Saturday, June 16, 2012

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

·   
                        ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

                    ಮಾನವನ ಕಣ್ಣು ತಾನು ಕಂಡ ದೃಶ್ಯಗಳ ಗುಣ ವಿಭಾಗ ಮಾಡುತ್ತದೆ. ಕಣ್ಣಿಗೆ ರಮ್ಯ ನೋಟಗಳೇ ಇಷ್ಟವಾಗಿರುತ್ತವೆ. ಕಣ್ಣಿಗೆ ನುಣ್ಣಗೆ ಕಾಣುವುದು ಎಂದರೆ ಸುಂದರವಾಗಿ ಕಂಡು ಮನಸ್ಸಿಗೆ ಆನಂದವುಂಟು ಮಾಡುವುದು. ಕರ್ಕಶವಾಗಿ ಕಂಡುದನ್ನು ಮತ್ತೊಮ್ಮೆ ನೋಡಲೂ ಮನಸ್ಸು ಇಷ್ಟಪಡುವುದಿಲ್ಲ. ಬಣ್ಣಗಳಲ್ಲಿಯೂ ಕೆಲವು  ಬಣ್ಣಗಳು ಇಷ್ಟವಾಗುವುದಿಲ್ಲ ತಾನೆ! ಹತ್ತಿರದ ಪ್ರೇಕ್ಷಣೀಯ ಸ್ಥಳಗಳಿಗೆ ನಾವು ಮತ್ತೊಮ್ಮೆ ಹೋಗಿ ನೋಡಲು ಬಯಸುವುದಿಲ್ಲ. ಯಾವಾಗಲು ನೋಡುತ್ತಿರುವ ನೋಟಗಳು ಮನಸ್ಸಿಗೆ ಹಬ್ಬವುಂಟುಮಾಡುವುದಿಲ್ಲವಷ್ಟೆ. ನೋಡಿ ನೋಡಿ ಬೇಸತ್ತಿರುತ್ತೇವೆ. ಯಾರೋ ಹೇಳಿದ್ದನ್ನು ಕೇಳಿ, ಅಥವಾ ಅಲ್ಲಿಯ ಪ್ರಕಟಣೆಗಳನ್ನು ನೋಡಿ ಒಮ್ಮೆ ಹೋಗಿ ನೋಡಿಬಿಡುವ ಎಂಬ ಆಸೆ ಸಹಜವೇ ಆಗಿರುತ್ತದೆ. ಜಗಿದದ್ದನ್ನೇ ಮತ್ತೆ ಜಗಿದರೆ ರುಚಿಯಿರುವುದಿಲ್ಲ!ಪ್ರಾಣಿಗಳಲ್ಲಿಯೂ ಹುಲ್ಲು ಮೇಯುವ ಹಸು ನೋಡುವುದು ಮುಂದಕ್ಕೆ ಇರುವ ಹುಲ್ಲು ಇನ್ನೂ ಹೆಚ್ಚು ಹಸುರಾಗಿದೆಯೆಂದೋ ಸುಂದರವಾಗಿದೆಯೆಂದೋ. ಧಾರಾಳವಿದೆ ಬೇಗ ಹೊಟ್ಟೆ ತುಂಬಿಸಿಕೊಳ್ಳಬಹುದೆಂದೋ ಹೀಗೆಲ್ಲ ಯೋಚಿಸಿಕೊಂಡು ಮುಂದು ಮುಂದಕ್ಕೆ ಹೋಗುತ್ತಿರುತ್ತದೆ. ನಮಗೂ ಹೊಸತರಲ್ಲಿ ಸ್ವಾಭಾವಿಕವಾಗಿ ಆಸಕ್ತಿಯಿರುತ್ತದೆ. ಮನೆ ಹತ್ತಿರವಿರುವ ಗುಡ್ಡ ನಮಗೆ ಚೆನ್ನಾಗಿ ಕಾಣಿಸುವುದಿಲ್ಲ. ದೂರದಲ್ಲಿರುವ ಬೆಟ್ಟಗಳೇ ಹೆಚ್ಚು ಸುಂದರವೆಂಬ ತೀರ್ಮಾನಕ್ಕೆ ಬರುತ್ತೇವೆ. ಹಿತ್ತಿಲ ಗಿಡವಾದರೋ ನಮಗೆ ಔಷಧಿಯಲ್ಲ. ಅದು ಒಂದು ಔಷಧಿಯೆನ್ನುವುದನ್ನು ವೈದ್ಯರೇ ಹೇಳಬೇಕು.  ಅಂದರೆ ಇಂತಹ ಸಾಮಾನ್ಯ ಗಿಡ ಮೂಲಿಕೆಗಳ ಬಗ್ಗೆ ನಮಗೇನೂ ಗೊತ್ತಿರುವುದಿಲ್ಲ. ಅದನ್ನು ತಿಳಿಯುವ ಕುತೂಹಲವು ನಮಗಿಲ್ಲ. ಅಲ್ಲೆಲ್ಲೋ ಒಂದು ಮಹೌಷಧವಿದೆ ಎಂದು ಅದನ್ನು ತರಲು ಸೀದಾ ಮದ್ದಿನ ಅಂಗಡಿಗೇ ಹೋಗುತ್ತೇವೆ. ವನಸ್ಪತಿಗಳ ಪರಿಚಯ ಯಾರಿಗೂ ಇರುವುದಿಲ್ಲ. ಅಂಗಡಿಯವನು ಕೊಡುವ ಔಷಧಿ ನೋಡಿ ಮತ್ತೆ ಇದು ನಮ್ಮ ತೋಟದಲ್ಲಿಯೇ ಇದೆಯಲ್ಲ ಎಂದುಕೊಳ್ಳುತ್ತಾನೆ. ಅಥವಾ ಆ ಔಷಧಿ ವೈದ್ಯ ಹೇಳಿದರೇನೇ ಸಮಾಧಾನ! ಗೊತ್ತಿರುವ ಬೇರೆ ಯಾರು ಹೇಳಿದರೂ ಕೇಳುವ ಸಹನೆಯಿಲ್ಲ. ಈಗ ಇಂಟರ್ರ್ನೆಟ್ ನಲ್ಲಿ ಔಷಧಿಗಳ ಬಗ್ಗೆಯೂ ವಿವರ ಕೊಡುತ್ತಾರೆ. ಅದರಲ್ಲಿ ಕಂಡರೆ ಅದು ವೇದವಾಕ್ಯ. ಉಳಿದವರು ಹೇಳಿದರೂ ಕೇಳುವವರಿಲ್ಲ. ಅದಕ್ಕೇ ಶಂಖದಿಂದ ಬಂದರೇ ತೀರ್ಥವೆಂಬ ಮಾತು ಹುಟ್ಟಿಕೊಂಡಿದೆ. ಯಾವುದೋ ನದಿಯಲ್ಲಿ ತೀರ್ಥ ಮೀಯಲು ಯಾರೂ ಹೋಗುವುದಿಲ್ಲ. ಆದರೆ ಅದು ಹೆಚ್ಚು ಜನ ಸ್ನಾನ ಮಾಡಿ ಪುಣ್ಯ ಗಳಿಸುತ್ತಾರೆ ಎಂದು ಜನಜನಿತವಾಗಿರಬೇಕು. ಗಂಗ ನದಿಯ ನೀರು ಮಾತ್ರ ಪವಿತ್ರ ಉಳಿದೆಲ್ಲ ನದೀ ನೀರಿಗೆ ಪ್ರಾಶಸ್ತ್ಯವಿಲ್ಲ. ಯಾವ ನೀರಿನಲ್ಲಿ  ಸ್ನಾನ ಮಾಡಿದರೂ ಮೈಯ ಕೊಳೆ ಹೋಗುವುದಿಲ್ಲವೇ? ಎಲ್ಲ ಮನಸ್ಸಿನಲ್ಲಿಯೇ ಮಹಾದೇವನಿದ್ದಾನೆ ಎಂಬ ಮಾತೇ ಸತ್ಯವಲ್ಲವೇ? ಶ್ರದ್ಧಾಭಕ್ತಿಗಳೇ ಬೇಕಿರುವುದು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. "ಒಳಗೆ ಶೃಂಗಾರ ಹೊರಗೆ ಗೋಳಿಸೊಪ್ಪು" ಆಗುವ ಸಾಧ್ಯತೆಯೂ ಇದೆಯಷ್ಟೆ!
        ನಮ್ಮ ಕಣ್ಣುಗಳಿಗೆ ಯಾವಾಗಲೂ ಗೋಚರವಾಗುವ ವಸ್ತುಗಳೋ ,ದೃಶ್ಯಗಳೋ  ನಮಗೆ ವಿಶೇಷವೆನಿಸುವುದಿಲ್ಲ. ಅಂದರೆ ಯಾವಾಗಲೂ ಕಾಣುತ್ತಿದ್ದೇವಲ್ಲ, ಅದು ವಿಶೇಷವಲ್ಲ. ದೂರದಲ್ಲಿರುವ ವಸ್ತುಗಳೇ ನಮಗೆ ಆಸಕ್ತಿಯನ್ನು ಹುಟ್ಟಿಸುತ್ತವೆ. ಮನೆಯಲ್ಲಿಯೇ ದೇವರ ಕೋಣೆಯಿದೆ. ಅಲ್ಲಿ ಕುಳಿತು ಹುಚ್ಚು ಕುದುರೆಯಂತಿರುವ ಮನಸ್ಸನ್ನು ಏಕಾಗ್ರಗೊಳಿಸಿ ಒಂದರ್ಧ ಗಂಟೆಯೋ ಕುಳಿತುಕೊಂಡರೆ ಸ್ವಲ್ಪ ನೆಮ್ಮದಿ ಸಿಗಬಹುದು. ಎಲ್ಲೆಲ್ಲಿಯೋ ಮರ್ಕಟನಂತೆ ಹಾರುವ ಮನಸ್ಸಿನ ಹತೋಟಿ ಯಿದ್ದರೆ ಹಲವು ಹಂಬಲಿಸುವ ಯೋಚನೆಗಳು ಬರಲಾರವು.   ಪತ್ರಿಕೆಯಲ್ಲೋ ಅಥವಾ ಟಿ ವಿ ಯಲ್ಲೋ ಅದರ ಬಗ್ಗೆ ವಿಶೇಷ ವರದಿಗಳು ಬಂದರೆ ಆಶ್ಚರ್ಯವಾಗುತ್ತದೆ. ಒಮ್ಮೆ ಹೋಗಿ ನೋಡಬೇಕು ಎನ್ನಿಸುತ್ತದೆ. ಎಲ್ಲ ಬರುವುದು ಮಾಧ್ಯಮಗಳ ಪ್ರಚಾರದಿಂದ. ಯಾವುದೊ ಒಂದು ದೇವಸ್ಥಾನದ ದೇವರಿಗೆ ಹರಸಿಕೊಂಡರೆ ನೆನೆಸಿದ ಕಾರ್ಯಗಳೆಲ್ಲವು ಕೈಗೂಡುತ್ತವೆ ಎಂದೊಡನೆ ಜನ ಮುಗಿಬಿದ್ದು ಹೋಗುತ್ತಾರೆ. ಒಬ್ಬ ಮಂತ್ರವಾದಿ ಅಥವಾ ಜೋಯಿಸನ ಬಗ್ಗೆ ಸುದ್ದಿ ಹರಡಿಬಿಟ್ಟರೆ ಎಲ್ಲರೂ ಆ ಕಡೆಗೆ ಮುಖ  ಮಾಡುತ್ತಾರೆ. ಎಲ್ಲರಿಗೂ ಸುಲಭೋಪಾಯಗಳೇ ಬೇಕು. ಸುಲಭದಲ್ಲಿ ಶ್ರೀಮಂತನಾಗಬೇಕು. ದೊಡ್ಡ ಮನೆ ಕಟ್ಟಿಸಬೇಕು. ತುಂಬ ಆಸ್ತಿ ಇರಬೇಕು ಎಂಬೆಲ್ಲ ಹಂಬಲಗಳು ಮಾನವನನ್ನು ಯಾವಾಗಲೂ ಕಾಡುತ್ತವೆ. ಆಸೆಗೆ ಮಿತಿಯಿರುವುದಿಲ್ಲ. ಇದ್ದುದರಲ್ಲಿ ತೃಪ್ತಿ ಪಡುವ ಗುಣವಿದ್ದರೆ ಅವನ ಬಾಳು ನೆಮ್ಮದಿಯಿಂದಿರಬಹುದು. ಬಯಸಿದ್ದು ಸಿಕ್ಕದಿದ್ದರೆ ದುಃಖವಾಗುತ್ತದೆ. ಮತ್ತೊಮ್ಮೆ ಪ್ರಯತ್ನಿಸಿ ಪಡೆಯಬೇಕೆಂಬಾಸೆ ಹೆಚ್ಚುತ್ತದೆ. ಆಗ ಬಾಳು ಯವಾಗಲೂ ಚಿಂತೆಯಿಂದ ಕೂಡಿರುತ್ತದೆ. ಎಂದೋ ಒಂದು ದಿನ ಕೊನೆಗೊಳ್ಳಬೇಕಾದ ಬದಿಕಿಗಾಗಿ ಜೀವನವಿಡೀ ಚಿಂತಾಭರಿತರಾಗಿದ್ದರೆ ಅಂತಹ ಚಿಂತೆಗೆ ಕೊನೆಯಿದೆಯೇ? ಬದುಕು ಒಂದು ಸವಾಲಲ್ಲ. ಈಸಬೇಕು ಈಸಿ ಜೈಸಬೇಕು. ಎಲ್ಲವನ್ನೂ ನಡೆಸುವವನೊಬ್ಬನಿದ್ದಾನೆ ಎಂಬ ವೇದಾಂತಿಗಳ ಮಾತು ಸತ್ಯವಲ್ಲವೇ! ಹರಕೆಯ ಕುರಿಗಳಂತಿರುವ ನಾವು ಮೂರು ದಿನದ ಬಾಳಿಗಾಗಿ ಪರಸ್ಪರ ಪೈಪೋಟಿ ನಡೆಸುವುದು ಸರಿಯೇ? ನಾಟಕ ನಟರಂತೆ ಅಭಿನಯ ಮುಗಿದು ಹೊರಗೆ ಬಂದಾಗ ಯಾವುದೇ ವೈರವೋ ದ್ವೇಷವೋ ಇರಬಾರದಲ್ಲವೇ?
         ಹಿಂದಿನವರ ಮಾತು ಹೀಗಿದೆ. ಕಾಶಿಗೆ ಹೋದರೆ ಕಾಸಿಗೆ ಒಂದು ಕುದುರೆ ಸಿಗುವುದಂತೆ! ಕಾಶಿಗೆ ಹೋಗಲೂ ಸಮಯ ಬೇಕು ಒಂದು ಕುದುರೆ ತರುವುದಕ್ಕಾಗಿ ಕಾಶಿಗೆ ಹೋಗಿ ಬರುವುದಕ್ಕೂ ಖರ್ಚು ತುಂಬಾ ಆಗಬಹುದು.ಮಾತ್ರವಲ್ಲ ಕೆಲವು ಪ್ರಾಣಿಗಳು ಆ ಪ್ರದೇಶದ ಹವೆಗೆ ಮಾತ್ರ ಒಗ್ಗುತ್ತವೆ. ಹೊಸ ಊರಿನ ಹವೆಯೋ ಪರಿಸರವೋ ಅದಕ್ಕೆ ಹಿಡಿಸದಿದ್ದರೆ ಅದಕ್ಕೂ ತಾನೇನನ್ನೋ ಕಳೆದಿಕೊಂಡೆನೆಂಬ ಬೇಸರದಿಂದ ಕೊನೆಗೆ ಸಾಯಲೂ ಬಹುದು. ಕಾಶಿಯ ಕುದುರೆ ಅಲ್ಲಿಗೇ ಸರಿ. ಇಲ್ಲಿಗೆ ಇಲ್ಲಿಯ ಕುದುರೆಗಳೇ ಬೇಕಲ್ಲವೇ?ದೂರದ ಹಿಮಲಯವನ್ನು ಒಮ್ಮೆ ಹೋಗಿ ನೋಡಿ ಬಂದರೆ, ಅದರ ಎತ್ತರ ಬಿತ್ತರಗಳಿಗೆ ಬೆರಗಾಗಿ ಈಚೆ ಬರುತ್ತೇವಷ್ಟೆ!ಅಲ್ಲಿಯೇ ನಿಲ್ಲುವುದಿಲ್ಲ. ಏನೋ ಕಣ್ಣಿನ ಪಾಪ ಕಳೆಯಲು ಒಮ್ಮೆ ಹೋಗಿ ನೋಡಿ ಬಂದರಾಯಿತು. ನಮ್ಮ ದೇಶದ ವಿಜ್ಞಾನಿಯನ್ನು ಕವಿಗಳನ್ನು ಗುರುತಿಸಲು ನೋಬೆಲ್ ಪ್ರಶಸ್ತಿ ಬೇಕಯಿತು. ಮತ್ತೆ ನಮ್ಮವರೇ ಹೆಮ್ಮೆಯಿಂದ ಅವರು ನಮ್ಮ ದೇಶದವರು ಎಂದು ಹೇಳಿಕೊಂಡರು. ಅಮೇರಿಕಾದಲ್ಲಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿ ಬಂದ ಮೇಲೆ ವಿವೇಕಾನಂದರ ಹೆಸರು ನಮ್ಮ ಆದರ್ಶವಾಯಿತು.ಅಂದರೆ ನಮ್ಮ ಜನರ ಹಿರಿಮೆ ಗರಿಮೆಗಳನ್ನು ಗುರುತಿಸಬೇಕಾದ ನಾವು ಮತ್ತೆ ಎಚ್ಚರಗೊಂಡೆವು. ಆದರೆ ವೇದ ಪುರಾಣಗಳನ್ನು ನೋಡಲು ನಮಗೆ ವ್ಯವಧಾನವಿಲ್ಲ. ಕನ್ನಡದ ಶಬ್ದ ಕೋಶ ರಚಿಸಿದ್ದು ವಿದೇಶೀಯರೊಬ್ಬರು. ಆಗ ಅಧಿಕಾರದಲ್ಲಿದ್ದ ಬ್ರಿಟಿಷರ ಮತ ಪ್ರಚಾರಕ್ಕೆ ಅವರಿಗೆ ಕನ್ನಡ ಭಾಷೆ ಕಲಿಯ ಬೇಕಾಯಿತು. ಇಲ್ಲಿ ಊರ್ವಶಿಯ ಶಾಪ ಅರ್ಜುನನಿಗೆ ಭೀಷ್ಮನೆದುರು ನಿಲ್ಲಲು, ಅಜ್ಞಾತ ವಸದಲ್ಲಿ ಬೃಹನ್ನಳೆಯಾಗಿ ನಾಟ್ಯ ಕಲಿಸಲು ಪ್ರಯೋಜನವಾಗಿತ್ತಲ್ಲವೇ?ನಮ್ಮ  ಪೂರ್ವಜರಿಂದ ಬಂದ ಬಳುವಳಿಗಳೇ ಬೇಕಷ್ಟಿರುವಾಗ ದೂರದ ಬೆಟ್ಟಗಳ ಕಡೆಗೆ ಬೆಟ್ಟು ಮಾಡುವುದೂ ಮೂರ್ಖತನವಾದರೂ ಗುಣಕ್ಕೆ ಮತ್ಸರವಿದೆಯೇ? ಸರ್ವಜ್ಞರಾಗಬೇಕಾದರೆ ಆತ ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ ಎಂಬಂತೆ ಎಲ್ಲವೂ ನಮ್ಮ ಜ್ಞಾನಾರ್ಜನೆಗೆ ಸಹಾಯಕವಲ್ಲವೇ?
   

No comments:

Post a Comment