Saturday, June 9, 2012

ಋಣ ಭಾರ

                    ಋಣ ಭಾರ


            ಋಣ ಎಂದರೆ ಸಾಲ. ಈ ಭೂಮಿಯಲ್ಲಿರುವ ಪ್ರತಿ ಜೀವರಾಶಿಗಳೂ  ನಮ್ಮ ಬದುಕಿಗೆ ಕಾರಣ ಕರ್ತೃವಾದ ಸೃಷ್ಟಿಕರ್ತನಿಗೆ ಋಣಿಗಳಾಗಿರಬೇಕು. ನಾವೆಲ್ಲರೂ ಸಾಲಗಾರರಾಗಿದ್ದೇವೆ. ಸಾಲದ ಹೊರೆಯನ್ನು ಸಾಧ್ಯವಿದ್ದಷ್ಟು ಕಡಿಮೆ ಮಾಡಬೇಕಾದುದು ನಮ್ಮ ಕರ್ತವ್ಯ. ಅವನೇನು ತಾನು ಕೊಟ್ಟುದನ್ನು ಹಿಂದೆ ಕೊಡಿ ಎಂದು ಕೇಳುವುದಿಲ್ಲ. ಆದರೆ ನಾವು ಬದುಕಲು ಆತ ಮಾಡಿದ ಸಹಾಯಕ್ಕೆ ಋಣಿಗಳಾಗಲೇ ಬೇಕು. ಆ ಸಾಲವನ್ನು ಬಡ್ಡಿ ಸಮೇತ ಎಂದರೆ ಸ್ವಲ್ಪ ಹೆಚ್ಚು ಕೂಡಿಸಿ ಕೊಟ್ಟರೆ ಒಳ್ಳೆಯದಾದರೂ ಕೊಟ್ಟೇ ತೀರಬೇಕು ಎಂದು ಕೇಳುವುದಿಲ್ಲ. ಆತನು ಸೃಷ್ಟಿ ಮಾಡಿದ ಜಗತ್ತಿನಲ್ಲಿ ಜೀವಿಗಳನ್ನೂ ಸೃಷ್ಟಿ ಮಾಡಿದ ಮೇಲೆ ಜೀವಿಗಳಿಗೆ ಬದುಕಿ ಬಾಳಲು ಪ್ರಕೃತಿಯನ್ನೂ ನಿರ್ಮಿಸಿದ. ಅವನೇ ನಿರ್ಮಿಸಿದ ಜಗತ್ತಿನ ಜೀವರಾಶಿಗಳಿಗೆ ಬದುಕಲು ಬೇಕಾದ ವ್ಯವಸ್ಥೆಯನ್ನೂ ಮಾಡಿದ. ಅಂದರೆ ನಾವು ಹುಟ್ಟಿ ಬರುವ್ಗ ಏನನ್ನೂ ತಂದಿಲ್ಲ. ಲೋಕ ಬಿಟ್ಟು ಹೋಗುವಾಗ ಇಲ್ಲ್ರುವ ವಸ್ತುಗಳಲ್ಲಿ ಏನನ್ನೂ ಕೊಂಡುಹೋಗುವಂತೆಯೂ ಇಲ್ಲ. ಇದ್ದಷ್ಟು ದಿನ ಕೆರೆಯ ನೀರನ್ನು ಕೆರೆಗೇ ಚೆಲ್ಲುತ್ತಿರಬೇಕು. ನಮ್ಮ ಅವಧಿ ಮುಗಿದಾಗ ಅದನ್ನು ಮುಂದೂಡುವಂತೆಯೂ ಇಲ್ಲ. ಇನ್ನೊಂದಷ್ಟು ಕಲ ಲೋಕದ ಸುಖವನ್ನು ಅನುಭವಿಕೊಂಡು ಹೋಗುವುದೆಂದು ಚಂಡಿ ಹಿಡಿಯುವಂತೆಯೂ ಇಲ್ಲ. ಎಲ್ಲವೂ ಅವನಿಚ್ಛೆಯಂತೆಯೇ ನಡೆಯಬೇಕು. ನಾವೇ ನಿರ್ಮಿಸಿದ ತೋಟವನ್ನು ನೋಡಿಕೊಳ್ಳಲು ಒಬ್ಬನನ್ನು ನೇಮಿಸಿದರೆ ನಾವು ಮತ್ತೆ ಬರುವಾಗ ಅದನ್ನು ಬಿಟ್ಟು ಕೊಡದಿದ್ದರೆ ನಮಗೆ ಸಿಟ್ಟು ಬರುವುದಿಲ್ಲವೇ? ಅಂದರೆ ಸಾಲ ಎಲ್ಲಿ ಉಳಿಯುತ್ತದೆ? ಇದ್ದಷ್ಟು ದಿನ ಸುಖ ಸಂತೋಷಗಳಿಂದ ನೆಮ್ಮದಿಯಿಂದ ಆತನಿಗೆ ಕೃತಜ್ಞರಾಗಿದ್ದರೆ ಆತನ ಔದಾರ್ಯಕ್ಕೆ ಭಕ್ತಿಯ ಕಾಣಿಕೆಯನ್ನು ಕೊಟ್ಟರೆ ಅದುವೇ ನಾವು ಮಾಡಬೇಕಾದ ಋಣ ಸಂದಾಯವಲ್ಲವೇ?
                ನಮ್ಮ ಹಿರಿಯರು ಮೂರು ಋಣಗಳಬಗ್ಗೆ ಹೇಳಿದ್ದಾರೆ. ಮಾತೃ ಋಣ,ಪಿತೃ ಋಣ, ದೇವ ಋಣ ಹೀಗೆ ಮೂರು ಋಣಗಳನ್ನು ನಾವು ಹೊತ್ತುಕೊಳ್ಳಬೇಕಾಗಿದೆ.ಅದನ್ನೇ ಇಲ್ಲಿ ಋಣಭಾರ ಎಂದಿದ್ದೇವೆ. ನವಮಾಸ ಗರ್ಭದಲ್ಲಿ ನಮ್ಮನ್ನು ಹೊತ್ತು ಒದಗಿದ ಎಲ್ಲ ನೋವನ್ನೂ ಸಹಿಸಿಕೊಂಡುಮುಂದಿ ದಿನಗಳ ಕನಸಿನಲ್ಲಿಯೇ ಎಲ್ಲ ನೋವುಗಳನ್ನು ಮರೆತು ಹೆರಿಗೆ ನೋವು ಸಂಕಟಗಳನ್ನೂ ಸಹಿಸಿಕೊಂಡು, ಮತ್ತೆ ನಾವೇ ನಡೆದಾಡುವ ವರೆಗೂ ಜವಾಬ್ದಾರಿಯುವಾಗಿ ನಮ್ಮನ್ನು ತಿದ್ದಿ ಒಳ್ಳೆಯ ಗುಣವಂತನಾಗಿ ಮಾಡುವ ಹೊಣೇಯೂ ತಾಯಿಯದೇ. ಆಕೆ ಅದನ್ನು ಮಾಡಿಯೇ ತೀರುತ್ತಾಳೆ. ಕೆಟ್ಟ ಮಕ್ಕಳಾದರೂ ಇರಬಹುದು, ಕೆಟ್ಟ ತಾಯಿ ಇರಲಾರಳು ಎಂದು ಶಂಕರಾಚಾರ್ಯರೇ ಹೇಳಿದ್ದಾರೆ. ಮಾತೃ ಋಣ ತೀರಿಸಲು ತಾನು ಸನ್ಯಾಸಿಯಾಗಿದ್ದರೂ ಬಂದು ಆಕೆಯ ಉತ್ತರ ಕ್ರಿಯೆಗಳನ್ನೂ ಮಾಡಿರುವರು. ನಮ್ಮ ಕಾಲುಗಳಲ್ಲಿ ನಾವು ನಿಲ್ಲುವಂತಾದ ಮೇಲೆ ಜೀವನ ಪರ್ಯಂತ ಆಕೆಯ ಸೇವೆ ಮಾಡಿದರೂ ಈ ಋಣ ಮುಗಿಯಲಾರದಂತೆ. ತಾಯ ತೊಡೆಯೆ ಮೊದಲ ಸಾಲೆಯಂತೆ! ನಮ್ಮ ಮುಂದಿನ ವ್ಯಕ್ತಿತ್ವವನ್ನು ರೂಪಿಸುವವಳೇ ತಾಯಿಯೆಂಬುದು ಸತ್ಯ.ಹಾಗೆ ಈ ಮಾತೃ ಋಣ ತೀರಿಸಬೇಕಾದ್ದು  ನಮ್ಮ ಕರ್ತವ್ಯ. ಇನ್ನು ನಮ್ಮ ವಿದ್ಯೆ ಬುದ್ಧಿಗಳಿಗೆದಾರಿ ದೀಪವಾಗಿ ನಮ್ಮಹುಟ್ಟಿಗೆ ಕಾರಣರಾದ ಪಿತೃ ಋಣವೂ ತೀರಿಸಲಾಗದ್ದೇ ಹೌದು. ಈ ಮೂರು ಋಣಗಳಲ್ಲದೆ ನಮಗೆ ವಿದ್ಯೆ ಹೇಳಿ ಕೊಡುವ ಗುರು ಅಜ್ಞಾನಾಂಧಕಾರದಿಂದ ಬೆಳಕಿನ ಕಡೆಗೆ ಕೊಂಡೊಯ್ಯುವವನ ಋಣವೂ ಹೆಚ್ಚಿನದೇ ಆಗಿದೆ. ನಮಗೆ ಲೋಕಾನುಭವವನ್ನು ಕೊಟ್ಟು ಪ್ರಪಂಚ ಜ್ಞಾನವನ್ನೊದಗಿಸುವ ಜವಾಬ್ದಾರಿ ಆತನದಲ್ಲವೇ? ಗುರುವಿಗೆ ಗುರುದಕ್ಷಿಣೆಯೀಯುವುದು ವಾಡಿಕೆ. ಕೃಷ್ಣಾವತಾರದಲ್ಲಿ ಕೃಷ್ಣನೇ ಗುರುಗಳದ ಸಾಂದೀಪನಿಗಳಿಗೆ ಅವರ ಸತ್ತು ಹೋದ ಮಗನನ್ನೇ ತಂದು ಕೊಟ್ಟುದು ಪುರಾಣ ಕತೆ. ಹೀಗೆ ಪುರಾಣದ ಆದರ್ಶಗಳು ನಮಗೆ ದಾರಿದೀಪಗಳಾಗಿವೆ.
        ಇನ್ನು ದೇಶವನ್ನಾಳುವ ರಾಜನಿಗೆ ಕೊಡುವ ಕಂದಾಯ ಇತ್ಯಾದಿಗಳೂ ನಾವು ಸಲಾಯಿಸಲೇಬೇಕಾದ ಋಣಗಳು. ಈಗ ರಾಜನಿಲ್ಲದಿದ್ದರೂ ಪ್ರಜಾಪ್ರಭುತ್ವ ಸರಕಾರಕ್ಕೆ ಸಲ್ಲಿಸಬೇಕಾದ ತೆರಿಗೆ, ಕಂದಾಯಗಳುಒಂದು ರೀತಿಯ ಋಣಗಳೇ ಅಲ್ಲವೇ? ಕೃಷಿ ಸಾಲ, ಬೆಳೆಸಾಲ ಹೀಗೆ ಅನೆಕ ಸಾಲಗಳನ್ನು ತೆಗೆದುಕೊಂಡು ಹಿಂತಿರುಗಿಸದಿದ್ದರೆ ಋಣಬಾಧೆ ನಮ್ಮನ್ನು ಬಿಡುವುದಿಲ್ಲ. ಹುಲಿ ತನ್ನ ದೇಹದಲ್ಲೆಲ್ಲಾದರೂ ಗಾಯವಾಗಿದ್ದರೆ ಬೇರೊಂದು ಜಾಗದಿಂದ ಆ ಗಾಯವನ್ನು ಮುಚ್ಚಲು ಮಾಂಸ ತೆಗೆಯುವುದಂತೆ! ಹಾಗೆ ಒಂದು ಗಾಯ ಮುಚ್ಚಲು ಇನ್ನೊಂದು ಗಾಯ ಮಾಡುತ್ತ ಇಡೀ ದೇಹವನ್ನೇ ಗಾಯಗಖು ಆವರಿಸುವುದಂತೆ! ಹಾಗೆ ಬೇಂಕುಗಳಿಂದ, ಸರಕಾರಿ ಸಂಘಗಳಿಂದ ಖಾಸಗಿಯವರಿಂದ ಸಾಲಗಳನ್ನೇ ಮಾಡಿಕೊಂಡರೆ ಸಂದಾಯ ಮಾಡಲಾರದೆ ಕೊನೆಗೆ ಆತ್ಮಹತ್ಯೆಗೂ ಮುಂದಾಗಿದ್ದ ಸುದ್ದಿಗಳು ಪತ್ರಿಕೆಗಳಲ್ಲಿ ಆಗಾಗ ಬರುತ್ತಿರುತ್ತವೆ. ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಆಸೆ ತೋರಿಸಿ ಓಟು ಗಿಟ್ಟಿಸಿಕೊಂಡು ಎಲ್ಲರಿಗೂ ಸಾಲ ಕೊಡಿಸಿ ಸರಕಾರವೇ ಖಾಲಿ ಖಜಾನೆಯಾಗುವುದೂ ಇದೆ. ಈ ಬಗೆಯ ಸುದ್ದಿಗಳು ಒಮ್ಮೆ ಮಾಧ್ಯಮಗಳಲ್ಲಿ ಬಂದರೆ ಮರುದಿನ ಇಲ್ಲವಾಗುತ್ತದೆ. ಎಲ್ಲ ಮಾಧ್ಯಮಗಳೂ ಕೆಲವೊಮ್ಮೆ ಒಟ್ಟಾಗಿ ಪ್ರಚಾರ ಮಾಡಿದರೂ ಮತ್ತೆ ಸುಮ್ಮಗಾಗುತ್ತವೆ. ಅಂತೂ ಋಣಭಾರವಿದ್ದರೂ ಅಧಿಕಾರಾರೂಢರು ಕೆಲವೆನ್ನು ತಮ್ಮ ಸಾಮರ್ಥ್ಯದಿಂದ ತಮ್ಮವರ ಪರವಾಗಿ ಮುಚ್ಚಿಹಾಕಿ ಮುಂದಿನವರಿಗೆ ಹೊಂಡ ತೋಡಿ ಇಡುತ್ತಾರೆ. ಪ್ರಾಮಾಣಿಕತೆ ಸತ್ತು ಹೋಗಿದೆ. ಎಲ್ಲೆಡೆಯೂ ಭಷ್ಟಾಚಾರ ತುಂಬಿರುವಾಗ ಈ ಋಣ ಭಾರ ಎಂಬ ಪದಕ್ಕೆ ಬೆಲೆಯಿಲ್ಲವಾಗಿದೆ. ಶಾಲೆಗಳಲ್ಲಿ ಕಲಿಸುವವರು ಹೇಳಿದರೂ ಹೆತ್ತವರೇ ಅವರಿಗೆ ಶಾಮೀಲಾಗಿ ಭ್ರಷ್ಟಾಚಾರದ ಪೀಳಿಗೆ ಮುಂದುವರಿಯುವಂತೆ ಮಾಡುತ್ತಾರೆ. ತಾವು ತಮ್ಮವರು ಮಾತ್ರ ಸುಖದಿಂದ ಮೆರೆಯಬೇಕು,ಉಳಿದವರು ಹೇಗೋ ಏನಾದರೂ ಮಾಡಿಕೊಂಡಿರಲಿ ಎಂಬ ಸ್ವಾರ್ಥವೇ ತುಂಬಿರುವಗ ನ್ಯಾಯಕ್ಕೆ ಬೆಲೆ ಎಲ್ಲಿ? ಹಿರಿಯರು ಯಾರಾದರೂ ಬುದ್ಧಿಮಾತು ಹೇಳಿದರೂ ಕೇಳುವವರಿಲ್ಲ. ಹೊರಗಿನವರು ಅವರನ್ನೂ ಜೊತೆಗೂಡಿಸಿಕೊಂಡು ಸಮಾಜವನ್ನೇ  ಈ ದುಷ್ಟ ನರಕದ ಕೂಪಕ್ಕೆ ತಳ್ಳಿದರೆ ಲೋಕದಲ್ಲಿ ಯಾವುದೇ ನ್ಯಯಕ್ಕೆ ಎಲ್ಲಿದೆ ಬೆಲೆ? ನ್ಯಾಯವಾದಿಗಳೂ ಕೂಡ ಅನ್ಯಾಯದಿಂದ ಸಂಪಾದನೆ ಮಾಡಹೊರಟರೆ ನ್ಯಾಯಕ್ಕೆ ಬೆಲೆಯೆಲ್ಲಿದೆ? ಮತ್ತೆ ಮೇಲೆ ಹೇಳಿದ ಋಣಗಳ ವಿಷಯವೂ ಅಷ್ಟೆ. ಜನ್ಮ ಕೊಟ್ಟ ತಪ್ಪಿಗೆ ತಂದೆ,ಹೆತ್ತ ತಪ್ಪಿಗೆ ತಾಯಿ, ಸೃಷ್ಟಿ ಮಾಡಿದ ತಪ್ಪಿಗೆ ದೇವರು ಮೌನವಾಗಿದ್ದು ಸಹಿಸಿಕೊಳ್ಳುವುದೇ ಪರಿಸ್ಥಿತಿಯಾಗಿದೆ. ಇದಕ್ಕೆ ಕೊನೆಯಿಲ್ಲವೇ?
            ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋದರೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪ್ರತಿ ಮನೆಗಳಲ್ಲಿಯೂ ಬೇರೆ ದಾದಿಯರೇ ಬೇಕು. ಆಗ ತಾಯಿಯ ಒಡನಾಟ ಮಗುವಿಗೆ ಇಲ್ಲ. ದಾದಿಯರೇ ಮಾರ್ಗದರ್ಶಕರು. ಮೊನ್ನೆ ಅಮೇರಿಕದಲ್ಲಿ ಒಬ್ಬ ಮಗುವನ್ನು ನೋಡಿಕೊಳ್ಳುವ ದಾದಿ ಆ ಮಗುವನ್ನು ಓಡುತ್ತಿದ್ದ ವಾಶಿಂಗ್ ಮೆಶಿನ್ ಒಳಗೇ ಹಾಕಿಬಿಟ್ಟಳಂತೆ. ಏನೋ ಮಗುವಿನ ಆಯುಸ್ಸು ಗಟ್ಟಿಯಿದ್ದ ಕಾರಣ ಹತ್ತಿರ ಯಾರೋ ಇದ್ದವರು ಓಡಿ ಬಂದು ಮೆಶಿನ್ನಿನ ಪ್ಲುಗ್ಗನ್ನು ಕಳಚಿದ ಕಾರಣಕ್ಕೆ ಮೆಶಿನ್ ನಿಂತಿತು. ಮಗು ಬದುಕಿತು ಇದು ಅಚಾತುರ್ಯವೋ ಬೇಕೆಂದೇ ಮಾಡಿದ್ದೋ ಯಾರು ಬಲ್ಲರು? ಅವರವ ಮಕ್ಕಳನ್ನು ನೋಡಿಕೊಳ್ಳುವಷ್ಟು ತಾಳ್ಮೆಯಿಂದ ಇತರ ಮಕ್ಕಳನ್ನು ನೋಡಿಕೊಳ್ಳುವರೇ? ಕೆಲಸಕ್ಕೆ ಹೋಗುವುದಾದರೂ ಅವರವರ ಮಕ್ಕಳನ್ನು ಮನೆಯಲ್ಲಿ ಬೇರಾರಾದರೂ ಜವಾಬುದಾರಿಯಿಂದ ನೋಡಿಕೊಳ್ಳುವವರನ್ನು ವ್ಯವಸ್ಥೆ ಮಾಡಿಯೇ ಹೋಗಬೇಕು. ಅಥವಾ ನಮ್ಮ ಬೇಕುಗಳ ಪಟ್ಟಿ ದೊಡ್ಡದಾಗುವುದರಿಂದಲೇ ಇಬ್ಬರೂ ಉದ್ಯೋಗ ಮಾಡಿಕೊಳ್ಳಬೇಕಾದುದಲ್ಲವೇ! ಒಬ್ಬರು ಮಾತ್ರ ಕೆಲಸ ಮಾಡಿ ಇಬ್ಬರೂ ಅನ್ಯೋನ್ಯವಾಗಿ ಹಿಂದಿನವರು ಇರಲಿಲ್ಲವೇ? ಎಲ್ಲವೂ ಮನಸ್ಸಿದ್ದರೆ ಮಾರ್ಗ! ಮೊದಲು ಹೇಳಿದ ಹಾಗೆ ಏನೋ ಯಾರದೋ ಕಾರಣದಿಂದ ನಾವಿಲ್ಲಿ ಜನ್ಮ ಪಡೆದಿದ್ದೇವೆ. ಇಲ್ಲಿಯೇ ಇರುವುದು, ಇದ್ದು ಸುಖ ಪಡುವುದು ಸ್ಥಿರವಲ್ಲವಾದುದರಿಂದ ಹೆಚ್ಚು ಕೂಡಿಡುವ ಅಗತ್ಯವಿದೆಯೇ? ಗಾಂಧೀಜಿಯವರು ಹೇಳಿದಂತೆ ಅಪರಿಗ್ರಹ ತತ್ವವನ್ನು ಒಪ್ಪಿಕೊಂಡರೆ ಬಾಳು ನಂದನವಾಗುವುದು ಖಂಡಿತ.

No comments:

Post a Comment