Sunday, July 8, 2012

ಹೊಟ್ಟೆ

                                            ಹೊಟ್ಟೆ 
                ಗಣಪತಿಯನ್ನು ನಗೆಗಾರರೂ, ಪ್ರಾರ್ಥಿಸಿಯೇ ಮುಂದುವರಿಯುತ್ತಾರೆ. ಹೊಟ್ಟೆ ಕುಲುಕಿಸಿ ನಕ್ಕರೆ ಹೊಟ್ಟೆ ಹುಣ್ಣಾಗುವ ಅನುಭವ! ಮುಖದಲ್ಲಿ ಪ್ರಕಟಗೊಳ್ಳುವುದಾದರೂ ಹೊಟ್ಟೆಯ ಮೇಲೆ ಪ್ರಭಾವ! ದೊಡ್ಡ ಹೊಟ್ಟೆಯವರ ನಗು ನೋಡಿ ನಾವೂ ನಕ್ಕುಬಿಡುತ್ತೇವೆ.  ಚೌತಿಯಂದು ತಿಂದು ನಡೆಯಲಾರದೆ ಗಣಪತಿ ಒದ್ದಾಡುತ್ತಿದ್ದುದನ್ನು ಚಂದ್ರ ನೋಡಿ ನಕ್ಕದ್ದು ಪುರಾಣ ಕತೆಯಷ್ಟೆ. ಸ್ತ್ರೀ ವರ್ಣನೆಯಲ್ಲಿ, ಕವಿಗಳು ಮುಖ ಸರೋಜದ ಅಂದವನ್ನು ನೋಡಲಾಗದೆ ಹೊಟ್ಟೆ (ಬಡಬಡಾದಂತಿರ್ಕು) ತೆಳ್ಳಗಾಗಿತ್ತು ಎನ್ನುತ್ತಿದ್ದರು. ಸ್ತ್ರೀಯರ ಹೊಟ್ಟೆಯಲ್ಲಿ ತ್ರಿವಳಿಗಳಿದ್ದುವಂತೆ (ಮೂರು ಮಡಿಕೆಗಳು).ಬಾಣಂತನ ಮುಗಿಸಿದ ಹೆಂಗುಸರ ಹೊಟ್ಟೆ ಬೆನ್ನಿಗೆ ಅಂಟಿಕೊಳ್ಳುತ್ತಿತ್ತಂತೆ! ಪುರುಷರೂ ಸ್ವಲ್ಪ ಹೊಟ್ಟೆಯಿದ್ದರೇ ಸಭೆಯಲ್ಲಿ ಎದ್ದು ಕಾಣುತ್ತಾರೆ. ಆಗರ್ಭ ಶ್ರೀಮಂತಿಕೆ ಹೊಟ್ಟೆಯಿಂದಲೇ ಗೋಚರ! ತೆಳು ಹೊಟ್ಟೆಯವರು ತಿಂದರೂ,ಉಪವಾಸವಿದ್ದರೂ ತಿಳಿಯುವುದಿಲ್ಲ.
            ಆಹಾರ ಹೊಟ್ಟೆಗಿಳಿದಮೇಲೆ ಹೊಟ್ಟೆಯದೇ ಕಾರುಭಾರು!. ಈ ಯಂತ್ರ ಕೈಕೊಟ್ಟರೆ  ಆರೋಗ್ಯ ಕೆಡುತ್ತದೆ. ಹಿತ ಮಿತವಾಗಿ ತಿಂದುಂಡುಮಾಡಿದರೆ, ಪೋಷಕಾಂಶಗಳು ರಕ್ತಗತವಾಗಿ, ಎಲ್ಲಾ ಭಾಗಗಳಿಗೆ ರವಾನೆ. . ಹೊಟ್ಟೆಯೊಳಗಿನ  ಕಾರ್ಯಭಾಗವು ಹೆಚ್ಚು ಕಡಿಮೆಯಾದರೆ ಎಲ್ಲವೂ ಅಸ್ಥವ್ಯಸ್ಥ. ಅಜೀರ್ಣವಾದರೆ ಔಷಧಿ ಹೊಟ್ಟೆಗೆ. ನಿಯಂತ್ರಣ ಕೊಠಡಿ ಹೊಟ್ಟೆ.  ರುಚಿಯಾದುದನ್ನು ತಿನ್ನುವಾಗಲೂ ಪಚನ ಸಾಮರ್ಥ್ಯವನ್ನು ಹೊಂದಿಕೊಂಡು ಮಿತಿತಪ್ಪಿದರೆ ಅಜೀರ್ಣ. ಹಲ್ಲುಗಳಿಂದ ಪಚನಕ್ರಿಯೆ ಆರಂಭವಾಗಿ, ಪಚನಾಂಗಗಳ ಕೆಲಸ ಸರಿಯಾದರೆ ದೇಹ, ಮನಸ್ಸು ಹಗುರಾಗಿ,ಕೆಲಸಗಳಲ್ಲಿ ಉತ್ಸಾಹ! ಜೀರ್ಣಾಂಗಗಳ ಕೆಲಸ ಸಲೀಸಾಗಬೇಕಾದರೆ, ಮಧ್ಯಾಹ್ನ ಊಟದ ನಂತರ ಸ್ವಲ್ಪ ವಿರಾಮ ಬೇಕು. ಹಗಲು ನಿದ್ರೆ ಒಳ್ಳೆಯದಲ್ಲ. ರಾತ್ರಿ ಊಟದ ನಂತರ ಸ್ವಲ್ಪ ನಡೆಯಬೇಕು. ಮುಂದೆ ಕರುಳಿನ ಕೆಲಸ. ಆಗಾಗ ತಿನ್ನುವುದರಿಂದ ಜೀರ್ಣ ಕ್ರಿಯೆ ಏರುಪೇರಾಗುತ್ತದೆ. ಉಪವಾಸದಿಂದ ಹೊಟ್ಟೆ ಸರಿಯಾಗಿ ಚುರುಕಾಗುತ್ತವೆ. ಹಿಂದಿನವರು ಚಾಂದ್ರಾಯಣ ವ್ರತದಿಂದ ( ಹದಿನೈದು ದಿನಗಳಲ್ಲಿ  ಆಹಾರವನ್ನು ಕಡಿಮೆಗೊಳಿಸುತ್ತಾ ಕೊನೆಯ ದಿನ ನಿರಾಹಾರಿಯಾಗಿದ್ದು ಮರುದಿನದಿಂದ ಪ್ರಮಾಣ ಹೆಚ್ಚಿಸುತ್ತ ಹದಿನೈದನೇ ದಿನ ಪೂರ್ಣಾಹಾರ ತೆಕ್ಕೊಳ್ಳುವುದು) ಜೀರ್ಣಾಂಗಗಳು ಚುರುಕಾಗಿ ಹೊಟ್ಟೆ ಸರಿಯಾಗಿರುತ್ತದೆ. ರೋಗಕ್ಕೆ ಮದ್ದು ಮಾಡುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದೇ ಜಾಣತನವಲ್ಲವೇ?
            ಅನ್ನವೇ ಜೀವನ. ಅನ್ನವೇ ಪ್ರಾಣ. ನಾಯಿ, ಹಂದಿಗಳಂತೆ ತುಂಬಿಸಿಕೊಂಡರೆ ಸಾಲದು. ಹೊಟ್ಟೆ ತುಂಬಿಸಿಕೊಳ್ಳಲು ದೇವರು ದುಡಿಮೆಯ ನ್ಯಾಯ ಮಾರ್ಗಗಳನ್ನೇ ತೋರಿಸಿಕೊಟ್ಟಿರುವಾಗ, ಹಾದಿತಪ್ಪಿ ಜೀವನದಲ್ಲಿ ಸ್ಪರ್ಧೆಯೇಕೆ?. ನಮ್ಮಂತೆಯೇ ಇತರರೂ ಬದುಕಬೇಕು. ಹಿಂದಿನವರ ಬದುಕು ನಮಗೆ ದಾರಿದೀಪ. ದ್ವಂದ್ವಗಳಿಗೆ ಸಿಲುಕಿ ಸುಲಭದಲ್ಲಿ ಹಣವಂತನಾಗಿ, ಮುಂದಿನವರಿಗೂ ಕೂಡಿಡಬೇಕೆಂಬ  ದುಸ್ಸಾಹಸ ಮಾಡಿ ಸಿಕ್ಕಿಬೀಳುವುದು; ಮತ್ತೆ ತಪ್ಪಿಸಿಕೊಳ್ಳಲು ಹೆಣಗುವುದು. ಇಂತಹ ಯೋಚನೆಗಳನ್ನೇ ಇಟ್ಟುಕೊಳ್ಳಬಾರದು. ನಾಗರಿಕತೆ ಮುಂದುವರಿದರೂ ಎಲ್ಲವೂ ಸ್ವಾರ್ಥಪರ. "ಲೋಕಾಸ್ಸಮಸ್ತಾ ಸುಖಿನೋಭವಂತು" ಎಂಬ ಧ್ಯೇಯವಾಕ್ಯ ಮರೆತು ಹೋದಂತಿದೆ. ದುಡಿಮೆ ಹೊಟ್ಟೆಗಾಗಿಯಾದರೂ "ಓದುವುದು ಶಾಸ್ತ್ರ ಇಕ್ಕುವುದು ಗಾಳ" ಎಂಬಂತಾಗಬಾರದು. ತನ್ನ ಅಪರಾಧಗಳಿಗೆ ಹೊಟ್ಟೆಯನ್ನು ದೂರುವುದೇಕೆ? ಬ್ರಹ್ಮಾಂಡವನ್ನೆ ಹೊಟ್ಟೆಯಲ್ಲಿಟ್ಟುಕೊಂಡ ಪರಮಾತ್ಮ  ಸೃಷ್ಟಿಸಿದ ಜೀವಿಗಳು ದುಡಿದು ತಿನ್ನುವುದಕ್ಕೂ ಅಂಗಾಂಗಳನ್ನು ಕೊಟ್ಟಿದ್ದಾನೆ. ದುಡಿತದಿಂದ ವ್ಯಾಯಾಮವೂ ಆಯಿತು; ಅನ್ನವೂ ಆಯಿತು.ದೈವದತ್ತವಾದ ಹೊಟ್ಟೆಗೆ ವ್ಯಾಯಾಮವನ್ನೂ ಕೊಟ್ಟರೆ ಹೆಚ್ಚು ಉಪಯೋಗವಾಗಬಲ್ಲುದು,ಎಂಬುದು ಅನುಭವದ ಮಾತು. ನಮ್ಮ ಉಸಿರಾಟ ನಿರಂತರ ಪ್ರಕ್ರಿಯೆಗೆ ಹೊಟ್ಟೆಯ ಉಪಯೋಗವಿದೆ. ನಿದ್ರೆಯಲ್ಲಿಯೂ ಹೊಟ್ಟೆ  ಉಬ್ಬುವಿಕೆ ಕುಗ್ಗುವಿಕೆಯಿಂದ ಉಸಿರಾಟ ಸುಗಮವಾಗಿರುತ್ತದೆ. ಅದಕ್ಕೆ ತಿನ್ನುವಾಗ ಉಸಿರಾಡಲು ಎಡೆಯಿರುವಷ್ಟಾದರೂ ಜಾಗ ಬಿಡಬೇಕು ಎನ್ನುತ್ತಾರೆ. ಮೂಗಿನವರೆಗೆ ತಿನ್ನುವುದು ಸರಿಯಲ್ಲ ಎಂದಿರುವುದು. ಭಸ್ತ್ರಿಕಾದಿಂದ,ಉಸಿರಾಟ ಪ್ರಕ್ರಿಯೆಗೆ ಅನುಕೂಲವಾಗುತ್ತದೆ. ಪ್ರಾಣಾಯಾಮದಲ್ಲಿಯೂ ಉಸಿರನ್ನು ತಡೆಹಿಡಿಯಲು ಹೊಟ್ಟೆಯ ಸಹಾಯವಿದೆ. ಹಿಂದಿನವರ ಮಾತಿದೆ "ಮಾತು ಬಲ್ಲವನಿಗೆ ಜಗಳವಿಲ್ಲ: ಊಟಬಲ್ಲವನಿಗೆ ರೋಗವಿಲ್ಲ". ಹೊಟ್ಟೆಯ ಜೀರ್ಣಸಾಮರ್ಥ್ಯವನ್ನು ಅವರವರೇ ತಿಳಿದುಕೊಳ್ಳಬೇಕು. ಸಿಕ್ಕ ಸಿಕ್ಕಿದ್ದನ್ನು ಆಗಾಗ ತಿಂದು ಹೊಟ್ಟೆ ಹಾಳುಮಾಡಿಕೊಳ್ಳುತ್ತಾರೆ. ಮಕ್ಕಳಿಗೂ ಆಗಾಗ ತಿನ್ನಲು ಕೊಡುವುದು ಸರಿಯಲ್ಲ. ಹಿತಮಿತವಾಗಿ ತಿಂದುಂಡು,  ಹೊಟ್ಟೆಯ ಆರೋಗ್ಯ ಕಾಪಾಡಿಕೊಂಡರೆ, ಆರೋಗ್ಯ ಮತ್ತು ನೆಮ್ಮದಿಯಿಂದ ಜೀವನ ಸುಗಮ!

No comments:

Post a Comment