Sunday, July 8, 2012

ಜೀವನ ಯಾತ್ರೆ


                            ಜೀವನ ಯಾತ್ರೆ.

        ರಾಮಣ್ಣ ಭಟ್ಟರು ಆ ಊರಲ್ಲಿ ದೊಡ್ಡ ಕುಳ. ಹೆಚ್ಚಿನ ಶ್ರೀಮಂತರಲ್ಲದಿದ್ದರೂ ಉಟ್ಟುಣುವುದಕ್ಕೆ ತೊಂದರೆಯಿರಲಿಲ್ಲ. ಮೂವರು ಹೆಣ್ಣು ಮಕ್ಕಳಾದ ಮೇಲೆ ಅಪರೂಪಕ್ಕೆ ಭಟ್ಟರ ಅಪೇಕ್ಷೆಯಂತೆ ಗಂಡು ಮಗುವಾಗಿತ್ತು. ಗಂಡು ಮಗುವಾದ ಮೇಲೆ ಭಟ್ಟ್ರಿಗೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿಯೆಂಬತ್ತಾಗಿತ್ತು. ಮಗುವನ್ನು ಕೆಳಗಿಟ್ಟರೆ ಇರುವೆ ಕಚ್ಚಬಹುದು; ಮೇಲಿಟ್ಟರೆ ಕಾಗೆ ಕೊಂಡೊಯ್ಯಬಹುದೆಂದು ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದರು. ಮಗನನ್ನು ಮೊದ್ದು ಮಾಡುವ ಗೌಜಿಯಲ್ಲಿ ಮನೆಯೊಳಗೇ ಇರುತ್ತಿದ್ದರು. ಆಸ್ತಿಯನ್ನು ನೋಡಿಕೊಳ್ಳಲು ಆಳು ಕಾಳುಗಳಿದ್ದುದರಿಂದ ಅವರಿಗೆ ಕೆಲಸ ಹೇಳಿಬಿಟ್ಟರೆ ಆಗಬೇಕಾದ ಕೆಲಸವನ್ನು ಇವರ ಮೇಲ್ತನಿಖೆಯಿಲ್ಲದೆ ಅವರೇ ಮಾಡಿಕೊಡುತ್ತಿದ್ದರು. ಮೂವರು ಅಕ್ಕಂದಿರು, ಅಪ್ಪ,ಅಮ್ಮ ಹೀಗೆ ಎಲ್ಲರೂ ಮಗುವನ್ನು ಕೆಳಗಿಡದೆ ಎತ್ತಿಕೊಂಡು ಓಲೈಸುತ್ತಿದ್ದರು. ಮಗನೇ ನಡೆದಾಡತೊಡಗಿದ ಮೇಲೆ ಮಾತ್ರ ಎತ್ತಿಕೊಳ್ಳಬೇಕಾಗಿರಲಿಲ್ಲ. ಎಲ್ಲರ ಅಕ್ಕರೆಯಿಂದ ಬೆಳೆದ ಮಗ ಅಂಬೆಗಾಲಿಕ್ಕಿನಡೆಯತೊಡಗಿದವ ಆಚೀಚೆ ಓಡಾಡತೊಡಗಿದ. ಮಗ ನಡೆದಾಡಿದರೆ ಸವೆದು ಹೋದಾನು ಎಂಬಷ್ಟು ಮುದ್ದಿನಿಂದ ಹೊರಹೋಗುವಾಗ ಎತ್ತಿಕೊಂಡೇ ಹೋಗುತ್ತಿದ್ದರು ಭಟ್ಟರು. ಭಟ್ಟರ ಕುಟುಂಬ ಮತ್ತೆ ಬೆಳೆದು ಎರಡು ಹೆಣ್ಣು ಮಕ್ಕಳನ್ನೂ ಲೆಕ್ಕಕ್ಕೆ ಸೇರಿಸಿಕೊಂಡಿತ್ತು.ಗಂಡು ಮಗನ ಅಕ್ಕಂದಿರಿಗೆಲ್ಲ ಯೋಗ್ಯ ಹುಡುಗರು ಸಿಕ್ಕಿ ವಿವಾಹವೂ ಆಗಿ ಗಂಡನ ಮನೆ ಸೇರಿದ್ದರು.  ಹೈಸ್ಕೂಲ್ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಮಗ ಸೈಕಲಿನಿಂದ ಬಿದ್ದು ಕಾಲು ಮುರಿದುಕೊಂಡಿದ್ದ.ಒಂದು ತಿಂಗಳು ಕಾಲ ಭಟ್ಟರು ಮಗನನ್ನು ಮನೆಯೊಳಗೇ ಆಚೀಚೆ ಎತ್ತಿಕೊಂಡೇ ಹೋಗಬೇಕಾಗಿತ್ತು. ಯಸ್ ಯಸ್ ಯಲ್ ಸಿ ಮುಗಿದಮೇಲೆ ಮುಂದೆ ಕೋಲೇಜಿಗೆ ಹೋಗುವುದಕ್ಕಿಂತ ತಾನು  ಖಾಸಗಿಯಾಗಿ  ಚೆನ್ನೈಯಲ್ಲಿ ಎಂಜಿನೀಯರ್ ವಿದ್ಯಾಭ್ಯಾಸ ಮಾಡುವೆನೆಂದು ಹೊರಟೇ ಬಿಟ್ಟನು. ಮಗನ ಹಟದ ಮುಂದೆ ತನ್ನ ಮಾತು ನಡೆಯಲಾರದೆಂದು ಅವನ ಅಪೇಕ್ಷೆಯಂತೆ ಚೆನ್ನೈಗೆ ಹೋಗಲು ಖರ್ಚಿಗೆ ಕೊಟ್ಟು ಕಳಿಸದೇ ನಿರ್ವಾಹವಿರಲಿಲ್ಲ.
    ಚೆನ್ನೈಗೆ ಹೋದವ ಒಂದು ವರ್ಷ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದ ಮತ್ತು ಒಳ್ಳೆಯ ಮಾರ್ಕೂ ಸಿಕ್ಕಿತ್ತು. ಭಟ್ರಿಗೆ ನೆಮ್ಮದಿಯಾಗಿತ್ತು. ಎರಡನೆಯ ವರ್ಷಕ್ಕೆ ಕಾಲಿಕ್ಕಿದ ಮೇಲೆ ಅವನ ಜೀವನ ರೀತಿಯೇ ಬದಲಾಯಿತು. ಕೇಳಿದಷ್ಟು ಹಣ ಕೈಗೆ ಬರುತ್ತಿದ್ದುದರಿಂದ ಅವನಿಗೆ ತಲೆಬಿಸಿಯಿಲ್ಲ. ಮೋಜಿನ ಜೀವನಕ್ಕೆ ಮರುಳಾಗಿ ಸಿಗರೇಟ್ ಸೇದುವುದು ಮೊದಲಾದ ಚಟಗಳು ಸುರುವಾದುವು. ತರಗತಿಗೆ ಹೋಗುವುದು ಯಾವಾಗಲಾದರೊಮ್ಮೆ ಹೋದರೂ ಆಯಿತು; ಅಥವಾ ಹೋಗದಿದ್ದರೂ ಆಯಿತು. ಎಲ್ಲ ಪತ್ರ ವ್ಯವಹಾರದ ಮೂಲಕ ಹಣ ಬೇಕಾದಷ್ಟು ತರಿಸಿಕೊಂಡು ಮಜ ಮಾಡತೊಡಗಿದ. ಕ್ಲಾಸಿಗೆ ಹೋಗದೆ ಅಲ್ಲಿಲ್ಲಿ ತಿರುಗಾಡುತ್ತಿರುವಾಗ ಒಂದು ಹುಡುಗಿಯ ಪರಿಚಯವಾಯಿತು. ಭೇಟಿ ಸ್ನೇಹಕ್ಕೆ ನಾಂದಿಯಾಯಿತು. ಸ್ನೆಹಪಾಶ ಮುಂದುವರಿದು ಪ್ರೇಮಕ್ಕೆ ಅಂಕುರವಾಯಿತು. ಇದಾವ ಸುದ್ದಿಯೂ ಭಟ್ರಿಗೆ ಗೊತ್ತಾಗುವುದು ಹೇಗೆ? ಅವರು ಪರ ಬಂದೊಡನೆ ಮಗನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದೆಂದು ಹಣ ಕಳಿಸುತ್ತಲೇ ಇದ್ದರು. ಕೇಳಿದಷ್ಟಲ್ಲ.ದೂರದೂರಲ್ಲಿ ಖರ್ಚಿಗಿಲ್ಲದೆ ಮಗ ಸೋತುಹೋಗಬಾರದೆಂದು ಸ್ವಲ್ಪ ಹೆಚ್ಚಾಗಿಯೇ ಕಳಿಸುತ್ತಿದ್ದರು. ಹಣ ಬಂದುದೆಲ್ಲವೂ ಪ್ರೇಮಿಯೊಡನೆ ಸುತ್ತಾಡುವುದಕ್ಕೆ, ಅವಳಿಗೆ ಬೇಕಾದುದನ್ನು ತೆಗೆದುಕೊಡುವುದಕ್ಕೆ ಖರ್ಚಾಗುತ್ತಿತ್ತು.ಮಗನು ತಪ್ಪು ಹಾದಿಯಲ್ಲಿ ಮುಂದುವರಿಯುತ್ತಿರುವುದನ್ನು ಭಟ್ಟರಿಗೆ ಹೇಳುವವರು ಯಾರು? ಮಗನು ಇನ್ನೆರಡು ವರ್ಷಗಳಲ್ಲಿ ಏ ಯಂ ಐ ಈ ಮುಗಿಸಿ ಇಂಜಿನೀಯರ್ ಅಗಿ ಬರುವನೆಂದು ಹಗಲುಗನಸು ಕಂಡಿಕೊಂಡು ಭಟ್ಟರಿದ್ದರು.
        ಹೇಗೋ ಏನೋ ಯಾರ ಮೂಲಕವೋ ಭಟ್ಟರಿಗೆ ಮಗ ಕಾಲೇಜಿಗೆ ಹೋಗದೆ ತಿರುಗಾಡುತ್ತಿರುವ ಸುದ್ದಿ ತಲಪಿದರೂ ಅವರು ನಂಬಿರಲಿಲ್ಲ. ಮತ್ತೊಮ್ಮೆ ಊರಿಗೆ ಬಂದ ಮಗ ತಾನು ವಿದ್ಯಾಭ್ಯಾಸ ಮುಂದುವರಿಸುವುದಿಲ್ಲ. ಹೇಗಿದ್ದರೂ ಕಲಿತು ಉದ್ಯೋಗ ಸಿಕ್ಕಿದರೂ ತಾನೇ ಮನೆಯಲ್ಲಿರಬೇಕಾಗುವುದಲ್ಲ. ಮದುವೆ ಮಾಡಿಕೊಂಡು ಹಾಯಾಗಿರುತ್ತೇನೆ. ಮಡ್ರಾಸ್ ನಲ್ಲಿ ಒಂದು ಹುಡುಗಿಯನ್ನು ನೋಡಿದ್ದೇನೆ.  ಇಷ್ಟವಾಗಿದೆ. ಮದುವೆಯಾಗುವೆನೆಂದು ಮಾತು ಕೊಟ್ಟಿದ್ದೇನೆ. ಒಮ್ಮೆ ನೀವೂ ನನ್ನೊಡನೆ ಬನ್ನಿ. ತಿರುಪತಿಯಲ್ಲೇ ಮದುವೆಯಾಗಬೇಕೆಂದು ಹುಡುಗಿ ಇಷ್ಟ ಪಟ್ಟಿದ್ದಾಳೆ. ಅದಕ್ಕೆ ಒಮ್ಮೆ ಭಾವಂದಿರನ್ನೂ ಕೂಡಿಕೊಂಡು ಹೋಗುವ ಎಂದುಬಿಟ್ಟ. ಭಟ್ಟರಿಗೆ ಒಮ್ಮೆಲೇ ಶೋಕ್ ಬಡಿದಂತಾಯಿತು. ತಾನು ನೆನೆಸಿದ್ದೇನು! ಆಗಿರುವುದೇನು? ಎಲ್ಲವೂ ಅಯೋ ಮಯವಾಗಿತ್ತು,. ವಿರೋಧಿಸಿದರೂ ಕೇಳುವವನಲ್ಲ. ಅಪ್ಪನ ಮಾತು ಅಮ್ಮನ ಮಾತೂ ಅವನಿಗೆ ಬೇಡ.ಎಳವೆಯಿಂದಳೆ ತನ್ನ ಹಟವನ್ನು ಸಾಧಿಸಿಕೊಂಡು ಬಂದವ.ಅಥವಾ ಈ ವರೆಗೆ ಮಗ ಕಾಲಿನಲ್ಲಿ ತೋರಿಸೊಇದ್ದನ್ನು ಕೈಯಲ್ಲಿ ಎತ್ತಿ ಕೊಟ್ಟವರು ಭಟ್ಟರು. "ಇನ್ನೂ ಸಣ್ಣ ಪ್ರಾಯ ನಿನಗೆ. ಇಲ್ಲೇ ಊರಿನಲ್ಲೆ ಚಂದದ,ನಿನಗೆ ಇಷ್ಟವಾದ ಹುಡುಗಿಯನ್ನು ಹುಡುಕಿ ಮದುವೆ ಮಾಡಿಸುತ್ತೇನೆ" ಎಂದರೂ ಮಗ ಒಪ್ಪಿದರೆ ತಾನೆ! ಮಗನ ಹಟವೇ ಗೆದ್ದಿತು. ತಿರುಪತಿಯಲ್ಲೆ  ಮದುವೆಯೂ ನಡೆಯಿತು. ಮಗ ಸೊಸೆಯರನ್ನು ಮನೆತುಂಬಿಸಿಕೊಂಡೂ ಅಯಿತು. ಸೊಸೆಗೂ ಅವಳ ಮನೆದೇವರೇ ತಿರುಪತಿ ವೆಂಕಟೇಶನೆಂದು ಒಂದು ಬದಿಯಲ್ಲಿ ಮಾವನ ಪೂಜೆ ನಡೆಯುತ್ತಿರುವಗಲೆ ವೆಂಕಟೇಶನ ಪೂಜೆ ನಡೆಯುತ್ತಿತ್ತು. ಹೆಚ್ಚು ಆರೋಗ್ಯವಿಲ್ಲದ ಅತ್ತೆ ಸೊಸೆ ಬಂದಮೇಲೆ ತುಸು ಆರಾಮ ಸಿಗಬಹುದು ಎಂದು ಯೋಚಿಸಿದ್ದರು. ಅದರೆ ಅವಳಿಗೋ ಅವಲ ಪೂಜೆ ಪುನಸ್ಕಾರಗಳ ಮಧ್ಯೆ ಊಟ ತಿಂಡಿ ತಯಾರಿಸಲು ಸಮಯವಿಲ್ಲ. ಉಳಿದವರಿಗೆ ಬೇಕಿದ್ದರೆ ಅತ್ತೆಯೇ ಮಾಡಿಕೊಡಬೇಕಾಗಿತ್ತು. ಏನೋ ಬಾಯಿತಪ್ಪಿನಿಂದ ಮಾತಾಡಿದ್ದಕ್ಕೆ ಸೊಸೆಯಿಂದಎದುರುತ್ತರವು ಬಂದಿತ್ತು. ಅತ್ತೆ ಬಾಯಿ ಮುಚ್ಚಿ ಸುಮ್ಮಗಾದರೂ ಸೊಸೆ ಬಿಡಬೇಕೇ? ಗಂಡನನ್ನು ಮನೆ ಬಿಟ್ಟು ಪೇಟೆಯಲ್ಲಿ ವಾಸಮಾಡುವುದೇ ಪರಿಹಾರವೆಂದು ಪೀಡಿಸತೊಡಗಿದಳು. ಹೆಂಡತಿಯ ತಾಳಕ್ಕೆ ಕುಣಿಯಹೊರಟ ಮಗ ಹಳ್ಳಿವಾಸ ಬಿಟ್ಟು ಪೇಟೆಯಲ್ಲೇ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡತೊಡಗೊದ. ಒಬ್ಬನೇ ಮಗನೆಂದು ಮುದ್ದು ಮಾಡಿಬೆಳೆಸಿದ ಅಪ್ಪ ಮಗನಿಗೆ ಕೇಳಿದಂತೆ ಖರ್ಚಿಗೆ ಕೊಡುವಂತಾಯಿತು. ಭಟ್ರು ಉಳಿದಿಬ್ಬರು ಹೆಣ್ಣು ಮಕ್ಕಳನ್ನೂ ನಿಭಾಯಿಸಿಕೊಂಡು ಹಳ್ಳಿಯಲ್ಲೇ ಉಳಿದರು.
        ಈ ಮಧ್ಯೆ ಎನೊ ಸಣ್ನ ಕೆಲಸವನ್ನೂ ಮಾಡಿಕೊಂಡು, ಮನೆಯಿಂದಲೂ ಕರ್ಚಿಗೆ ಅಪ್ಪನಿಂದ ಪಡಕೊಂಡು ಜೀವನ ಸಾಗುತ್ತಿರುವಾಗ ಮೊಮ್ಮಕ್ಕಳೂ ಆದರು. ಅಜ್ಜ ಅಜ್ಜಿಗೆ ಮಾತ್ರ ಊರಿಗೆ ಬಂದಾಗ ಮೊಮ್ಮಕ್ಕಳನ್ನು ಕಾಣಬಹುದಿತ್ತು. ಆಗಾಗ ಹೀಗೆ ಖರ್ಚಿಗೆ ಕೊಂಡುಹೋಗುವುದರ ಬದಲು,ತನ್ನ ಪಾಲಿನ ಆಸ್ತಿಯನ್ನೆ ಕೇಳಿದ ಮಗ. ಅದರೆ ಭಟ್ರು ,ತಮ್ಮ ಜೊತೆಯಲ್ಲೇ ಇರಲು ತೊಂದರೆಯಾಗುವುದಿದ್ದರೆ ತಾನು ಇನ್ನೊಂದು ಅಸ್ತಿಯಲ್ಲಿದ್ದ ಚಿಕ್ಕ ಮನೆಯನ್ನು ದುರಸ್ತಿಗೊಳಿಸಿಕೊಂಡು ವಾಸಮಾಡುವೆನೆಂದೂ ಮಗ ದೊಡ್ಡದಾಗಿರುವ ಮನೆಯಲ್ಲೇ ವಾಸಮಾಡಿಕೊಂಡು,  ಮನೆ ಹತ್ತಿರದ ಆಸ್ತಿಯನ್ನೂ ನೋಡಿಕೊಂಡು ಬರುವುದೆಂದೂ ಒಪ್ಪಂದವಾಯಿತು.ಜೊತೆಗೆ ಆ ಮನೆ ಆಸ್ತಿ ಮಗನ ಪಾಲಿನ ರೂಪ್ಪದ್ದೇ ಎಂದು ರಿಜಿಸ್ತ್ರಿ ಮಾಡಿದರು. ಅಗ ತಾನೆ ಹುಟ್ಟಿದ್ದ ಮಗನೂ ಸೇರಿ ಐದು ಜನರ ಕುಟುಂಬ ಮಗನದಾಗಿತ್ತು. ಆದರೆ ಹಳ್ಳಿಯಲ್ಲಿ ಇರುವುದಕ್ಕೆ ಒಪ್ಪದ ಸೊಸೆ "ನೀವು ಬೇಕಾದರೆ ಇಲ್ಲಿರಿ; ನಾನು ಮಕ್ಕಳೊಂದಿಗೆ ಪೇಟೆಯಲ್ಲೆ ಇರುವೆ"ನೆಂದು ಹಟಮಾಡಿದ್ದರಿಂದ ತಾನು ಕೂಡಾ ಬರುವೆನೆಂದು  ಆಸ್ತಿಯನ್ನು ಮಾರಿಬಿಡುವ ಎಂದು ಹೊರಟನು. ಮಗ ಆಸ್ತಿಯನ್ನು ಮಾರುವುದು ಭಟ್ರಿಗೆ ಸುತರಾಂ ಇಷ್ಟವಾಗಲಿಲ್ಲ.ನಿಜಕ್ಕಾದರೂ ಮಗನು ಆಸ್ತಿಯನ್ನು ಮಾರಿಬಿಟ್ಟಾನು ಎಂಬ ಸಂದೇಹದಿಂದ ಆಸ್ತಿಯನ್ನು ಮನೆದೇವರ ಹೆಸರಿಗೆ ಮಾಡಿಟ್ಟಿದ್ದರಿಂದ ಅದನ್ನೇ ಆಧಾರವಾಗಿ ಪತ್ರಿಕೆಯಲ್ಲಿ ಮಗನಿಗೆ ಆಸ್ತಿ ಮಾರುವ ಹಕ್ಕಿಲ್ಲ' ಎಂದು ಹೇಳಿಕೆ ಕೊಟ್ಟರು. ಆಸ್ತಿ ಕೊಳ್ಳಲು ಗಿರಾಕಿ ಬರಲಿಲ್ಲ. ಕಡೆಗೆ ಮಗನಿಗೆ ಒಂದಷ್ಟು ಹಣ ಕೊಟ್ಟು,ತಾನೇ ಮನೆಯಲ್ಲಿ ವಾಸಮಾಡಹೊರಟರು. ಅದಾಗಲೇ ಮಗ ಮನೆಯೊಳಗಿನ ಮತ್ತು ತೋಟದಲ್ಲಿದ್ದ ಬೆಲೆ ಬಾಳುವ ಮರಗಳನ್ನೂ ಮಾರಿಯಾಗಿತ್ತು. ಕೂತುಣ್ಣುವವರಿಗೆ ಕುಡುಕೆ ಹಣ ಸಾಲುತ್ತೇ?ಹೀಗೆ ಒಂದೆರಡು ವರ್ಷಗಳಲ್ಲಿ ಭಟ್ರು ಹಾಸಿಗೆ ಹಿಡಿದರು. ವಯಸ್ಸೂ ಆಗಿತ್ತಲ್ಲವೇ? ಮನೋ ವೇದನೆಯು ಇತ್ತು. ಅವರೂ ತನ್ನ ಮದುವೆಯಾದೊಡನೆ ತನ್ನ ಅಪ್ಪನಲ್ಲಿ ತಾನು ಬೇರೆಯಿರುವೆನೆಂದು ಪಾಲು ಕೇಳಿದ್ದಕ್ಕೆ ಕೋಪದಿಂದ ಅವರ ಅಪ್ಪ ಹೇಗಾದರೂ ಇವರನ್ನು ಸಾಗಹಾಕಲು ಒಂದಿಷ್ಟು ಭೂಮಿಯನ್ನು ಕೊಟ್ಟು ಹೊರಮಾಡಿದ್ದರು. ಅದರೆ ಭಟ್ರು ಅಪ್ಪ ಕೊಟ್ಟ ಸಣ್ಣ ಭೂಮಿಯನ್ನೇ ಪ್ರಸಾದವೆಂದು ಸ್ವೀಕರಿಸಿ ಕಷ್ಟಪಟ್ಟು ದುಡಿದು ಅಭಿವೃದ್ಧಿಮಾಡಿದ್ದರು.ಊರಲ್ಲಿ  ಸ್ವಪ್ರಯತ್ನ ದಿಂದಲೇ ಶ್ರೀಮಂತರೆನಿಸಿದ್ದರು. ಆದರೆ ದೈವ ಸಂಕಲ್ಪ ಹೀಗಾಯಿತು. ಏನೋ ತನ್ನ ನಂತರಕ್ಕೆ ಮಗ ಇದ್ದ ಆಸ್ತಿಯನ್ನು ವೃದ್ಧಿಮಾಡಿಕೊಂಡು ತಲೆಯೆತ್ತಿಕೊಂಡುಹಳ್ಳಿಯಲ್ಲೇ ಇರಬೇಕೆಂಬ ತನ್ನ ಕನಸು ನೆನಸಾಗಲಿಲ್ಲ. ಕೊನೆಗೂ ಭಟ್ಟರು ಚಿಂತೆಯಲ್ಲಿಯೇ ಕೊನೆಯುಸಿರೆಳೆದರು. ಭಟ್ರ ಉತ್ತರಕ್ರಿಯಾದಿಗಳನ್ನು ಮುಗಿಸಿ ಮಗ ಪೇಟೆಗೇ ಹೋದನು. ಮನೆಯಲ್ಲಿ, ಮುದುಕಿ ತಾಯಿ ಇಬ್ಬರು ತಂಗಿಯಂದಿರು ಮಾತ್ರ. ಯಾರೋ ಒಬ್ಬ ಗಿರಾಕಿ ಸಿಕ್ಕಿ ಆಸ್ತಿಯನ್ನೂ ಮಾರಾಟ ಮಾಡಿಯೂ ಆಯಿತು. ಈಗಂತೂ ಅವನಿಗೆ ಎದುರು ಮಾತಾಡುವವರಿಲ್ಲ.  ಆದರೆ ತಾಯಿಯ ಕಡೆಯವರು ಅಮ್ಮನ ಒದ್ದಾಟಿ ನೋಡಿ ಅವರ ಮನೆಗೇ ಕರಕೊಂಡು ಹೋದರು. ತಂಗಿಯಂದಿರು ವಿದ್ಯಾರ್ಥಿ ಭವನದಲ್ಲಿ ಕಲಿಕೆ ಮುಂದುವರಿಸಿದರು.ಅವರ ಭಾಗ್ಯದಿಂದ ಒಳ್ಳೆಯ ಸಂಬಂಧವೊದಗಿ ಬಂದು ಮದುವೆಯೂ ನಡೆಯಿತು. ತಾಯಿ ಮಾತ್ರ ಕೊರಗಿನಲ್ಲಿಯೇ ಕೊನೆಯುಸಿರೆಳೆದರು.
        ಪೇಟೆಯಲ್ಲಿ ಸ್ವಂತ ಮನೆ ಮಾಡಿಕೊಂಡ ,ಮಗನೋ ಈಗಾಗಲೇ ದುರಭ್ಯಾಸಗಳ ದಾಸನಾಗಿದ್ದ. ಮನೆಗೆ ಬಂದರೆ ಹೆಂಡತಿಯೂ ಒಳಸೇರಿಸುತ್ತಿರಲಿಲ್ಲ. ಹೊರಗೇ ಮಲಗಬೇಕಾಯಿತು. ಇದ್ದ ಹಣವೆಲ್ಲ ಆಕೆಯ ಹೆಸರಿನಲ್ಲಿತ್ತು. ಚಿಲ್ಲರೆ ಕಾಸಿಗು ಹೆಂಡತಿಯನ್ನು ಬೇಡುವ ಪರಿಪಾಟ ಮುಂದುವರಿಯಿತು. ಭೂ ವ್ಯವಹಾರದಿಂದಲೋ, ಮನೆ ಕಟ್ಟಿಕೊಡುವ ಮೂಲಕವೋ ಅಲ್ಪ ಸ್ವಲ್ಪ ಸಂಪಾದಿಸುತ್ತಿದ್ದುದು ಕುಡಿಯುವ ಚಟ ಬಲವಾಗಿ ಸಿಕ್ಕಿದ ಆದಾಯವೆಲ್ಲ ಶರಾಬು ಅಂಗಡಿಗೇ ಹೋಗುತ್ತಿತ್ತು.

No comments:

Post a Comment