Wednesday, July 4, 2012

ಜೀವ ಜೀವನ ಪಾಠ


                                ಒಂದು ಜೀವನ ಪಾಠ
           
                        ಜೀವನ ನಮಗೆ ಅನೇಕ ಹೊಸ ಅನುಭವಗಳೊಂದಿಗೆ ಕೆಲವು ಪಾಠಗಳನ್ನು ಕಲಿಸುತ್ತದೆ. ಕಲಿಕೆಯೆಂಬುದು, ನಿರಂತರವಾಗಿರುತ್ತದೆ. ಬಾಳನುದ್ದಕ್ಕೂ ಕಲಿತುಕೊಳ್ಳುವ ಪಾಠಗಳು, ಮುಂದಕ್ಕೆ ನಮಗೆ ಎಚ್ಚರವಿರುವ ಸಂದೇಶವನ್ನು ಕೊಡುತ್ತದೆ. ಒಮ್ಮೆ ಆದ ಅನುಭವ  ನಾವು ಎಚ್ಚರದಲ್ಲಿದ್ದರೆ,ಮತ್ತೊಮ್ಮೆ ಸೋಲಲು ಬಿಡುವುದಿಲ್ಲ. ನಡೆಯುವಾಗ ಎಡಹುವುದು ಸಾಮಾನ್ಯ. ಎಡವಿದ ಕಾಲಿಗೇ ಮತ್ತು ಮತ್ತೂ ಎಡವುತ್ತಲೇ ಇರುವುದೂ ಇದೆ. ಆದರೆ ಎಚ್ಚರವಾಗಿದ್ದರೆ ಮತ್ತೆ ಎಡವಿದಾಗ ಹೆಚ್ಚು ನೋವಿನ ಅನುಭವಕ್ಕೆ ಗುರಿಯಾಗುವುದಿಲ್ಲ.ನಡೆಯದೆ ಸುಮ್ಮಗೇ ಇದ್ದರೆ ಎಡವಲಾರದು. ನಿಂತ ನೀರಾಗದೆ ಹರಿಯುತ್ತಿರುವ ಪ್ರವಾಹ ಕೆಲವೊಮ್ಮೆ ಅಡೆ ತಡೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಅಲ್ಲೆ ನಿಲ್ಲದೆ ಬೇರೊಂದು ದಾರಿಯನ್ನು ಹುಡುಕಿಕೊಂಡು ಪ್ರವಾಹ ಮುಂದುವರಿಯಬೇಕಾಗುತ್ತದೆ. ಒಮ್ಮೆಯಾದ ಸೋಲಿನಿಂದ ಕಂಗೆಟ್ಟರೆ, ಮತ್ತೆ ಮುಂದೆ ಹೋಗುವುದು ದುಸ್ಸಾಧ್ಯ. ಅಂಜದೆ ಅಳುಕದೆ ಸೋಲನ್ನು  ಪಂಥವಾಗಿ ತೆಕ್ಕೊಂಡರೆ ಧೈರ್ಯ ತಾನಾಗಿ ಬರಲೇಬೇಕು. ಒಮ್ಮೆ ನನ್ನ ಗೆಳೆಯರೊಬ್ಬರು  ಆಗ ತಾನೆ ಅಧ್ಯಾಪಕ ವೃತ್ತಿಗೆ ಕಾಲಿರಿಸಿದವರು, ಆರಂಭದಲ್ಲೇ ತಾನು ಕೆಲಸ ಮಾಡುತ್ತಿದ್ದ ಶಾಲೆಯ ಇತರ ಅಧ್ಯಾಪಕರಿಂದ ಹೇಗೆ ವೃತ್ತಿ ಮತ್ಸರದ  ಪಾಠ ಕಲಿತರೆಂಬುದನ್ನು ಹೇಳ ಹೊರಟಿದ್ದೇನೆ. ಅಲ್ಲೊಂದು ಅಧ್ಯಾಪಕ ಹುದ್ದೆ ಖಾಲಿಯಿದೆಯೆಂದು ಗೊತ್ತಾಗಿ ಸ್ವಲ್ಪ ದೂರವಾದರೂ ಹೋಗಿ ಸೇರಿದರು. ಹೊಸತಾಗಿ ಬಂದವರಿಗೆ ಆರಂಭದಲ್ಲಿ ಉಳಿದವರಿಂದ ಸ್ವಾಗತವೇನೋ ಸಿಕ್ಕಿತು. ನನ್ನ ಗೆಳೆಯರೋ ಅದೇ ತಾನೆ ವೃತ್ತಿಗೆ ಹೊಸಬರು. ಮತ್ತು ಉಳಿದವರಿಂದ ಸೈ ಎನಿಸಿಕೊಳ್ಳಬೇಕೆಂಬ ಹುಮ್ಮಸ್ಸು ಬೇರೆ. ಅವರಿಗೆ ಒಂದು ಕ್ಲಾಸಿನ ಪೂರ್ಣ ಜವಾಬ್ದಾರಿಯೂ ಜೊತೆಗೆ ಇನ್ನೊಂದು ಕ್ಲಾಸಿನ ಒಂದು ಪಾಠವೂ ಕೊಡಲ್ಪಟ್ಟಿತು. ಆರಂಭದ ಶೂರತನಕ್ಕೆ ಹೊರಟೇಬಿಟ್ಟರು. ಮಕ್ಕಳಿಗೋ ಇವರೆಂದರೆ ಬಹಳ ಗೌರವ. ಹೇಳಿದ ಪಾಠಗಳನ್ನು ಕಲಿತು ಒಪ್ಪಿಸುತಿದ್ದವರೇ ಹೆಚ್ಚು. ಸಾಕಷ್ಟು ತಯಾರಿ ಮಾಡಿಕೊಂಡೇ ತರಗತಿಗೆ ಹೋಗುತ್ತಿದ್ದ ಕಾರಣ ಮಕ್ಕಳಿಗೆ ಖುಶಿ.
        ಹೀಗೆ ತನ್ನ ಪಾಲಿನ ಕೆಲಸವನ್ನು ಸರಿಯಾಗಿ ನೆರವೇರಿಸಿಕೊಂಡು ಉಳಿದವರಿಂದಲೂ ಮೂಗಿನ ಮೇಲೆ ಬೆರಳು ಇಡುವಂತೆ ಮಾಡಿದ್ದರು. ಇವರನ್ನು ಕೆಲವರು ಮೆಚ್ಚಿಕೊಂಡರೂ ಇನ್ನು ಕೆಲವರಿಗೆ ನಮ್ಮನ್ನು ಮೀರಿಸುವ ಪ್ರತಿಭೆಯವರಿದ್ದರೆ ನಮ್ಮನ್ನು ಕೇಳುವವರೇ ಇಲ್ಲದಂತಾಗಬಹುದು; ಮಾತ್ರವಲ್ಲ 'ಅವರಿಗೆ ಬೇಕಾದವರೊಬ್ಬರನ್ನು ಆ ಶಾಲೆಗೆ ತರಬೇಕು' ಎಂದು ಕನಸು ಕಾಣುತ್ತಿದ್ದ ಅವರಿಗೆ ನನ್ನ ಗೆಳೆಯರು ಬೇಡವಾಗಿದ್ದರು. ಇವರನ್ನು ಹೊರಗೆ ಹಾಕಲು ಏನು ದಾರಿ ಎಂದು ಯೋಚಿಸುತ್ತಿದ್ದವರಿಗೆ ಒಂದು ದಾರಿ  ತಾನಾಗಿಯೇ ಗೋಚರಿಸಿಯೇ ಬಿಟ್ಟಿತು.ತಾನು ಕಲಿಸಿದ ಮಕ್ಕಳು ಬುದ್ಧಿವಂತರೆನಿಸಿಕೊಳ್ಳಬೇಕೆಂಬ ಹಂಬಲ  ನನ್ನ ಗೆಳೆಯರಿಗೆ ಇತ್ತು. ಕಲಿಯುವುದರಲ್ಲಿ ಹಿಂದೆ ಇದ್ದ ಒಬ್ಬ ವಿದ್ಯಾರ್ಥಿಯನ್ನು ನನ್ನ ಗೆಳೆಯರು ಸ್ವಲ್ಪ ಜೋರಾಗಿ ಗದರಿಸಿ ಕಿವಿ ಹಿಂಡಿದ್ದರು. ಆ ಹುಡುಗನಿಗೆ ಮಂಗನ ಬಾವು ರೋಗ ಅಂಟಿಕೊಂಡಿದ್ದುದು ಗೆಳೆಯರಿಗೆ ಗೊತ್ತಿರಲಿಲ್ಲ. ಇವರ ಗ್ರಹಚಾರಕ್ಕೆ ಮಗುವಿನ ಕಿವಿ ಹಿಂಡಿದ್ದನ್ನೇ ನೆಪವಾಗಿಟ್ಟುಕೊಂಡು, ಮೇನೇಜರರಿಗೆ ದೂರು ಹೋಯಿತು. ಮತ್ತೆ ನೋಡಿದರೆ ಅವನು ಮೇನೇಜರರ ಮನೆಯವನೇ ಆಗಿದ್ದನು. ಸರಿ ಮರುದಿನ ಬಾವು ತಾನಾಗಿಯೇ ಹೆಚ್ಚಾಗಿದ್ದನ್ನು ಕಿವಿ ಹಿಂಡಿದುದಕ್ಕೆ ಕಿವಿ ಬಾತು ಹೋಯಿತು ಎಂಬಂತೆ ಕತೆ ಕಟ್ಟಿ, ವೈದ್ಯರೊಬ್ಬರ ಸರ್ಟಿಫಿಕೇಟ್ ಮಾಡಿಸಿಕೊಂಡು ಮೇಲಧಿಕಾರಿಗಳಿಗೆ ದೂರು ಹೋಗಿತ್ತು. ನನ್ನ ಗೆಳೆಯರಿಗೋ ಇದಾವುದೂ ಗೊತ್ತಾಗಲಿಲ್ಲ. ಉಳಿದ ಮಕ್ಕಳು ಆ ಹುಡುಗ ಜ್ವರವಿದ್ದುದರಿಂದ ಶಾಲೆಗೆ ಬರಲಿಲ್ಲ ಎಂದು ಹೇಳಿದ್ದರು. ಸರಿ, ಗುಣವಾದ ಮೇಲೆ ಬರ ಬಹುದು ಎಂದು ಅಧ್ಯಾಪಕರು ಸುಮ್ಮನಾಗಿದ್ದರು.  ಒಂದು ದಿನ ಮುನ್ಸೂಚನೆಯಿಲ್ಲದೆ ಮೇಲಧಿಕಾರಗಳು ಶಾಲೆಗೆ ಬಂದು ಬಿಟ್ಟರು. ಆ ದಿನ ಹುಡುಗನೂ ಬಂದಿದ್ದ.
ಮೇಲಧಿಕಾರಿಗಳು ನನ್ನ ಗೆಳೆಯರಿದ್ದ ತರಗತಿಗೇ ಬಂದುಬಿಟ್ಟರು. ಆ ಹುಡುಗ ಒಂದಷ್ಟು ದಿನ ಶಾಲೆಗೇ ಬರದಸ್ವನು ಅಂದು ತಾನೇ ಬಂದಿದ್ದನಷ್ಟೆ. ಅವನನ್ನು ಕರೆದು ಕೇಳಿಯೇ ಬಿಟ್ಟರು ಅಧಿಕಾರಿಗಳು. "ಯಾರು ನಿನ್ನ ಕಿವಿ ಹಿಂಡಿದ ಅಧ್ಯಾಪಕರು?"    ಮೇಲಧಿಕಾರಿಗಳೂ ಅವರ ಪರವಾಗಿಯೇ ಇದ್ದರಾದರೂ ಹುಡುಗ ಮಾತ್ರ ಸತ್ಯವನ್ನೇ ಹೇಳಿಬಿಟ್ಟ ಇವರೇ ನನ್ನ ಕಿವಿ ಹಿಂಡಿದ್ದರು" ಎಂದು. ಯಾವ ಕಿವಿ ಹಿಂಡಿದ್ದು? ಎಂದು ಕೇಳಿದ್ದಕ್ಕೆ ಈ ಕಿವಿ ಎಂದು ಬಲಕಿವಿಯನ್ನು ತೋರಿಸಿದ ಹುಡುಗ. ಕಿವಿ ಏನಾಗಿದೆ? ಯಾವ ಕಿವಿ ಬಾತದ್ದು ಎಂದೂ ಕೇಳಿದರು. ಆದರೆ ಅವ ತೋರಿಸಿದ ಕಿವಿ ಬಾತಿರಲಿಲ್ಲ. ಬಾತುಕೊಂಡಿದ್ದದ್ದು ಮತ್ತೊಂದು ಕಿವಿ. ಮತ್ತೆ ಈ ಕಿವಿ ಹಿಂಡಿದ್ದಕ್ಕೆ ಅ ಕಿವಿ ಬಾತದ್ದು ಹೇಗೆ ಎಂದೂ ಕೇಳಿದರು.ಅದು ಮಂಗನಬವು ಆಗಿ ಬಾತದ್ದು ಎಂದು ಸತ್ಯವನ್ನೇ ಹೇಳಿದ. ಮತ್ತೆ ಅಧ್ಯಾಪಕರು ಕಿವಿ ಹಿಡಿದು ಕಿವಿ ಬಾತು ಹೋಗಿದೆಯೆಂದು ದೂರು ಕೊಟ್ಟಿದ್ದೀಯಲ್ಲ ಯಾಕೆ ಎಂದು ಕೇಳಿದಾಗ ಈ ಮಾಷ್ಟ್ರು ನಮ್ಮನ್ನು ತುಂಬಾ ಜೋರು ಮಾಡುತ್ತಾರೆ. ಅದಕ್ಕೆ ಅವರು ಕಿವಿ ಹಿಂಡಿ ಬಾತದ್ದು ಎಂದು ಹೇಳಬೇಕೆಂದು ಮನೆಯವರು ಹೇಳಲು ಹೇಳಿಕೊಟ್ಟರು ಎಂದ. ಅ ಮಗುವಿನ ಅಜ್ಜ ನಂತೆ, ಶಾಲೆಗೆ ಬಂದವರು ಅಧ್ಯಾಪಕರ ತಪ್ಪೇನೂ ಇಲ್ಲವೆಂದು ಹೇಳಿಬಿಟ್ಟರು. ಅವರ ಸಾಕ್ಷ್ಯ ನನ್ನ ಗೆಳೆಯರಿಗೆ ವರದಾನವಾಯಿತು. ಎಲ್ಲರೆದುರಿಗೆ ಕೇಸ್ ಸುಮ್ಮಗಾಯಿತು. ಆದರೆ ಸುದ್ದಿ ಊರಿಂದ ಊರು ತಲಪಿ ಅಧ್ಯಾಪಕರೊಬ್ಬರು ಹುಡುಗನ ಕಿವಿ ಹಿಂಡಿ ಬಾತು ಹೋಗಿದೆಯೆಂದು ಪ್ರಚಾರವಾಗಿತ್ತು. ಕಂಡ ಕಂಡವರೆಲ್ಲ ನೀನು ಅಷ್ಟು ಜೋರಿದ್ದಿಯೋ? ಯಾಕೆ ಕಿವಿ ಹರಿದುಹೋಗುವಂತೆ ಹಿಂಡಿದ್ದು ಎಂದು ಕಂಡವರೆಲ್ಲ ಕೇಳಿದ್ದಕ್ಕೆ ಮುಜುಗರವಾಗಿ, ನನ್ನ ಗೆಳೆಯರಿಗೆ ಇದೆಲ್ಲ ತನ್ನಸಶಾಲೆಯ ಇತರ ಅಧ್ಯಾಪಕರದೇ ಕಿತಾಪತಿಯೆಂದು ಗೊತ್ತಾಗಿ  ಈ ಶಾಲೆಯೇ ಬೇಡವೆಂದು ಶಾಲೆಯನ್ನೇ ಬಿಟ್ಟು ಬಿಟ್ಟರು. ಸರಕಾರಿ ಶಾಲೆಗಳೇ ಬೇಕೆಂದು ಶಾಲೆ ದೂರವಾದರೂ ನಿವೃತ್ತರಾಗುವ ವರೆಗೆ ಸೇವೆಗೈದು ಕೃತಕೃತ್ಯರಾದರು.  ಆದರೆ ಉಳಿದವರು ಮಾತ್ರ ಈ ಸುದ್ದಿಯನ್ನು ಟಾಂ ಟಾಂ ಮಾಡಿ ಬಣ್ಣ ಕಟ್ಟಿ ಊರೆಲ್ಲ ಪ್ರಚಾರ ಮಾಡಿದ್ದರು. ಗೆಳೆಯರು ಅದೇ ಶಾಲೆಯಲ್ಲಿ ವೃತ್ತಿ ಜೀವನ ಮುಂದುವರಿಸಬೇಕೆಂದಿದ್ದವರು, ಮನಸ್ಸಿಗೆ ಬೇಸರ ಹುಟ್ಟಿ ಶಾಲೆಯ ಮೇಲೇ ವೈರಾಗ್ಯ ಬಂದು ಶಾಲೆಯನ್ನೇ ಬಿಟ್ಟು ಬೇರೆ ಶಾಲೆಗಳಲ್ಲಿ ಉದ್ಯೋಗ ಮುಂದುವರಿಸಿ ಉತ್ತಮ ಅಧ್ಯಾಪಕರೆಂದೆನಿಸಿಕೊಂಡರು. ಈಗ ನಿವೃತ್ತಿ ಹೊಂದಿ ವಿರಾಮ ಜೀವಿತವನ್ನು ಮುಂದುವರಿಸಿದ್ದಾರೆ ಎಂಬುದು ಬೇರೆ ಸಂಗತಿ. ಆದರೆ ವೃತ್ತಿ ಜೀವನದಲ್ಲಿ ಎಂತಹ ಮತ್ಸರಿಗಳು ಒಬ್ಬನ ಭವಿಷ್ಯವನ್ನು ಹಾಳುಮಾಡುವವರಿದ್ದಾರೆ ಎಂಬಅನುಭವ ಜೀವನದಲ್ಲಿ ಕಲಿಯಬೇಕಾದ ಪಾಠವಲ್ಲವೇ?

No comments:

Post a Comment