Wednesday, May 30, 2012

ವಿದೇಶದಲ್ಲಿ ನಡೆದ ಕುಂಭಾಭಿಷೇಕ

                       ವಿದೇಶದಲ್ಲಿ ಸಹಸ್ರ ಕುಂಭಾಭಿಷೇಕ:- 

                                        


 ಅಮೇರಿಕ ದೇಶದ ಡೆಲ್ವಾರೆಯಲ್ಲಿ ಬಹಳ ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಮಹಾಲಕ್ಷ್ಮಿ ದೇವಾಲಯ ಬಹಳಬೇಗನೆ ಮನೆಮಾತಾಗಿ ಅಭಿವೃದ್ಧಿಯನ್ನು ಹೊಂದುತ್ತಾ ಬಂದಿದೆಯಂತೆ. ಪಿಟ್ಸ್ ಬರ್ಗ್ ನ ತಿರುಪತಿ ದೇವಸ್ಥಾನವು ವಿದೇಶಿ ನೆಲದಲ್ಲಿ ಪ್ರಖ್ಯಾತಿಯನ್ನು ಪಡೆದಿದೆಯಾದರೂ ಇನ್ನೂ ಗೋಪುರ ನಿರ್ಮಾಣವಾಗಿಲ್ಲವಂತೆ. ಆದರೂ ದೂರ ದೂರಗಳಿಂದ ಶ್ರೀನಿವಾಸನನ್ನು ನೋಡಲು ಜನ ಅಲ್ಲಿಗೆ ಹೋಗುತ್ತಿರುತ್ತಾರೆ. ಹೇಗೆ ತಿರುಪತಿಗೆ ದೇಶದಾದ್ಯಂತ ಭಕ್ತರು ಹೋಗುತ್ತಿರುತ್ತಾರೋ ಹಾಗೆ ಇಲ್ಲಿ ಪಿಟ್ಸ್ ಬರ್ಗ್ ಗೆ ಹೋಗುತ್ತಾರೆ. ಬಹಳ ಬೇಗನೆ ಪ್ರಸಿದ್ಧಿಗೆ ಬಂದು ಜಗದ್ವಿಖ್ಯಾತ ಸ್ಥಾನವನ್ನು ಡೆಲ್ವಾರೆ ಮಹಾಲಕ್ಷ್ಮಿ ದೇವಾಲಯ ಜನರನ್ನು ತನ್ನತ್ತ ಕೂಗಿ ಕರೆಯುತ್ತಿದೆ. ಒಂದು ತಿಂಗಳಿನಿಂದ  ಮಹಾಲಕ್ಷ್ಮಿಗೆ ಕೋಟಿ ಕುಂಕುಮಾರ್ಚನೆಯ ಸೇವಾ ಭಾಗ್ಯ; ಅದೂ ವಿದೇಶದ ನೆಲದಲ್ಲಿ!  ಭಕ್ತಜನರ ಪ್ರೋತ್ಸಾಹ ಸಹಾಯಗಳಿಂದ ಮಹಾ ಗೋಪುರ ನಿರ್ಮಾಣವೂ ಆಗಿ  ಒಂದು ವಾರದಿಂದ ಕಲಶ ಪೂಜೆ ನಡೆದು ಮೊನ್ನೆ ೨೭ನೆ ತಾರೀಕಿಗೆ ಸಹಸ್ರ ಕುಂಭ ಮಹಾಭಿಷೇಕವೂ ನಡೆಯಿತು. ನಭೂತೋ ನಭವಿಷ್ಯತಿ ಎಂಬಂತೆ  ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಜನ ಸೇರಿದ  ಸಮಾರಂಭ ಸ್ಥಳೀಯರನ್ನೂ ಎಷ್ಟರ ಮಟ್ಟಿಗೆ ಆಕರ್ಷಿಸಿದೆಯೆಂದರೆ ಅವರೂ ಕಲಶಗಳನ್ನು ಕೈಯಲ್ಲಿ ಹಿಡಕೊಂಡು ಅಭಿಷೇಕ ಮಾಡಲು ಸಾಲಲ್ಲಿ ನಿಂತುಕೊಂಡಿದ್ದರು. ೧೦೧ ಡಾಲರ್ ಕೊಟ್ಟರೆ ಸಾಕು ಬೆಳ್ಳಿ ಕಲಶ ಕೊಡುತ್ತಾರೆ. ಸಾಲಲ್ಲಿ ನಿಂತು ಅಭಿಷೇಕ ಪಾತ್ರೆಗೆ ಹೊಯ್ದು ಬರಬೇಕು.ಒಂದಿಬ್ಬರು ಭಾರತೀಯರಂತೆ ಬಟ್ಟೆ ಉಟ್ಟುಕೊಂಡಿದ್ದರು. ಗೋವಿಂದ ಹಾಕಲು ಅವರೂ ಉತ್ಸಾಹದಲ್ಲಿದ್ದರು. ಆಂಧ್ರದ ಕಡೆಯಿಂದ ಬಂದ ಶರ್ಮಾಜಿ ಎಂಬವರು ದೇವಾಲಯದ ಸ್ಥಾಪಕ ಟ್ರಸ್ಟಿಯಾಗಿ ಈಗಲೂ ಮುಂದುವರಿದಿದ್ದಾರೆ. ಹತ್ತಿರದಲ್ಲಿದ್ದವರನ್ನು ಆಗಾಗ ಕರೆದು ಕಮಿಟಿಯಲ್ಲಿ ಸೇರಿಸಿ ಭಾರತೀಯ ಡಾಕ್ಟರ್ ಗಳು ಮತ್ತೆ ಬೇರೆ ಉದ್ಯೋಗಸ್ಥರು ಸದಸ್ಯರಾಗಿರುವ ಕಮಿಟೀಗೆ ಟ್ರಸ್ಟಿಗಳು ಆಗಾಗ ಸಭೆಸೇರಿ ದೇವಾಲಯದ ಅಭಿವೃದ್ಧಿಗೆ ತನು ಮನ ಸಹಾಯ ಪಡೆದು ದೇವಾಲಯದ ಮತ್ತು ಕಟ್ಟಡಗಳ ಸಮೂಹ ಬೆಳೆಯಲು ಶರ್ಮಾರೇ ಕಾರಣರೆಂದು ಪ್ರತಿಯೊಬ್ಬರ ಬಾಯಿಯಲ್ಲಿಯೂ ಕೇಳಿ ಬರುವ ಮಾತು.ಎಲ್ಲರ ಬಾಯಲ್ಲಿಯೂ ಶರ್ಮಾಜಿಯವರ ಹೆಸರು ಓಡಾಡುತ್ತಿತ್ತು. ಭೋಜನಾಲಯ,ನಾಟಕ ,ಡಾನ್ಸ್ ಅಥವಾ ಸಭೆಯೋ ಬೇರೆ ಸಮಾರಂಭಗಳೋ ಇಲ್ಲಿ ನಡೆಯುತ್ತಲೇ ಇರುತ್ತದೆಯಂತೆ. ಅಂತೂ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಲು ಇತರರ ಸಹಾಯ ಪಡೆದು ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಎಲ್ಲರ ಬೆವರೂ ಸುರಿದಿದೆಯಂತೆ. ಕುಂಭಾಭಿಶೇಕಕ್ಕೂ ಇಲ್ಲಿನ ಭಾರತೀಯರು ಬಹಳ ಉತ್ಸಾಹದಿಂದ ಸಹಾಯ ಹಸ್ತ ಚಾಚಿರುವರಂತೆ. ಯಾವ ದೊಡ್ಡ ಕೆಲಸವೂ ಸಾಮೂಹಿಕ ಪ್ರಯತ್ನದಿಂದಲೇ ಕೊನೆ ಮುಟ್ಟಬಹುದಷ್ಟೆ. ನನ್ನ ಸಂಬಂಧದ ಡಾಕ್ಟರ್ ಒಬ್ಬರು ಕಂತಿನಲ್ಲಿ ಒಂದು ಲಕ್ಷ  ಡಾಲರ್ ಕೊಡಲು ಒಪ್ಪಿರುವರಂತೆ!
        ವಿದೇಶಗಳಲ್ಲಿ ಉದ್ಯೋಗ ಅರಸಿಕೊಂಡು ಹೋದ ಭಾರತೀಯರು ಅಲ್ಲಿ ಹೋಗಿ ಒಂದೆರಡು ವರ್ಷಗಳಲ್ಲಿ ಗೆಳೆಯರ ಬಳಗ ಕಟ್ಟಿಕೊಂಡು ಹೀಗೆ ದೇವಾಲಯಗಳನ್ನು ಸ್ಥಾಪಿಸಿ,ವರದ ರಜೆಯಲ್ಲಿ ಒಟ್ಟುಗೂಡಲು ಒಂದು ಕೇಂದ್ರ ಸ್ಥಳವನ್ನು ಮಾಡಿಕೊಂಡಿರುತ್ತಾರೆ.ಆ ಪ್ರದೇಶದ ಭಾರತೀಯರು ಅಲ್ಲಿ ಸೇರಿಕೊಂಡು ಮುಂದಿನ ತಲೆಮಾರಿಗೆ ನಮ್ಮ ಧಾರ್ಮಿಕ ಸಂದೇಶವನ್ನು ದಾಟಿಸಲು ಅನುಕೂಲ ಮಾಡಿಕೊಂಡಿದ್ದಾರೆ. ಅಮೇರಿಕ ,ಕೆನಡಗಳಲ್ಲಿ ಅನೇಕ ದೇಗುಲಗಳು ತಲೆಯೆತ್ತಿವೆ. ಟೊರೊಂಟೋದ ಶೃಂಗೇರಿ ದೇವಾಲಯ,ಡೆಟ್ರೋಯಿಟ್ ನ ದೇಗುಲಗಳನ್ನು ನಾನು ಸಂದರ್ಶಿಸಿದ್ದೇನೆ. ಪಿಟ್ಸ್ ಬರ್ಗ್ ನ  ಶ್ರೀನಿವಾಸನನ್ನು ೨೦೦೩ರಲ್ಲೇ ನೋಡಿದ್ದೆ.ಶೃಂಗೇರಿ ದೇವಾಲಯದಲ್ಲಿ ಆಗಾಗ ವಿಶೇಷ ಹಬ್ಬ ಹರಿದಿನಗಳಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಾರೆ.ಸಂಗೀತ ಕಚೇರಿ ,ಭಜನೆ ಇತ್ಯಾದಿಗಳು ವಾರದ ರಜಾ ದಿನಗಳಲ್ಲಿ ನಡೆಯುತ್ತಲೇ ಇರುತ್ತವೆ. ಅಯ್ಯಪ್ಪ ಮಂದಿರಗಳಲ್ಲಿಯೂ ಹೋಮ ಹವನಗಳು ನಡೆಯುತ್ತಿತ್ತವೆ.  E°è0iÀÄಸ್ವಾಮಿ ನಾರಾಯಣ ಮಂದಿರ ಬಹಳ ದೊಡ್ಡದಿದೆ. ಅಂತೂ ಇಲ್ಲಿ ನೆಲೆನಿಂತವರಿಗೆ ಅಭಯ ಹಸ್ತವನ್ನು ಇಲ್ಲಿ ನೆಲೆನಿಂತ ಅನೇಕ ದೇವರುಗಳು ಚಾಚಿರುತ್ತಾರೆ ಎಂದೇ ಹೇಳಬಹುದು.
         ಪೂರ್ಣ ಕುಂಭ ಕಲಶಾಭಿಷೆಕಕ್ಕೆ ಪೂರ್ವಭಾವಿಯಾಗಿ ದೇವಿಗೆ ಕೋಟಿ ಕುಂಕುಮಾರ್ಚನೆಯನ್ನು ಹಮ್ಮಿಕೊಂಡಿದ್ದರು. ವಿದೇಶದಲ್ಲಿ ಈ ಸಾಹಸಕ್ಕೆ ಕೈಯಿಕ್ಕಿದ  ವಠಾರದಲ್ಲಿರುವ ಭಕ್ತ ಜನರ ಪ್ರಯತ್ನಕ್ಕೆ ಮೆಚ್ಚಲೇಬೇಕು. ಹತ್ತಿರದ ಮಹಿಳೆಯರುಒಂದು ತಿಂಗಳಿನಿಂದ ದಿನ ನಿತ್ಯವೂ ಬೆಳಿಗ್ಗೆ ಸಂಜೆ ಬಂದು ಸೇವೆ ಸಲ್ಲಿಸಲು ತುದಿಗಾಲಲ್ಲಿ ನಿಂತಿದ್ದರೆಂದು ತೋರುತ್ತದೆ. ವಾರದ ರಜೆಯಲ್ಲಿ ನೂರಾರು ಮಹಿಳೆಯರು ಪಾಲುಗೊಳ್ಳುತ್ತಿದ್ದರು. ಜೊತೆಗೆ  ದೇವರ ಮುಂದೆ ನೃತ್ಯ ಕಾರ್ಯಕ್ರಮಗಳಿಂದಲೂ  ಸೇವೆ ನಡೆಯುತ್ತಿತ್ತು. ಒಂದು ಸ್ಟೇಡಿಯಂ ಕೂಡ ವಿವಿಧ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿತ್ತು. ಬಂದ ಭಕ್ತರು ಕೈಮೀರಿ ಸಹಯ ಹಸ್ತ ಚಾಚುತ್ತಿದ್ದುದರಿಂದ ಕಾರ್ಯಕ್ರಮ ಮುಂದುವರಿಯುತ್ತಿತ್ತು. ಕಡೆಗೊಂದು ದಿನ ವಿಷ್ಣುಸಹಸ್ರ ನಾಮ ಪಾರಾಯಣವೂ ನಡೆದಿತ್ತು ನೂರಾರು ಮಂದಿ ಪಾಲುಗೊಂಡಿದ್ದರು.ಪರಿಸರದ ಭಕ್ತಜನರ ಸಹಯದಿಂದ ಶ್ರೀನಿವಾಸ,ರಾಮ ಸೀತೆ ಲಕ್ಷ್ಮಣ,ಆಂಜನೇಯ, ಶಿವ ಮೊದಲಾದ ದೇವ ಸಮೂಹವೇ ಗುಡಿಯೊಳಗೆ ನೆಲೆ ನಿಂತತ್ತಿತ್ತು. ಭಕ್ತರ ಕೋರಿಕೆಯನ್ನು ನೆರವೇರಿಸಿದರೇನೇ ಸಾಮಾನ್ಯವಾಗಿ ಭಕ್ತಿ ಹೆಚ್ಚಾಗುವುದು. ಮಾತ್ರವಲ್ಲ. ಇಲ್ಲಿ ಅವರವರ ಮನೆಗಳಲ್ಲಿ ದೇವರಿಗೆ ಕೈಮುಗಿಯುವುದಕ್ಕೂ  ಜನರಿಗೆ ಯಾವಾಗ ನೋಡಿದರೂ ಪುರುಸೊತ್ತು ಇರುವುದಿಲ್ಲ. ಇಂದಿನ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಬಗ್ಗೆ   ಧಾರ್ಮಿಕ ಭಾವನೆ ಒಡಮೂಡಬೇಕಾದರೆ ಇಂತಹ ದೇವಸ್ಥಾನಗಳೇ ಸಹಾಯ ಮಾಡುತ್ತವೆ. ಇಲ್ಲಿರುವ ಪೂಜಾರಿಗಳು ಎಲ್ಲರಲ್ಲಿಯೂ  ಈ ತಿಳುವಳಿಕೆ  ಬರುವಂತೆ ನಡೆದುಕೊಳ್ಳುತ್ತಾರೆ.ಭಕ್ತರ ಅಪೇಕ್ಷೆಯಂತೆ ಹೋಮ ಹವನಗಳನ್ನು ದೇವಲಯದಲ್ಲೇ ಪೂಜಾರಿಗಳು ನೆರವೇರಿಸಿಕೊಡುತ್ತಾರೆ. ಊರಿಗೆ ಹೋದರೆ ಮಾತ್ರ ಮದುವೆ ಮುಂಜಿ ಮೊದಲಾದ ಕಾರ್ಯಕ್ರಮಗಳ ಪರಿಚಯವಾದೀತೆಂದು ಇರುವಲ್ಲಿ ಧಾರ್ಮಿಕ ವಿಧಿಗಳನ್ನೂ ಇಲ್ಲಿ ನೆರವೇರಿಸುವುದರಿಂದ ಜನರಿಗೆ ಅನುಕೂಲವಾಗಿದೆ. ದಿನ ನಿತ್ಯ ಅಲ್ಲದಿದ್ದರೂ ವಾರಕ್ಕೊಮ್ಮೆ ದೇವಾಲಯ ಸಂದರ್ಶಿಸುವುದು,ದೇವಾಲಯದಲ್ಲಿ ಜನ ಸಮೂಹ ನೆರೆದಿರುತ್ತದೆಯಂತೆ. ಉಳಿದ ದಿನಗಳಲ್ಲಿ ನಾನು ಹೋಗಿದ್ದೆ ಕೆಲವರು ಇರುತ್ತಾರೆ. ಹೆಚ್ಚಾಗಿ ಹೆಂಗುಸರು,ಮಕ್ಕಳು.
            ಹೆಚ್ಚಿನವರು ಕೆಲಸಕ್ಕೆ ಹೋಗುವವರಾದ ಕಾರಣ ಎಲ್ಲರಿಗೂ ರಜೆಯಿರುವ ಭಾನುವಾರವನ್ನೇ ಗೋಪುರ ಕುಂಭಾಭಿಷೇಕದ ದಿನವಾಗಿ ಮುಹೂರ್ತ ಇಟ್ಟುಕೊಂಡಿದ್ದಾರಂತೆ. ಪೂರ್ವಾಹ್ನ ಒಂಬತ್ತುವರೆ ಗಂಟೆಗೆ ಅಭಿಷೇಕದ ಮುಹೂರ್ತ. ಬೆಳಗ್ಗಿನಿಂದಲೇ ಜನ ಬಂದು ಹೋಗುತ್ತಿದ್ದರು. ಸಮಯಕ್ಕೆ ಸರಿಯಾಗಿ ಹೋಮ ಪೂರ್ಣಾಹುತಿಯಾಗಿ.ದೇವರಿಗೆ ಮಂಗಳಾರತಿಯಾಯಿತು. ಗೋಪುರದ ಮೇಲಿದ್ದ ಐದು ಕಲಶಗಳಿಗೆ ಐದು ಮಂದಿ ಪುರೋಹಿತರು ಬೆಳ್ಳಿಯ ಕಲಶಗಳನ್ನು ತಲೆಯಲ್ಲಿಟ್ಟುಕೊಂಡು ಹೊರಟರು. ಶರ್ಮಜಿಯವರು ಹಾಗೂ ಉಳಿದ ಸದಸ್ಯರು ಬಂದವರೊಡನೆ ಕಲಶಗಳನ್ನು ಕೊಂಡುಕೊಳ್ಳುವಂತೆ ಬೇಡಿಕೊಳ್ಳುತ್ತಿದ್ದರು. ಕೆಲವರು ಐದಾರು ಕಲಶಗಳನ್ನೂ ತೆಗೆದುಕೊಂಡಿದ್ದರು.೧೦೦ ಮಿಲ್ಲಿ ನೀರು ಹಿಡಿಯಬಹುದಾದ ಚಂಬಿನಲ್ಲಿ ಒಂದು ಏಪ್ಲ್ ಇಟ್ಟು ಹಣ ಕೊಟ್ಟವರಿಗೆ ಕಲಶ ಕೊಡುತ್ತಿದ್ದರು. ಜನ ಭಕ್ತಿಯಿಂಅ ನಾ ಮುಂದು ತಾಮುಂದು ಎಂದು ಉತ್ಸಾಹದಿಂದ ಕಲಶಗಳನ್ನು ಕೊಂಡುಕೊಳ್ಳುತ್ತಿದ್ದರು.ಗೋಪುರದ ಬುಡದಲ್ಲಿ ಅಷ್ಟ ಲಕ್ಷ್ಮಿಯರ ವೇಶ ಧರಿಸಿದ ಹುಡುಗಿಯರು ಡಾನ್ಸ್ ಮಾಡಿದರು.  ಮುಹೂರ್ತಕ್ಕೆ ಸರಿಯಗಿ ಗೋಪುರದ ಮುಂದಿನಿಂದ ಆರಂಭವಾಗಿ ದೇವಾಲಯಕ್ಕೆ ಒಂದು ಪ್ರದಕ್ಷಿಣೆಯ ಮೆರವಣಿಗೆ ವಾದ್ಯ ಘೋಷಗಳೊಂದಿಗ ಹೊರಟಿತು. ಮುಂದಿನಿಂದ ಗೋಮಾತೆಯನ್ನು  ಮುಂಚೂಣಿಯಲ್ಲಿ ನಡೆಸಿದ್ದರು. . ಛತ್ರ ಚಾಮರಗಳು ವಾದ್ಯ ವೇದ ಘೋಷಗಳೊಂದಿಗೆ  ಹೊರಟವರು ಒಂದು ಸುತ್ತು ಬಂದು  ಗೋಪುರದ ಎದುರು ನಿಂತರು.ಮತ್ತೆ ಗೋಪುರದ ಮೇಲಕ್ಕೆ ಕಲಶ ಹೊತ್ತವರೊಂದಿಗೆ ಕೆಲವರು ಮಾತ್ರ ಮೇಲೇರಿದರು.೧೧ ಗಂಟೆಗೆ ಮೇಲೇರಿದ್ದ ಕಲಶ ಹೊತ್ತವರು ಮಂತ್ರ ಘೋಷಗಳೊಂದಿಗೆ ನೆರೆದವರು ನೋಡುತ್ತಿದ್ದಂತೆಅಭಿಷೇಕ ಮಾಡಿದರು. ಸೇರಿದ ಜನರ ಮೈಮನಗಳು ಪುಳಕಿತವಾಯಿತು. ಕೊನೆಯದಾಗಿ ಹೆಚ್ಚು ವಂತಿಗೆ ಕೊಟ್ತ ನನ್ನ ಬಂಧುಗಳ ಪರವ್ಗಿ ನನ್ನ ಮಗ  ಮಹಾ ಕಲಶವನ್ನು ಮುಟ್ಟಿದಮೇಲೆ ಪುರೋಹಿತರೊಬ್ಬರು ಅಭಿಷೇಕ ಮಾಡಿದರು. ಅದಾದ ಮೇಲೆ ಉಳಿದ ಕಲಶಧಾರಿಗಳನ್ನು ಸಾಲಾಗಿ ನಿಂತವರು ಎರಡು ಸಾಲಾಗಿ ಮುನ್ನಡೆದು ಗೋಪುರದ ಬುಡದಲ್ಲಿದ್ದ ಕಲಶ ಪಾತ್ರೆಯಲ್ಲಿ ಅವರಲ್ಲಿದ್ದ ಕಲಶೋದಕಗಳನ್ನು ಸುರಿದು ಆಗತಾನೆ ಉದ್ಘಾಟನೆಯಾದ ಮಹಾದ್ವಾರದ ಮೂಲಕ ದೇವಾಲಯದ ಒಳ ಪ್ರವೇಶ ಮಾಡಿದರು ಜನರ ಜಯಘೋಷ ಮುಗಿಲು ಮುಟ್ಟುತಿತ್ತು.
    ಮಧ್ಯಾಹ್ನ ಒಂದು ಗಂಟೆಗೆ ಒಟ್ಟುಗೂಡಿಸಿದ ಎಲ್ಲ ಕಲಶಗಳ ನಿರನ್ನೂ ಹೇಲಿಕಾಪ್ಟರ್ ಮೂಲಕ ಗೋಪುರದ ಮೇಲಿನಿಂದ ಸುರಿಯುವ ಕಾರ್ಯಕ್ರಮವೂ ಇತ್ತು. ಬಂದವರಲ್ಲಿ ಕೆಲವರು ಪ್ರಸಾದ ಭೋಜನ ಮುಗಿಸಿ ಹೋಗಿದ್ದರು.ಹೆಚ್ಚಿನವರು ಹೆಲಿಕಾಪ್ಟರ್ ಬರುವುದನ್ನೇ ಕಾಯುತ್ತಿದ್ದೆವು. . ಊಟವೂ ಭರ್ಜರಿಯಾಗಿತ್ತು. ಬಫೆಯಲ್ಲಿ ಎಲ್ಲ ಪದಾರ್ಥಗಳನ್ನೂ ಹಾಕಿಸಿಕೊಂಡು ವಿಶಾಲವದ ಭೋಜನಾಲಯದಲ್ಲಿ ಬೇಕೆಂದಲ್ಲಿ ಕುಳಿತು ಊಟ ಮಾಡುತ್ತಿದ್ದರು. ಒಮ್ಮೆ ತೆಕ್ಕೊಂಡವರು ಸಾಲದಿದ್ದರೆ ಮತ್ತೆ ಮತ್ತೆ ಹಾಕಿಸಿಕೊಳ್ಳುತ್ತಿದ್ದರು. ಊಟ ಮುಗಿಸಿ ದೇವಾಲಯದೊಳಗೆ ಹೋದವರಿಗೆ ದೇವರ ದರ್ಶನ ಮಾಡಿ ಹೊರಗೆ ಬರುವಾಗ ಕೌಂಟರಿನಲ್ಲಿ,ಒಂದು ಲಾಡುಮತ್ತು ಒಂದು ಏಪ್ಲ್ ಇರುವ ಒಂದು ಲಕೋಟೆ ಕೊಡುತ್ತಿದ್ದರು.ಇನ್ನೊಂದು ಕೌಂಟರಿನಲ್ಲಿ ಕೇಸರಿಭಾತ್ ತುಂಬಿಸಿದ ಬೌಲ್,ಮತ್ತೊಂದು ಕಡೆ ಕೋಸಂಬರಿಯೊಂದಿಗೆ ಒಂದು ಸಿಹಿತಿಂಡಿ ಹೀಗೆ ಮನೆಗೆ ಹೊರಟವರಿಗೆ ಕಾರ್ಯಕ್ರಮದ ಪ್ರಸಾದರೂಪವಾಗಿ ಇಷ್ಟು  ಪದಾರ್ಥಗಳನ್ನು ಕೊಡುತ್ತೀದ್ದರು.ಒಟ್ಟಾರೆ ಕಾರ್ಯಕ್ರಮ ಅವಿಸ್ಮರಣೀಯವಾಗಿತ್ತು. ಆದರೆ ಹೊರಗೆ ತುಂಬಾ ಬಿಸಿಲಿದ್ದುದರಿಂದವರಿಗೆ ಹೆಚ್ಚಿನವರುಹಾಕಿದ ಚಪ್ಪರದೊಳಗೋ, ದೇವಾಲಯದೊಳಗೋ ಓಡಾಡುತ್ತಿದ್ದರು.  ಅದಕ್ಕೆ ಜನ ಒಳಗೆ ಗಂಟೆಯಾಗುವುದನ್ನೇ ಕಾಯುತ್ತಿದ್ದರು.೨ ಗಂಟೆಯವರೆಗೆ ಮೈಕಿನಲ್ಲಿ ಕೂಗಿ ಕರೆದು ಹೇಳುತ್ತಿದ್ದವರು. ಮತ್ತೆ ಏನೋ ತಾಂತ್ರಿಕ ತೊಂದರೆಯಿಂದ ಈ ದಿನ ಹೆಲಿಕೋಪ್ಟರ್ ಬರುವುದಿಲ್ಲವಂತೆ ಎಂದು ಹೇಳಿ ಬಿಟ್ಟರು. ಕಾಯುತ್ತಿದ್ದವರೆಲ್ಲಾ ಬೇಸರದಿಂದ ಹೊರಟರು.ಆಮೇಲೆ ಒಟ್ಟುಮಾಡಿದ ತೀರ್ಥವನ್ನು ಒಬ್ಬ ಪುರೋಹಿತರು ಗೋಪುರದ ಮೇಲೇರಿ ಅಲ್ಲಿದ್ದ ಐದು ಕಲಶಗಳ ಮೇಲೆ ಸುರಿಯುತ್ತಿದ್ದಂತೆ ಮಂತ್ರ ಘೋಷ,ವೇದಘೋಷ ಮುಗಿಲು ಮುಟ್ಟಿತು.  ನಾವೂ ಮನಸ್ಸಿಲ್ಲದ ಮನಸ್ಸಿನಿಂದ ಹೊರಡಬೇಕಾಯಿತು. ಅಂತೂ ವಿದೇಶದ ನೆಲದಲ್ಲಿ ನೆಲೆನಿಂತ ದೇವಾಲಯದ ಗೋಪುರ ಉದ್ಘಾಟನೆ ಮತ್ತು ಕುಂಭಾಭಿಷೇಕ ನೋಡಿ ಪುನೀತನಾದೆನೆಂಬ ಹೆಗ್ಗಳಿಕೆಯಿಂದ ಮಗನ ಮನೆಗೆ ಹಿಂತಿರುಗಿದೆವು.

No comments:

Post a Comment