Sunday, July 8, 2012

ಸಿಡಿ ಮದ್ದಿನ ಚಮತ್ಕಾರ


                                    ಸಿಡಿ ಮದ್ದಿನ ಚಮತ್ಕಾರ
                            ವಿಶೇಷ ಹಬ್ಬಗಳಲ್ಲಿ ಪಟಾಕಿ ಸಿಡಿಸಿ, ಅನಂದದಿಂದ ಮೈಮರೆತಾಗ ಒಮ್ಮೆಗೆ  ಮನಸ್ಸಿಗೆ ಖುಶಿಯಾಗಿ, ಚಿಂತೆಗಳನ್ನು ಮರೆಯುವಂತೆ ಮಾಡುತ್ತದೆ. ದೀಪಾವಳಿಯಂದು ಮನೆ ಮನೆಗಳಲ್ಲಿ ಮಾತ್ರ. ಬೆಲೆ ದುಬಾರಿಯಾಗಿರುವುದರಿಂದ,ಎಲ್ಲರೊಂದಾಗಿ ಸಿಡಿಸಿದರೆ ಖರ್ಚು ಹಂಚಿಹೋಗುತ್ತದೆ. ನಮ್ಮ ದೇಶದಲ್ಲಿ ಜಾತ್ರೆಗಳಂದು ದೇವರನ್ನು ಬೆಡಿಕಟ್ಟೆಯಲ್ಲಿಟ್ಟು, ಸಾಮೂಹಿಕವಾಗಿ ಸದ್ದನ್ನು ಕೇಳಿ ಖುಶಿ ಪಡುವುದರೊಂದಿಗೆ, ಭಯಂಕರ ಶಬ್ದಗಳು ಕಿವಿತಮ್ಮಟೆಯನ್ನು ಬಡಿದಾಗ ಆನಂದದೊಂದಿಗೆ ಮನಸ್ಸಿನ ಚಿಂತೆಗಳೂ ದೂರವಾಗಿ ನಾವು ಬೇರೆಯೇ ಲೋಕದಲ್ಲಿದ್ದಂತಾಗಿ,ಭಯಭೀತಿಗಳು ದೂರವಾಗುತ್ತವೆ. ಮಕ್ಕಳಿಗಂತೂ ಊರಜಾತ್ರೆಯಲ್ಲಿ ಹೆಚ್ಚಿನ ಖುಶಿ ಕೊಡುತ್ತದೆ. ಆದರೆ ಅಮೇರಿಕದಂತಹ ವಿದೇಶಗಳಲ್ಲಿ, ಸಾರ್ವಜನಿಕರನ್ನು ಖುಶಿಪಡಿಸಲು ವಿಶಿಷ್ಟ ದಿನಗಳಲ್ಲಿ ಮಾತ್ರ ಹೀಗೆ ಸಿಡಿಮದ್ದು ಸುಡುವ ಕಾರ್ಯಕ್ರಮ ಇಟ್ಟುಕೊಳ್ಳುತ್ತಾರೆ. ಉಳಿದ ದಿನಗಳಲ್ಲಿ ಕೇಳುವುದಕ್ಕೇ ಸಿಕ್ಕುವುದಿಲ್ಲ. ಜುಲಾಯಿ ೪ರಂದು ಚೆಸ್ಟರ್ ಸ್ಪ್ರಿಂಗ್ ನ ಡೌನ್ ಟೌನ್ ಪಾರ್ಕಿನಲ್ಲಿ ಅಮೇರಿಕಾದ ಸ್ವಾತಂತ್ರ್ಯ ದಿನಾಚರಣೆಯ ಲೆಕ್ಕದಲ್ಲಿ ಇಂತಹ ಸಿಡಿಮದ್ದಿನ ಕಾರ್ಯಕ್ರಮವಿತ್ತು. ವಿಶಿಷ್ಟ ರೀತಿಯಲ್ಲಿ ನಡೆದ ಕಾರ್ಯವಿಧಾನವನ್ನು, ಪ್ರತ್ಯಕ್ಷ ಸಾಕ್ಷಿಯಾಗಿ ನೋಡಿದ್ದೆ.
        ಮೊಮ್ಮಗ ಸಿಡಿಮದ್ದಿನ ವೈಭವ ನೋಡುವುದಕ್ಕಿಂತಲೂ  ನಡೆಯುತ್ತಿದ್ದ ಸವಾರಿಗಳನ್ನು ಮಾಡುವ ಅತುರದಲ್ಲಿದ್ದನು. ಬಹಳ ಬಿಸಿಲಿದ್ದುದರಿಂದ ಅವನ ಅವಸರಕ್ಕೆ ಮನೆಯಿಂದ ಹೊರಟರೂ, ಏನೋ ಖರೀದಿಗಳ ನೆಪ ಮಾಡಿಕೊಂಡು ಕೆಲವು ಮೋಲ್ ಗಳನ್ನು ಸುತ್ತಿ ಸಂಜೆ ೬ ಗಂಟೆಗೇ ತಲಪಿದ್ದೆವು. ವಾಹನ ಪಾರ್ಕ್ ಮಾಡಲು ಬಹಳ ದೂರಕ್ಕೆ ಜಾಗ ಸಿಕ್ಕಿದ್ದರಿಂದ ಸ್ವಲ್ಪ ದೂರ ನಡೆದೇ ಹೋದೆವು. ಜನಸಾಗರವೇ ಅಲ್ಲಿ ಸೇರಿದ್ದರೂ ಮಕ್ಕಳ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ. ತಲಪಿದ್ದೇ ತಡ ಮೊಮ್ಮಗನ ಅವಸರವೇ ಅವಸರ! ಹತ್ತೆಂಟು  ದುಬಾರಿ ಸವಾರಿಗಳನ್ನು ಮಾಡಿ ಖುಶಿ ಪಟ್ಟ. ಮಕ್ಕಳಿಗೆ ಡಾಲರಿನ ಲೆಕ್ಕವಿದೆಯೇ? ಉಳಿದ ಮಕ್ಕಳು ಖುಶಿಪಡುವುದನ್ನು ನೋಡಿ ಅವರಿಗೂ ಆಸೆ ಹೆಚ್ಚುತ್ತದೆ. ಪರಿಚಯದ ಮಕ್ಕಳಿದ್ದರೆ ಕೇಳುವುದೇ ಬೇಡ. ಯಾರ್ಯಾರು ಎಷ್ಟೆಷ್ಟು ಸವಾರಿಮಾಡಿಕೊಂಡಿದ್ದೇವೆ ಎಂಬುದರ ಲೆಕ್ಕಾಚಾರ ಬೇರೆ. ಏಳೆಂಟು ವೇಗನ್ ಗಳ ಟ್ರೈನಿನಲ್ಲಿ ಮೊಮ್ಮಗನೊಬ್ಬನೇ ಸವಾರ! ಎತ್ತರದ ಜಾರು ಬಂಡಿಯಿಂದ ಜಾರಿದರೆ ಮೂರು ಡಾಲರ್! ಎರಡು ಬದಿಗಳಲ್ಲಿಯೂ ಹಲವು ಚೆಂಡುಗಳು. ಬಣ್ಣದ ಗುಂಡಿಗೆ ಬಿದ್ದರೆ ಐದು ಚೆಂಡು ಬಿಸಾಕಲು ೨ ಡಾಲರ್.ಬಣ್ಣದ ಗುಂಡಿಗೆ ಬಿದ್ದರೆ ಒಂದು ಬೊಂಬೆ ಬಹುಮಾನ. ದುಡ್ಡು ಕಳಕೊಂಡವರಷ್ಟೆ ಹೊರತು ಬಹುಮಾನ ನೂರರಲ್ಲಿ ಒಬ್ಬರಿಗೆ ಮಾತ್ರ ಸಿಗುತ್ತಿತ್ತು. ಹೀಗೆಲ್ಲ ಮಕ್ಕಳನ್ನು ಮರುಳುಗೊಳಿಸಿ ಹಣವನ್ನು ಸುಲಿಗೆ ಮಾಡುವ ಚತುರೋಪಾಯ ಅವರಲ್ಲಿತ್ತು. ಕರೆದೊತ್ದ ಮೇಲೆ ಮಕ್ಕಲು ಬಿಡುವರೇ? ಎಡೆಯಲ್ಲಿ ತಿನ್ನುವ ಚಪಲ ಬೇರೆ. ಬಿಸಿಲು  ಕಡಿಮೆಯಾಗದುದರಿಂದ ಬೆವರು ಮೈಯಿಂದ ಒಸರುತ್ತಿದ್ದರೂ, ಇನ್ನೊಮ್ಮೆ ಇಂತಹ ಸಂದರ್ಭ ಯಾವಾಗ ಬರುವುದೋ ಏನೋ! ಹೀಗೆಲ್ಲ ಮಕ್ಕಳನ್ನು ಖುಶಿಪಡಿಸಲು ಹೆತ್ತವರೂ ತುದಿಗಾಲಲ್ಲಿದ್ದಾರೆ. ನನ್ನ ಮಗನಿಗೆಮಾತ್ರ ಮೊಮ್ಮಗನನ್ನು ರಾತ್ರೆ ೯ ಗಂಟೆ ವರೆಗೆ ನಿಲ್ಲಿಸಲು ಮನಸ್ಸಾಗದೆ ಸಾಧ್ಯವದರೆ ಮತ್ತೆ ಬರುವುದೆಂದು ಯೋಚಿಸಿ ಮನೆಗೆ ಬಂದೆವು. ಫಯರ್ ವರ್ಕ್ಸ್ ನ ಲೆಕ್ಕದಲ್ಲಿ ಮುನ್ನೆಚ್ಚರಿಕೆಗಾಗಿ ಫಯರ್ ಎಂಜಿನ್ ಗಳೂ ಮಧ್ಯಾಹ್ನವೇ ಬಂದು ನಿಂತಿದ್ದುವು. ದಾರಿಯಲ್ಲಿ ನೋಡಿದರೆ ಅಸಂಖ್ಯಾತ ವಾಹನಗಳ ಸಾಲು ಕಾಣಸಿಕ್ಕಿತು. ರಾತ್ರೆಯ ಊಟ ಮುಗಿಸಿ ಒಂಬತ್ತು ಗಂಟೆಗೆ ಸರಿಯಾಗಿ, ಮತ್ತೆ ಅಲ್ಲಿಗೆ ಬಂದೆವು. ಆದರೆ ಸಿಡಿಮದ್ದು ಸುಡುವ ಜಾಗಕ್ಕೆ ಹೋಗಲು ಒಂದು ಮೈಲಿನಷ್ಟು ದೂರದಿಂದಲೇ ವಾಹನ ನಿಲ್ಲಿಸಬೇಕಾಗಿ ಬಂದುದರಿಂದ ಸಾಧ್ಯವಾಗಲಿಲ್ಲ.ಆದರೂ ಬಾನಂಗಳದಲ್ಲಿ ಸಿಡಿಮದ್ದಿನ ಚಮತ್ಕಾರವನ್ನು ನೋಡುವುದಕ್ಕೆ ಸಾಧ್ಯವಾಯಿತು. ಹತ್ತಿರ ಹೋಗುವುದು ಸರಿಯಲ್ಲ. ಒಂದರ್ಧ ಗಂಟೆ ಬಣ್ಣ ಬಣ್ಣದ ಚಿತ್ತಾರಗಳು ಪ್ರೇಕ್ಷಕರನ್ನು ನೋಡಿ ದಂಗುಪಡುವಂತಿದ್ದುವು.ನೇರವಾಗಿ ಆಕಾಶಕ್ಕೆ ನೆಗೆದ ಬಾಣವೊಂದು ಎತ್ತರ ತಲಪಿದಾಗ ಸಿಡಿಯುವುದರೊಂದಿಗೆ ಮಿನುಗಿದ ನಕ್ಷತ್ರಗಳಂತೆ ವೃತ್ತಾಕಾರವಾಗಿ ಬೀಳುವುದು, ಒಂದಷ್ಟು ಮೇಲೆಹೋಗಿ ಕೆಳಗೆ ನಿಧಾನವಾಗಿ ಬೀಳುವಾಗ ಗೊಚಲು ಗೊಂಚಲಾಗಿ ಶಾಖೆ ಉಪಶಾಖೆಗಳಾಗಿತೋರುವ ಬಣ್ಣ ಬಣ್ಣದ ಮರ ಮರದ ಗೆಲ್ಲುಗಳಂತೆಯೋ ಕಾಣಿಸುತ್ತಿತ್ತು. ಬಹಳ ಎತ್ತರದ ವರೆಗೆ ಹೋಗಿ ಅಲ್ಲಿ ಸಿಡಿದ ಪಟಾಕಿಗಳನ್ನುನೋಡಿ,ಸದ್ದು ಕೇಳಿ ಮೊಮ್ಮಗನಂತೂ ಕುಣಿದಾಡ ತೊಡಗಿದನು. ನವು ನಿಂತ ಜಗದಲ್ಲಿ ಬೇರೆ ಯಾರೂ ಇರಲಿಲ್ಲ. ಸ್ಥಳದಲ್ಲೇ ಇದ್ದ ಮಕ್ಕಳ ಕಿರಿಚಾಟಗಳು ಕೇಳಿದವರಿಗೇ ಗೊತ್ತು! ನಮ್ಮೂರಲ್ಲಾದರೆ ಬೆಡಿ ಜಾತ್ರೆಯಲ್ಲಿ ನೆಲ ಕದಿನ ವೆಲ್ಲ ಇರುತ್ತದೆ. ಕಡೆಗೊಮ್ಮೆ ಬಹಳ ದೂರದ ವರೆಗೆ ಕಟ್ಟಿದ ಮಾಲೆ ಪಟಾಕಿಗಳು, ಸರದಿಯಂತೆ ಸ್ಫೋಟಿಸಿದಾಗ ಕಿವಿತಮ್ಮಟೆಯೇ ಒಡೆದು ಹೋದಂತಾಗುತ್ತದೆ. ಅಂತೂ ವರ್ಷಕ್ಕೊಮ್ಮೆ ಮಾತ್ರ ಇಂತಹ ಸಮಾರಂಭಗಳು ನಗರ ಸಭೆಗಳ ಮೇಲ್ನೋಟದಲ್ಲಿ ನಡೆದರೆ, ಮತ್ತೆ ಈ ಸದ್ದು ಕೇಳಲು ಇನ್ನೊಂದು ವರ್ಷ ಕಾಯಬೇಕು.
                                   
                                                   

No comments:

Post a Comment