Wednesday, June 6, 2012

ಒಂದು ಜನ್ಮದಿನದ ಕೂಟ

        ಒಂದು ಜನ್ಮದಿನದ ಕೂಟ.
               
               
                    ಅಮೇರಿಕದಲ್ಲಿರುವ ಭಾರತೀಯರಿಗೆ, ತಾವು ವಿದೇಶದ ನೆಲದಲ್ಲಿ ಉದ್ಯೋಗಕ್ಕಾಗಿ ಬಂದವರು, ತಾಯ್ನೆಲವನ್ನು ಬಿಟ್ಟು ಬಂದಿದ್ದೇವೆ. ನಮ್ಮವರೆನಿಸಿದವರು ಇಲ್ಲಿ ಅಲ್ಪ ಸಂಖ್ಯಾಕರು. ನಮ್ಮೂರಿನವರ ಸಂಪರ್ಕವೇ ಇಲ್ಲವೆಂದು ಸುಮ್ಮನಾಗದೆ ಅದಕ್ಕೆ ಕೆಲವು ಕೂಟಗಳನ್ನು ಮಾಡುತ್ತಿದ್ದು, ಪರಿಸರದವರ ಸಂಪರ್ಕ ಮಾಡುವುದಕ್ಕೆ ಏನಾದರೂ ಕಾರ್ಯಕ್ರಮ ಹಮ್ಮಿಕೊಂಡು ಬಂಧುಗಳಂತಿರುವ ಅವರನ್ನು ಕರೆಯುತ್ತಾರೆ. ಅವರು ಕರೆದರೆ ಹೋಗುತ್ತಾರೆ. ಹೀಗೆ ಪರಸ್ಪರ ಬಾಂಧವ್ಯ ಇಟ್ಟುಕೊಳ್ಳುತ್ತಾರೆ. ಹಬ್ಬ ಹರಿದಿನಗಳಲ್ಲಿ ಯಾವುದಾದರೂ ಶಾಲಾ ವಠಾರದಲ್ಲಿ ಒಟ್ಟು ಸೇರಿ ಕಾರ್ಯಕ್ರಮ ಇಟ್ಟುಕೊಂಡು ಒಂದಾಗಿ ಸಂತೋಷಪಡುತ್ತಾರೆ. ಕನ್ನಡಿಗರೇ ಹೆಚ್ಚಿರುವಲ್ಲಿ ಕನ್ನಡದವರೇ ಜನ್ಮದಿನಗಳನ್ನೋ ಅಥವಾ ಬೇರೆ ದಿನಗಳನ್ನೋ ಆರಿಸಿಕೊಂಡು ರಜಾದಿನಗಳಲ್ಲಿ ಒಟ್ಟು ಸೇರುತ್ತಾರೆ. ವಠಾರದ ಮಕ್ಕಳಿಗೂ ಇಂತಹ ಕಾರ್ಯಕ್ರಮಗಳಿಂದ ಒಟ್ಟು ಸೇರಿ ಆಟವಾಡಲು ಅನುಕೂಲವಾಗುತ್ತದೆ. ಕೆಲವೊಮ್ಮೆ ಸ್ಲೀಪ್ ಓವೆರ್ ಎಂದು ಮಕ್ಕಳು ಬೇರೆ ಗುರುತಿನವರ ಮನೆಗಳಲ್ಲಿ ರಾತ್ರಿ ಉಳಕೊಳ್ಳುವುದರಿಂದ ಪರಿಚಯದ ಕೊಂಡಿ ಬೆಳೆಯುತ್ತದೆ. ಸ್ವಲ್ಪ ಸ್ವಲ್ಪ ಧಾರ್ಮಿಕ ವಿಚಾರಗಳೂ ಮಕ್ಕಳಿಗೆ ತಿಳಿಯಬಹುದಾಗಿದೆ.  ಮತ್ತೆ ಬೇಸಿಗೆಯಲ್ಲಿ ಸಮಯ ಸಿಕ್ಕಿದಾಗೆಲ್ಲ ಟೆನ್ನಿಸ್ ಆಟ ಇದ್ದೇ ಇರುತ್ತದೆ. ಅಂತೂ ವಿವಿಧ ರೀತಿಯಲ್ಲಿ ಒಬ್ಬರಿಗೊಬ್ಬರು ಹುಟ್ಟೂರಿನವರ ಸಂಪರ್ಕ ಇಟ್ಟುಕೊಂಡು ಸುಖವಾಗಿ ನೆಮ್ಮದಿಯಿಂದ ಕಾಲ ಕಳೆಯುವುದನ್ನು ನೋಡಿದರೆ ಹೆಮ್ಮೆಯೆನಿಸುತ್ತದೆ.
            ಯುಗಾದಿ ಕೂಟ, ಗಣೇಶ ಚೌತಿಯ ಕೂಟ, ನವರಾತ್ರಿಯ ಕೂಟಗಳಲ್ಲದೆ ತಿಂಗಳಿಗೊಮ್ಮೆಯೋ ಹದಿನೈದು ದಿನಕ್ಕೊಮ್ಮೆಯೋ ಭಜನೆ ಕಾರ್ಯಕ್ರಮಗಳು, ಜನರನ್ನು ಒಂದೆಡೆ ಸೇರಿಸುತ್ತದೆ.ಇನ್ನು ಇಲ್ಲಿಯ ದೇವಾಲಯಗಳೂ ಭಾರತೀಯರಿಗಾಗಿಯೇ ನಿರ್ಮಾಣವಾಗಿದ್ದು, ಭಕ್ತ ಜನರಿಗೆ ನಮ್ಮ ಧಾರ್ಮಿಕ ಪದ್ಧತಿಯ ನೆನೆಪನ್ನು ಉಳಿಸಲು ಸಹಾಯ ಮಾಡುತ್ತವೆ. ತಿಂಗಳಿಗೊಮ್ಮೆ ಪ್ರತಿಯೊಬ್ಬನೂ ಪರಿಸರದ ದೇವಾಲಯಗಳಿಗೆ ಭೇಟಿಕೊಡುತ್ತಾರೆ. ಮಾತ್ರವಲ್ಲ ಹೋಮ, ವಿಶೇಷ ಪೂಜೆಗಳನ್ನು ಹಮ್ಮಿಕೊಂಡು ಜನರಿಗೆ ಒಟ್ಟುಗೂಡುವುದಕ್ಕೆ ಅವಕಾಶಮಾಡಿಕೊಡುತ್ತವೆ. ಹೆಚ್ಚಾಗಿ ಜನ್ಮ ದಿನಗಳ ಕೂಟಗಳು ಮನೆಗಳಲ್ಲಿ ನಡೆಯುವುದಿಲ್ಲ. ಚಕ್ ಇ ಚೀಸ್ ಗಳಲ್ಲಿಯೋ ರೆಸ್ಟೋರೆಂಟ್ ಗಳ ಲ್ಲಿಯೋ ನಡೆಯುತ್ತವೆ. ಮಗುವಿನ ಎರಡನೆ ಜನ್ಮ ದಿನ ಹೆಚ್ಚು ಗೌಜಿಯದಾಗಿರುತ್ತದೆ. ಅವರ ಮನೆಗಳಲ್ಲಿಯೋ,ಅಥವಾ ರೆಸ್ಟೋರೆಂಟ್ ಗಳಲ್ಲಿಯೋ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ. ಬರುವವರು ಏನಾದರೂ ಗಿಫ್ಟ್ ತರುವುದು ಪದ್ಧತಿ. ತಂದು ಶುಭಾಶಯ ಹೇಳಿ ಹೋಗುತ್ತಾರೆ. ಹೆಚ್ಚಾಗಿ ಚೆಕ್ ಇ ಚೀಸ್ ನಲ್ಲಿ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಹತ್ತಿಪ್ಪತ್ತು ಮಕ್ಕಳಿದ್ದರೆ ಒಬ್ಬೊಬ್ಬರಿಗೆ ಕಾಲು ಡಾಲರಿನ ಹತ್ತೋ ಇಪ್ಪತ್ತೋ ನಾಣ್ಯಗಳನ್ನು ಕೊಡುತ್ತಾರೆ. ಮಕ್ಕಳು ಆ ನಾಣ್ಯಗಳನ್ನು ತೆಗೆದುಕೊಂಡು ಆಟದ ಜಾಗಕ್ಕೆ ಹೋದರೆ ಆ ನಾಣ್ಯಗಳು ಮುಗಿಯುವ ವರೆಗೆ ವಿವಿಧ ಆಟಗಳನ್ನು ಆಡಿ ನಾಣ್ಯಗಳನ್ನು ಮುಗಿಸುತ್ತಾರೆ. ಒಂದೊಂದು ಆಟಕ್ಕೆ ಒಂದೊಂದು ನಾಣ್ಯ ಮುಗಿಯುತ್ತದೆ. ಆಡಿದವರಿಗೆ ಏನೋ ಸ್ವಲ್ಪ ಪೋಯಿಂಟ್ ಸಿಗುತ್ತದೆ. ನೂರಿನ್ನೂರು ಪೊಯಿಂಟ್ ಕೂಡಾ ಕೆಲವರಿಗೆ ಸಿಗುವುದಿದೆ. ಹಾಗೆ ಸಿಕ್ಕಿದವರಿಗೆ ಖುಷಿಯೋ ಖುಷಿ. ಆದರೆ ಸಿಗುವುದು ಮಾತ್ರ ಏನೋ ಚಿಕ್ಕ ಆಟದ ಸಾಮಾನು. ತಲಾ ಐದಾರು ಡಾಲರ್ ಖರ್ಚು ಮಾಡಿದರೆ ಸಿಗುವುದು ಒಂದು ಡಾಲರಿನಷ್ಟು ಬೆಲೆಯ ವಸ್ತುವೂ ಸಿಗುವುದಿಲ್ಲವಾದರೂ ಮಕ್ಕಳಿಗೆ ಅಲ್ಲಿ ಆಡುವುದೆಂದರೆ ಇಷ್ಟವೆಂಬ ಕಾರಣಕ್ಕೆ ದಿನಾಚರಣೆಗೆ ಕರೆದವರು ಹೀಗೆ ಖರ್ಚು ಮಾಡುವುದು ಸಾಮಾನ್ಯ. ಮತ್ತೆ ಎಲ್ಲರನ್ನೂ ಕರೆದು ಕೇಕ್ ಕಟ್ ಮಾಡುವುದು. ಅದನ್ನು ತಿನ್ನುವುದು,ಆದಮೇಲೆ ಪಿಸ್ಜಾ, ಕುಡಿಯುವುದಕ್ಕೆ ಹಣ್ಣಿನ ರಸ ಹೀಗೆ ನಡೆಯುತ್ತದೆ ದಿನಾಚರಣೆ. ಅಂತು ಹೀಗಾದರೂ ಮಾಡದಿದ್ದರೆ ಅವರ ಗೌರವಕ್ಕೆ ಕೊರತೆ ಎಂಬ ಭಾವನೆ. ಎಲ್ಲರೂ ಹೀಗೆ ಮಾಡುವಾಗ, ನಮ್ಮನ್ನು ಕರೆದರೆ ನಾವು ಹೋಗುವುದು. ಮತ್ತೆ ನಾವು ಅವರನ್ನು ಕರೆಯುವುದು. ಒಟ್ಟಾರೆ ಅಂಗಡಿಯವರಿಗೆ ಲಾಭವೋ ಲಾಭ! ಇಷ್ಟಾದರೂ ಮಾಡದಿದ್ದರೆ ಮಕ್ಕಳೇ ಅವರವರು ಮಾತಾಡಿಕೊಳ್ಳುತ್ತಾರೆ.
 ತಮ್ಮ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರೆ ಮಕ್ಕಳಿಗೆ ಖುಶಿಯಾಗುತ್ತದೆ. ಬಂದ ಮಕ್ಕಳಿಗೆಲ್ಲ ಏನಾದರೂ ಬಹುಮಾನ ಕೊಡಲೇಬೇಕು. ಅಂತೂ ಜನ್ಮದಿನಾಚರಣೆಗೆ ಕರೆದವರಿಗೆ ತುಂಬ ಖರ್ಚು ಬರುತ್ತದೆ. ಬಂದವರು ಹೋಗುವಾಗ ಮಗುವಿಗೆ ಬಹುಮನ ಕೊಡುವುದು ಪದ್ಧತಿ. ಒಟ್ಟಾರೆ ಹೀಗೆ ಒಂದು ಕೂಟಗಳನ್ನು ಏರ್ಪಡಿಸುವುದರಿಂದ ಮಕ್ಕಳಿಗೂ ಜೊತೆಯವರೊಡನೆ ಸಂತೋಷದಿಂದ ಕಾಲ ಕಳೆಯಲು ಅನುಕೂಲ ಮತ್ತು ಹಿರಿಯರಿಗು ಒಬ್ಬರಿಗೊಬ್ಬರು ಭೇಟಿಯಗಿ ವಿಚಾರವಿನಿಮಯ ಮಾಡಿಕೊಳ್ಳಲೂ ಒಂದು ಸಂದರ್ಭ! ಹೆಚ್ಚಾಗಿ ಜನ್ಮದಿನದಂದೇ ಸಮಾರಂಭ ನಡೆಸಲು ಸಾಧ್ಯವಾಗುವುದಿಲ್ಲ. ಸಮಾರಂಭಕ್ಕೆ ಬರಬೇಕಾದರೆ ಎಲ್ಲರಿಗೂ ರಜೆಯಿರಬೇಕಲ್ಲ!
ನಾವು ಡೆಲ್ವಾರೆಯ ಮಹಾಲಕ್ಷ್ಮಿ ದೇವಾಲಯಕ್ಕೆ ಭೇಟಿ ನೀಡಿ ಮರಳುವಾಗ ದಾರಿಯಲ್ಲೇ ಉಡುಪಿಯ ಗೆಳೆಯರೊಬ್ಬರ ಬರ್ತ್ ಡೇ ಸಮಾರಂಭಕ್ಕೂ ಹೋಗಿ ಬರುವುದೆಂದು  ಆ ದಾರಿಯಾಗಿಯೇ ಬಂದೆವು. ಒಂದು ರೆಸ್ಟೋರೆಂಟ್ ನಲ್ಲಿ ಸಮಾರಂಭವನ್ನು ಏರ್ಪಡಿಸಿದ್ದರು. ಬಂದವರಿಗೆ ಅಲ್ಲಿ ಊಟದ ಏರ್ಪಾಡೂ ಇತ್ತು.ಅವರ ಮಗನ ಎರಡನೆ ಜನ್ಮದಿನವನ್ನು ಒಂದು ರೆಸ್ಟೋರೆಂಟ್ ನಲ್ಲಿ ಏರ್ಪಡಿಸಿದ್ದರು. ಇಪ್ಪತ್ತಕ್ಕೂ ಹೆಚ್ಚು ಮಕ್ಕಳು ಸೇರಿದ್ದರು. ಮಕ್ಕಳು ಒಟ್ಟು ಸೇರಿದಾಗ ಹೆಚ್ಚು ಗಲಾಟೆಯಾಗದಂತೆ ವ್ಯವಸ್ಥಾಪಕರು ಒಂದು ಉಪಾಯ ಮಾಡಿದ್ದರು. ಒಬ್ಬರನ್ನು ಬರಹೇಳಿ ಅವರಿಗೆ ಮಕ್ಕಳನ್ನು ವಿವಿಧ ವಿನೋದಾವಳಿಗಳಿಂದ ರಂಜಿಸುವಂತೆ ಹೇಳಿದ್ದರು. ಅವರೂ ಹಾಗೆ ತುಂಬ ಸಮರ್ಥರಾಗಿದ್ದರು. ಸುತ್ತಲೂ ಮಕ್ಕಳನ್ನು ನಿಲ್ಲಿಸಿ ಅವರಿಗೆ ಬೇರೆ ಬೇರೆ ತರದ ಹಾಡುಗಳಿಗೆ ತಕ್ಕುದಾಗಿ ಅಭಿನಯಿಸುವಂತೆ ಹೇಳಿದ್ದರು. ಮಕ್ಕಳೂ ಖುಶಿಯಿಂದ ಕುಣಿಯುತ್ತಿದ್ದರು. ಯಾರೂ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಮಕ್ಕಳನ್ನು ಸಂಭಾಳಿಸುವುದು ತುಂಬ ಕಷ್ಟವಷ್ಟೆ .ಆದರೆ ಆ ಮಹನೀಯರು ಮಕ್ಕಳ ಗಮನ ಸೆಳೆಯುತ್ತಾ ಒಂದೆರಡು ಗಂಟೆ ಕಾಲ ಮಕ್ಕಳು ಆಚೀಚೆ ಓಡಾಡದಂತೆ ನೋಡಿಕೊಂಡರು. ಸ್ವಲ್ಪ ಸ್ವಲ್ಪ ಮಳೆಯೂ ಇದ್ದುದರಿಂದ ಕಡಿಮೆ ಜಾಗವಿದ್ದ ಆ ರೆಶ್ಟೋರೆಂಟಿನಲ್ಲಿ ಊಟದ ಹೊತ್ತಿನ ವರೆಗೆ ಮಕ್ಕಳನ್ನು ಸುಮ್ಮಗಾಗಿಸುವುದು ಎಲ್ಲರಿಗೂ ಸಾಧ್ಯವಾಗಲಾರದು. ಮತ್ತೆ ಜನ್ಮದಿನದ ಕೇಕ್ ಕಟ್ ಮಾಡಿದರು. ಮಕ್ಕಳೆಲ್ಲರೂ ಮಗುವಿಗೆ ಹೇಪಿ ಬರ್ತ್ ಡೆ ಹೇಳಿದ ಮೇಲೆ ಕೇಕ್ ಹಂಚಿದರು. ಮತ್ತೆ ಊಟ. ಉತ್ತರ ಭಾರತ ಶೈಲಿಯ ಊಟ. ಚೆನ್ನಾಗಿತ್ತು. ಊಟ ಮುಗಿಸಿ ಗಿಫ್ಟ್ ಕೊಟ್ಟ ಮೇಲೆ ನಾವೆಲ್ಲ ಮನೆಗೆ ಬಂದೆವು.
                               

No comments:

Post a Comment