Tuesday, June 19, 2012

ಮಾತು ಬಲ್ಲವರು

ಮಾತು ಬಲ್ಲವರು
  ಬಾಳಿಕೆ ಸುಬ್ಬಣ್ಣ ಭಟ್, ನಿವೃತ್ತ ಪ್ರಧ್ಯಾಪಕ, ಮ೦ಗಳೂರು.

    "ಮಾತಿನಿಂ ಹಗೆ ಕೆಳೆಯು" ಎಂದು ಸರ್ವಜ್ಞ ಕವಿ ಹೇಳುತ್ತಾ  "ಲೋಕದೊಳು ಮಾತೆ ಮಾಣಿಕ್ಯ" ಎಂದು ಬಣ್ಣಿಸಿದ್ದು ಗೊತ್ತಿದೆಯಷ್ಟೆ! "ಮಾತು ಬಲ್ಲವಗೆ ಜಗಳವಿಲ್ಲ" ಎಂದೂ ಹೇಳಿದ್ದಾರೆ ಬಲ್ಲವರು. ಮಾತಿನ ಮಹಾತ್ಮೆಯನ್ನು ಅಥವಾ ಚಮತ್ಕಾರವನ್ನು ಕವಿ ಪುಂಗವರನೇಕರ ಬರಹಗಳಿಂದ ತಿಳಿಯಬಹುದು.  ಕೇಳುವವರಿಗೆ ಹಿತ ಮಿತವಾಗಿ,  ಜಗಳ ಬಾರದಂತೆ ತೂಕದ ಮಾತುಗಳನ್ನು ಆಡಬೇಕು. "ಮೌನ ಬಂಗಾರ -ಮಾತು  ಬೆಳ್ಳಿ" ಎಂಬುದೂ ಒಂದು ಗಾದೆ ಮಾತೇ ಅಲ್ಲವೇ? ಗಾದೆಯ ಮಾತು ವೇದಕ್ಕೆ ಸಮಾನವಂತೆ!  ಮಾತಿನ ಮಹತ್ವ ಬಲ್ಲವನು "ತಾನು ತುಂಬಾ ತಿಳಿದವನು" ಎಂಬುದನ್ನು ತೋರಿಸಿ ಕೊಡುವುದಕ್ಕಾಗಿ ಹೆಚ್ಚು ಹೆಚ್ಚು ಮಾತನಾಡಿಕೊಂಡು ಹೋಗುವುದಿಲ್ಲ. ಬೇಕಾದಲ್ಲಿ ಮಾತ್ರ, ತನ್ನ ತಿಳುವಳಿಕೆಯನ್ನು ತನ್ನನ್ನು ಕೇಳಿದರೆ ಮಾತ್ರ ಹೇಳುತ್ತಾನೆ. ತುಂಬಿದ ಸಭೆಯಲ್ಲಿ, ಕೆಲವರು ತಾನು ಬುದ್ಧಿವಂತನೆಂದು ತೋರಿಸಿ ಕೊಡಲು ಮಾತಿನ ಹೊಳೆಯನ್ನು ಹರಿಸಿ ಬಿಡುತ್ತಾರೆ. ಮಾತು ಎಲ್ಲಿಂದ ಆರಂಭವಾಯಿತು, ಎಲ್ಲಿ ನಿಲ್ಲಿಸಬೇಕು, ತನ್ನ ಮಾತನ್ನು ಯಾರಾದರೂ ಕೇಳುತ್ತಾರೋ ಇಲ್ಲವೋ ಎಂಬುದರ ಪರಿವೆ ಅವರಿಗಿರುವುದಿಲ್ಲ. ಒಮ್ಮೆ ಬಾಯಿಯಿಂದ ಆಡಿದ ಮಾತನ್ನು ಮತ್ತೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬಿದ್ದ ಮುತ್ತನ್ನಾದರೂ ಹುಡುಕಿ ತೆಗೆಯಬಹುದು ಅದಕ್ಕೇ "ಮಾತು ಆಡಿದರೆ ಮುಗಿಯಿತು, ಮುತ್ತು ಒಡೆದರೆ ಹೋಯಿತು" ಎನ್ನುತ್ತಾರೆ.   ಆದರೆ ಆಡಿದ ಮಾತನ್ನು ಹಿಂದಕ್ಕೆ ಪಡೆಯುವುದು ಸಮಂಜಸವೇ? ಅದಕ್ಕೆ ಮಾತು ಆಡುವಾಗ ತೂಕದ ಮಾತುಗಳನ್ನೇ ಯೋಚಿಸಿ ಮಾತಾಡಬೇಕು. ಕೆಲವೊಮ್ಮೆ "ಮಾತು ಆಡಿ ಕೆಟ್ಟ"  ಎಂದಾಗಬಾರದಲ್ಲವೇ?. ನಮ್ಮ ವ್ಯಕ್ತಿತ್ವವನ್ನು ಒರೆಗೆ ಹಚ್ಚಲು ಮಾತು ಅಳತೆಗೋಲಾಗುವುದು. ಮೌನವಾಗಿದ್ದರೆ, ನಮ್ಮನ್ನು ಕೆಲವರು ಮಾತಿಗೆ ಕರೆಯುವುದಿದೆ. ಆಗ ನಮ್ಮ ಮಾತನ್ನು ಹರಿಯಬಿಟ್ಟರೆ ನಾವು ಪರಸ್ಪರ ಗೆಳೆಯರಾಗಬಹುದು. ನಮ್ಮ ಮಾತಿಗೆ ಬೆಲೆಯಿದ್ದಲ್ಲಿ ಮಾತ್ರ ನಾವು ಮಾತಾಡಬೇಕು.
    ಭಾಷಣಕಾರರು ಕೆಲವರು  ಸಭಿಕರ  ಅಭಿರುಚಿಗನುಸರಿಸಿ ಹಿತಮಿತವಾಗಿ ಅಲ್ಲಲ್ಲಿಗೆ ಬೇಕಾದಷ್ಟೇ ಹೇಳಿ ಮುಗಿಸಿಬಿಡುತ್ತಾರೆ. ಇನ್ನು ಕೆಲವರು ತಮ್ಮ ವಾಕ್ಪ್ರೌಢಿಮೆಯನ್ನು ತೋರಿಸಿಕೊಡಲು ತುಂಬ ತುಂಬಾ ಮಾತಾಡುತ್ತಾ ಸಭಿಕರಿಗೆ ಬೇಸರ ತರಿಸುವಷ್ಟು ಮಾತಾಡುತ್ತಾರೆ. ಮತ್ತೆ ಕೆಲವರು ಸಭಿಕರ ತಾಳ್ಮೆಯನ್ನು ಪರೀಕ್ಷಿಸುವಂತೆ ಏನೇನೋ ಹೇಳುತ್ತಾ, ಮಾತುಗಳನ್ನು ಮುಂದುವರಿಸುತ್ತಾರೆ. ಆ ಸಭೆಯಲ್ಲಿ ಹೇಳಬೇಕಾದ ವಿಷಯ ಬಿಟ್ಟು ಎಲ್ಲೆಲ್ಲಿಗೋ ಹೋಗುತ್ತದೆ ಕೆಲವರ ಮಾತಿನ ಪ್ರವಾಹ. ಹೇಳಬೇಕೆನಿಸಿದುದನ್ನು ಕಾಗದದಲ್ಲಿ ಯಾರಿಂದಲೋ ಬರೆಯಿಸಿ ತಂದವರು, ಅದನ್ನು ಓದಿ ಹೇಳುವುದಕ್ಕೂ ಆಗದೆ ಚಡಪಡಿಸುವುದೂ ಇದೆ. ಸಭೆಯಲ್ಲಿ ಕುಳಿತವರು ಕೇಳಿ ಸಾಕಾಗಿ ಬೇಸರದಿಂದ  ಎದ್ದು ಹೋಗತೊಡಗಿದರೂ ಕೆಲವರು ಭಾಷಣ ನಿಲ್ಲಿಸುವುದಿಲ್ಲ. ಹಾಸ್ಯ ರಸದ ಹೊನಲನ್ನೇ ಹರಿಯ ಬಿಟ್ಟಿದ್ದೇವೆಂದು ಹೆಮ್ಮೆ ಬೇರೆ! ಕೆಲವರು ಅವರಿಗೇ ನಗೆ ತಡೆಯಲಾರದೆ  ಒದ್ದಾಡುವುದೂ ಇದೆ. ಸಭಿಕರ ಅಭಿರುಚಿಯನ್ನು ಗಮನಿಸಿ ಹಿತ ಮಿತವಾಗಿ ಮುಖ್ಯ ವಿಷಯಕ್ಕೆ ಚ್ಯುತಿ ಬಾರದಂತೆ ಮಾತಾಡಿದರೆ ಕೇಳುವವರಿಗೆ ಖುಶಿ. ಅವರಿಗೆ ಮಧ್ಯೆ ಎದ್ದು ಹೋಗಲೂ ಮನಸ್ಸು ಬರಲಾರದು.  ಇನ್ನೂ ಸ್ವಲ್ಪ ಹೆಚ್ಚು ಹೊತ್ತು ಮಾತಾಡಿದ್ದರೆ ಒಳ್ಳೆಯದಿತ್ತು ಎನ್ನಿಸುವಂತಿದ್ದರೆ ಅಂತಹ ಮಾತಿಗೆ  ಮುತ್ತಿನ ಬೆಲೆ! ಸಭೆಯಲ್ಲಿ ಎಷ್ಟು ಭಾಷಣಕಾರರು ಮಾತಾಡಲಿದ್ದಾರೆ? ಅವರಿಗೆ ಮಾತಾಡಲು ನಿಗದಿ ಪಡಿಸಿದ ಸಮಯವೆಷ್ಟು?  ಎಂಬುದನ್ನು ತಿಳಿದು ಇದ್ದ ಸಮಯಾವಕಾಶವನ್ನು ಹಂಚಿಕೊಂಡು ಸಭಾ ಮರ್ಯಾದೆಯನ್ನು ಉಳಿಸಿಕೊಂಡರೆ  ಅದು ಸಭ್ಯತೆ!
    ಭಾಷಣಕಾರರು ಮಾತಾಡುತ್ತಿರುವಂತೆ, ಸಭೆಯಲ್ಲಿ ಕುಳಿತು ತಮ್ಮ ಬಾಯಿ ಚಪಲಕ್ಕೆ ಹತ್ತಿರದಲ್ಲಿದ್ದವರೊಡನೆ ಮಾತಾಡಿದರೆ ಸಭ್ಯತೆ, ಶಿಷ್ಟಾಚಾರ ತಪ್ಪಿದಂತಾಗುವುದು. ಮಾತ್ರವಲ್ಲ ಶಿಸ್ತುಭಂಗ ಮಾಡಿದಂತೂ ಆಗುವುದು. ಕೆಲವರಿಗೆ ಯಾರಲ್ಲಿ ಹೇಗೆ ಮಾತಾಡಬೇಕು, ಎಷ್ಟು ಮಾತಾಡಬಹುದು ಎಂಬ ಯೋಚನೆಯೂ ಇರುವುದಿಲ್ಲ. ಮೇಲಧಿಕಾರಿಗಳೊಂದಿಗೆ, ಹಿರಿಯರೊಂದಿಗೆ, ಗೌರವಾನ್ವಿತರೊಂದಿಗೆ ಹೀಗೆ  ಮಾತಿನ ತರ-ತಮಗಳಿರುವುದಿಲ್ಲವೇ? ಕಿರಿಯರೊಂದಿಗೆ, ಆಪ್ತರೊಂದಿಗೆ, ಗೆಳೆಯ ಗೆಳತಿಯರೊಂದಿಗೆ - ಹೀಗೆ ಮಾತಿನ ರೀತಿಯಲ್ಲಿ ವ್ಯತ್ಯಾಸಗಳಿರುವಿರುವುದಿಲ್ಲವೇ? ಚಿಕ್ಕ ಮಕ್ಕಳೊಂದಿಗೆ ಮಾತಾಡುವಾಗ ಅವರಿಗೆ ಅರ್ಥವಾಗುವಂತೆ ನಾವೂ ಮಕ್ಕಳಾಗಿ ಮಾತಾಡಬೇಕು.  ಇತರರಿಂದ ನಾವು ಏನನ್ನು ಬಯಸುತ್ತೇವೆಯೋ ಅದನ್ನು ಮೊದಲು ನಾವು ಅವರಿಗೆ ಕೊಟ್ಟರೆ, ಅವರಿಂದ  ಹಿಂದಕ್ಕೆ ಪಡೆಯಬಹುದಂತೆ!  ಅವರನ್ನು ನಾವು ಗೌರವಿಸಿದರೆ ಅವರೂ ನಮ್ಮನ್ನು ಗೌರವಿಸುತ್ತಾರೆ. ಅದನ್ನೇ ಕೊಟ್ಟು ಪಡೆಯುವುದು ಎನ್ನುತ್ತಾರೆ. ಸಮಾಜವನ್ನು ನಾವು ಗೌರವಿಸಿದರೆ ಸಮಾಜ ನಮ್ಮನ್ನು ಗೌರವಿಸುತ್ತದೆ. 
    ಒಮ್ಮೆ ನಾನು ದಾರಿಯಲ್ಲಿ ನಡೆದು ಬರುತ್ತಿದ್ದಾಗ ಒಂದು ಹೋಟೆಲಿನೊಳಗೆ ಒಬ್ಬ ತನ್ನ ಮಾತಿನ ಝರಿಯನ್ನು ಹರಿಯಬಿಡುತ್ತಿದ್ದುದನ್ನು ಕೇಳಿದ್ದೇನೆ. ಅವನೊಂದು ಹಲಸಿನ ಮರದಲ್ಲಿದ್ದ ಕಾಯಿಗಳನ್ನು ವರ್ಣಿಸುತ್ತಾ " ಮರದಲ್ಲಿದ್ದ ಎಲೆಗಳನ್ನಾದರೂ ಎಣಿಸಬಹುದು. ಆದರೆ ಮರದಲ್ಲಿರುವ ಕಾಯಿಗಳನ್ನು ಎಣಿಸಲು ಸಾಧ್ಯವಿಲ್ಲ" ಎನ್ನುತ್ತಿದ್ದ. ಅತಿಶಯೋಕ್ತಿ ಅಲಂಕಾರಕ್ಕೆ ಒಂದು ಉದಾಹರಣೆ ಸಿಕ್ಕಿತು. ಅವನೇನು ಕವಿಯೂ ಅಲ್ಲ ವಿದ್ಯಾವಂತನೂ ಅಲ್ಲ. ಆದರೆ ಮಾತುಗಾರಿಕೆಯ ರೀತಿ ಅಮೋಘವಾದುದು. ಆದರೆ ಮತ್ತೊಮ್ಮೆ ಅಂತಹ ಮಾತುಗಳನ್ನು ಅವನಿಂದ ನಿರೀಕ್ಷಿಸಲು ಸಾಧ್ಯವಿಲ್ಲ. ಇನ್ನು ಕೆಲವರಿಗೆ ನೆರೆ ಹೊರೆಯವರನ್ನು ಬಂಧುಗಳನ್ನು ದೂರುವುದಕ್ಕೆ, ತಮಾಷೆ ಮಾಡುವುದಕ್ಕೆ ಇಂತಹ ಅಡ್ಡೆಗಳು, ಮಾತಿನ ಕಟ್ಟೆಗಳಿರುತ್ತವೆ. ಬೆಳಿಗ್ಗೆ, ಸಂಜೆ ತಿರುಗಾಡಿಕೊಂಡು, ಹೀಗೆ ಹೋಗುತ್ತಾ ಸಿಕ್ಕವರೊಡನೆ ತಮ್ಮ ಮಾತಿನ ಚಪಲ ತೀರಿಸಿಕೊಳ್ಳುತ್ತಾರೆ .ಮಂತ್ರಿಗಳು, ರಾಜಕೀಯ ಧುರೀಣರು  ಯಾರೋ ಬರೆದು ಕೊಟ್ಟ ಮಾತುಗಳನ್ನು ಸರಿಯಾಗಿ ಉಚ್ಚರಿಸುವುದಕ್ಕೆ ಆಗದಿದ್ದರೂ ಕಷ್ಟದಿಂದ ಓದಿ ಮುಗಿಸಿ ಧನ್ಯರಾಗುವವರೂ ಇದ್ದಾರೆ. ಕೆಲವರು ಮಧ್ಯೆ ಹಾಸ್ಯದ ಚಟಾಕಿ ಹಾರಿಸಿ ಜನರ ಗಮನ ತಮ್ಮೆಡೆಗೆ ತರುವುದೂ ಇದೆ. ಎಲ್ಲವೂ ಮಾತಿನ ಚಮತ್ಕಾರ!
    ನಮ್ಮಲ್ಲಿಗೆ ಯಾರಾದರೂ ಆಗಂತುಕರು, ಗೆಳೆಯರು, ಬಂಧುಗಳು ಬಂದರೆ ಅವರನ್ನು ಮರ್ಯಾದೆಯಿಂದ ಮಾತಾಡಿಸಬೇಕು. ಅಲ್ಲದಿದ್ದರೆ ಬಂದವರಿಗೆ ಅವಮಾನ ಮಾಡಿದಂತಲ್ಲವೇ? ನಾವೂ ಅವರ ಮನೆಗೆ ಹೋದಾಗ ಹಾಗೆ ಅವಮಾನಿಸಿದರೆ  ನಮಗೂ ಬೇಸರವಾಗದೇ? ಅತಿಥಿ, ಆಗಂತುಕರಾದರೂ, ಅವರನ್ನು ಗೌರವದಿಂದ ಕಂಡರೆ ನಮಗೆ ಯಾವ ಕೊರತೆಯೂ ಇಲ್ಲ. ನಮ್ಮ ಮನೆಗೆ ಬಂದವರನ್ನು ಅವರ ಕ್ಷೇಮ ವಿಚಾರಣೆ, ಬನ್ನಿರಿ, ಕುಳ್ಳಿರಿ,  ಬಾಯಾರಿಕೆ ಬೇಕೇ? ಎಂದರೆ ನಮ್ಮ ಗೌರವ ಹೆಚ್ಚಾದೀತೇ ಹೊರತು ಕಡಿಮೆಯಾಗಲಾರದು. ಮಹನೀಯರೊಬ್ಬರು, ದಾರಿಯಲ್ಲಿ ಯಾರನ್ನು ಕಂಡರೂ "ಬನ್ನಿ ಮನೆಗೆ ಹೋಗುವ, ಬಾಯಾರಿಕೆಯಾದರೂ ಕುಡಿದು ಬರಬಹುದಲ್ಲ" ಎಂದು ಒತ್ತಾಯಿಸಿ ಕರಕೊಂಡು ಹೋದರು. ಮನೆಯ ಒಳಗೆ ತಲಪಿದೊಡನೆ ಒಂದು ಚಾಪೆ ಹಾಕಿ ಕುಳ್ಳಿರಲು ಹೇಳಿ ಮನೆಯೊಳಗೆ ಹೋದವರು, ಎಷ್ಟು ಹೊತ್ತಾದರೂ ಮತ್ತೆ ಕಾಣಿಸದೆ ಮರೆಯಾಗಿದ್ದರು. ಆ ವ್ಯಕ್ತಿ ಮತ್ತೊಮ್ಮೆ ಕಂಡಾಗಲೂ ಹಾಗೆ ಕರೆದಿದ್ದರೂ ನಾನು ಮತ್ತೆ ಹೋಗಲಿಲ್ಲ. ನಮ್ಮ ಗೆಳೆಯರು, ಬಂಧುಗಳು ದಾರಿಯಲ್ಲಿ ಕಂಡಾಗಲೂ ಒಬ್ಬರಿಗೊಬ್ಬರು ಮಾತಾಡಿಸದಿದ್ದರೆ ಬೇಸರವಾಗುತ್ತದೆ. ಕೆಲವರು ಎಲ್ಲಿಯೋ ನೋಡಿಕೊಂಡು ಮಾತಾಡಿಸುವುದು, ಮನಸ್ಸಿಲ್ಲದ ಮನಸ್ಸಿನಿಂದ ಎಂದು ಬೇರೆ ಹೇಳಬೇಕಾಗಿಲ್ಲ. 
    "ಮಾತು ನಮ್ಮ ವ್ಯಕ್ತಿತ್ವವನ್ನು ಅಳೆಯುವ ಅಳತೆಗೋಲು" ಎಂದರೆ ಅತಿಶಯೋಕ್ತಿಯಲ್ಲ. ಗೆಳೆತನವೂ ಸಮಾನ ಅಭಿರುಚಿಯುಳ್ಳವರೊಳಗೇ ಮುಂದುವರಿಯುತ್ತದೆ ಎಂಬುದು ಖಂಡಿತ! ಉದ್ಯೋಗಕ್ಕಾಗಿ ಅಪೇಕ್ಷೆ ಪಟ್ಟಾಗ ಇಂಟರ್ವ್ಯೂ ಸಮಯದಲ್ಲಿ ವ್ಯಕ್ತಿತ್ವಕ್ಕೆ ಪ್ರಾಶಸ್ತ್ಯವಿರುವುದು. ಗಂಡನ್ನು ಆರಿಸುವಾಗಲೂ, ಹುಡುಗಿಯನ್ನು ಆಯ್ಕೆ ಮಾಡುವಾಗಲೂ ನಮ್ಮ ಮಾತಿನಲ್ಲಿ ಕಂಡು ಬರುವ ನಯ- ವಿನಯಕ್ಕೇ ಬೆಲೆ ಬರುತ್ತದೆ. ಒಂದು ಮನೆಯಲ್ಲಿ ಹಿರಿಯರ ಚಾಳಿಯನ್ನು ಕಿರಿಯರು ಅನುಸರಿಸುವರಂತೆ! ಅದಕ್ಕೆ ಅವನು ಯಾರ ಮಗ? ಅವಳು ಯಾರ ಮಗಳು? ಎಂದು ಮನೆತನದ ಬುಡಕ್ಕೇ ಬರುತ್ತಾರೆ. "ಮಾತು ಕುಲಗೆಡಿಸಿತು" ಎಂದು ಹೇಳುತ್ತಾರೆ.  ಹಿರಿಯರ ಬುಡಕ್ಕೇ ಬರುತ್ತದೆ ನಮ್ಮ ನಡತೆ! ಅಂತೂ ಎಲ್ಲವೂ ಮಾತಿನ ಮರ್ಮ ಹೊಂದಿಕೊಂಡು ನಮ್ಮ ಜಾತಕ ಇದೆಯೆಂದಾಯಿತು. ಅದಕ್ಕೇ ಮಾತು ಆಡುವುದಕ್ಕೆ ಮೊದಲು ಚೆನ್ನಾಗಿ ಚಿಂತಿಸಿ ಹಿತ ಮಿತವಾಗಿ ಆಡಿದರೆ ಮತ್ತೆ ಮಾತಿನ ಮುತ್ತನ್ನು ಹೆಕ್ಕಿ ತೆಗೆಯುವ ಕಷ್ಟವಿಲ್ಲ. ಮಾತಿಗೆ ಮರುಳಾಗಿ ಸೋತು ಹೋಗುವುದು ಸಾಮಾನ್ಯ. ಮುಂಚಿತವಾಗಿ ಚಿಂತಿಸಿದರೆ ಮತ್ತೆ ದುಃಖಿಸುವುದು ಬೇಡವಲ್ಲವೇ? ಒಬ್ಬನಿಗೆ  ಒಮ್ಮೆ   ಮಾತು ಒಮ್ಮೆ ಕೊಟ್ಟ ಮೇಲೆ  ಮಾತಿನಂತೆ ನಡೆಯಬೇಕು. ತಪ್ಪಿದರೆ  ನಮ್ಮ  ಮಾತಿಗೆ ಬೆಲೆಯಿಲ್ಲವಾಗುತ್ತದೆ. ಹಿಂದೆ ಭೀಷ್ಮ  ತಂದೆಗೆ ಕೊಟ್ಟ ಮಾತಿನಂತೆ ಆಜನ್ಮ ಬ್ರಹ್ಮಚಾರಿಯಾದ! ಶ್ರೀ ರಾಮ ತಂದೆಯು ಕೊಟ್ಟ ಮಾತಿನಂತೆ ವನವಾಸಕ್ಕೆ ಹೋದ. ಇದು ಪುರಾಣ ಕತೆಯಾದರೂ ಭಾರತೀಯರಿಗೆ ಆದರ್ಶವಲ್ಲವೇ? ಹಿರಿಯರ ಆದರ್ಶವೂ ನಮಗೆ ದಾರಿದೀಪವಲ್ಲವೇ? ಈಗಿನ ವಚನಭ್ರಷ್ಟ ರಾಜಕಾರಣಿಗಳಿಗೆ ಇಂದಿಗೂ ತಮ್ಮ ಮಾತುಗಾರಿಕೆಯ ವರಸೆಯಿಂದ ಜನರನ್ನು ಮತ್ತೆ ಮತ್ತೆ ವಂಚಿಸುವುದೇ ಅವರ ಜೀವನದ ಗುರಿಯಾಗಿಸಿಕೊಂಡಿದ್ದಾರೆಂದು ತೋರುತ್ತದೆ. ದಾನಶೂರ ಕರ್ಣ ಕೊಟ್ಟ ಮಾತಿನಿಂದಲೇ  ಕೊನೆಯುಸಿರೆಳೆದನಲ್ಲವೇ!
     ಇನ್ನು ಕೆಲವರಿಗೆ ಜನರನ್ನು ತಮ್ಮೆಡೆಗೆ ಸೆಳೆದುಕೊಳ್ಳುವುದಕ್ಕೆ ಮಾತು ಸಹಾಯಕವಾಗುತ್ತದೆ. ಮಾತಿನ ಧಾಟಿಯಿಂದ ಎಂಥವರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಚಾಣಾಕ್ಷತೆ ಎಲ್ಲರಿಗೂ ಲಭಿಸುವುದಿಲ್ಲ. "ಎಲ್ಲ ಬಲ್ಲವರಿಲ್ಲ, ಬಲ್ಲವರು ಬಹಳಿಲ್ಲ". ಆದರೆ ಅಂತಹ ಬಲ್ಲವರು ತನ್ನ ಬಲುಹ ಬರಿದೆ ತೋರಗೊಡುವುದಿಲ್ಲ. ಬಲ್ಲಿದರೆಂಬುದು ಅವರ ಮಾತುಗಳಿಂದಷ್ಟೆ ಗೊತ್ತಾಗುವುದು. ಬರಿಯ ಬೊಗಳೆ ಬಲುಹ ತೋರುವುದಿಲ್ಲ. ಅವರಿಗೆ ತಾನು ಬಲ್ಲೆನೆಂಬುದನ್ನು ಪ್ರದರ್ಶಿಸಬೇಕೆಂಬ ಆಸೆಯೂ ಇಲ್ಲ.  ಮಾತಿನಿಂದಲೇ ಕೆಲವರು  ಎಷ್ಟು ಬಲ್ಲವರೆಂಬುದನ್ನು ತೋರಿಸಿ ಕೊಡುವುದಿಲ್ಲವೇ? ಯಕ್ಷಗಾನದ ಅರ್ಥಗಾರಿಕೆಯಲ್ಲಿ ತಮ್ಮ ವಾಕ್ಸಾಮರ್ಥ್ಯವನ್ನು  ಪ್ರೌಢಿಮೆಯನ್ನು ತೋರಗೊಡಲು ಮಾತಿನ ಸರಪಳಿಯನ್ನೇ ಬಿಟ್ಟು ಬಿಡುತ್ತಾರೆ. ಪಾತ್ರ ಗೌರವ ಅವರಿಗೆ ಬೇಕಾಗುವುದಿಲ್ಲ. ಇನ್ನು ಕೆಲವರು ಚಿಕ್ಕ ಮಾತಿನಿಂದಲೇ ಪಾತ್ರಕ್ಕೆ ಕೊರತೆಯಾಗದಂತೆ ಎದುರಾಳಿಗಳನ್ನು ಮಾತಿನ ಚಾಟಿಯಿಂದ ಬಾಯಿ ಮುಚ್ಚಿಸುತ್ತಾರೆ. ಎಲ್ಲವೂ ಅಲ್ಲಲ್ಲಿಗೆ ತಕ್ಕಂತೆ ಇದ್ದರೆ ಚೆನ್ನ! ಇನ್ನೊಬ್ಬರಿಗೆ ನೋವಾಗದಂತೆ, ಬೆಣ್ಣೆಯಲ್ಲಿ ಕೂದಲೆಳೆದಂತೆ ನಯವಾಗಿ ಮಾತಾಡುವ ಮಾತಿನ ಕೈಚಳಕ ತೋರಿಸುವ ಮಾತುಗಳು ಜನರಂಜನೆಗೆ ಪಾತ್ರವಾದೀತಲ್ಲವೇ? ಇನ್ನು ಕೆಲವರ ಮಾತು ಸಮಯಾಬಾಧಿತವಾಗಿ ಮುಂದಿನ ಪೀಳಿಗೆಗೆ ದಾರಿ ದೀಪಗಳಾಗಿವೆಯೆಂಬುದು ನಿತ್ಯಸತ್ಯ!

   
  

No comments:

Post a Comment