Monday, June 25, 2012

ಭಾಷೆ ಬದುಕಿನ ಜೀವಾಳ



ಭಾಷೆ ಬದುಕಿನ ಜೀವಾಳ

ಮನಸ್ಸಿನ ಭಾವನೆಯ ತಿಳಿಸಲು ಬೇಕೊಂದು ಭಾಷೆ! ಅದು ಮೂಕಭಾಷೆಯೂ ಆಗಬಹುದು. ಅಥವಾ ಆಡು ಭಾಷೆಯೂ ಆಗಬಹುದು. ಆಡಿದರೆ ಕೇಳಬೇಕು. ಕಿವಿಯೇ ಕೇಳಿಸದವನಿಗೆ ಭಾಷೆ ಯಾವುದು? ಅಥವಾ ಮಾತೂ ಆಡಲಾರದವ ತನ್ನ ಭಾವನೆಯನ್ನು ಹೇಗೆ ತಿಳಿಸಬೇಕು? ಈಗ ಇಂತಹ ಕಿವುಡ ಮೂಕರಿಗೊಂದು ಭಾಷೆ ಬೇಕಲ್ಲವೇ? ಅದುವೇ ಮೂಕಭಾಷೆ. ಕುರುಡರಾದರೋ ಕಿವಿಯಿಂದ ಕೇಳಬಹುದು ಬಾಯಿಂದ ಆಡಬಹುದು. ಭಾಷೆಯನ್ನೂ ಅವರು ಕೇಳಿ ಕಲಿಯಬಹುದು. ಆದರೆ ಕುರುಡರೋ ಅವರಿಗೆ ಕೇಳಿ ಕಲಿತ ಪದಗಳನ್ನು ಓದಲೋ ಬರೆಯಲೋ ಆಗುವುದಿಲ್ಲ. ಅಭಿನಯಪೂರ್ವಕ ತಿಳಿಸಲೂ ಸಾಧ್ಯವಿಲ್ಲ. ಆಗ ಅವರಿಗೆ ಸ್ಪರ್ಶ ಜ್ಞಾನ ಸೂಕ್ಷ್ಮವಾಗಿರುವುದರಿಂದ ಕೈಯಿಂದ ಮುಟ್ಟಿಯೇ ಅಕ್ಷರಗಳನ್ನು ಕಲಿಯಬೇಕು. ಅದು ಕುರುಡರ ಭಾಷೆಯಾಯಿತು. ಈಗ ಮುಂದುವರಿದ ತಂತ್ರಜ್ಞಾನವೂ ಕುರುಡರಿಗೆ ಲಭ್ಯವಿದೆ. ಕಲಿಯಲು ಮನಸ್ಸು ಬೇಕು ಅವರಿಗೆ. ಮನಸ್ಸಿದ್ದರೆ ಮಾರ್ಗ ಎಂದು ಹೇಳುವುದು ಇದನ್ನೇ. ಸಂಘಜೀವಿಯಾದ ಮನುಷ್ಯನಿಗೆ ಸಾಮಾಜಿಕ ಸಂಪರ್ಕ ಬೇಕಾದರೆ ಭಾಷೆಯ ಅಗತ್ಯವಿದೆ. ಹಿಂದಿನ ಕಾಲದಲ್ಲಾದರೆ ಗಾಂಧಾರಿಯಂಥವರು ಗಂಡ ಕುರುಡನಾಗಿದ್ದಕ್ಕೆ ತನ್ನ ಕಣ್ಣಿಗೇ ಬಟ್ಟೆ ಕಟ್ಟಿಕೊಂಡ ಉದಾಹರಣೆಗಳಿವೆಯಾದರೂ ಆ ಕಾಲದಲ್ಲಿ ಇಂದಿನಂತೆ ಸಾಮಾಜಿಕ ಸಂಪರ್ಕ ಕಡಿಮೆ.  ಗಾಂಧಾರಿಗೆ ಅರಮನೆಯೊಳಗೆ ಆಳು ಕಾಳುಗಳು ಅವಳ ಆವಶ್ಯಕತೆ ಪೂರೈಸುತ್ತಿದ್ದ ಕಾರಣ ಕುರುಡಳಂತೆ ಇರಲು ಅನುಕೂಲವಾಗಿತ್ತು. ಈಗಿನ ಮಿತ ಕುಟುಂಬದಲ್ಲಿ ಸಾಮಾಜಿಕ ಸಂಪರ್ಕ ಸಿಗಬೇಕಾದರೆ ಅವರು ಹೊರಜಗತ್ತಿಗೆ ಬರಲೇ ಬೇಕು. ಮನೆಯೊಳಗೇ ಇದ್ದರೆ ತನ್ನ ಆವಶ್ಯಕತೆಗಳನ್ನು ತಿಳಿದು ಸಹಾಯ ಮಾಡುವವರಿದ್ದರೆ,ತೊಂದರೆಯಿಲ್ಲ. ಆದರೆ ಬಡವರಿಗೆ ಮನೆಯೊಳಗೇ ಇರಲು ಸಾಧ್ಯವಾಗಲಾರದು. ಹಿಂದೆ ಒಂದು ಗಾದೆಯಿತ್ತು. ‘ಊರಿಗೆ ಬಂದವಳು ನೀರಿಗೆ ಬಾರದಿರುವಳೇ?’ ಆಗ ಊರುಕೇರಿಗಳಲ್ಲಿ ಸಾರ್ವಜನಿಕ ಬಾವಿಗಳೋ ಕೆರೆಗಳೋ ಜನರಿಗೆ ಸ್ನಾನ ಮಾಡಲು,ಕುಡಿಯುವ ನೀರು ತರಲು ಉಪಯೋಗವಾಗುತ್ತಿದ್ದವು. ಅತಿಥಿಗಳಾಗಿ ಬಂದವರೂ ನೀರಿಗೆ, ಸ್ನಾನ ಬಟ್ಟೆ ಒಗೆಯಲು ಊರ ಕೆರೆಗೆ ಬರಲೇಬೇಕು. ಮನೆಗೆ ಒಂದೊಂದು ಕೆರೆ ಬಾವಿಗಳಿಲ್ಲ. ಅದಕ್ಕೆ ಊರಿಗೆ ಹೊಸತಾಗಿ ಯಾರಾದರೂ ಹೊಸಬಳು ಬಂದಿದ್ದರೆ ಅವರು ಯಾರು ಎಲ್ಲಿಂದ ಬಂದವರು? ಎಂಬೆಲ್ಲ ವಿವರಗಳನ್ನು ತಿಳಿದೇ ತಿಳಿಯುತ್ತಾರೆ. ತಿಳಿದ ಮತ್ತೆ ಗೆಳೆತನ, ಒಗೆತನ ಬೆಳೆಸಲು ನೋಡುತ್ತಾರೆ. ಬೇರೆ ಭಾಷೆ ಮಾತಾಡುವವರಾದರೆ ಆ ಭಾಷೆ ಕಲಿತು ಅವರ ಸ್ನೇಹ ಬೆಳೆಸಲು ಅಥವಾ ಸಂಬಂಧ ಬೆಳೆಸಲು ನೋಡುತ್ತಾರೆ. ಅದನ್ನೇ ಊರಿಗೆ ಬಂದವರು ಯಾರು? ಎಲ್ಲಿಂದ ಬಂದರು ಎಂಬ ವಿವರ ಮರುದಿನ ಹುಡುಗರ ಪಾಳಯದಲ್ಲಿ ಪ್ರಚಾರವಾಗುತ್ತದೆ.
ನಮ್ಮ ಪರಿಸರದ ಭಾಷೆಯನ್ನು ನಾವು ಕಲಿಯದಿದ್ದರೆ,ಅಕ್ಕ ಪಕ್ಕದವರು ಹೊಂದಿ ಬಾಳುವುದು ಹೇಗೆ?ಪ್ರಾದೇಶಿಕ ಭಾಷೆಯ ಅಗತ್ಯ ಬರುತ್ತದೆ.. ಹೊಸಬರ ಪರಿಚಯ ಮಾಡಿಕೊಳ್ಳಲು ಅವರೊಡನೆ ಸಂಪರ್ಕ ಬೆಳೆಸಲು ಅವರ ಭಾಷೆಯನ್ನೇ ಕಲಿತು ಬಿಟ್ಟರೆ ಸುಲಭವಾಗುವುದಲ್ಲವೇ?ನಾವು ಮನೆಯವರೊಡನೆ ಮಾತಾಡುವಾಗ ಉಪಯೋಗಿಸುವುದು ಮಾತೃಭಾಷೆಯಾಗಿರುತ್ತದೆ. ಅಂದರೆ ತಾಯಿಯಿಂದ ಕಲಿತ ಭಾಷೆ. ಒಂದೊಂದು ಪ್ರದೇಶದಲ್ಲಿ ಒಂದೊಂದು ಭಾಷೆ ಆಡುತ್ತಾರೆ. ಅದು ಪ್ರಾದೇಶಿಕ ಭಾಷೆಯೆನ್ನಿಸುವುದು. ಮನೆಗೆ ಬರುವ ಅನ್ಯರೊಡನೆ ಸಂಪರ್ಕಕ್ಕೆ ಇನ್ನೊಂದು ಭಾಷೆ ಬೇಕಾಗಬಹುದು. ಮನೆಯಲ್ಲಿ ಯಾರಾದರೂ ಕಿವುಡರೋ, ಮೂಕರೋ ಇದ್ದರೆ ಅವರೊಡನೆ ಅವರಿಗರ್ಥವಾಗುವಂತೆ ಅವರದೇ ಭಾಷೆಯಲ್ಲಿ ಮಾತಾಡಬೇಕಾಗುವುದು.ಆಗ ತಾನೆ ಮಾತಾಡತೊಡಗುವ ಮಕ್ಕಳೊಡನೆ ಆಡುವ ಭಾಷೆ ಅಂದರೆ ಅವರ ತೊದಲ್ನುಡಿ ಅವರಿಗೆ ತಿಳಿಯುವಂತೆ ಮಾತಾಡಬೇಕು. ಮಾತಾಡುವ ಶೈಲಿಯೋ, ರೀತಿಯೋ ವ್ಯತ್ಯಾಸವಿರಬೇಕು. ಕಿರಿಯರೊಡನೆ ಸಲುಗೆಯಿಂದ ಮಾತಾಡಿದರೆ ಹಿರಿಯರೊಡನೆ ಗೌರವದಿಂದ ಮಾತಾಡುವುದು,ಗೆಳೆಯರೊಡನೆ ಸಲುಗೆಯಿಂದ ಮಾತಾಡುವುದು ಹೀಗೆಲ್ಲಾ ಭಾಷೆಯಲ್ಲಿಯೂ ಪ್ರಭೇದಗಳಿವೆ.ಸಭೆಯಲ್ಲಿ ಮಾತಾಡುವಾಗ, ಕುಳಿತ ಕೇಳುಗರಿಗೆ ಇನ್ನಷ್ಟು ಕೇಳುವ ಎಂದು ತೋರುವಂತಿರಬೇಕು. ಹಾಸ್ಯಭರಿತ ಮಾತುಗಳು ಕೆಲವರಿಗೆ ಇಷ್ಟವಾದರೆ ಕೆಲವರಿಗೆ ರಸಭರಿತ  ಮಾತುಗಳು ಇಷ್ಟವಾಗುತ್ತವೆ. ನಾವು ಮಾತಾಡುತ್ತಿರುವಂತೆ ಮುಖ ತಿರುಗಿಸಿ  ಒಮ್ಮೆ ಇವ ಇಲ್ಲಿಂದ ಹೋಗಲಿ ಎನ್ನುವ ಮುಖಭಾವ ನಮ್ಮಿದಿರಿಗಿದ್ದವನಲ್ಲಿ ಕಂಡರೆ ಮಾತು ಅವನಿಗೆ ಇಷ್ಟವಿಲ್ಲ ಎಂದಂತಲ್ಲವೇ? ಭಾಷಣದ ಮಧ್ಯೆ ಕೈಚಪ್ಪಾಳೆ ಹೊಡೆಯುವುದೂ ಇದೆ ಕೆಲವರಿಗೆ. ನಿನ್ನ ಭಾಷಣ ಸಾಕುಬಾಯಿ ಮುಚ್ಚಿ ಕುಳಿತುಕೋ ಎಂಬ ಭಾವದಲ್ಲಾದರೆ ಮಾತು ನಿಲ್ಲಿಸಿ ಕುಳಿತುಕೊಳ್ಳುವುದೇ ಲೇಸು. ಯಕ್ಷಗಾನ ಅರ್ಥಗಾರಿಕೆಯಲ್ಲಿಯೂ ಪಾತ್ರ ಗೌರವವನ್ನುಳಿಸಿಕೊಂಡು ಕೇಳುಗರ ಮನ ರಂಜಿಸುವಂತಿದ್ದರೆ ಖುಶಿಯಾಗಿ ಕೈಚಪ್ಪಾಳೆ ಯಿಂದ ಸ್ವಾಗತಿಸುತ್ತಾರೆ. ನವರಸಭರಿತ ಹಾವಭಾವಗಳಿಂದ ಅಭಿನಯಪೂರ್ವಕ ಮಾತುಗಾರಿಕೆಯಿಂದ ಶ್ರೋತೃಗಳು ಮೆಚ್ಚಿ ಕೊಂಡಾಡುತ್ತಾರೆ.

No comments:

Post a Comment