Wednesday, June 6, 2012

ಕತೆಯಾದಳು ಹುಡುಗಿ



                            ಕತೆಯಾದಳು ಹುಡುಗಿ
               
                        ನಮ್ಮೂರಿನ ನಮ್ಮ ನೆರೆಯಲ್ಲಿದ್ದ ಮನೆಯವರು ಬಹಳ ಬಡವರಾಗಿದ್ದರೂ ಇದ್ದುದರಲ್ಲಿ ನೆಮ್ಮದಿಯಿಮ್ದ ಕಲ ಕಳೆಯುತ್ತಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಮಾತ್ರ ಇದ್ದರು. ಹುಡುಗಿಯರು ತಕ್ಕ ಮಟ್ಟಿಗೆ ಸುಂದರಿಯರೇ ಅಗಿದ್ದರು. ಕಲಿಯುವುದರಲ್ಲಿಯೂ ಪ್ರಥಮ ಶ್ರೇಣಿಯೇ ಬರುತ್ತಿತ್ತು. ಕಾಲ ಯಾರನ್ನೂ ಕಾಯುವುದಿಲ್ಲವಲ್ಲ. ಹತ್ತನೇ ತರಗತಿ ಮುಗಿಸಿ  ಕಾಲೇಜು ಸೇರಿದಳು ಮೊದಲನೆಯವಳು. ಅಲ್ಲಿಯೂ ತನ್ನ ಪ್ರತಿಭೆಯನ್ನು ಉಳಿಸಿಕೊಂಡಿದ್ದಳು. ಎರಡನೆಯವಳೂ ಕಾಲೇಜು ಸೇರಿದಳು. ಅವಳು ಕಲಿಕೆಯಲ್ಲಿ ಪ್ರಗತಿ ಸಾಧಿಸುವುದರೊಂದಿಗೆ ತನ್ನ ಚೆಲ್ಲು ಸ್ವಭಾವವನ್ನು ಬಿಟ್ಟು ಕೊಟ್ಟಿರಲಿಲ್ಲ. ದೊಡ್ಡವಳೋ ಅವಳೂ ಆಯಿತು, ಅವಳ ಓದೂ ಆಯಿತು. ಹಾಗೆ ಹೋಗಿ ಹೀಗೆ ಮನೆಗೆ ಬರುತ್ತಿದ್ದಳು. ತಂಗಿ ಮಾತ್ರ ತನ್ನ ಗೆಳತಿಯರೊಂದಿಗೆ ಹರಟುತ್ತ ಸ್ವಲ್ಪ ಹೆಚ್ಚು ಹೊತ್ತು ಕಾಲ ಕಳೆದು ನಿಧಾನವಾಗಿ ಮನೆಗೆ ಬರುತ್ತಿದ್ದಳು. ದಿನ ನಿತ್ಯವೂ ಮಗಳು ತಡವಾಗಿ ಬರುವುದು ತಾಯಿಯ ಗಮನಕ್ಕೆ ಬಂದು ಒಮ್ಮೆ ಮಗಳನ್ನು ಗದರಿಸಿ ಅಕ್ಕನೊಂದಿಗೆ ಬೇಗನೇ ಮನೆಗೆ ಬಂದು ಸೇರಲು ಹೇಳಿದಳು. ದಿನಕ್ಕೊಂದು ಸುಳ್ಳು ನೆವ ಹೇಳಿ ಅಮ್ಮನನ್ನು ನಂಬಿಸಿ ತಾನು ಸರಿಯಿದ್ದೇನೆಂದು ಹೇಳಿ ಒಪ್ಪಿಸುತ್ತಿದ್ದಳು. ಆದರೆ ಆಕೆಯ ಚಲನವಲನಗಳನ್ನು ಗಮನಿಸಿದ ಕೆಲವು ಪಡ್ಡೆ ಹುಡುಗರು
ತಮ್ಮ ಬಲೆಗೆ ಭೀಳಿಸಿಕೊಳ್ಳಲು ಹವಣಿಸುತ್ತಿದ್ದರು. ಅಕ್ಕ ಸುಂದರಿಯೇ ಆದರೂ ಸ್ವಲ್ಪ ಮೌನ ಗೌರಿಯಾದ್ದರಿಂದ ಹುಡುಗರಿಗೆ ಅವಳನ್ನು ಮಾತಾಡಿಸಲ್ಲು ಧೈರ್ಯ ಸಾಲುತ್ತಿರಲಿಲ್ಲ. ಮಾತ್ರವಲ್ಲ ಅವಳು ಹುಡುಗರಿಗೆ ಸಿಗುತ್ತಲೂ ಇರಲಿಲ್ಲ. ಅವಳಾಯಿತು, ಅವಳ ಓದಾಯಿತು. ಅಷ್ಟರಲ್ಲೇ  ತಂದೆ ತಾಯಿ ಮಗಳಿಗೆ ಮಗಳ ಮದುವೆ ಯೋಚನೆಯೂ ಬಂದಿತ್ತು. ಆದರೆ ಬಡತನದಲ್ಲಿರುವ ತಮ್ಮ ಮಗಳನ್ನು ಮದುವೆಯಾಗುವಷ್ಟು ಉದಾರ ಸ್ವಭಾವದ ಸಿಗಬೇಕಲ್ಲ. ಬರೇ ವಿದ್ಯೆಯೋ, ಸೌಂದರ್ಯವೊ ಇದ್ದರೆ ಸಾಕೇ?ಖರ್ಚು ಮಾಡಿ ಮದುವೆ ಮಾಡಬೇಕು,ವರದಕ್ಷಿಣೆ ಕೇಳಿದರೆ ಕೊಡಬೇಕು. ಎಲ್ಲಿಂದ ತರಲಿ ಹಣ?ಬ್ರೋಕರ್ ಗಳು ಬರುತ್ತಿದ್ದರು ಹೋಗುತ್ತಿದ್ದರು. ವರ ಮಾತ್ರ ಸಿಗಲಿಲ್ಲ. ಬಂದವರು ಎರಡನೆಯವಳನ್ನು ಕೊಡುತ್ತೀರೋ ಎಂದು ಕೇಳಲು ಶುರುಮಾಡಿದರು. ದೊಡ್ಡವಳಿಗೆ ಮದುವೆಯಾಗದೆ ತಂಗಿಗೆ ಮದುವೆ ಮಾಡುವುದುಂಟೇ? ಹೀಗೇ ಕಾಲ ಸವೆಯುತ್ತಿತ್ತು. ಅಕ್ಕನ ವಿದ್ಯಾಭ್ಯಾಸ ಮುಗಿಯಿತು. ಇನ್ನು ಹೆಚ್ಚು ಕಲಿಸಲು ತಂದೆಯಲ್ಲಿ ಹಣವೂ ಇರಲಿಲ್ಲ. ಮಾತ್ರವಲ್ಲ,ವಯಸ್ಸಾದ ಹುಡುಗಿಯನ್ನು ದೂರ ಕಳಿಸಲು ಹೆತ್ತವರಿಗೆ ಮನಸ್ಸೂ ಇರಲಿಲ್ಲ. ತಂಗಿ ಮಾತ್ರ ಕಾಲೇಜಿಗೆ ಹೋಗುತ್ತಿದ್ದಳು.
            ಈಗ ತಂಗಿಗೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯ ಸಿಕ್ಕಂತಾಯಿತು. ಇತರ ಹುಡುಗರೂ ಕಣ್ಣು ಹಾಯಿಸುತ್ತಿರುವುದು ಅವಳಿಗೆ ಗೊತ್ತಾಗಿತ್ತು. ಇದರಿಂದ ಅವಳಿಗೆ ಸ್ವಲ್ಪ ಜಂಬವು ಬಂದಿತ್ತು. ಮನೆಯಲ್ಲಿ ಅಕ್ಕನಿಗೆ ಗಂಡು ನೋಡುತ್ತಿದ್ದರು. ಬಂದ ಗಂಡುಗಳು ಅಕ್ಕನನ್ನು ಇಷ್ಟಪಟ್ಟಿರಲಿಲ್ಲ. ಅದಕೇ ಬಂದವರು ಒಂದೆರಡು ದಿನಗಳಲ್ಲಿ ಉತ್ತರ ಹೇಳುತ್ತೇವೆಂದು ಹೋದವರು ಮತ್ತೆ ಸುಮ್ಮಗಾಗಿ ಬಿಡುತ್ತಿದ್ದರು. ಜೋಯಿಸರಲ್ಲಿ ಜಾತಕ ತೋರಿಸಿಯೂ ಅಯಿತು. ಜಾತಕ ಎಲ್ಲ ಸರಿಯಾಗಿಯೇ ಇದೆ.ಇನ್ನು ಆರು ತಿಂಗಳಲ್ಲಿ ಸರಿಯಾದ ಗಂಡು ಸಿಗುತ್ತಾನೆ ಎಂದು ಉತ್ತರಿಸಿಬಂದ ಜೋಯಿಸರು ಹೋಗುತ್ತಿದ್ದರು. ತಂಗಿಯ ವಿದ್ಯಾಭ್ಯಾಸವೂ ಮುಗಿಯಿತು. ಇಬ್ಬರನ್ನೂ ಮನೆಯಲ್ಲಿಯೇ ಮದುವೆಯಿಲ್ಲದೆ ತಂದೆ ತಾಯಂದಿರಿಗೆ ನಿತ್ಯದುಃಖವಾಯಿತು. ಬಂದವರು ಕೆಲವರು ತಂಗಿಯನ್ನು ಕೇಳಿದರೆ ಅಕ್ಕನನ್ನು ಬಿಟ್ಟು ತಂಗಿಯನ್ನು ಮದುವೆ ಮಾಡಿಕೊಡಲು ತಂದೆ ತಾಯಂದಿರಿಗೆ ಇಷ್ಟವಿಲ್ಲ. ಮನೆಯಲ್ಲಿ ಹಾಗೇ ಇರುವುದಕ್ಕೆ ಶಿಕ್ಷಕರ ತರಬೇತಿ ಪಡೆದು ಶಾಲೆಗಳಲ್ಲಿ ಕೆಲಸ ಮಾಡುತ್ತೇನೆಂದು ಅಕ್ಕ ಹೇಳಿದಳು. ಕಂಪ್ಯೂಟರ್ ಶಿಕ್ಷಣವೂ ಮಾಡಿಕೊಂಡಿದ್ದರಿಂದ ತಾನು ಕೆಲಸಕ್ಕೆ ಹೋಗುವೆನೆಂದು ತಂಗಿ ಹೇಳಿದಳು. ಅಂತೂ ಇಬ್ಬರೂ ಮನೆಯಲ್ಲೇ ಉಳಿಯಲು ಒಪ್ಪಲಿಲ್ಲ. ಸರಿ ಇಬ್ಬರೂ ಕೆಲಸಕ್ಕೆ ಸೇರಿದರು.ಒಬ್ಬಳು ಬೇಂಕಿನಲ್ಲಿ, ಇನ್ನೊಬ್ಬಳು ಕಂಪ್ಯೂಟರ್ ಸೆಂಟರಿನಲ್ಲಿ. ಹೀಗೆ ಇಬ್ಬರೂ ಕೆಲಸಕ್ಕೆ ಸೇರಿಕೊಂಡು ಬಂದ ಸಂಪಾದನೆಯನ್ನು ತಂದೆಗೆ ತಂದು ಕೊಡುತ್ತಿದ್ದರು. ಮಕ್ಕಳು ತಂದುಕೊಟ್ಟ ಹಣವನ್ನು ಜೋಪಾನವಾಗಿ ಬೇಂಕಿನಲ್ಲಿಟ್ಟು ತನ್ನ ಆದಾಯವನ್ನೇ ಕುಟುಂಬದ ಖರ್ಚಿಗಾಗಿ ಉಪಯೋಗಿಸುತ್ತಾ ಇದ್ದರು. ಪ್ರಾಯ ಪ್ರಬುದ್ಧಳಾದ ಮಕ್ಕಳಿಗೆ ತಕ್ಕ ಗಂಡುಗಳನ್ನು ಅವರಿವರಲ್ಲಿ ವಿಚಾರಿಸುತ್ತ ಇರುವಾಗ ದೊಡ್ಡ ಮಗಳು ಕೆಲಸ ಮಾಡುವ ಶಾಲೆಯಲ್ಲಿಯೇ ಒಬ್ಬ ಅಧ್ಯಾಪಕ ಮದುವೆಗಿದ್ದಾನೆಂದು ಗೊತ್ತಾಗಿ ತಂದೆ ಆ ಹುಡುಗನ  ತಂದೆಯನ್ನೇ ವಿಚರಿಸಿದಾಗ ಎರಡು ಕಡೆಯವರಿಗೂ ಒಪ್ಪಿಗೆಯಾಗಿ ಮದುವೆ ನಡೆದೇ ಹೋಯಿತು. ತಂದೆಗೆ ಚಿಂತೆಯ ಭಾರ ಅರ್ಧ ಇಳಿದಂತಾಯಿತು.
ಕಂಪ್ಯೂಟರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದವಳಿಗೆ ಈ ನಡುವೆ ಫೇಸ್ ಬುಕ್ ನ ಹುಚ್ಚು ಹಿಡಿದಿತ್ತು. ಫೇಸ್ ಬುಕ್ ನ ಲೋಕಕ್ಕೆ ಹೋದರೆ ಅಲ್ಲಿ ಅನೇಕ ಗೆಳೆಯರು ಸಿಗುವರಷ್ಟೆ!ಇವಳಿಗೂ ಹೊಸ ಹೊಸ ಗೆಳೆಯ ಗೆಳತಿಯರನ್ನು ತನ್ನ ಫೇಮಿಲಿಗೆ ಸೇರಿಸಿಕೊಳ್ಳುತ್ತಿದ್ದಳು. ಅವರಲ್ಲಿ ಒಬ್ಬ ತಾನು ಎಂಜಿನೀಯರ್ ಎಂದೆಲ್ಲ ಹೇಳಿಕೊಂಡಿದ್ದ. ನಿಜಕ್ಕೂ ಅಷ್ಟೇನೂ ಕಲಿತವನಲ್ಲ. ಆದರೆ ಕಮ್ಪ್ಯೂಟರಿನ ಬಳಕೆಯನ್ನು ಯಾರಿಂದಲೋ ಸ್ವಲ್ಪ ಕಲಿತಿದ್ದ. ಅದಕ್ಕೆ ಇವಳ ಗೆಳೆತನ ಬಯಸಿ ಆಕೆಯನ್ನು ತನ್ನ ಬಲೆಗೆ ಬೀಳಿಸಿಕೊಂಡ.ಯಾವಗಲು ಚೇಟ್ ಮಾಡುವುದೇನು.ಬೇರೆ ರೀತಿಯಲ್ಲಿ ತನ್ನನ್ನು ಇಷ್ಟ ಪಡುವಂತೆ   ಸಂದೇಶ ಕಳಿಸುತ್ತಿದ್ದ. ತಾನು ಸದ್ಯದಲ್ಲಿಯೇ ಅಮೇರಿಕಾಕ್ಕೆ ಕೆಲಸದ ನಿಮಿತ್ತ ಹೋಗಲಿದ್ದೇನೆಂದು ಹೇಳಿಕೊಂಡ.ಅಲ್ಲಿಯೇ ಕೆಲಸ ಸಿಕ್ಕಿದರೆ ಅಲ್ಲಿಯೇ ನೆಲಸುವುದೆಂದೆಲ್ಲ ಹೇಳಿ ಇವಳಿಗೆ ಆಸೆ ತೋರಿಸಿದ.ಇವಳು ಪಾಪ ಅವನ ಬಲೆಗೆ ಬಿದ್ದಳು. ಆಗಾಗ ಒಬ್ಬರಿಗೊಬ್ಬರು ಭೇಟಿಯಾಗಿವುದೆಂದು ಮಾತಾಡಿಕೊಂಡರೂ ಮನೆಯವರ ಕಣ್ಣು ತಪ್ಪಿಸಿ ಹೋಗಲು ಸಾಧ್ಯವಾಗದೆ ಅವಳು ಸೋತಿದ್ದಳು. ಮತ್ತೊಂದು ದಿನ ಆತ ಬೇರೆ ಜಾತಿಯವನಾದ ಕಾರಣ ಮನೆಯವರ ಒಪ್ಪಿಗೆ ಸಿಗದಿದ್ದರೂ ಧೈರ್ಯವಾಗಿ ಆತನೊಂದಿಗೆ ಓಡಿಹೋಗುದೆಂಬ ತೀರ್ಮಾನಕ್ಕೆ ಬಂದಳು. ಆದರೆ ಇಷ್ಟೆಲ್ಲ ಮುಂದುವರಿದವನು ಹೆಚ್ಚಿನ ರೂಪವಂತನೂ ಆಗಿರಲಿಲ್ಲ. ಪರಸ್ಪರ ಭೇಟಿಯಾದರೆ ಎಲ್ಲಿ ನಿಜ ಅವಳಿಗೆ ಗೊತ್ತಾಗಿಬಿಡುವುದೋ ಎಂಬ ಭಯ ಅವನಿಗೆ. ಅದನ್ನು ತಪ್ಪಿಸುವುದಕ್ಕಾಗಿ ಒಂದು ಹೊಸ ಸುಳ್ಳು ಹೇಳಿದ. ತನ್ನ ಮನೆಯವರು ಬೇರೊಬ್ಬಳು ಹುಡುಗಿಯೊಂದಿಗೆ ಮದುವೆ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಮನೆಯವರ ಮತಿನಂತೆ ನಡೆಯಬೇಕಾದುದು ನಮ್ಮ ಧರ್ಮ .ನೀನು ಬೇರೆ ಯಾರನ್ನಾದರೂ ಮದುವೆಯಾಗಿ ಸುಖವಾಗಿರು ಎಂದೂ ಹೇಳಿ ಬಿಟ್ಟ. ಆದರೆ ಅನೇಕ ಸಮಯದಿಂದ ತಾನು ಎಂಜಿನೀಯರ್ ಹುಡುಗನನ್ನೇ ಮದುವೆಯಾಗಲಿದ್ದೇನೆಂದು ಕನಸು ಕಂಡಿದ್ದ ಆಕೆಗೆ ಈ ಸುದ್ದಿಯನ್ನು ಕೇಳಿ ಸಹಿಸಿಕೊಳ್ಳಲಾಗದೆ ವ್ಯಥೆ ಹೆಚ್ಚಾಗಿ ಒಂದು ದಿನ ಮನೆಯಲ್ಲಿ ಯಾರಿಗು ಹೇಳದೆ ನಿದ್ದೆ ಗುಳಿಗೆಗಳನ್ನು ತೆಗೆದುಕೊಂಡು ಬಿಟ್ಟಳು. ಮನೆಯವರಿಗೆ ಗೊತ್ತಾಗುವಾಗ ಆಕೆ ಹೆಣವಾಗಿದ್ದಳು.

No comments:

Post a Comment