ಊಟ ಮಾಡಿ ಹೋಗುವಾಗ,  "ಇಂದು ನನಗೆ ತೃಪ್ತಿಯಾಗಿದೆ. ನನ್ನನ್ನು ತೃಪ್ತಿ ಪಡಿಸಿದ್ದಕ್ಕೆ ಖುಶಿಯಾಗಿದೆ" ಎಂದು ಹರಸಿ ಹೋದನಂತೆ. ಅಂತೂ ಅಗ್ನಿ ದೇವನಿಗೂ ಉಪ್ಪಿನ ಕಾಯಿ ತೃಪ್ತಿ ಕೊಟ್ಟಿತು. ಮಾತ್ರವಲ್ಲ,ಸ್ವರ್ಗವಾಸಿಯಾದ ಆತನಿಗೂ ಉಪ್ಪಿನ ಕಾಯಿ ಇಶ್ಟವಎಂದು ಗೊತ್ತಾಯಿತು.ಅವನೆ ಅಲ್ಲವೆ ಉಳಿದವರಿಗೂ ನಾವು ಕೊಟ್ಟ ಹವಿಸ್ಸನ್ನು ವಿತರಣೆ ಮಾಡುವವನು! ಸ್ವರ್ಗದಲ್ಲಂತೂ ಉಪ್ಪಿನ ಕಾಯಿ ದುರ್ಲಭ!
    ನಮ್ಮ ಅಗತ್ಯಕ್ಕೆ ಬೇಕಾದ ಸಮಯ ಕಳೆದು ವಸ್ತು ಮತ್ತೆ ಸಿಕ್ಕಿದರೆ ಉಪಯೋಗವಿದೆಯೆ? ನನ್ನ ಮಗನಿಗೆ ಪರೀಕ್ಷೆ ಶುಲ್ಕ ಕಟ್ಟಲು ಹಣ ಬೇಕಿತ್ತು. ನನ್ನಲ್ಲಿಲ್ಲದುದಕ್ಕೆ ಗೆಳೆಯರೊಬ್ಬರನ್ನು ಕೇಳಿದ್ದೆ. ಕೊಡಲು ಒಪ್ಪಿದ್ದರು. ಆದರೆ ನನಗೆ ಉಪಕಾರ ಮಾಡಬೇಕೆಂದು ಬಯಸಿದ್ದ ಅವರ ಆಸೆ ಕೈಕೊಟ್ಟಿತು. ಅವರ ಬೇಂಕ್ ಎಕೌಂಟಿನಲ್ಲಿ ಸಾಕಷ್ಟು ಹಣವಿರಲಿಲ್ಲ. ಸಮಯಕ್ಕೆ ನನಗೆ  ಹಣ ಒದಗಲಿಲ್ಲ. ನಾನೇನೋ ಮತ್ತೊಬ್ಬರಲ್ಲಿ ಕೇಳಿ ಸಮಯಕ್ಕೆ ಶುಲ್ಕ ಕಟ್ಟಿದೆ. ಹಣ ಒದಗಿಸಬೇಕೆಂಬ ಪ್ರಯತ್ನವನ್ನು ಬಿಡದ ಆ ಗೆಳೆಯರು ಬೇರೆ ಯಾರಿಂದಲೋ ಸಾಲ ತಂದು ನನಗೆ ಹಣ ಒದಗಿಸಿದಾಗ ಸಮಯ ಮೀರಿತ್ತು. ಅಂದರೆ ಆ ಗೆಳೆಯರ ಹಣ ನನಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿತ್ತು. ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ. ನಮ್ಮ ಅತಿ ಸಮೀಪದ ಬಂಧುವೊಬ್ಬರು ನಮ್ಮೊಂದಿಗಿದ್ದರೆ ನಮಗೆ ಧೈರ್ಯ. ಯಾವುದೇ ಅಡೆ ತಡೆಯಿಲ್ಲದೆ ಸಮಾರಂಭ ಸುಸೂತ್ರವಾಗಿ ನಡೆದೇ ತೀರುತ್ತದೆ. ಯಾವುದೇ ಏಳು ಬೀಳುಗಳಲ್ಲಿ ನಮಗೆ ಅವರ ಸಹಾಯ ಬೇಕು. ಮೊನ್ನೆ ತಾನೆ ನಡೆದ ಒಂದು ಔತಣ ಕೂಟಕ್ಕೆ  ಏನೋ ಕಾರಣದಿಂದ ಸಾಧ್ಯವಾಗದೆ ಊಟಕ್ಕಿಲ್ಲದ ಉಪ್ಪಿನಕಾಯಿಯಾಗಿದ್ದರು. ಹೀಗೆ ನಮಗೆ ಅಗತ್ಯವಿದ್ದಾಗ ಸಿಗದ ಹಣ, ಬೇರೆ ಸಹಾಯಗಳು ಆ ಮೇಲೆ ಸಿಕ್ಕಿದರೆ ಪ್ರಯೋಜನವಿಲ್ಲ. ಅದು ಊಟಕ್ಕಿಲ್ಲದ ಉಪ್ಪಿನಕಾಯಿಯಾಗುವುದು ನಮ್ಮ ದುರದೃಷ್ಟವೋ ಏನೋ? ಊಟದ ನಡುವೆ ಉಪ್ಪಿನಕಾಯಿ ಚಪ್ಪರಿಸಿದಂತೆ ಎಂದರೆ  ಹೇಗೆ ಎಂಬುದನ್ನು ವಿಶ್ಲೇಷಿಸುವ. ಉಪ್ಪಿನಕಾಯಿಯಲ್ಲಿ ಉಪ್ಪೂ ಇದೆ. ಖಾರವೂ ಇದೆ. ಸಾಸಿವೆ ಕಾಳಿನಿಂದಾಗಿ ಸ್ವಲ್ಪ ಒಗರೂ ಇದೆ. ಮತ್ತೆ ಅರಸಿನವೂ ಆರೋಗುಅಕ್ಕು ಒಳ್ಳೆಯದು ಮತ್ತು ಬಣ್ಣಬರಲೂ ಬೇಕಲ್ಲವೇ? ಮೂರು ರುಚಿಗಳ ಸಂಗಮ ಉಪ್ಪಿನಕಾಯಿ. ಷಡ್ರಸ ಭೋಜನದ ನಡು ನಡುವೆ  ನಾಲಿಗೆ ಸಪ್ಪೆಯೆನಿಸಿದಾಗ ಉಪ್ಪಿನಕಾಯಿಯನ್ನು ಚಪ್ಪರಿಸಿಕೊಂಡರೆ  ನಮ್ಮದು ಸುಗ್ರಾಸ ಭೋಜನ! ಸಿಹಿಯೂಟ ತಿಂದಮೇಲೆ ನಾಲಗೆ ಈ ಉಪ್ಪಿನಕಾಯಿಯನ್ನು ಅಪೇಕ್ಷಿಸುವುದು ರುಚಿಗಾಗಿ ಮಾತ್ರವಲ್ಲ. ತನ್ನ ವಿಶಿಷ್ಟ ರುಚಿಯಿಂದ ಊಟದ ಸವಿಯನ್ನು ಹೆಚ್ಚಿಸಲಿಕ್ಕಾಗಿಯೆಂದರೆ ತಪ್ಪಾದೀತೆ?     


No comments:

Post a Comment